ADVERTISEMENT

ಬೆರಗಿನ ಬೆಳಕು: ತಾಳ್ಮೆಯೊಂದೇ ಮದ್ದು

ಡಾ. ಗುರುರಾಜ ಕರಜಗಿ
Published 24 ಮೇ 2022, 19:30 IST
Last Updated 24 ಮೇ 2022, 19:30 IST
   

ಗುದ್ದಲಿಯಿನಾದೀತೆ ಮಲೆ ಕಣಿವೆ ಸಮದ ನೆಲ ? |
ಮದ್ದು ತಡೆವುದೆ ಮುಪ್ಪು ಕಳ್ಳನವೊಲಮರೆ? ||
ಯುದ್ಧತಾಪದೆ ಶಾಂತಿಶೀತಲತೆಯುದಿಸೀತೆ? |
ಸಿದ್ಧವಿರು ಸೈರಣಿಗೆ – ಮಂಕುತಿಮ್ಮ || 635 ||

ಪದ-ಅರ್ಥ: ಗುದ್ದಲಿಯಿನಾದೀತೆ=ಗುದ್ದಲಿಯಿನ್ (ಗುದ್ದಲಿಯಿಂದ)+ಆದೀತೆ, ಮಲೆ=ಬೆಟ್ಟ, ಕಳ್ಳನವೊಲಮರೆ=ಕಳ್ಳನವೊಲ್ (ಕಳ್ಳನ ಹಾಗೆ)+ಅಮರೆ(ಅಂಟಿಕೊಳ್ಳೆ), ಶಾಂತಿಶೀತಲತೆಯುದಿಸೀತೆ=ಶಾಂತಿ+ಶೀತಲತೆ+ಉದಿಸೀತೆ, ಸೈರಣೆ=ತಾಳ್ಮೆ

ವಾಚ್ಯಾರ್ಥ: ಒಂದು ಕೈ ಗುದ್ದಲಿಯಿಂದ, ಬೆಟ್ಟ ಕಣಿವೆಗಳನ್ನು ಸಮನಾಗಿ ಮಾಡುವುದು ಸಾಧ್ಯವೆ? ವೃದ್ಧಾಪ್ಯ ಕಳ್ಳನ ಹಾಗೆ ಆವರಿಸಿಕೊಂಡಾಗ ಔಷಧಿ ಅದನ್ನು ತಡೆಯುವುದೆ? ಯುದ್ಧದ ಕೋಲಾಹಲದಿಂದ ಶಾಂತಿ ಮತ್ತು ಸುಂದರ ವಾತಾವರಣ ನಿರ್ಮಾಣವಾದೀತೆ? ಇವೆಲ್ಲಕ್ಕೂ ಒಂದೇ ಸಿದ್ಧತೆ, ಅದು ಸೈರಣೆ.

ADVERTISEMENT

ವಿವರಣೆ: ಇಂದಿನ ಪ್ರಪಂಚ ತುಂಬ ಆತುರದ್ದು. Fast food ಜಗತ್ತು. ಎಲ್ಲವೂ ಬೇಗನೆ ಆಗಿಬಿಡಬೇಕು. ಕೆಲವೊಮ್ಮೆ ಅಸಾಧ್ಯವೆಂಬುದನ್ನು ಮಾಡಲು ಹೋಗಿ ಪೆಟ್ಟು ತಿಂದವರು ಬೇಕಾದಷ್ಟು ಜನ. ತಾವು ಹಿಮಾಚಲ ಪ್ರದೇಶದಲ್ಲಿ ಪ್ರಯಾಣ ಮಾಡಿದ್ದರೆ ಅಲ್ಲಿ ರಸ್ತೆ ಮಾಡುವ ಪರಿಪಾಟಲು ಅರ್ಥವಾಗುತ್ತದೆ. ಅಲ್ಲಿ ಒಂದು ಚೂರೂ ಸಮತಟ್ಟಾದ ನೆಲವಿಲ್ಲ. ಬರೀ ಬೆಟ್ಟ, ಕಣಿವೆಗಳ ಪ್ರದೇಶ. ದೊಡ್ಡ ಬೆಟ್ಟಗಳನ್ನು ಅಗಿದು ಕತ್ತರಿಸಬೇಕು, ಕಣಿವೆಗಳನ್ನು ಮುಚ್ಚಬೇಕು, ನೆಲವನ್ನು ಸಮತಟ್ಟಾಗಿ ಮಾಡಿ, ನಂತರ ರಸ್ತೆಗೆ ಕಾಂಕ್ರೀಟ್ ಹಾಕಬೇಕು. ಅಲ್ಲಿ ಎಲ್ಲ ದೈತ್ಯ ಯಂತ್ರಗಳು ಕಾರ್ಯಮಾಡುತ್ತವೆ. ಒಬ್ಬ ಮನುಷ್ಯ ಅಂತಹ ರಸ್ತೆಯನ್ನು ಮಾಡಲು ಹೊರಟ ಎಂದಿಟ್ಟುಕೊಳ್ಳಿ. ಅವನು ಒಬ್ಬನಷ್ಟೇ ಅಲ್ಲ, ಅವನ ಬಳಿ ಒಂದು ಗುದ್ದಲಿಯನ್ನು ಬಿಟ್ಟರೆ ಯಾವ ಉಪಕರಣವೂ ಇಲ್ಲ. ಆಗ, ಅವನದ್ದು ಆತುರ ಸ್ವಭಾವ, ಅವನಲ್ಲಿ ಉತ್ಸಾಹವಿದೆ ಆದರೆ ಯೋಜನೆಯಿಲ್ಲ ಎಂದುಕೊಳ್ಳುವದಿಲ್ಲವೆ? ಅದೊಂದು ನೀಗದ ಕಾರ್ಯ.

