ADVERTISEMENT

ಬೆರಗಿನ ಬೆಳಕು: ಋಣಾನುಬಂಧ

ಡಾ. ಗುರುರಾಜ ಕರಜಗಿ
Published 6 ಮೇ 2021, 20:14 IST
Last Updated 6 ಮೇ 2021, 20:14 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಅಳೆವರಾರ್ ಪೆಣ್ ಗಂಡುಗಳನೆಳೆವ ನೂಲುಗಳ ? |
ಕೆಳೆಪಗೆಗಳೆಲ್ಲವಾಳದಲಿ ಬಲು ತೊಡದಿ ||
ಇಳೆಯ ಋಣಗಳ ಲೆಕ್ಕವಿಹುದು ವಿಧಿಯಕ್ಕರದಿ |

ತಿಳಿಯಗೊಡನದ ನಮಗೆ – ಮಂಕುತಿಮ್ಮ

ಪದ-ಅರ್ಥ: ಅಳೆವರಾರ್=ಅಳೆಯುವವರು ಯಾರು, ಪೆಣ್‌ಗಂಡುಗಳನೆಳೆವ=ಪೆಣ್(ಹೆಣ್ಣು)+ ಗಂಡುಗಳನು+ಎಳೆವ, ಕೆಳೆಪಗೆಗಳೆಲ್ಲವಾಳದಲಿ=ಕೆಳೆ(ಸ್ನೇಹ)+ಪಗೆಗಳು(ಹಗೆತನ)+ಎಲ್ಲ+ಆಳದಲಿ, ವಿಧಿಯಕ್ಕರದಿ=ವಿಧಿ+ಅಕ್ಕರದಿ(ಪ್ರೀತಿಯಿಂದ), ತಿಳಿಯಗೊಡನದ=ತಿಳಿಯಗೊಡನು+ಅದ.

ADVERTISEMENT

ವಾಚ್ಯಾರ್ಥ: ಹೆಣ್ಣು-ಗಂಡುಗಳನ್ನು ಎಳೆವ ನೂಲುಗಳನ್ನು ಅಳೆಯುವವರಾರು? ಇದರ ಆಳದಲ್ಲಿರುವ ಸ್ನೇಹ, ಹಗೆತನಗಳು ಬಲು ತೊಡಕಿನವು. ಅದಕ್ಕೆ ಪ್ರಪಂಚದ ಋಣಗಳ ಲೆಕ್ಕವಿದೆ. ಆದರೆ ವಿಧಿ ಅದನ್ನು ಪ್ರೀತಿಯಿಂದ ನಮಗೆ ತಿಳಿಯಗೊಡದಂತೆ ಮಾಡಿದ್ದಾನೆ.

ವಿವರಣೆ: ನನ್ನ ಸ್ನೇಹಿತರ ಮಗಳು ಇಲ್ಲಿ ವಿದ್ಯೆ ಕಲಿತು ಹೆಚ್ಚಿನ ಶಿಕ್ಷಣಕ್ಕೆಂದು ಅಮೆರಿಕಕ್ಕೆ ಹೋದಳು. ಕಲಿಕೆಯ ನಂತರ ಅಲ್ಲಿಯೇ ಬಂದು ಒಳ್ಳೆಯ ಕೆಲಸ ಸಿಕ್ಕಿತು. ಒಂದು ವರ್ಷದ ಕಾರ್ಯದ ಮೇಲೆ ಆಕೆಯನ್ನು ಆರು ತಿಂಗಳು ಮಟ್ಟಿಗೆ ಯುರೋಪಿನ ಆಸ್ಟ್ರಿಯಾ ದೇಶಕ್ಕೆ ಕಳುಹಿಸಿದರು. ಆಕೆ ಅಲ್ಲಿಯ ಕಚೇರಿಯಲ್ಲಿ ಕೆಲಸ ಮಾಡುವಾಗ ಒಬ್ಬ ಜರ್ಮನ್ ಹುಡುಗನೊಂದಿಗೆ ಪ್ರೇಮವಾಗಿ ಮದುವೆಯಾದರು. ಇಂಥ ಸುದ್ದಿಗಳು ಈಗ ಹೊಸದೇನಲ್ಲ. ಆದರೆ ಭಾರತದಲ್ಲಿ ಬೆಳೆದ ಹುಡುಗಿ, ಕಲಿತದ್ದು ಅಮೆರಿಕ, ತಾತ್ಕಾಲಿಕ ಕೆಲಸಕ್ಕೆ ಹೋದದ್ದು ಆಸ್ಟ್ರಿಯಾಕ್ಕೆ, ಮದುವೆಯಾದದ್ದು ಜರ್ಮನಿಯ ಹುಡುಗ. ಎಲ್ಲಿಂದೆಲ್ಲಿಯ ಸಂಬಂಧ!

