ADVERTISEMENT

ಜೀವನ- ಉಜ್ಜೀವನ

ಡಾ. ಗುರುರಾಜ ಕರಜಗಿ
Published 27 ಏಪ್ರಿಲ್ 2022, 19:30 IST
Last Updated 27 ಏಪ್ರಿಲ್ 2022, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಭುಕ್ತಿಪಥ ಮುಕ್ತಿಪಥ ಬೇರೆಬೇರೆಯವಲ್ಲ |
ಯುಕ್ತದಿಂದೆರಡುಮಂಚುಗಳೊಂದೆ ಪಥಕೆ ||
ಸತ್ತ್ವಶೋಧನೆ ಲೋಕಸಂಸ್ಕಾರದಿಂ ನಿನಗೆ |
ಶಕ್ತಿಯಧ್ಯಾತ್ಮಕದು – ಮಂಕುತಿಮ್ಮ || 616 ||

ಪದ-ಅರ್ಥ: ಭುಕ್ತಿಪಥ=ಭೋಗಜೀವನದ ದಾರಿ, ಮುಕ್ತಿಪಥ=ಆತ್ಮೋದ್ಧಾರದ ದಾರಿ, ಯುಕ್ತದಿಂದೆರಡುಮಂಚುಗಳೊಂದೆ=ಯುಕ್ತದಿಂದ (ಆಚರಣೆಯಿಂದ)+ಎರಡೂ+ಅಂಚುಗಳು+ಒಂದೆ, ಶಕ್ತಿಯಧ್ಯಾತ್ಮಕದು=ಶಕ್ತಿಯು+ಅಧ್ಯಾತ್ಮಕ್ಕೆ+ಅದು.

ವಾಚ್ಯಾರ್ಥ: ಭೋಗಜೀವನದ ಮತ್ತು ಆತ್ಮೋದ್ಧಾರದ ದಾರಿಗಳು ಬೇರೆ ಬೇರೆಯಲ್ಲ, ಸರಿಯಾಗಿ ನೋಡಿದರೆ ಅವು ಎರಡೂ ಒಂದೇ ಪಥದ ಅಂಚುಗಳು. ಲೋಕಸಂಸ್ಕಾರದಿಂದ ಸತ್ತ್ವದ ಶೋಧನೆಯಾಗುತ್ತದೆ. ಅದೇ ಅಧ್ಯಾತ್ಮಕ್ಕೆ ಶಕ್ತಿ.

ADVERTISEMENT

ವಿವರಣೆ: ಭುಕ್ತಿಪಥ ಸಂಸಾರದ ಮಾರ್ಗ. ಮುಕ್ತಿಪಥ ಸಂಸಾರದಿಂದ ಬಿಡುಗಡೆ ಪಡೆದು ಮೋಕ್ಷ ಪಡೆಯುವ ಮಾರ್ಗ. ಒಂದು ಸಂಸಾರ ಮುಖವಾಗಿರುವುದು ಇನ್ನೊಂದು ಸಂಸಾರದಿಂದ ಪಾರು ಮಾಡುವುದು. ತೋರಿಕೆಗೆ ಎರಡೂ ಮಾರ್ಗಗಳು ಪರಸ್ಪರ ವಿರುದ್ಧವಾದವುಗಳು ಎನ್ನಿಸುತ್ತದೆ. ಆದರೆ ಸರಿಯಾಗಿ ಯೋಚಿಸಿದರೆ ಈ ಎರಡೂ ಕೂಡ ಒಂದೇ ಮಾರ್ಗದ ಎರಡು ಅಂಚುಗಳು ಇದ್ದ ಹಾಗೆ.

