ADVERTISEMENT

ಬೆರಗಿನ ಬೆಳಕು: ವೇಷಕ್ಕೆ ಅಪಚಾರ

ಡಾ. ಗುರುರಾಜ ಕರಜಗಿ
Published 28 ಅಕ್ಟೋಬರ್ 2020, 0:53 IST
Last Updated 28 ಅಕ್ಟೋಬರ್ 2020, 0:53 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಬ್ರಹ್ಮದತ್ತ ವಾರಣಾಸಿಯನ್ನು ಅಳುತ್ತಿದ್ದಾಗ ಐದುನೂರು ಜನ ವ್ಯಾಪಾರಿಗಳು ವ್ಯಾಪಾರಕ್ಕಾಗಿ ನೌಕಾಯಾನ ಮಾಡುತ್ತಿದ್ದರು. ಏಳನೆಯ ದಿನ ಸಮುದ್ರದಲ್ಲಿ ಬಿರುಗಾಳಿ ಬೀಸಿ ನೌಕೆ ಒಡೆದು ಚೂರಾಯಿತು. ಎಲ್ಲರೂ ತಿಮಿಂಗಲುಗಳ ಹೊಟ್ಟೆ ಸೇರಿದರು. ಒಬ್ಬ ಮಾತ್ರ ಮರದ ದಿಮ್ಮೆ ಹಿಡಿದು ಪಾರಾದ. ಗಾಳಿ ಅವನನ್ನು ಕರಂಬಿಯ ಪಟ್ಟಣದ ತೀರಕ್ಕೆ ತಂದು ಎಸೆಯಿತು. ಭೂಮಿಯ ಮೇಲೆ ಬಿದ್ದು ಆತ ಹಾಗೆಯೇ ನಗ್ನನಾಗಿ ನಗರದಲ್ಲಿ ಭಿಕ್ಷೆಗೆ ಹೋದ. ಈತ ಶ್ರಮಣ, ಅಲ್ಪಸಂತೃಪ್ತ್ತ ಎಂದು ಜನ ಆದರ-ಸತ್ಕಾರ ಮಾಡಿದರು. ಇವನಿಗಾಗಿ ಒಂದು ಆಶ್ರಮ ಕಟ್ಟಿಕೊಟ್ಟು ಅಚೆಲ ಎಂದು ಹೆಸರಿಟ್ಟರು. ಬದುಕು ಚೆನ್ನಾಗಿ ನಡೆದದ್ದರಿಂದ ವ್ಯಾಪಾರಿ ಶ್ರಮಣನಾಗಿ ಸಂತೋಷದಿಂದ ಇದ್ದ.

ಅವನ ದರ್ಶನಕ್ಕೆಂದು ಬರುವ ಅನೇಕರಲ್ಲಿ ನಾಗರಾಜ, ಗರುಡರಾಜರೂ ಇದ್ದರು. ಒಂದು ದಿನ ಗರುಡರಾಜ, “ಭಂತೆ, ನಮ್ಮ ಅನೇಕ ಗರುಡರು ನಾಗಗಳನ್ನು ಹಿಡಿಯ ಹೋಗಿ ವಿಚಿತ್ರ ರೀತಿಯಲ್ಲಿ ಸಮುದ್ರದಲ್ಲಿ ಬಿದ್ದು ಸತ್ತು ಹೋಗುತ್ತಾರೆ. ಈ ನಾಗಗಳು ಏನೋ ರಹಸ್ಯ ವ್ಯವಸ್ಥೆ ಮಾಡಿಕೊಂಡಿವೆ. ನೀವು ಅವುಗಳನ್ನು ಪ್ರೇಮದಿಂದ ಮಾತನಾಡಿಸಿ, ಈ ರಹಸ್ಯವನ್ನು ತಿಳಿದು ಹೇಳುತ್ತೀರಾ?” ಎಂದು ಕೇಳಿದ. ಈತ ಒಪ್ಪಿದ. ಸ್ವಲ್ಪ ಹೊತ್ತಿನ ಮೇಲೆ ನಾಗರಾಜ ಬಂದಾಗ, ‘ನಾಗರಾಜ, ನಿಮ್ಮನ್ನು ಹಿಡಿಯಲು ಬಂದ ಗರುಡರು ಬಹಳ ಮಂದಿ ಸಮುದ್ರದಲ್ಲಿ ಸಾಯುತ್ತಾರೆ. ನಾಗಗಳನ್ನು ಹಿಡಿಯುವ ರಹಸ್ಯ ವಿಧಾನವಿದೆಯೇ?‘ ಎಂದು ಕೇಳಿದ. ನಾಗರಾಜ, ’ಭಂತೆ, ಇದು ಅತ್ಯಂತ ರಹಸ್ಯವಾದದ್ದು. ಇದನ್ನು ಹೇಳಿಬಿಟ್ಟರೆ ನಮ್ಮ ಸಂತತಿ ಇಲ್ಲದಂತಾಗುತ್ತದೆ, ಎಲ್ಲ ಸಂಬಂಧಿಗಳನ್ನು ಸಾವಿನ ಬಾಯಿಗೆ ತಳ್ಳಿದಂತಾಗುತ್ತದೆ. ಆದ್ದರಿಂದ ಹೇಳಲಾರೆ‘ ಎಂದ. ಎರಡು ಮೂರು ದಿನ ಅಚೆಲ ಅದೇ ಪ್ರಶ್ನೆ ಮಾಡಿ, ’ನಾನೋ ಶ್ರಮಣ. ನಾನು ಯಾರಿಗಾದರೂ ಹೇಳಿಬಿಡುತ್ತೇನೆಂಬ ಭಯವೆ? ಕುತೂಹಲಕ್ಕಾಗಿ ನಾನು ಕೇಳುತ್ತಿದ್ದೇನೆ. ನನ್ನನ್ನು ನಂಬಿ ನಿರ್ಭಯವಾಗಿ ಹೇಳು‘ ಎಂದ. ನಾಗರಾಜ ಈ ವಿಷಯವನ್ನು ಅತ್ಯಂತ ರಹಸ್ಯವಾಗಿಡಬೇಕೆಂದು ಪ್ರತಿಜ್ಞೆ ಮಾಡಿಸಿಕೊಂಡು ಹೇಳಿದ, ’ನಾವು ದೊಡ್ಡ ದೊಡ್ಡ ಕಲ್ಲುಗಳನ್ನು ನುಂಗಿ ಭಾರವಾಗಿ ಮಲಗುತ್ತೇವೆ. ಗರುಡಗಳು ತಲೆಯ ಹತ್ತಿರ ಬಂದಾಗ ಕಚ್ಚಲು ಹೋಗುತ್ತೇವೆ. ಗರುಡಗಳು ಯಾವಾಗಲೂ ತಲೆಯನ್ನೇ ಹಿಡಿಯುತ್ತವೆ. ನಮ್ಮ ತಲೆ ಹಿಡಿದು ಎತ್ತಿದಾಗ ದೇಹ ಭಾರಕ್ಕೆ ಹಾರಲಾಗು
ವುದಿಲ್ಲ. ಆಗ ನಾವೇ ಅವುಗಳನ್ನು ನೀರಿಗೆ ಎಳೆದೊಯ್ದು ಬಿಡುತ್ತೇವೆ. ನಮ್ಮನ್ನು ಹಿಡಿಯಬೇಕಾದರೆ ಗರುಡಗಳು ನಮ್ಮ ಬಾಲವನ್ನು ಹಿಡಿದೆತ್ತಬೇಕು. ಆಗ ಬಾಯಿಯಿಂದ ಕಲ್ಲುಗಳು ಹೊರಬಿದ್ದು ಹಗುರವಾಗುತ್ತೇವೆ‘.