ಇತಿಹಾಸ, ಪುರಾಣಗಳನ್ನು ನೋಡಿದರೆ ಅನೇಕ ಮದುವೆಗಳು ವ್ಯವಹಾರಗಳಾಗಿದ್ದವು. ಇಬ್ಬರು ರಾಜರುಗಳ ನಡುವೆ ಸಂಬಂಧ ಬೆಸೆಯುವುದಾಗಿದ್ದರೆ ಅವರ ಮಕ್ಕಳ ಮದುವೆ ನಡೆಯುತ್ತಿತ್ತು. ಅವರಿಬ್ಬರೂ ಹೇಗೆ ಬದುಕಿದರೋ ತಿಳಿಯದು, ಆದರೆ ಎರಡು ರಾಜ್ಯಗಳ ನಡುವಿನ ವ್ಯವಹಾರ ನಡೆಯುತ್ತಿತ್ತು. ಕೆಲವೊಂದು ಬಾರಿ ದ್ವೇಷದಿಂದ ಬೇರೆ ದೇಶದ, ಮನೆತನದ ಹೆಣ್ಣನ್ನು ಎತ್ತಿಕೊಂಡು ಬಂದು, ತಮ್ಮ ಮನೆಯಲ್ಲಿ ಸೇರಿಸಿಕೊಂಡು ಆಕೆ ಬದುಕಿರುವವರೆಗೂ ಚಿತ್ರಹಿಂಸೆ ಕೊಟ್ಟ ಪ್ರಸಂಗಗಳೂ ಇವೆ. ಹೀಗೆ ಸ್ನೇಹ, ದ್ವೇಷಗಳ ಒಳಸುಳಿಗಳು ತುಂಬ ಆಳವಾದವುಗಳು, ತಿಳಿಯಲಸಾಧ್ಯವಾದವುಗಳು. ಗಂಡು-ಹೆಣ್ಣುಗಳನ್ನು ಎಳೆಯುವ ನೂಲುಗಳು ಕಣ್ಣಿಗೆ ಕಾಣದಂತೆ ಗೂಢವಾಗಿದ್ದು, ಆ ನೂಲುಗಳು ಬಿಗಿದು ಸೆಳೆಯುವ ಪರಿಯನ್ನು ಅರಿಯುವುದು ಕಷ್ಟ.

ಇದನ್ನೇ ಋಣಾನುಬಂಧವೆನ್ನುವುದು. ಯಾವ ಋಣಗೋಸುಗವೋ, ಯಾವ ಕಾರ್ಯ ಸಾಧನೆಗೋ, ಯಾರ ಸಂತೋಷಕ್ಕೋ, ಕೋಪಕ್ಕೋ ಗಂಡು-ಹೆಣ್ಣುಗಳು ಹೀಗೆ ಕೂಡುವುದು ಅನೂಹ್ಯವಾದದ್ದು. ಅದಕ್ಕೇ ‘ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ’ ಎಂಬ ಲೋಕೋಕ್ತಿ ಬಂದದ್ದು. ಅದು ಯಾವ ಋಣವೋ, ವಿಧಿ, ಅದನ್ನು ಮರೆಯದೆ ಲೆಕ್ಕವಿಟ್ಟು, ದಾಖಲಿಸಿ, ಕಾಪಾಡಿ, ಎಳೆತಂದು ಗಂಟುಹಾಕುತ್ತದಂತೆ. ನಮಗೆ ವಿಧಿಯ ಬರಹ ಕಾಣುವುದಿಲ್ಲ. ಆದರೆ ವಿಧಿಯ ನಿರ್ಧಾರದಂತೆ ನಡೆದ ಕಾರ್ಯ ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.