ADVERTISEMENT

ಬದುಕಿನ ಸಾಮಗ್ರಿಗಳು

ಡಾ. ಗುರುರಾಜ ಕರಜಗಿ
Published 1 ನವೆಂಬರ್ 2020, 19:30 IST
Last Updated 1 ನವೆಂಬರ್ 2020, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ    

ಹೇಳಲಾಗದ ಹಸಿವು, ತಾಳಲಾಗದ ತಪನೆ |

ಆಳದಲಿ ನಾಚನಾಗಿಪ ಚಿಂತೆಯೂಟೆ ||

ಗಾಳಿಯೆತ್ತಿತ್ತಣಿನೊ ತಂದೀವ ಸೋಂಕು – ಇವೆ |

ADVERTISEMENT

ಬಾಳ ಸಾಮಗ್ರಿಯಲ - ಮಂಕುತಿಮ್ಮ || 350 ||

ಪದ-ಅರ್ಥ: ತಪನೆ=ಬೇಗೆ, ತಾಪ, ನಾಚನಾಗಿಪ=ನಾಚಿಕೆಯನ್ನುಂಟು ಮಾಡುವ, ಚಿಂತೆಯೂಟೆ= ಚಿಂತೆಯ+ಊಟೆ(ಬುಗ್ಗೆ), ಗಾಳಿಯೆತ್ತೆತ್ತಣಿನೊ=ಗಾಳಿ+ಎತ್ತೆತ್ತಣಿನೊ(ಎಲ್ಲಿಂದಲೊ), ತಂದೀವ=ತಂದು+ಈವ (ಕೊಡುವ)

ವಾಚ್ಯಾರ್ಥ: ಹೇಳಿಕೊಳ್ಳಲಾರದಂಥ ಹಸಿವು, ತಾಳಲಾರದ ತಾಪ, ಮನದಾಳದಲ್ಲಿ ನಾಚಿಕೆಯನ್ನುಂಟುಮಾಡುವ ಚಿಂತೆಯ ಬುಗ್ಗೆಗಳು, ಗಾಳಿ ಎಲ್ಲಿಂದಲೋ ತಂದು ಹಾಕುವ ಸೋಂಕು, ಇವೇ ನಮ್ಮ ಬಾಳ ಸಾಮಗ್ರಿಗಳಲ್ಲವೆ?

ವಿವರಣೆ: ಸಾಮಾನ್ಯವಾಗಿ ಹಸಿವಾದರೆ ಗೊತ್ತಾಗುತ್ತದೆ. ಅದನ್ನು ಹೇಳಿಕೊಳ್ಳುತ್ತೇವೆ, ಆಹಾರವನ್ನು ಹುಡುಕಿಕೊಳ್ಳುತ್ತೇವೆ. ಆದರೆ ಹೊಟ್ಟೆಯ ಹಸಿವಿಗಿಂತ ಬೇರೆಯಾದ ಹಲವಾರು ಹಸಿವೆಗಳಿವೆ. ಅವುಗಳನ್ನು ಹೇಳಿಕೊಳ್ಳಲಾಗುವುದಿಲ್ಲ. ಅವು ನಮ್ಮನ್ನು ಕಾಡಿ, ಕಾಡಿ ಚೈತನ್ಯವನ್ನು ಒಣಗಿಸಿಬಿಡುತ್ತವೆ. ಆ ಹಸಿವು ಹಣದ್ದಾಗಿರಬಹುದು. ಹಣ ಎಷ್ಟಾದರೆ ಸಾಕು? ಅದಕ್ಕೆ ಮಿತಿ ಇದೆಯೆ? ಮಿತಿಯಿಲ್ಲದ ಹಣವನ್ನು ಕಾಪಾಡಿಕೊಳ್ಳುವುದೂ ಸಂಕಟದ ಕೆಲಸವೇ. ಅಧಿಕಾರದ ಹಸಿವು ಇನ್ನೂ ತೀಕ್ಷ್ಣ. ಅದು ಎಂತಹ ಅಪಚಾರವನ್ನೂ ಅನ್ಯಾಯವನ್ನು ಮಾಡಿಸಿಬಿಡುತ್ತದೆ. ತಾನೇ ರಾಜನಾಗಬೇಕೆಂಬ ಆಸೆ ಮ್ಯಾಕಬೆಥ್‌ನನ್ನು ಪ್ರೇರೇಪಿಸಿ, ತನ್ನನ್ನು ಬೆಳೆಸಿದ, ಮೆಚ್ಚಿದ ಮುದಿರಾಜನನ್ನು ಕೊಲ್ಲುವಂತೆ ಮಾಡುತ್ತದೆ. ಎಲ್ಲರಿಗೂ ಅಧಿಕಾರದ ಆಸೆ. ಅದು ದೊರೆಯುವವರೆಗೆ ಪಡುವ ಸಂಕಟ ಅಷ್ಟಿಷ್ಟಲ್ಲ. ಆದರೆ ಹೊರಗೆ ತೋರುವಂತಿಲ್ಲ, ನನಗೆ ಅಧಿಕಾರದ ಆಸೆಯೇ ಇಲ್ಲವೆಂಬ ಹೇಳಿಕೆಗಳನ್ನು ಕೊಡುತ್ತಲೇ ಒಳಗೆ ಕುಸಿಯಬೇಕು. ಇನ್ನು ಹೆಣ್ಣಿನ ಆಸೆ. ಇದಕ್ಕಾಗಿ ಚಡಪಡಿಸಿದವರೆಷ್ಟೋ, ಬೆಂದವರೆಷ್ಟೋ, ಅನ್ಯಾಯಕಾರಿಯಾದವರೆಷ್ಟೋ? ಆಳದಲ್ಲಿ ಕುದಿಯುವ, ಹೊರಗೆ ಹೇಳಿಕೊಳ್ಳಲಾಗದ ಹಸಿವೆಗಳು ತಾಳಲಾರದ ತಾಪಗಳನ್ನುಂಟು ಮಾಡುತ್ತವೆ. ಇದನ್ನು ಬಸವಣ್ಣ ಹೇಳುವ ಪರಿ ಬಲು ಸುಂದರ.

