ADVERTISEMENT

ಬೆರಗಿನ ಬೆಳಕು: ಹೊರಗಿನ ಅನುಭವಕ್ಕೆ ಆಂತರ್ಯದ ಪ್ರತಿಧ್ವನಿ

ಡಾ. ಗುರುರಾಜ ಕರಜಗಿ
Published 6 ಜುಲೈ 2021, 19:31 IST
Last Updated 6 ಜುಲೈ 2021, 19:31 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಎದೆ ಮಾರುಹೋಗದೊಡೆ, ಕಣ್ ಸೊಬಗನುಂಡರೇಂ ? |
ಹೃದಯ ಮುಯ್ ಕೇಳದೊಡೆ, ನಲವ
ಸೂಸಿದರೇಂ ? ||
ಕದಡದಿರ್ದೊಡೆ ಮನವ, ತನುಸೊಗವ ಸವಿದೊಡೇಂ ?|
ಮುದ ತಾನೆ ತಪ್ಪಲ್ಲ – ಮಂಕುತಿಮ್ಮ|| 436 ||

ಪದ-ಅರ್ಥ: ಎದೆ= ಹೃದಯ, ಮಾರುಹೋಗದೊಡೆ= ಮರುಳಾಗದಿದ್ದರೆ, ಮುಯ್=ಮುಯ್ಯ (ಪ್ರತಿಸ್ಪಂದನ), ಕದಡದಿರ್ದೊಡೆ= ಕಲಕದಿದ್ದರೆ, ಮುದ= ಸಂತೋಷ, ಸುಖ.

ವಾಚ್ಯಾರ್ಥ: ಕಣ್ಣು ಸುಂದರವಾದದ್ದನ್ನು ಕಂಡಾಗ ಹೃದಯ ಅದಕ್ಕೆ ಮರುಳಾಗದಿದ್ದರೆ, ಪ್ರೀತಿಯನ್ನು ಪಡೆದಾಗ ಹೃದಯ ಪ್ರತಿಸ್ಪಂದಿಸದಿದ್ದರೆ, ದೇಹ ಸುಖವನ್ನು, ತೃಪ್ತಿಯನ್ನು ಪಡೆದಾಗ ಅದು ಮನಸ್ಸನ್ನು ಕದಡದೆ ಹೋದರೆ ಏನು ಸುಖ? ಸುಖಪಡುವುದು ತಪ್ಪಲ್ಲ.

ADVERTISEMENT

ವಿವರಣೆ: ಬದುಕಿನಲ್ಲಿ ರಸಗ್ರಹಣ ಬಹಳ ಮುಖ್ಯವಾದದ್ದು, ಬದುಕಿನ ಸ್ವಾರಸ್ಯಕ್ಕೆ ಕಾರಣವಾದದ್ದು. ರಸ ಎಂದರೆ ರುಚಿ, ಸವಿ, ಇಂಪು, ಒಲವು ಹೀಗೆ ಅನೇಕ ಅರ್ಥಗಳು ಹೊರಡುತ್ತವೆ. ಯಾವ ಗುಣದಿಂದಾಗಿ ಒಂದು ವಸ್ತು, ಭಾವ ನಮಗೆ ತುಂಬ ಪ್ರಿಯವಾಗುತ್ತದೋ, ಆ ಗುಣ ಅದರ ರಸ, ಅದರ ಸ್ವಾರಸ್ಯ. ಈ ರಸ ಒಂದು ರೀತಿಯಲ್ಲಿ ಎದೆಯೊಳಗಿನ ತುಮುಲ. ಏನನ್ನೋ ಕಂಡಾಗ, ಕೇಳಿದಾಗ, ಅನುಭವಿಸಿದಾಗ ನಮ್ಮ ಹೃದಯದಲ್ಲಿ ಭಾವನೆಗಳ ಏರುಪೇರಾಗುತ್ತದೆ. ‘ಆಹಾ’ ಎನ್ನಿಸುತ್ತದೆ, ‘ಓಹೊ’ ಎಂದು ಉದ್ಗಾರ ಬರುತ್ತದೆ. ‘ಅಯ್ಯೋ’ ಎಂಬ ದುಃಖ ಒತ್ತರಿಸಿ ಬಂದು ಕಣ್ಣು ಆರ್ದ್ರವಾಗುತ್ತದೆ. ಇದು ರಸಾನುಭವದಿಂದ ಬರುವ ಸೂಕ್ಷ್ಮಸಂವೇದನೆ. ಕೇದಾರನಾಥದಲ್ಲಿ ದೇವಸ್ಥಾನದ ಮುಂದೆ ನಿಂತಾಗ ಹಿಂದೆ ಹಿಮ ಪರ್ವತಗಳ ಸಾಲು ಹಿನ್ನೆಲೆಯಾಗಿ ಕಾಣುತ್ತದೆ. ಸೂರ್ಯೋದಯವಾದಾಗ, ಸೂರ್ಯನ ಮೊದಲ ಕಿರಣಗಳು ಪರ್ವತ ಶ್ರೇಣಿಗಳ ಮೇಲೆ ಬಿದ್ದಾಗ, ಛಕ್ಕನೇ ಹಿಮದ ಆಚ್ಛಾದನೆ ಮರೆಯಾಗಿ ಬಂಗಾರದ, ಥಳಥಳನೇ ಹೊಳೆಯುವ ಶಿಖರUಳನ್ನು ಕಂಡಾಗ, ಆದ ಸಂತೋಷವನ್ನು, ಆಶ್ಚರ್ಯವನ್ನು ವರ್ಣಿಸಲು ಶಬ್ದಗಳು ಸಾಲದೆ ‘ಆಹ್, ಆಹ್’ ಎಂಬ ಉದ್ಗಾರಗಳು ಹೊರಡುತ್ತವೆ. ಧನ್ಯತೆ ಮನದಲ್ಲಿ ಮೂಡುತ್ತದೆ. ಹೀಗೆ ಕಣ್ಣು ಸುಂದರವಾದದ್ದನ್ನು ಕಂಡಾಗ ಹೃದಯ ಸೂರೆಯಾಗುತ್ತದೆ. ಸುಂದರ ಎನ್ನುವ ಪದವೇ ಅದ್ಭುತ. ಇದು ‘ಉನ್ದ’ ಎಂಬ ಧಾತುವಿನಿಂದ ಬಂದದ್ದು. ‘ಉನ್ದ’ ಎಂದರೆ ಆರ್ದ್ರವಾಗಿಸುವುದು, ಒದ್ದೆ ಮಾಡುವುದು. ಯಾವುದು ಮನಸ್ಸನ್ನು ಭಾವನೆಗಳಿಂದ ತೋಯಿಸುತ್ತದೋ, ಸರಸವನ್ನಾಗಿಸುತ್ತದೋ, ಅದು ಸುಂದರ.

