ADVERTISEMENT

ಬೆರಗಿನ ಬೆಳಕು: ನಗುಮೊಗದ ಸಹನೆ

ಡಾ. ಗುರುರಾಜ ಕರಜಗಿ
Published 25 ಮೇ 2022, 19:30 IST
Last Updated 25 ಮೇ 2022, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಸಾಸಿರದ ಯುಕ್ತಿ ಸಾಹಸವ ನೀನೆಸಗುತಿರು |
ಲೇಸು ಫಲ ದೊರೆಗೆ ನಿನ್ನೆಲ್ಲ ಪೌರುಷಕಂ ||
ಶೇಷ ನಿನಗುಳಿವುದೆಂತಾದೊಡಂ ನೋವಿನಿತು |
ಸೈಸದನು ನೀನಳದೆ – ಮಂಕುತಿಮ್ಮ || 636 ||

ಪದ-ಅರ್ಥ: ಸಾಸಿರದ=ಸಾವಿರಾರು, ನೀನೆಸಗುತಿರು=ನೀನು+ಎಸಗುತಿರು (ಮಾಡುತಿರು), ಲೇಸು=ಒಳ್ಳೆಯ, ದೊರೆಗೆ=ದೊರೆತರೆ, ಶೇಷ=ಉಳಿದದ್ದು, ನಿನಗುಳಿವುದೆಂತಾದೊಡಂ=ನಿನಗೆ+ಉಳಿವುದು+ಎಂತು+ಆದೊಡಂ, ನೋವಿನಿತು=ನೋವು+ಇನಿತು(ಸ್ವಲ್ಪ), ಸೈಸದನು=ಸೈಸು(ಸೈರಿಸು)+ಅದನು.

ವಾಚ್ಯಾರ್ಥ: ಬದುಕಿನಲ್ಲಿ ಸಾವಿರಾರು ಯುಕ್ತಿಯ, ಸಾಹಸದ ಕಾರ್ಯಗಳನ್ನು ಮಾಡುತ್ತಿರು. ನಿನ್ನ ಪ್ರಯತ್ನಕ್ಕೆ ಫಲ ದೊರಕಿದರೆ ಒಳ್ಳೆಯದು. ಆ ಕರ್ತವ್ಯದಲ್ಲಿ ನಿನಗೆ ಒಂದಿಷ್ಟು ನೋವು ಉಳಿದರೆ ಅದನ್ನು ದು:ಖಿಸದೆ ತಾಳಿಕೊ.

ADVERTISEMENT

ವಿವರಣೆ: ಜೀವನದಲ್ಲಿ ಕರ್ಮ ಮಾಡದೆ ಒಂದು ಕ್ಷಣವೂ ಇರಲು ಸಾಧ್ಯವಿಲ್ಲ. ಭಗವದ್ಗೀತೆಯಲ್ಲಿ ಒಂದು ಸುಂದರವಾದ ಮಾತಿದೆ.

ನಿಯತಂ ಕುರು ಕರ್ಮ ತ್ಸಂ ಕರ್ಮ ಜ್ಯಾಯೋ ಹ್ಯಕರ್ಮಣ: ||

‘ನಿನಗೆ ಯಾವ ಕರ್ಮ ದೊರೆತಿದೆಯೋ, ಯಾವುದು ನಿನಗೆ ಕರ್ತವ್ಯವೊ, ಅದನ್ನು ಮಾಡು. ಕರ್ಮವನ್ನು ಬಿಡುವುದಕ್ಕಿಂತ ಕರ್ಮದ ಅನುಷ್ಠಾನ ಮಾಡುವುದು ಉತ್ತಮವಾದದ್ದು’. ನನಗೆ ಒಪ್ಪಿಸಿದ ಅಥವಾ ನನಗೆ ಒಪ್ಪಿತವಾದ ಕೆಲಸವನ್ನು ಮನ:ಪೂರ್ವಕವಾಗಿ, ನನಗಿರುವ ಶಕ್ತಿ, ಕೌಶಲಗಳೊಡನೆ ಮಾಡಬೇಕು. ಯಾರೋ ಹೇಳಿದರೆಂದು, ಹೇಗೋ ಮಾಡಿದರೆ ಅದು ಸಾರ್ಥಕವಾಗುವುದಿಲ್ಲ. ಕಗ್ಗ ಅದನ್ನು ಸ್ಪಷ್ಟಪಡಿಸುತ್ತದೆ. ಸಾವಿರಾರು ಯುಕ್ತಿಗಳಿಂದ, ಸಾಹಸಗಳಿಂದ ಕೆಲಸ ಮಾಡು. ಯಶಸ್ಸು ದೊರಕಿಯೇ ತೀರುತ್ತದೆಂಬ ಭರವಸೆ ಇಲ್ಲ. ಆದರೆ ಪ್ರಯತ್ನದಲ್ಲಿ ಕೊರತೆಯಾಗಬಾರದು. ಫಲ ದೊರಕಿತೋ, ಅದು ದೈವಕೃಪೆ. ಒಂದು ಸಲ ಡಾ. ಕಲಾಂರವರನ್ನು ನಾನು ಕೇಳಿದ್ದೆ, ‘ಸರ್, ನೀವು ಮುಂದೆ ಭಾರತದ ರಾಷ್ಟ್ರಪತಿಯಾಗಬಹುದೆಂದು ಯೋಚಿಸಿದ್ದಿರಾ?’ ಅವರು ಹೇಳಿದ ಮಾತು ಗೀತೆಯ ಮಾತೇ, ‘ನನಗೆ ಒಪ್ಪಿದ ಕಾರ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ, ಸರ್ವಶಕ್ತಿಯಿಂದ ಮಾಡುತ್ತ ಬಂದೆ. ಕೆಲಸದಲ್ಲಿ ಬಂದ ತೃಪ್ತಿಯೇ ನಾನು ಪಡೆದ ಫಲ. ಉಳಿದದ್ದನ್ನು ನಾನು ಅಪೇಕ್ಷಿಸಿರಲಿಲ್ಲ. That was a divine design (ಅದು ದೈವೀಕೃಪೆ)’.

