ADVERTISEMENT

ಬೆರಗಿನ ಬೆಳಕು: ಆಮೆಯ ಬುದ್ಧಿವಂತಿಕೆ

ಡಾ. ಗುರುರಾಜ ಕರಜಗಿ
Published 10 ಜನವರಿ 2021, 19:30 IST
Last Updated 10 ಜನವರಿ 2021, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಕಾಶಿಯನ್ನು ಬ್ರಹ್ಮದತ್ತ ಆಳುತ್ತಿದ್ದಾಗ ತನ್ನ ಮಗನನ್ನು ಉಪರಾಜನನ್ನಾಗಿ ಮಾಡಿದ. ಮಗ ಅತ್ಯಂತ ಜನಪ್ರಿಯನಾದ. ತಂದೆಗೇ ಮಗನ ಬಗ್ಗೆ ಅಸೂಯೆಯುಂಟಾಗಿ, ‘ನೀನು ರಾಜ್ಯವನ್ನು ಬಿಟ್ಟು ದೂರ ಹೋಗಿ ಇರು. ನಾನು ಸತ್ತ ನಂತರ ಬಂದು ರಾಜ್ಯವಾಳು’ ಎಂದು ಕಳುಹಿಸಿಬಿಟ್ಟ. ರಾಜಕುಮಾರ ಯಮುನಾನದಿ, ಸಮುದ್ರ ಮತ್ತು ಪರ್ವತಗಳ ನಡುವಿನ ಪ್ರದೇಶದಲ್ಲಿ ಒಂದು ಪರ್ಣಕುಟಿಯನ್ನು ಕಟ್ಟಿಕೊಂಡು ವಾಸವಾದ.

ಯಮುನಾ ನದಿಯ ತೀರದಲ್ಲಿ ಒಂದು ನಾಗಭವನ. ಅಲ್ಲಿ ಒಬ್ಬ ನಾಗ ತರುಣಿ ಗಂಡನನ್ನು ಕಳೆದುಕೊಂಡು, ಬೇರೆ ಪುರುಷನನ್ನು ಮದುವೆಯಾಗುವ ವಿಚಾರದಲ್ಲಿದ್ದಳು. ಒಂದು ದಿನ ರಾಜಕುಮಾರನ ಪರ್ಣಕುಟಿಯನ್ನು ಪ್ರವೇಶಿಸಿ, ಈತ ನಿಜವಾಗಿಯೂ ಸನ್ಯಾಸಿಯೇ ಹೌದೋ ಅಲ್ಲವೋ ಎಂಬುದನ್ನು ತಿಳಿಯುವುದಕ್ಕೆ ಅಲಂಕಾರ, ಪರಿಮಳ, ಹೂವುಗಳನ್ನು ಶೃಂಗರಿಸಿದ ಹಾಸಿಗೆಯ ಮೇಲೆ ಹಾಕಿ ಕಾದಿದ್ದಳು. ಆತ ಬಂದ ಮೇಲೆ ಅವನೊಂದಿಗೆ ಮಾತನಾಡಿ ಆತ ಸನ್ಯಾಸಿಯಲ್ಲ ಎಂಬುದನ್ನು ಕಂಡುಕೊಂಡು ಅವನನ್ನು ಮದುವೆಯಾದಳು. ತನ್ನ ಶಕ್ತಿಯಿಂದ ಸುಂದರವಾದ ಅರಮನೆಯನ್ನು ಸೃಷ್ಟಿಸಿ, ಸಕಲ ವೈಭೋಗದಿಂದ ಗಂಡನೊಂದಿಗೆ ಬದುಕಿದಳು.