ಒಡೆಯರಿಗೆ ಒಡವೆಯನೊಪ್ಪಿಸಲಾರದೆ

ಮೊರೆಯಿಡುವ ಮನವ ನಾನೇನೆಂಬೆ?

ನೆತ್ತಿಯಲ್ಲಿ ಅಲಗ ತಿರುಹುವಂತಿಪ್ಪ

ವೇದನೆಯಹುದೆನಗೆ

ಕೊಯ್ದ ಮೂಗಿಂಗೆ ಕನ್ನಡಿಯ ತೋರುವಂತಿಪ್ಪ

ವೇದನೆಯಹುದೆನಗೆ.

ಬೆಂದ ಹುಣ್ಣ ಕಂಬಿಯಲ್ಲಿ ಕೀಸುವಂತಿಪ್ಪ

ವೇದನೆಯಹುದೆನಗೆ,

ಕೂಡಲಸಂಗಮದೇವಾ ನೀ ಮಾಡಿ ನೋಡುವ

ಹಗರಣವ

ನಾ ಮಾಡಿದೆನೆಂದೆಡೆ, ಮನಕ್ಕೆ ಮನ ನಾಚದೆ

ಅಯ್ಯಾ?||

ಹೊರಗೆ ತೋರಲಾರದ ಅದರೆ ಒಳಗೆ ಸಂಕಟಪಡಿಸುವ ವೇದನೆ ಎಂಥದ್ದು! ಅಂಥ ವಿಚಾರಗಳು ನಮ್ಮ ಮನದಲ್ಲಿವೆ ಎಂಬುದು ನಮಗೇ ನಾಚಿಕೆಯನ್ನು ತರುತ್ತವೆ. ನಿರುಮ್ಮಳವಾಗಿ ಇರುವಂತಿಲ್ಲ. ಯಾವಾಗ, ಎಲ್ಲಿಂದ ಆಸೆಯ ಗಾಳಿ ಸೋಂಕನ್ನು ತಂದೀತು ಎಂಬುದನ್ನು ಹೇಳುವುದು ಅಸಾಧ್ಯ.

ಕಗ್ಗ ಹೇಳುತ್ತದೆ, ಇವೆಲ್ಲ ಸಂಕಟಗಳು, ನೋವುಗಳು ನಮ್ಮ ಅಪೇಕ್ಷೆಗಳಿಂದಲೇ ಬಂದವುಗಳು. ಈ ಯಾವ ಅಪೇಕ್ಷೆಗಳೇ ಇಲ್ಲದಿದ್ದರೆ ಬದುಕಿಗೆ ಸೊಗಸೇನು? ಪ್ರಪಂಚದ ರಮ್ಯತೆಗೆ, ಸೊಬಗಿಗೆ, ಗುದ್ದಾಟಗಳಿಗೆ ಈ ಆಸೆಗಳೇ ಮತ್ತು ಅವುಗಳಿಂದಾದ ಸಂಕಟಗಳೇ ಸಾಮಗ್ರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.