ADVERTISEMENT

ಬೆರಗಿನ ಬೆಳಕು: ಶರಣು

ಡಾ. ಗುರುರಾಜ ಕರಜಗಿ
Published 8 ಆಗಸ್ಟ್ 2023, 23:30 IST
Last Updated 8 ಆಗಸ್ಟ್ 2023, 23:30 IST
ಬೆರಗಿನ ಬೆಳಕು: ಜೀರ್ಣಿಸಲಾಗದ ಋಣ
ಬೆರಗಿನ ಬೆಳಕು: ಜೀರ್ಣಿಸಲಾಗದ ಋಣ   

ಶರಣುವೊಗು ಜೀವನರಹಸ್ಯದಲಿ ಸತ್ತ್ವದಲಿ |
ಶರಣು ಜೀವನವ ಸುಮವೆನಿಪ ಯತ್ನದಲಿ ||
ಶರಣಂತರಾತ್ಮಗಂಭೀರಪ್ರಶಾಂತಿಯಲಿ |
ಶರಣು ವಿಶ್ವಾತ್ಮದಲಿ - ಮಂಕುತಿಮ್ಮ || 945 ||

ಪದ-ಅರ್ಥ: ಶರಣವೊಗು=ಶರಣಾಗು,ಸುಮವೆನಿಪ=ಮಧುರವಾಗಿಸುವ ಹಗುರೆನಿಸುವ,ಶರಣಂತರಾತ್ಮಗಂಭೀರಪ್ರಶಾಂತಿಯಲಿ=ಶರಣು+ಅಂತರಾತ್ಮ+ಗಂಭೀರ+ಪ್ರಶಾಂತಿಯಲಿ.

ವಾಚ್ಯಾರ್ಥ: ಜೀವನದ ರಹಸ್ಯಕ್ಕೆ, ಸತ್ವಕ್ಕೆ ಶರಣಾಗು. ಬದುಕನ್ನು ಹೂವಿನಂತೆ ಹಗುರಾಗಿಸುವ ಯತ್ನದಲ್ಲಿ,ಅಂತರಾತ್ಮದ ಗಂಭೀರ ಪ್ರಶಾಂತಿಯಲ್ಲಿ,
ವಿಶ್ವಾತ್ಮದಲ್ಲಿ ಶರಣು ಹೋಗು.

ADVERTISEMENT


ವಿವರಣೆ: ಇದು ‘ಮಂಕುತಿಮ್ಮನ ಕಗ್ಗ’ ದ ಕೊನೆಯ ಚೌಪದಿ. ಕೊನೆಗೆ ಮಾಡಬೇಕಾದದ್ದು ಸರ್ವಾರ್ಪಣೆ. ಅದೇ ಶರಣಾಗುವಿಕೆ. ಮಹಾಸತ್ವವೊಂದು ಇಡೀ ವಿಶ್ವವನ್ನು ಆವರಿಸಿದೆ. ಅದು ಕಣ್ಣಿಗೆ ಕಾಣದು, ಆದರೆ ಅನುಭವಕ್ಕೆ ನಿಲುಕುವುದು. ಅದೊಂದು ಅನನ್ಯವಾದ ರಹಸ್ಯ. ಅದು ಇದೆಯೋ, ಇಲ್ಲವೊ ಎಂಬುದು ಕಾಣದೆ ಹೋದರೂ, ಜನರ ಬದುಕಿನ ವಿವಿಧ ಹಂತಗಳಲ್ಲಿ ಅವರ ಅನುಭವಕ್ಕೆ ಬಂದು, ಅದೊಂದು ಸೃಷ್ಟಿಯನ್ನು ಮಾಡಿದ,ರಕ್ಷಿಸುವ, ನಿಗ್ರಹಿಸುವ ಅಪರಂಪಾರವಾದ ಶಕ್ತಿ ಇದೆ ಎಂಬುದನ್ನು ಪ್ರಪಂಚದ ಎಲ್ಲ ಧರ್ಮದ, ಚಿಂತನೆಯ ಜನ ಒಪ್ಪಿದ್ದಾರೆ.

