ADVERTISEMENT

ಬೆರಗಿನ ಬೆಳಕು: ಉದಾರದ ಮನಸ್ಸು

ಡಾ. ಗುರುರಾಜ ಕರಜಗಿ
Published 16 ಜನವರಿ 2023, 18:56 IST
Last Updated 16 ಜನವರಿ 2023, 18:56 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಕೋಡುಗಲ್ಲನು ಹತ್ತಿ ದೂರವನು ನೋಳ್ಪಂಗೆ |
ಗೋಡೆಗೊತ್ತುಗಳೇನು? ಮೇಡುಕುಳಿಯೇನು ?||
ನೋಡು ನೀನುನ್ನತದಿ ನಿಂತು ಜನ ಜೀವಿತವ |
ಮಾಡುದಾರದ ಮನವ – ಮಂಕುತಿಮ್ಮ || 801 ||

ಪದ-ಅರ್ಥ: ಕೋಡುಗಲ್ಲನು=ಬೆಟ್ಟದ ತುದಿಯ ಮೇಲಿನ ಬಂಡೆಯನ್ನು, ನೋಳ್ಪಂಗೆ=ನೋಡುವವನಿಗೆ, ಗೋಡೆಗೋತ್ತುಗಳೇನು=ಗೋಡೆ+ಗೊತ್ತುಗಳು (ಮೇರೆಗಳು)+ಏನು, ಮೇಡು ಕುಳಿಯೇನು=ಗುಡ್ಡ ಹಳ್ಳಗಳೇನು, ನೀನುನ್ನತದಿ=ನೀನು+ಉನ್ನತದಿ(ಎತ್ತರದಲ್ಲಿ), ಮಾಡುದಾರದ=ಮಾಡು+ಉದಾರದ.

ವಾಚ್ಯಾರ್ಥ: ಪರ್ವತದ ತುದಿಯ ಬಂಡೆಯನ್ನೇರಿ ದೂರದಿಂದ ನೋಡುವವನಿಗೆ ಕೆಳಗಿರುವ ಗೋಡೆ, ಮೇರೆಗಳು, ಬೆಟ್ಟ, ಹಳ್ಳಗಳು ಹೇಗೆ ಒಂದೇ ಎಂದು ತೋರುತ್ತವೊ ಹಾಗೆ ನೀನು ಬದುಕಿನ ಎತ್ತರದಲ್ಲಿ ನಿಂತು ಜನರ ಬದುಕನ್ನು ಕಾಣು. ಮನಸ್ಸನ್ನು ಉದಾರವಾಗಿಸು.

ADVERTISEMENT

ವಿವರಣೆ: ಈಗ ಸುಮಾರು ಐವತ್ತು ವರ್ಷಗಳ ಹಿಂದೆ ನಾಲ್ಕಾರು ಹುಡುಗರು ಸೇರಿ ಕೇದಾರ ಯಾತ್ರೆಗೆ ಹೋಗಿದ್ದೆವು. ಅದು ಯಾತ್ರೆ ಎನ್ನುವದಕ್ಕಿಂತ, ಸಾಹಸದ, ನಿಸರ್ಗವೀಕ್ಷಣೆಯ ಪ್ರವಾಸೋತ್ಸಾಹ. ಕೇದಾರೇಶ್ವರ ದರ್ಶನವಾದ ಮೇಲೆ ನಮಗೊಬ್ಬ ಕುರುಬ ತರುಣ ಸಿಕ್ಕ. ಮೇಲೆ ಪಾಂಚಗಣ ತೋರಿಸುತ್ತೇನೆ, ಬರುತ್ತೀರಾ ಎಂದು ಕೇಳಿದ. ಅವನ ಪ್ರಶ್ನೆ ಒಂದು ಆಹ್ವಾನದಂತೆ ಕಂಡು, ನಾವು ಒಪ್ಪಿ ಹೊರಟೆವು. ಅದೊಂದು ಅತ್ಯಂತ ಕಡಿದಾದ ದಾರಿ. ಪ್ರಾಣಿಗಳ ಹಾಗೆ ಕೈ, ಮೊಣಕಾಲುಗಳನ್ನು ಊರಿ, ಪ್ರಾಣಗಳನ್ನು ಕೈಯಲ್ಲಿ ಹಿಡಿದು ಅವನನ್ನು ಹಿಂಬಾಲಿಸಿದೆವು. ಉಸಿರುಕಟ್ಟುತ್ತಿತ್ತು. ಚಳಿಯಲ್ಲೂ ಮೈಬೆವರು. ಅರ್ಧ ಆಯಾಸದಿಂದ, ಅರ್ಧ ಭಯದಿಂದ.

