ADVERTISEMENT

ಬೆರಗಿನ ಬೆಳಕು: ಆತ್ಮ ಚಿಕಿತ್ಸೆ-1109

ಡಾ. ಗುರುರಾಜ ಕರಜಗಿ
Published 7 ಜೂನ್ 2022, 19:30 IST
Last Updated 7 ಜೂನ್ 2022, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಚಿಂತೆಸಂತಾಪಗಳು ಮನಸಿಗೆ ವಿರೇಚಕವೊ |
ಸಂತಸೋತ್ಸಾಹಗಳೆ ಪಥ್ಯದುಪಚಾರ ||
ಇಂತುಮಂತುಂ ನಡೆಯುತಿರುವುದಾತ್ಮ ಚಿಕಿತ್ಸೆ |
ಎಂತಾದೊಡಂತೆ ಸರಿ – ಮಂಕುತಿಮ್ಮ || 645||

ಪದ-ಅರ್ಥ: ವಿರೇಚಕ=ಹೊಟ್ಟೆಯನ್ನು ಶುದ್ಧಗೊಳಿಸುವ ಔಷಧಿ, ಸಂತಸೋತ್ಸಾ ಹಗಳೆ=ಸಂತಸ=ಉತ್ಸಾಹಗಳೆ, ಪಥ್ಯದುಪಚಾರ=ಪಥ್ಯದ(ಆರೋಗ್ಯ ಸುಧಾರಣೆಗೆ ಆಹಾರ ಕ್ರಮ)+ಉಪಚಾರ, ಇಂತು ಮಂತುಂ=ಇಂತು+ಅಂತುಂ(ಯಾವುದೋ ರೀತಿ), ಎಂತಾದೊಡಂತೆ=ಎಂತಾದೊಡೆ (ಹೇಗಾದರೂ)+ಅಂತೆ

ವಾಚ್ಯಾರ್ಥ: ಚಿಂತೆಗಳು, ನೋವುಗಳು ಮನಸ್ಸನ್ನು ಶುದ್ಧಮಾಡುವ ಔಷಧಿಗಳು. ಸಂತೋಷ, ಉತ್ಸಾಹ ಗಳೇ ಈ ರೋಗಕ್ಕೆ ಒಳ್ಳೆಯ ಪಥ್ಯ. ಅಂತೋ ಇಂತೋ,ಆತ್ಮಚಿಕಿತ್ಸೆ ನಡೆಯುತ್ತಿದೆ. ಹೇಗಾದರೂ ಸರಿಯೆ.