ನಮ್ಮ ಇಂದಿನ ರಾಷ್ಟ್ರಪತಿಗಳಾದ ಶ್ರೀ ರಾಮನಾಥ ಕೋವಿಂದ್‌ರವರು ಬಂದ ದಾರಿ ಸುಗಮವಾದದ್ದಲ್ಲ. ಅದು ಕಷ್ಟದ್ದು, ಪರಿಶ್ರಮದ್ದು. ಕಾನಪುರ ಹತ್ತಿರದ ಕುಗ್ರಾಮದಲ್ಲಿ, ತುಂಬ ಬಡತನದಲ್ಲಿ ಹುಟ್ಟಿದ ಹುಡುಗ. ಇವರ ಮೇಲೆ ನಾಲ್ಕು ಅಣ್ಣಂದಿರು, ಇಬ್ಬರು ಅಕ್ಕಂದಿರು. ಮಣ್ಣಿನ ಗುಡಿಸಲೇ ಅವಾಸ. ಇವರು ಐದು ವರ್ಷದವರಿದ್ದಾಗ ಗುಡಿಸಲಿಗೆ ಬೆಂಕಿ ಹತ್ತಿ ಸುಟ್ಟು ಹೋಯಿತು. ಅದರೊಂದಿಗೆ ಅವರ ತಾಯಿಯೂ ಪ್ರಾಣ ಕಳೆದುಕೊಂಡರು. ಆದರೆ ಇವರು ಹಟಬಿಡದೆ ನಿತ್ಯ 8 ಕಿಲೋಮೀಟರ್ ನಡೆದು ಶಾಲೆಗೆ ಹೋಗಿ ಕಲಿತು, ಲಾಯರ್ ಆದರು. ಮುಂದೆ ಹೈಕೋರ್ಟಿನಲ್ಲಿ, ಸುಪ್ರೀಂ ಕೋರ್ಟಿನಲ್ಲಿ ವಾದ ಮಾಡಿದರು. ಬಡವರಿಗೆ, ದಲಿತರಿಗೆ ಪುಕ್ಕಟೆಯಾಗಿ ಸೇವೆ ಸಲ್ಲಿಸಿದರು. ಇದೆಲ್ಲ ಅವರ ಸಾಹಸ. ಸಾಹಸಕ್ಕೆ ಸರಿಯಾದ ಮನ್ನಣೆ ನಂತರ ದೊರಕಿತು.

ಹೀಗೆ ಕಾರ್ಯಮಾಡುವಾಗ ಶ್ರಮವಾಗುತ್ತದೆ, ಕೆಲವೊಮ್ಮೆ ಜನ ಅಪಹಾಸ್ಯ ಮಾಡಬಹುದು, ದೂರಬಹುದು, ಮರ್ಯಾದೆಗೆ ಭಂಗ ತರಬಹುದು. ಅದರಿಂದ ಸಾಕಷ್ಟು ನೋವು ಬಂದೀತು. ಆದರೆ ನೋವು ಬಂದೀತೆಂದು ಕೆಲಸ ಮಾಡುವುದನ್ನು ಬಿಡುವುದು ಬೇಡ. ನೋವು ಬರಲಿ, ಅದನ್ನು ಅಳದೆ ತಾಳ್ಮೆಯಿಂದ ಸ್ವೀಕರಿಸಬೇಕು. ಅದು ವ್ಯಕ್ತಿತ್ವವನ್ನು ಹುರಿಗೊಳಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.