ಅಧ್ಯಾತ್ಮದಲ್ಲಿ ಉಜ್ಜೀವನ ಎಂಬ ಒಂದು ಪದ ಬಳಕೆಯಾಗುತ್ತದೆ. ಜೀವನ ಮತ್ತು ಉಜ್ಜೀವನಗಳು ಬೇರೆ ಬೇರೆಯಾದರೂ, ಒಂದನ್ನು ಬಿಟ್ಟು ಮತ್ತೊಂದು ಇರಲಾರದು. ಜೀವನ ತಾಪವಾದರೆ ಉಜ್ಜೀವನ ತಪ, ಜೀವನ ಚಿಂತೆಯಾದರೆ, ಉಜ್ಜೀವನ ಚಿಂತನೆ. ಒಂದು ಮಾವಿನ ಮರವಿದೆ. ಅದರಲ್ಲಿ ಮೊದಲು ಹೂವಾಯಿತು. ಹೂವು ಕಾಯಿಯಾಯಿತು. ಕಾಯಿ ಚಿಕ್ಕದಿದ್ದಾಗ ಒಗರಾಗಿತ್ತು. ಸ್ವಲ್ಪ ಬೆಳೆದ ಮೇಲೆ ಕಾಯಿ ದೊಡ್ಡದಾಯಿತು, ಹಸಿಯಾಯಿತು, ಬಿರುಸಾಯಿತು. ಈಗ ಅದರ ರುಚಿ ಹುಳಿ. ಕಾಯಿಯನ್ನು ಮರದಲ್ಲೇ ಬಿಟ್ಟರೆ, ಸ್ವಲ್ಪ ದಿನಗಳಲ್ಲಿ ಅದಕ್ಕೆ ಬಂಗಾರದ ಬಣ್ಣ ಬರುತ್ತದೆ. ಅದರ ರುಚಿ ಹುಳಿಯಿಂದ ಬದಲಾಗಿ ಸಿಹಿಯಾಗುತ್ತದೆ. ಇದೆಲ್ಲ ಆಗುವುದು ಕಾಯಿ ಮರದಲ್ಲಿ ಇದ್ದಾಗ ಮಾತ್ರ. ಅದನ್ನು ಪುಟ್ಟ ಕಾಯಿ ಇದ್ದಾಗಲೇ ಕಿತ್ತಿ ತೆಗೆದರೆ ಅದು ಹಣ್ಣಾಗದೇ ಹಾಗೆಯೇ ಒಗರಾಗಿ ಉಳಿದು ಕೆಟ್ಟು ಹೋಗುತ್ತದೆ. ಹಾಗೆಂದರೆ ಹೂವು ಕಾಯಿಯಾಗಿ, ಹಣ್ಣಾಗುವುದಕ್ಕೆ ಮರ ಬೇಕೇ ಬೇಕು. ಆದರೆ ಹಣ್ಣು ಪೂರ್ಣ ಪಕ್ವವಾದ ಕ್ಷಣ ಅದು ತೊಟ್ಟು ಕಳಚಿಕೊಂಡು, ಮರದಿಂದ ಬೇರೆಯಾಗಿ ಕೆಳಗೆ ಬೀಳುತ್ತದೆ. ಅಂದರೆ ಹಣ್ಣಾಗುವುದಕ್ಕೆ ಮರ ಅವಶ್ಯ. ಹಣ್ಣಾದ ಮೇಲೆ ಮರದ ಅವಶ್ಯಕತೆ ಇಲ್ಲ. ಇದನ್ನೇ ಉಜ್ಜೀವನ ಕ್ರಿಯೆ ಎನ್ನುತ್ತಾರೆ. ಇದಕ್ಕೊಂದು ಸುಂದರ ಉದಾಹರಣೆಯೆಂದರೆ ನೀರಿನಲ್ಲಿ ಹಾರಿ ಈಜುವುದು. ನದಿಯನ್ನು ದಾಟಬೇಕಾದರೆ ನೀರಿನಲ್ಲಿ ಹಾರಿಕೊಳ್ಳಬೇಕು. ಈಜುವುದು ಎಂದರೆ, ನೀರಿನಲ್ಲಿದ್ದು, ನೀರನ್ನು ಹಿಂದೆ ತಳ್ಳಬೇಕು. ಆಗ ನಾವು ಮುಂದಕ್ಕೆ ಸಾಗಿ ನದಿಯನ್ನು ದಾಟಬಹುದು.

ಸಂಸಾರವನ್ನು ದಾಟುವುದು ಎಂದರೆ ಮೊದಲು ಸಂಸಾರದಲ್ಲಿರಬೇಕು. ಈಜುವಾಗ ನೀರನ್ನು ಹಿಂದೆ ತಳ್ಳಿದಂತೆ, ಸಂಸಾರದ ಭೋಗಗಳನ್ನು ಆದಷ್ಟು ಹಿಂದಕ್ಕೆ ತಳ್ಳುತ್ತಾ ಇದ್ದರೆ ಅಧ್ಯಾತ್ಮದಲ್ಲಿ ಮುಂದೆ ಹೋಗುತ್ತೇವೆ. ಲೋಕಸಂಸಾರದ ಘಟನೆಗಳು ನಮ್ಮನ್ನು ಮುಗಿಸುತ್ತವೆ. ಒಂದು ಸಲ ಅದು ಮಾಗಿದರೆ, ಹಣ್ಣಿನಂತೆ, ಸಂಸಾರದ ಬದುಕಿನಿಂದ ಅನಾಯಾಸವಾಗಿ ಹೊರಬರುತ್ತದೆ. ಮುಕ್ತಿಪಥವೆಂಬ ಉಜ್ಜೀವನಕ್ಕೆ ಭುಕ್ತಿಪಥವೆಂಬ ಸಂಸಾರ ಅತ್ಯವಶ್ಯಕ. ಸಂಸಾರವಿಲ್ಲದೆ ಮಾಗುವಿಕೆಯಿಲ್ಲ, ಮಾಗುವಿಕೆ ಇಲ್ಲದೆ ಮುಕ್ತಿ ಇಲ್ಲ. ಅದನ್ನೇ ಕಗ್ಗ ಹೇಳುತ್ತದೆ, ಭುಕ್ತಿಪಥ ಮತ್ತು ಮುಕ್ತಿ ಪಥಗಳೆರಡೂ ಒಂದೇ ದಾರಿಯ ಎರಡು ಅಂಚುಗಳು ಮತ್ತು ಸಂಸಾರದನುಭವಗಳೇ ಅಧ್ಯಾತ್ಮದ ಶಕ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.