ADVERTISEMENT

ಬೆರಗಿನ ಬೆಳಕು | ಬಾಯಿಮಾತು, ಹೃದಯದ ಮಾತು

ಡಾ. ಗುರುರಾಜ ಕರಜಗಿ
Published 22 ಏಪ್ರಿಲ್ 2020, 19:30 IST
Last Updated 22 ಏಪ್ರಿಲ್ 2020, 19:30 IST
   

ಬ್ರಹ್ಮದತ್ತ ರಾಜ್ಯಭಾರ ಮಾಡುತ್ತಿದ್ದಾಗ ಪ್ರಸಿದ್ಧ ಆಚಾರ್ಯನೊಬ್ಬ ವಾರಾಣಸಿಯಲ್ಲಿ ಐದುನೂರು ಜನ ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸುತ್ತಿದ್ದ. ಪಟ್ಟಣದಲ್ಲಿ ಮಕ್ಕಳಿಗೆ ಕಲಿಕೆಯಲ್ಲಿ ಏಕಾಗ್ರತೆ ಬರುವುದಿಲ್ಲವೆಂದು ತಿಳಿದು, ತಾನು ಹಿಮಾಲಯದ ಕಾಡಿನಲ್ಲಿ, ಹೆದ್ದಾರಿಯ ಸಮೀಪದಲ್ಲೇ ಒಂದು ಆಶ್ರಮ ಕಟ್ಟಿಕೊಂಡು ವಿದ್ಯೆ ಕಲಿಸುತ್ತೇನೆ ಎಂದು ತೀರ್ಮಾನಿಸಿದ. ವಿಷಯವನ್ನು ವಿದ್ಯಾರ್ಥಿಗಳಿಗೆ, ಪಾಲಕರಿಗೆ ತಿಳಿಸಿದ. ಅವರೂ ಸಂತೋಷಪಟ್ಟು ಮಕ್ಕಳನ್ನು ಅಲ್ಲಿಗೆ ಕಳುಹಿಸಿದರು.

ಬೇಕಾದಷ್ಟು ಅಕ್ಕಿ ಹಾಗೂ ಅಡುಗೆಯ ಸಾಮಾನುಗಳನ್ನು ತಂದುಕೊಟ್ಟರು. ಕಾಡಿನ ಸುತ್ತಮುತ್ತಲಿನ ಜನ ಕೂಡ ತಮ್ಮ ಮಕ್ಕಳನ್ನು ಆಶ್ರಮಕ್ಕೆ ಕಳುಹಿಸಿ ಎಲ್ಲ ಅನುಕೂಲಗಳನ್ನು ಮಾಡಿದರು. ಒಬ್ಬ ಗೃಹಸ್ಥ ಆಶ್ರಮದ ಬಳಕೆಗೆಂದು ಕೆಲವು ಹಸುಗಳನ್ನು, ಕರುಗಳನ್ನು ಕೊಟ್ಟ. ಆಶ್ರಮದ ಆವರಣದಲ್ಲಿ ಎಲ್ಲವೂ ಸಾತ್ವಿಕವಾಗಿತ್ತು. ಎಲ್ಲ ಪ್ರಾಣಿಗಳು ಸೌಹಾರ್ದದಿಂದ ಬದುಕಿದ್ದವು. ಒಂದು ಉಡ ತನ್ನೆರಡು ಮರಿಗಳೊಂದಿಗೆ ವಾಸಿಸುತ್ತಿತ್ತು. ಹುಲಿ, ಸಿಂಹಗಳೂ ಅಲ್ಲಿಗೆ ಬಂದು ಹಸುಗಳ ಪಕ್ಕದಲ್ಲೇ ಕುಳಿತುಕೊಳ್ಳುತ್ತಿದ್ದವು.

ಒಂದು ಗೀಜಗನ ಹಕ್ಕಿ ಆಚಾರ್ಯರು ಪಾಠ ಹೇಳುತ್ತಿದ್ದ ಮರದ ಮೇಲೆ ವಾಸವಾಗಿತ್ತು. ಅದು ಬುದ್ಧಿವಂತ ಪಕ್ಷಿ. ದಿನನಿತ್ಯವೂ ಆಚಾರ್ಯರು ಪಾಠ ಹೇಳುವಾಗ ಅದನ್ನು ಧ್ಯಾನದಿಂದ ಕೇಳಿಸಿಕೊಳ್ಳುತ್ತಿತ್ತು. ಪ್ರತಿವರ್ಷವೂ ಹೊಸಹೊಸ ವಿದ್ಯಾರ್ಥಿಗಳು ಬಂದಾಗ ಆಚಾರ್ಯರು ಹಿಂದೆ ಕಲಿಸಿದ ಮಂತ್ರಗಳನ್ನು ಮತ್ತೆ ಮತ್ತೆ ಕಲಿಸುತ್ತಿದ್ದರು. ಕೆಲವು ರ್ಷಗಳು ಕಳೆಯುವುದರಲ್ಲಿ ಗೀಜಗನ ಹಕ್ಕಿ ಮೂರು ವೇದಗಳನ್ನು ಕಲಿತುಕೊಂಡುಬಿಟ್ಟಿತು. ಗೀಜಗನ ಹಕ್ಕಿಗೂ ವಿದ್ಯಾರ್ಥಿಗಳಿಗೂ ಸ್ನೇಹ ಬೆಳೆಯಿತು.