ADVERTISEMENT

ವಿವರಣೆ: ತಂದೆ, ತಮ್ಮ ಚಿಕ್ಕ ಮಗನನ್ನು ಕರೆದುಕೊಂಡು ಊರಿನ ಕಮ್ಮಾರನ ಮನೆಗೆ ನಡೆದರು. ಅವರು ಎರಡು ಗುದ್ದಲಿಗಳನ್ನು ಮಾಡಲು ಹೇಳಿದ್ದರು. ಕಮ್ಮಾರರ ಮನೆಗೆ ಹೋದಾಗ ಅವರು ಕೆಲಸದಲ್ಲಿದ್ದರು. ಇಬ್ಬರೂ ಕುಳಿತು ಕೆಲಸವನ್ನು ನೋಡತೊಡಗಿದರು. ಕಮ್ಮಾರ ಕಬ್ಬಿಣವನ್ನು ಒಲೆಯಲ್ಲಿ ಹಾಕಿ ತಿದಿಯನ್ನು ಒತ್ತಿ ಒತ್ತಿ ಬೆಂಕಿ ಮಾಡಿದ. ಕಪ್ಪು ಕಬ್ಬಿಣ ಕಾಯ್ದು ಕೆಂಪಗಾಯಿತು. ಆಗ ಕಮ್ಮಾರ ಕೆಂಪಗೆ ಕಾದಿದ್ದ ಕಬ್ಬಿಣವನ್ನು ಅಗಲವಾದ ಪಾತ್ರೆಯಲ್ಲಿಟ್ಟಿದ್ದ ನೀರಿನಲ್ಲಿ ಅದ್ದಿದ, ಛಸ್, ಛಸ್ ಎಂದು ಕಬ್ಬಿಣ ಸದ್ದು ಮಾಡುತ್ತ ಕಪ್ಪಗಾಯಿತು. ಆಗ ಆತ ಅದನ್ನು ಒಂದು ಕಬ್ಬಿಣದ ಕಟ್ಟೆಯ ಮೇಲಿಟ್ಟು ಸುತ್ತಿಗೆಯಿಂದ ಪಟಪಟನೆ ಹೊಡೆದ. ಆಗೊಂದಿಷ್ಟು ಕರಿ ಬಣ್ಣದ ಪುಡಿ ಉದುರಿತು. ಮತ್ತೆ ಕಬ್ಬಿಣವನ್ನು ಕಾಯಿಸಿ, ಈ ಬಾರಿ ಕಾದ ಕಬ್ಬಿಣದ ಮೇಲೇ ಹೊಡೆದ. ನಂತರ, ಮತ್ತೆ ನೀರಿನಲ್ಲಿ ಅದ್ದಿದ. ಹುಡುಗನಿಗೆ ಕುತೂಹಲ. ಕೇಳಿಯೇ ಬಿಟ್ಟ, ‘ಮಾಮಾ ಕಬ್ಬಿಣವನ್ನು ನೀರಿಗೆ ಹಾಕುವುದಿದ್ದರೆ ಕಾಸಿದ್ದು ಏಕೆ? ಮತ್ತೆ ಮತ್ತೆ ಕಾಸಿ ಹೊಡೆಯುವುದೇಕೆ?’, ಕಮ್ಮಾರ ಮಾವ ಹೇಳಿದ, ‘ಮಗೂ ಕಬ್ಬಿಣ ಶುದ್ಧವಾಗುವುದು ಹೀಗೆಯೇ. ಚೆನ್ನಾಗಿ ಕೆಂಪಗೆ ಕಾಸಿದಾಗಲೂ ಕಸ ಹೊರಗೆ ಹೋಗಿ ಕಬ್ಬಿಣ ಮೃದುವಾಗುತ್ತದೆ. ಆಗ ಅದನ್ನು ನಮಗೆ ಬೇಕಾದ ಆಕಾರಕ್ಕೆ ಮಣಿಸಬಹುದು.’ ಮನೆಗೆ ಬರುವಾಗ ತಂದೆ ಹೇಳಿದರು, ‘ಪುಟ್ಟಾ, ಮನುಷ್ಯರಿಗೂ ಹಾಗೆಯೇ ಕಷ್ಟ, ತೊಂದರೆ, ನೋವುಗಳು ಬಂದಾಗ ಮನಸ್ಸು ಕುದಿಯುತ್ತದೆ, ತಪ್ಪುಗಳ ಬಗ್ಗೆ ಚಿಂತನೆ ಮಾಡುತ್ತದೆ. ತನಗೆ ಗೊತ್ತಿಲ್ಲದಂತೆ ಈ ಸಂಕಟ, ನೋವು ಬದುಕನ್ನು ಶುದ್ಧಮಾಡುತ್ತದೆ. ಕಷ್ಟಗಳನ್ನು ಅನುಭವಿಸಿದವನು ಪ್ರಪಂಚದ ಕಷ್ಟಕ್ಕೆ ಹೆದರುವುದಿಲ್ಲ.’ ಹುಡುಗನಿಗೆ ಎಷ್ಟು ಅರ್ಥವಾಯಿತೋ? ಅವರ ಮಾತು ಸತ್ಯ.

ಬೆಂಕಿಯಲ್ಲಿ ಹಾದು ಬಂದ ಬಂಗಾರ ಪರಿಶುದ್ಧವಾಗುವಂತೆ, ಕಷ್ಟಗಳು, ನೋವುಗಳು ನಮ್ಮನ್ನು ಗಟ್ಟಿಮಾಡುತ್ತವೆ. ಕಗ್ಗ ಹೇಳುವಂತೆ ಅವು
ವಿರೇಚಕ. ಔಷಧಿ ನಮ್ಮ ಹೊಟ್ಟೆಯನ್ನು ತೊಳೆದು, ಕಲ್ಮಷವನ್ನು ಹೊರಹಾಕುವಂತೆ, ನೋವು, ಚಿಂತೆಗಳು ಮನಸ್ಸಿನಲ್ಲಿಯ ಕೊಳೆಯನ್ನು ತೆಗೆದುಬಿಡುತ್ತವೆ. ವಾತಾವರಣದಲ್ಲಿ ಒತ್ತಡ ಕಡಿಮೆಯಾದಾಗ ಗಾಳಿ ಬೇರೆ ಕಡೆಯಿಂದ ನುಗ್ಗಿ ಬರುತ್ತದೆ. ಅಂತೆಯೇ, ಕಷ್ಟ, ಚಿಂತೆ, ನೋವು‌ಗಳಿಂದ ಮನಸ್ಸು ಹಗುರಾದಾಗ ಅದನ್ನು ತುಂಬಲು ಉತ್ಸಾಹ, ಸಂತೋಷಗಳು ಬರುತ್ತವೆ. ಒಂದು ಹೊರಹಾಕುವ, ಮತ್ತೊಂದು ಒಳಗೆ ತುಂಬಿಕೊಳ್ಳುವ ಪ್ರಕ್ರಿಯೆಗಳು. ನೋವು, ಸಂಕಟಗಳು ರೋಗವಾದರೆ ಸಂತೋಷ, ಉತ್ಸಾಹಗಳು ಪಥ್ಯದ ಉಪಚಾರಗಳು. ಇವೆರಡರಿಂದಲೂ ಆತ್ಮಕ್ಕೆ ಚಿಕಿತ್ಸೆ ನಡೆಯುತ್ತದೆ. ಹೇಗಾದರೂ ಸರಿ, ಆತ್ಮ ಶುದ್ಧಿಯಾದರೆ ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.