ನಲಿವು ಅಥವಾ ಪ್ರೀತಿ ಎನ್ನುವುದು ಪ್ರತಿಧ್ವನಿ ಇದ್ದಂತೆ. ಒಂದು ಪ್ರೀತಿಯ ಕೂಗಿಗೆ ಮರುಕೂಗು ಕೇಳಿಸುತ್ತದೆ, ಸಂತಾಪಕ್ಕೆ ಅನುತಾಪ ಬರುತ್ತದೆ, ಸಂತೋಷಕ್ಕೆ ಪ್ರತಿಯಾಗಿ ಪರಿತೋಷ, ಪ್ರಶ್ನೆಗೆ ಉತ್ತರ ದೊರೆಯುತ್ತದೆ. ಹೀಗೆ ಪ್ರೀತಿ ಮನುಷ್ಯನ ಹೃದಯನ್ನು ಕದಲಿಸುವ ಶಕ್ತಿ. ಅದು ಹೃದಯವನ್ನು ಕದಲಿಸದಿದ್ದರೆ ಅದೆಂತಹ ಪ್ರೀತಿ? ಅದಕ್ಕೆ ಯಾವ ಅರ್ಥವೂ ಇಲ್ಲ. ಇದರಂತೆಯೇ ದೇಹಕ್ಕೆ ದೊರೆತ ಸುಖವೂ ಮನವನ್ನು ಅಲುಗಾಡಿಸುತ್ತದೆ. ತಾಯಿಯ ಸ್ಪರ್ಶ, ಪ್ರಿಯೆಯ ಅಥವಾ ಪ್ರಿಯನ ಜೊತೆಗೆ ದೊರೆತ ದೇಹ ಸುಖ, ಮನದಲ್ಲಿ ತರಂಗಗಳನ್ನೇಳಿಸುತ್ತದೆ, ಮುದಗೊಳಿಸುತ್ತದೆ. ದೇಹಕ್ಕೆ ದೊರೆತ ಸಂತೋಷ ಮನಸ್ಸನ್ನು ತಟ್ಟದಿದ್ದರೆ ಅದೆಂತಹ ಸಂತೋಷ.? ಸಂತೋಷಪಡುವುದು ತಪ್ಪಲ್ಲ. ಅದು ನಮ್ಮ ಹಕ್ಕು ಕೂಡ. ಹೀಗೆ ನಮಗೆ ರಸಾನುಭವ ಹೊರಗಿನಿಂದ ದೊರೆತಾಗ ಆಂತರ್ಯದಲ್ಲಿ ಸುಖ ದೊರಕುತ್ತದೆ. ಬಹಿರನುಭವ ಅಂತರನುಭವಕ್ಕೆ ಆಧಾರಪೀಠ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.