ADVERTISEMENT

ಬೆರಗಿನ ಬೆಳಕು: ಮಾನವನ ಹಿರಿಮೆ

ಡಾ. ಗುರುರಾಜ ಕರಜಗಿ
Published 28 ಅಕ್ಟೋಬರ್ 2021, 22:04 IST
Last Updated 28 ಅಕ್ಟೋಬರ್ 2021, 22:04 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ತನಗಿಂತ ಹಿರಿದ, ಭುವನಕ್ಕಿಂತ ಹಿರಿದೊಂದ- |
ನನುಭವದ ಹಿಂದೆ, ಸೃಷ್ಟಿಯ ನೆರಳ ಹಿಂದೆ ||
ಅನುಮಿತಿಸಿ ಮನುಜನಾ ಹಿರಿದನೆಳಸುವನೆಯ್ದೆ |
ಮನುಜನೊಳಹಿರಿಮೆಯದು – ಮಂಕುತಿಮ್ಮ|| 486 ||

ಪದ-ಅರ್ಥ: ಹಿರಿದೊಂದನನುಭವದ=ಹಿರಿದು+ಒಂದನು+ಅನುಭವದ,ಅನುಮಿತಿಸಿ=ಊಹಿಸಿ, ಹಿರಿದನೆಳಸುವನೆಯ್ದೆ=ಹಿರಿದನು+ಎಳಸುವನು(ಶೋಧಿಸುವನು,ಹುಡುಕಾಡುವನು)+ಎಯ್ದೆ(ತುಂಬಾ), ಮನುಜನೊಳಹಿರಿಮೆಯದು=ಮನುಜನೊಳ್+ಹಿರಿಮೆಯದು (ದೊಡ್ಡತನ).

ವಾಚ್ಯಾರ್ಥ: ತನಗಿಂತ ಹಿರಿದಾದ, ಪ್ರಪಂಚಕ್ಕಿಂತ ದೊಡ್ಡದಾದ ಅನುಭವದ ಹಿಂದೆ, ಈ ಸೃಷ್ಟಿಯ ಉಗಮದ ಹಿಂದೆ, ಇರುವುದನ್ನು ಅನುಮಾನದಿಂದ ಗ್ರಹಿಸಿ, ಮನುಷ್ಯ ಮಹತ್ತಾದದ್ದನ್ನು ತುಂಬ ಅರಸುತ್ತಾನೆ. ಅದು ಮನುಷ್ಯನ ಹಿರಿಮೆ.

ADVERTISEMENT

ವಿವರಣೆ: ನಾನು ತುಂಬ ಸಲ ಚಿಂತಿಸಿದ್ದೇನೆ. ಸ್ಥಿರವಾದ, ವ್ಯವಸ್ಥಿತವಾದ, ಸಂತೋಷದ ರಾಜಭೋಗವನ್ನು ಬಿಟ್ಟು ಬುದ್ಧ ಯಾಕೆ ದೂರ ಏಕಾಂಗಿಯಾಗಿ ತೆರಳಿದ? ಅಂತೆಯೇ ರಾಜಕುಮಾರನಾಗಿದ್ದ ಮಹಾವೀರ ಎಲ್ಲವನ್ನು ತೊರೆದು ದಿಗಂಬರನಾದದ್ದು ಏಕೆ? ತನ್ನದಾಗಿದ್ದ ರಾಜ್ಯವನ್ನು ಹೊರ ತಳ್ಳಿ ನಿರ್ವಾಣದಲ್ಲಿ ನಿಂತ ಬಾಹುಬಲಿಯ ಕಾರ್ಯದ ಹಿಂದಿನ ಚಿಂತನೆ ಏನಿದ್ದಿರಬಹುದು? ದರ್ಬಾನ್‌ನಲ್ಲಿ ಸಾಕಷ್ಟು ಶ್ರೀಮಂತಿಕೆಯಲ್ಲಿ, ಜನಪ್ರಿಯತೆಯಲ್ಲಿ ಇದ್ದ ಗಾಂಧೀ ಸಂತನಂತೆ ತುಂಡುಪಂಚೆಯನ್ನುಟ್ಟು, ದೇಶವನ್ನು ಸುತ್ತುವಂತೆ ಮಾಡಿದ್ದು ಯಾವುದು? ಭಂಡಾರಿಯಾದ ಬಸವಣ್ಣ, ಅತ್ಯಪೂರ್ವವಾದ ಸಾಮಾಜಿಕ ಚಿಂತನೆಯನ್ನು ಮಾಡಿ, ತನ್ನ ವೈಯಕ್ತಿಕ ಬದುಕಿಗೆ ಮಹತ್ವ ಕೊಡದಿರುವುದು ಏನು ಕಾರಣ?