ಕೊನೆಗೊಂದು ಎತ್ತರದ ಕಟ್ಟೆಯಂಥ ಸ್ಥಳ ಬಂತು. ಆ ಹುಡುಗ ಛಕ್ಕೆಂದು ಹಾರಿ ಮೇಲೆ ಹೋದ. ನಮಗೆ ಮೇಲೆ ಏನಿದೆ ಎನ್ನುವುದು ಕಾಣುತ್ತಿಲ್ಲ. ಮುಂದೆ ಪ್ರಪಾತವೋ ಇಳಿಜಾರಿಕೆಯೋ ತಿಳಿಯದು. ಅವನು ಮೇಲಿನಿಂದ ಒಬ್ಬೊಬ್ಬರನ್ನೇ ಕೈ ಹಿಡಿದು ಎಳೆದುಕೊಂಡ. ಮೇಲೆ ಹೋದಾಗ ನಮ್ಮ ಎದೆಬಡಿತ ನಿಂತು ಹೋಯಿತು. ಅದು ಕಲ್ಪನೆಗೂ ಮೀರಿದ ದೃಶ್ಯ. ಸುಮಾರು ಎರಡುಮೂರು ಫುಟ್‌ಬಾಲ್ ಮೈದಾನದಷ್ಟು ಅತ್ಯಂತ ಸಮತಟ್ಟಾದ ಪ್ರದೇಶ! ಪರ್ವತದ ತುದಿಯ ಮೇಲೆ ಆ ತರಹದ ಮೈದಾನವಿದ್ದಿರಬಹುದೆಂಬುದು ಊಹಿಸಲೂ ಸಾಧ್ಯವಿಲ್ಲ. ಮುಂದೆ ಮೈದಾನದ ತುದಿಯ ಕಡೆಗೆ ಆತ ನಮ್ಮನ್ನು ಕರೆದೊಯ್ದ. ರ‍್ರೆಂದು ಚಳಿಗಾಳಿ ನುಗ್ಗಿ ಬರುತ್ತಿದೆ. ಆದರೆ ಅಲ್ಲಿಂದ ಕಂಡ ದೃಶ್ಯ ಬದುಕಿನ ಕೊನೆಯ ಕ್ಷಣದವರೆಗೂ ಉಳಿದೇ ಇರುತ್ತದೆ. ಅಲ್ಲಿಂದ ಕೆಳಗಿನ ದೃಶ್ಯ ಅದ್ಭುತ.

ನೂರಾರು ಮೈಲಿಗಳ ಕಣಿವೆಯಲ್ಲಿ ಕೋಟ್ಯಾಂತರ ಹೂವುಗಳು! ಆಗಾಗ ಬಂದು ಮರೆಯಾಗುವ ಮೋಡಗಳು. ಎಲ್ಲೆಲ್ಲಿಯೂ ಹಸಿರಿನ ಸಡಗರ. ಇದು ಮೇಲಿನಿಂದ ಕಂಡ ನೋಟ. ಹಾಗಾದರೆ ಕಣಿವೆಯಲ್ಲಿ ಬೆಟ್ಟ, ಹಳ್ಳಗಳಿಲ್ಲವೇ? ಹಳ್ಳಿ ಹಳ್ಳಿಗಳ ನಡುವೆ ಮೇರೆಗಳಿಲ್ಲವೆ? ಅವೆಲ್ಲ ಇವೆ. ಆದರೆ ಎತ್ತರದಿಂದ ಆ ಕೊರೆಗಳೆಲ್ಲ ಕಾಣುವುದಿಲ್ಲ. ಅದಕ್ಕೇ ದೂರದ ದೃಶ್ಯ ಕಣ್ಣಿಗೆ ಚೆಂದ. ಕಗ್ಗ ಅದನ್ನೇ ಹೇಳುತ್ತದೆ ಎತ್ತರದಿಂದ ಕಂಡಾಗ ಸಣ್ಣ ಪುಟ್ಟ ಕೊರತೆಗಳು ಕಾಣದೆ ನೋಟ. ಸುಂದರವಾಗುತ್ತದೆ. ಅಂತೆಯೇ ಮನುಷ್ಯ ಸಾಧನೆಯಿಂದ, ಪ್ರೀತಿಯಿಂದ, ತ್ಯಾಗದಿಂದ, ಎತ್ತರಕ್ಕೆ ಏರಿದಾಗ ಎಲ್ಲವೂ ಭಗವಂತನ ಲೀಲೆಯೆಂಬುದು ಹೊಳೆದು, ಜಾತಿ, ಮತಗಳ, ಭಿನ್ನತೆಯ ದೋಷಗಳು ಕರಗಿ ಬದುಕು ಸುಂದರವಾಗುತ್ತದೆ. ಅದಕ್ಕಾಗಿ ಮನಸ್ಸು ಉದಾರವಾಗಬೇಕು, ವಿಸ್ತಾರವಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.