ಅದನ್ನು ಶಕ್ತಿ ಎನ್ನಿ, ಬ್ರಹ್ಮ ಎನ್ನಿ, ಪರಬ್ರಹ್ಮ, ಭಗವಂತ, ದೇವರು ಎಂದು ಯಾವ ರೀತಿಯಲ್ಲಿ ಭಾವಿಸಿದರೂ ಸರಿಯೆ. ಆ ರಹಸ್ಯವಾದ ಸತ್ವಕ್ಕೆ ನಾವು ಶರಣಾಗಬೇಕು. ಆ ಪರತತ್ವಕ್ಕೆ ಶರಣಾಗಿ ಬಾಳು ಸಾಗಿಸಿದರೆ ಅದು ಹೂವಿನಂತೆ ಹಗುರವಾದೀತು. ಯಾಕೆಂದರೆ, ನಾನು, ನನ್ನದು, ನಾನೇ ಮಾಡಿದ್ದು ಎನ್ನುವ ಅಹಂಕಾರದ ಭಾವನೆ ಬದುಕನ್ನು ಭಾರವಾಗಿಸುತ್ತದೆ. ನಾನು, ನನ್ನದು ಎಂದು ಹೆಮ್ಮೆ ಪಡುವುದು, ಅದನ್ನು ಕಳೆದುಕೊಂಡಾಗ ದು:ಖಪಡುವುದು, ಎರಡೂ ಭಾರವೇ. ‘ಇದಂ ನ ಮಮ’, ಇದಾವುದೂ ನನ್ನದಲ್ಲ. ಇದೆಲ್ಲ ಭಗವಂತನದು, ಅವನ ಕೃಪೆಯಿಂದ ನನಗೆ ಇದುದಕ್ಕಿದೆ ಎಂದುಕೊಂಡರೆ, ಪಡೆದಾಗ ಅತಿಯಾದ ಸಂತೋಷವಿಲ್ಲ, ಕಳೆದುಕೊಂಡಾಗ ಅತಿಯಾದ ದು:ಖವಿಲ್ಲ. ಆಗ ಬಾಳು ಹಗುರಾಗುತ್ತದೆ.

ಬದುಕಿನುದ್ದಕ್ಕೂ ಪ್ರಪಂಚದ ಆಗುಹೋಗುಗಳಲ್ಲಿ ಗುದ್ದಾಡಿ, ಹೈರಾಣಾದ ಜೀವಕ್ಕೆ ಶಾಂತಿ ಬೇಕು. ಅದು ದೊರಕುವುದು ಹೊರಗಿನ ಪ್ರಪಂಚದಲ್ಲಲ್ಲ. ಆಗ ನಿರಾಳವಾಗಿ ಕುಳಿತು ಅಂತಃರ್ಮುಖಿಯಾಗಬೇಕು. ಮನಸ್ಸನ್ನು ಒಳಗಡೆತಿರುಗಿಸಿಕೊಳ್ಳಬೇಕು. ಅದನ್ನು ವಿಜಯದಾಸರು ‘ಅಂತರಂಗದ ಕದವ ತೆರೆಯಿತಿಂದು. ಎಂತು ಪುಣ್ಯದ ಫಲವು ಪ್ರಾಪ್ತಿಯಾಯಿತೊ ಇಂದು” ಎನ್ನುತ್ತಾರೆ. ಹಾಗೆ ಅಂತರಂಗದ ಗಂಭೀರ ಪ್ರಶಾಂತಿಯಲ್ಲಿ ಆತ್ಮದರ್ಶನವಾದೀತು.

ಹಾಗೆಯೇ ಮುಂದುವರೆದಾಗ, ನನ್ನ ಆತ್ಮ ವಿಶ್ವಾತ್ಮದ ಒಂದು ಅಂಶ ಎಂದು ಹೊಳೆದಾಗ, ನಾನು ಆ ವಿಶ್ವಾತ್ಮದ ಚೈತನ್ಯವೇ ಹೊರತು ನಿರುಪಯೋಗಿಯಾದ ವಸ್ತುವಲ್ಲ ಎಂಬ ಅರಿವಾಗುತ್ತದೆ. ಇದೇ ಆತ್ಮಸಾಕ್ಷಾತ್ಕಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.