ಮರುದಿನ ಗರುಡರಾಜ ಬಂದಾಗ ಅಚೆಲ ಈ ರಹಸ್ಯವನ್ನು ಹೇಳಿಬಿಟ್ಟ. ತಕ್ಷಣ ಗರುಡರಾಜ ನೇರವಾಗಿ ಹೋಗಿ ನಾಗರಾಜನ ಬಾಲವನ್ನು ಹಿಡಿದೆತ್ತಿ ಅಲುಗಾಡಿಸಿ, ಕಲ್ಲುಗಳನ್ನು ಹೊರಬೀಳಿಸಿ ಹಾರಿದ. ಆಗ ನಾಗರಾಜ, ‘ಅಯ್ಯೋ, ಆತ ಶ್ರಮಣ ಎಂದು ರಹಸ್ಯ ಹೇಳಿದೆ. ಆತ ಪಾಪಿ, ನನಗೆ ದ್ರೋಹಮಾಡಿಬಿಟ್ಟ‘ ಎಂದು ಗೋಳಾಡಿದ.

ADVERTISEMENT

ತನಗೆ ಪ್ರಾಣಭಿಕ್ಷೆ ಕೊಡುವಂತೆ ಪ್ರಾರ್ಥಿಸಿದ. ಗರುಡರಾಜ ಕರುಣೆಯಿಂದ ನಾಗರಾಜನನ್ನು ಕೆಳಗಿಳಿಸಿ, ‘ಹೋಗು, ಇನ್ನು ಮೇಲೆ ಎಂದೆಂದೂ ಈ ನಾಟಕದ ಸನ್ಯಾಸಿಗಳನ್ನು ನಂಬಬೇಡ‘ ಎಂದ. ನಾಗರಾಜ ಹಾಗು ಗರುಡರಾಜರಿಬ್ಬರೂ ಅಚೆಲನ ಬಳಿ ಬಂದರು. ಗರುಡರಾಜ ಹೇಳಿದ, ’ಹೇ ಪಾಪಿ, ಅಸಂಯಮಿ, ನೀನು ಸಂಯಮಿಯ ವೇಷ ಧರಿಸಿ ವೃತ್ತಿಗೆ ಅಪಮಾನ ಮಾಡಿದ್ದೀ. ರಹಸ್ಯವನ್ನು ಮತ್ತೊಬ್ಬರಿಗೆ ತಿಳಿಸಿ ಸತ್ಯಕ್ಕೆ ಅಪಚಾರ ಮಾಡಿದ್ದೀ. ಆದ್ದರಿಂದ ನೀನು ಭೂಮಿಯ ಮೇಲೆ ಇರಲು ಅನರ್ಹನಾಗಿದ್ದೀ‘ ಎಂದ. ಭೂಮಿ ಬಿರಿದು ಪಾಪಿಅಚೆಲ ಅವೀಚೀ ನರಕಕ್ಕೆ ಸೇರಿ ಹೋದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.