ADVERTISEMENT

ಒಂದು ವರ್ಷ ಹೊಸ ವಿದ್ಯಾರ್ಥಿಗಳು ಆಶ್ರಮಕ್ಕೆ ಬಂದರು. ತರಗತಿಗಳು ಪ್ರಾರಂಭವಾದ ಕೆಲವೇ ದಿನಗಳಲ್ಲಿ ಆಚಾರ್ಯರು ನಿಧನರಾದರು. ವಿದ್ಯಾರ್ಥಿಗಳ ಶಿಕ್ಷಣ ಅಪೂರ್ಣವಾಯಿತು. ವಿದ್ಯಾರ್ಥಿಗಳು ಮತ್ತು ಅವರ ಪಾಲಕರಿಗೆ ಚಿಂತೆಯಾಯಿತು.

ಆಚಾರ್ಯರ ದೇಹಸಂಸ್ಕಾರದ ಎಲ್ಲ ಕಾರ್ಯಗಳು ಮುಗಿದ ದಿನ ವಿದ್ಯಾರ್ಥಿಗಳು ಈ ವಿಷಯವಾಗಿ ಚಿಂತಿಸುತ್ತಿದ್ದುದನ್ನು ನೋಡಿ ಗೀಜಗನ ಹಕ್ಕಿ ಕೆಳಗೆ ಬಂದಿತು, ‘ದಯವಿಟ್ಟು ಯಾರೂ ದುಃಖಪಡಬೇಡಿ. ಆಚಾರ್ಯರು ಬದುಕಿರುವವರೆಗೆ ಶಿಕ್ಷಣ ನೀಡಿದ್ದಾರೆ. ತಮಗೆಲ್ಲ ಯಾವುದೇ ಪೂರ್ವಾಗ್ರಹವಿಲ್ಲದಿದ್ದರೆ ಮುಂದಿನ ವಿದ್ಯೆಯನ್ನು ನಾನು ನೀಡುತ್ತೇನೆ’ ಎಂದಿತು. ‘ನೀನು ಹೇಗೆ ಕಲಿಸುತ್ತೀ?’ ಎಂದು ಕೇಳಿದಾಗ, ‘ಪ್ರತಿವರ್ಷ ಆಚಾರ್ಯರು ಕಲಿಸುವಾಗ ಕೇಳಿ ಕೇಳಿ ನಾನು ಮೂರು ವೇದಗಳನ್ನು ಕಲಿತಿದ್ದೇನೆ. ಸರಿ ಸುಮಾರು ಅವರ ಹಾಗೆಯೇ ಕಲಿಸಬಲ್ಲೆ’ ಎಂದಿತು ಗೀಜಗನ ಹಕ್ಕಿ.

ತರಗತಿಗಳು ಪ್ರಾರಂಭವಾದವು. ಎಲ್ಲರಿಗೂ ಆಶ್ಚರ್ಯ! ಗುರುಗಳ ಹಾಗೆಯೇ ಹಕ್ಕಿ ಪಾಠ ಮಾಡುತ್ತದೆ. ಅದರ ಧ್ವನಿಯ ಏರಿಳಿತ, ವಿಷಯ ನಿರೂಪಣೆಯ ಶೈಲಿ ಎಲ್ಲವೂ ಆಚಾರ್ಯರದೇ. ಕೆಲವು ದಿನಗಳಲ್ಲಿ ಎಲ್ಲರಿಗೂ ಆಚಾರ್ಯರು ಮರೆತೇ ಹೋದರು, ಈಗ ಪ್ರಖ್ಯಾತವಾದದ್ದು ವಿದ್ವಾಂಸ ಗೀಜಗ ಹಕ್ಕಿ. ಕೆಲ ವರ್ಷಗಳ ಮೇಲೆ ಹಿಂದೆ ಆಶ್ರಮದಲ್ಲಿ ಕಲಿತು ಈಗ ಪ್ರಸಿದ್ಧರಾದ ಹಿರಿಯ ಶಿಷ್ಯರಿಗೆ ಕೊರತೆ ಕಾಣತೊಡಗಿತು.

ಹೊಸ ಶಿಷ್ಯರಿಗೆ ಮಂತ್ರಗಳು ಬರುತ್ತವೆ, ತಂತ್ರ ತಿಳಿದಿದೆ ಆದರೆ ಬದುಕು ಸಾತ್ವಿಕವಾಗಲಿಲ್ಲ, ನಡತೆ ಶುದ್ದವಾಗಲಿಲ್ಲ ಎನ್ನಿಸಿತು. ಕಲಿತಿದ್ದೆಲ್ಲ ಬಾಯಿ ಮಾತು, ಆದರೆ ಬದುಕಿನಲ್ಲಿ ಜ್ಞಾನ ಇಳಿದು ಬರಲಿಲ್ಲ. ಹೋಗಿ ಕೇಳಿದಾಗ ಪ್ರಾಮಾಣಿಕ ಗೀಜಗ ಹಕ್ಕಿ ಹೇಳಿತು, ‘ನಾನು ಕಲಿತದ್ದು, ಕಲಿಸಿದ್ದು ಬಾಯಿಯ ಮಾತು, ತುಟಿಯಿಂದ ಬಂದದ್ದು. ಆದರೆ ಆಚಾರ್ಯ ಕಲಿಸಿದ್ದು ಅವನ ಬದುಕಿನಿಂದ ಮತ್ತು ಹೃದಯದಿಂದ’. ಬಾಯಿಯಿಂದ ಬಂದದ್ದು ಪಾಂಡಿತ್ಯ, ಹೃದಯದಿಂದ ಬಂದದ್ದು ಜ್ಞಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.