ಒಂದು ಬಾರಿ ವಾರಾಣಸಿಯ ವನಚರ ಈ ಕ್ಷೇತ್ರಕ್ಕೆ ಬಂದು ರಾಜಕುಮಾರನನ್ನು ಕಂಡು ಸಂತೋಷಪಟ್ಟ, ಮರಳಿ ವಾರಾಣಸಿಗೆ ಹೋದಾಗ ಬ್ರಹ್ಮದತ್ತ ರಾಜ ತೀರಿಹೋಗಿ, ರಾಜಕುಮಾರ ಎಲ್ಲಿರುವನೆಂಬುದನ್ನು ತಿಳಿಯದೆ ಮಂತ್ರಿಗಳು ಚಿಂತಿತರಾಗಿದ್ದರು. ವನಚರ ಅವರಿಗೆ ರಾಜಕುಮಾರನ ಇರವನ್ನು ತಿಳಿಸಿದ. ಅವರು ಯಮುನಾತೀರಕ್ಕೆ ಬಂದು ವಾರಾಣಸಿಗೆ ಬರುವಂತೆ ಬೇಡಿದರು. ರಾಜಕುಮಾರನೊಂದಿಗೆ ಹೊರಟುವುದಕ್ಕೆ ನಾಗಕನ್ಯೆ ಒಪ್ಪಲಿಲ್ಲ. ‘ನಾವು ಮೂಲತ: ನಾಗಗಳು, ಘೋರ ವಿಷದ ಪ್ರಾಣಿಗಳು, ಶೀಘ್ರಕೋಪಿಗಳು. ನಮ್ಮ ಕೋಪದ ದೃಷ್ಟಿಯಿಂದಲೇ ಅನಾಹುತವಾಗುತ್ತದೆ. ನನ್ನ ಮಕ್ಕಳು ಮನುಷ್ಯಕುಲದವರು. ಅವರನ್ನು ಕರೆದುಕೊಂಡು ಹೋಗು. ಅವರನ್ನು ನೀರಿನ ಕೊಳದಲ್ಲಿಯೇ ಇಡು. ಹೊರಗಿನ ತಾಪಮಾನ ಅವರಿಗೆ ಆಗುವುದಿಲ್ಲ’ ಎಂದಳು. ಮಕ್ಕಳನ್ನು ಕರೆದುಕೊಂಡು ರಾಜಕುಮಾರ ವಾರಾಣಸಿಗೆ ಬಂದು ರಾಜನಾದ. ಮಕ್ಕಳಿಗೆ ನೆಲದಲ್ಲಿಯೇ ಕೊಳಗಳ ನಿರ್ಮಾಣ ಮಾಡಿದ. ಹೀಗೆ ಅವರು ಕೊಳದಲ್ಲಿ ಇರುವಾಗ ಒಂದು ಆಮೆ ಅಲ್ಲಿ ಸೇರಿಕೊಂಡಿತು. ಅದನ್ನು ಕಂಡು ಮಕ್ಕಳು ‘ಹೋ ಯಕ್ಷ, ಯಕ್ಷ’ ಎಂದು ಗಾಬರಿಯಾಗಿ ಅರಚಿದರು. ಸೇವಕರು ಅದನ್ನೆತ್ತಿ ಯುಮುನೆಯ ಗುಂಡಿಯಲ್ಲಿ ಹಾಕಿಬಿಟ್ಟರು. ಅದು ಈಜುತ್ತ ನಾಗಭವನಕ್ಕೆ ಬಂದಿತು. ಅಲ್ಲಿಯ ನಾಗಗಳು ಅದನ್ನು ಹಿಡಿದು ನಾಗರಾಜನಾದ ಧೃತರಾಷ್ಟ್ರನ ಬಳಿಗೆ ಕರೆತಂದರು. ರಾಜನ ಉಗ್ರದೃಷ್ಟಿಗೆ ಸಿಲುಕಿ ಸಾಯಬಾರದೆಂದು ಆಮೆ ಸುಳ್ಳು ಹೇಳಿತು, ‘ರಾಜಾ, ವಾರಾಣಸಿಯ ರಾಜ ತನ್ನ ಅತ್ಯಂತ ಸುಂದರಳಾದ ಸಮುದ್ರಜನ್ಮಳನ್ನು ತಮಗೆ ಕೊಟ್ಟು ಮದುವೆ ಮಾಡಬಯಸಿದ್ದಾನೆ. ಅದಕ್ಕೆ ನನ್ನನ್ನೇ ದೂತನನ್ನಾಗಿ ಕಳುಹಿಸಿದ್ದಾನೆ. ತಾವು ದಯವಿಟ್ಟು ಒಪ್ಪಬೇಕು’. ಧೃತರಾಷ್ಟ್ರ, ತನ್ನನ್ನು ಲಕ್ಷಾಂತರ ನಾಗಗಳನ್ನು ಕರೆದುಕೊಂಡು ವಾರಾಣಸಿಗೆ ಬಂದು, ಗಾಬರಿಯಾದ ರಾಜ ಹಾಗೂ ನಾಗರಿಕರಿಗೆ ಸಮಾಧಾನ ಹೇಳಿ ಸಮುದ್ರಜನ್ಮಳನ್ನು ಮದುವೆಯಾಗಿ ನಾಗಭವನಕ್ಕೆ ಮರಳಿದ. ನಾಗಕನ್ಯೆ ಮತ್ತೆ ತನ್ನ ಪರಿವಾರವನ್ನು ಸೇರಿದಳು.

ADVERTISEMENT

ಇದು ಅನೇಕ ತಿರುವುಗಳನ್ನು ಪಡೆದ ವಿಶೇಷ ಕಥೆ. ಆಮೆಯ ಬುದ್ಧಿವಂತಿಕೆಯ ಕಥೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.