ಮುಪ್ಪು ಬರುವುದನ್ನು ತಪ್ಪಿಸುವುದು ಅಸಾಧ್ಯ. ಅದು ಪ್ರಕೃತಿ ಗುಣ, ಆದರೆ ವಿಚಿತ್ರವೆಂದರೆ, ಮುಪ್ಪು ಬರುವುದು ಗೊತ್ತೇ ಆಗುವುದಿಲ್ಲ. ಅದಕ್ಕೆ ಮುಪ್ಪಿನದು ಕಳ್ಳಹೆಜ್ಜೆ ಎನ್ನುತ್ತಾರೆ. ವಿ.ಸ. ಖಂಡೇಕರ್ ರವರ ಯಯಾತಿ ಕಾದಂಬರಿಯಲ್ಲಿ ಒಂದು ಸುಂದರ ಪ್ರಸಂಗ. ಯಯಾತಿಯ ತಂದೆ ನಹುಷ ಮಗನನ್ನು ಕರೆದು ಹೇಳುತ್ತಾನೆ, “ಮಗೂ, ಆ ಗೂಡಿನಲ್ಲಿರುವ, ಇಂದ್ರ ನನಗೆ ಬರೆದುಕೊಟ್ಟಿರುವ ಜಯಪತ್ರವನ್ನು ಓದು. ಈ ದೇಹ, ಇಂದ್ರನನ್ನು ಸೋಲಿಸಿದ ದೇಹ. ಆದರೆ ಈಗ ವೃದ್ಧಾಪ್ಯ ಕಳ್ಳನಂತೆ ಹಿಂದಿನ ಬಾಗಿಲಿನಿಂದ ಬಂದಿದೆ. ಅಷ್ಟು ಬಲಿಷ್ಠವಾದ ದೇಹ ಈಗ ಏಳಲಾರದಂತಾಗಿದೆ, ಇಂದ್ರನ ಜಯಪತ್ರವನ್ನು ಓದಲೂ ಈ ಕಣ್ಣುಗಳಿಗೆ ಶಕ್ತಿ ಇಲ್ಲ. ಮುಪ್ಪಿನಂಥ ಮೋಸಗಾರ ಕಳ್ಳ ಬೇರಿಲ್ಲ”.

ಹೀಗೆ ಕಳ್ಳನ ಹಾಗೆ ಆವರಿಸಿಕೊಳ್ಳುವ ಮುಪ್ಪನ್ನು ತಡೆಯಲು ಯಾವುದೇ ಔಷಧಿಯಿಂದ ಆದೀತೇ? ಯುದ್ಧದ ಬೆಂಕಿ ನೆಲವನ್ನು ಸುಡುತ್ತಿದ್ದಾಗ, ಜನರ ಬದುಕು ಸುಟ್ಟು ಕರಕಾಗುತ್ತಿದ್ದಾಗ, ಶಾಂತಿ, ಸುಂದರ ವಾತಾವರಣ ಉಳಿದೀತೇ? ಶಾಂತಿ ಕದಡಿದಾಗಲೇ ಯುದ್ಧದ ಕಿಡಿ ಹಾರುವುದು, ಯುದ್ಧದಲ್ಲಿ ಭಾಗಿಯಾದವರಿಗೆ, ಅದನ್ನು ಯೋಚಿಸಿದವರಿಗೆ, ಅಲ್ಲಿ ಅನಿವಾರ್ಯವಾಗಿ ಸಿಕ್ಕಿಹಾಕಿಕೊಂಡ ಅಮಾಯಕ ಜನರಿಗೆ ಸಂಕಟ, ತಲ್ಲಣ ತಪ್ಪಿದ್ದಲ್ಲ.

ಹಾಗಾದರೆ ಇಂಥ ಪರಿಸ್ಥಿತಿಗಳನ್ನು ನಿಭಾಯಿಸುವುದು ಹೇಗೆ? ಆತುರದಲ್ಲಿ ಅಸಾಧ್ಯವಾದ ಕಾರ್ಯವನ್ನು ಕೈಗೆತ್ತಿಕೊಳ್ಳುವುದು, ಮುಪ್ಪನ್ನು ತಡೆಯುವುದು ಹಾಗೂ ಯುದ್ಧದ ಬೆಂಕಿಯಲ್ಲಿ ಶೀತಲತೆಯನ್ನು ಬಯಸುವುದು, ಇಂತಹ ಪರಿಸ್ಥಿತಿಗಳಲ್ಲಿ ಬೇಕಾದದ್ದು ಮನಸ್ಸಿನ ಸ್ಥಿರತೆ, ತಾಳ್ಮೆ. ತಾಳ್ಮೆಯೊಂದೇ ಇಂಥ ಅಸಾಮಾನ್ಯ ಪರಿಸ್ಥಿತಿಗಳಲ್ಲಿ ಬದುಕನ್ನು ಹಗುರ ಮಾಡುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.