ಹಾಗೆ ವಿಶೇಷವಾಗಿ ಚಿಂತನೆ ಮಾಡಿದವರೆಲ್ಲ ಜಗಮಾನ್ಯರಾದದ್ದು ಸತ್ಯ. ಅವರೆಲ್ಲರ ಪ್ರಯಾಣ ಸ್ಥಿರನೆಲೆಯಿಂದ ಚರನೆಲೆಯತ್ತ. ಅವರು ತಮ್ಮ ಇಡೀ ಬದುಕನ್ನೇ ಒಂದು ಅನ್ವೇಷಣೆಯನ್ನಾಗಿ ಮಾಡಿಕೊಂಡರು. ಅದೊಂದು ಸತ್ಯದ ಅವಿರತ ಅನ್ವೇಷಣೆ. ಯಾವುದು ಸತ್ಯ? ತಾನು ಸತ್ಯವೇ, ಪ್ರಪಂಚ ಸತ್ಯವೇ? ಬಹುಶ: ಅವರಿಗೆಲ್ಲ ತಮಗಿಂತ, ಈ ಪ್ರಪಂಚಕ್ಕಿಂತ, ತಮ್ಮ ಅರಿವಿಗೆ ಬರುವ ಎಲ್ಲ ಅನುಭವಗಳ ಹಿಂದೆ ಒಂದು ಹಿರಿದಾದ ಸತ್ಯವಿದೆ ಎಂದು ಎನ್ನಿಸಿರಬೇಕು. ಅದರ ಅನ್ವೇಷಣೆಯೆ ಜೀವನದ ಉದ್ದೇಶವಾಗಿರಬೇಕು. ಇದು ಬರೀ ಭಾರತದಲ್ಲಿ ಮಾತ್ರವಿಲ್ಲ, ಪ್ರಪಂಚದ ಎಲ್ಲೆಡೆಯೂ ಜನರನ್ನು ಕೆಣಕಿದ ಚಿಂತನೆ. ಇಲ್ಲದೆ ಹೋದಲ್ಲಿ ಶ್ರೀಮಂತನಾದ ಪ್ಲೇಟೋ, ಬಡತನವನ್ನೇ ಅಪ್ಪಿಕೊಂಡ ಸಾಕ್ರೆಟಿಸ್‌ನ ಹಿಂದೆ ಏನನ್ನು ಹುಡುಕಿಕೊಂಡು ಹೋದ? ಟಾಲ್‌ಸ್ಟಾಯ್‌ನ ‘ವಾರ್ ಆ್ಯಂಡ ಪೀಸ್’ ಬೃಹತ್ ಕಾದಂಬರಿಯಲ್ಲಿ ಎರಡು ಮುಖ್ಯ ಪಾತ್ರಗಳಿವೆ. ಒಂದು ಪಿಯರೆ ಬೆಜುಖೋಯ್, ಮತ್ತೊಂದು ಆ್ಯಂಡ್ರೇ ಬೋಲ್ಕೋನ್ಸ್ಕಿ. ಟಾಲ್‌ಸ್ಟಾಯ್‌ನ ಕಾದಂಬರಿಯ ನಾಯಕರೂ ನೈತಿಕ ಅನ್ವೇಷಣೆಯಲ್ಲೇ ತೊಡಗಿ ಕಠಿಣವಾದ ಹಾದಿಯಲ್ಲಿ ಸಾಗುತ್ತಾರೆ.

ಹಾಗಾದರೆ ಇದು ಪ್ರತಿಯೊಬ್ಬ ಮನುಷ್ಯನಿಗೆ ಸಹಜವಾದ ಗುಣವೆ? ಇದ್ದಿರಬಹುದು. ಆದರೆ ಕೆಲವರಲ್ಲಿ ಮಾತ್ರ ಅದು ಪ್ರಖರವಾಗಿ, ತಡೆದುಕೊಳ್ಳಲಾಗದಷ್ಟು ತೀವ್ರವಾಗಿರಬಹುದು. ಅದು ವೈಯಕ್ತಿಕ ಸ್ತರದಲ್ಲಿ ನಡೆಯುವಂಥದ್ದು. ಮನುಷ್ಯನನ್ನು ಅಂತರ್ಮುಖಿಯನ್ನಾಗಿಸಿ, ತನ್ನನ್ನು, ತನ್ನ ಪ್ರಪಂಚದ ಹಿನ್ನಲೆಯನ್ನು, ಅದನ್ನು ನಿಗ್ರಹಿಸುವ ಶಕ್ತಿಯನ್ನು ಅರಿಯ ಬಯಸುವ ಆಳವಾದ ಪ್ರಕ್ರಿಯೆ. ಇದೇ ಕಗ್ಗದ ಮಾತು. ತನ್ನ ಅರಿವಿನ, ಅನುಭವದ ಮಿತಿಗಳನ್ನು ಮೀರಿದ ಸತ್ಯವೊಂದಿದೆ ಎಂಬುದನ್ನು ಅನುಮಾನದಿಂದ ಊಹಿಸಿ ಅದನ್ನು ಪಡೆಯಲು ಪ್ರಯತ್ನಿಸುವುದೇ ಮನುಷ್ಯನ ಹಿರಿದಾದ ಗುಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.