ADVERTISEMENT

ಗತಿಬಿಂಬ ಅಂಕಣ: ವಿಪಕ್ಷಗಳೊ? ವಿಫಲ ಪಕ್ಷಗಳೊ?

ವೈ.ಗ.ಜಗದೀಶ್‌
Published 15 ಸೆಪ್ಟೆಂಬರ್ 2025, 23:30 IST
Last Updated 15 ಸೆಪ್ಟೆಂಬರ್ 2025, 23:30 IST
ಚಿತ್ರ
ಚಿತ್ರ   
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷದಷ್ಟೇ ವಿಪಕ್ಷಗಳ ಪಾತ್ರವೂ ಮುಖ್ಯ. ಜನಪರ ಆಡಳಿತ ರೂಪುಗೊಳ್ಳುವಲ್ಲಿ ಪ್ರತಿ ಪಕ್ಷಗಳು ಜಾಗೃತವಾಗಿರುವುದು ಅಗತ್ಯ. ದುರದೃಷ್ಟವಶಾತ್‌, ರಾಜ್ಯದಲ್ಲಿನ ವಿಪಕ್ಷಗಳು ವಿಫಲ ಪಕ್ಷಗಳಾಗಿವೆ; ತಮ್ಮ ಹೊಣೆಗಾರಿಕೆ ಮರೆತು ಶಾಂತಿ–ಸೌಹಾರ್ದ ಕದಡುವ ಕೆಲಸದಲ್ಲಿ ತೊಡಗಿವೆ.

ಹಾಸನದಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ಮೇಲೆ ಟ್ಯಾಂಕರ್‌ ಹರಿಯಿತು. ಹಿಂದುಳಿದ, ಪರಿಶಿಷ್ಟ ಜಾತಿಯ 10 ಜನ ದಾರುಣವಾಗಿ ಮೃತಪಟ್ಟರು. ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಿಗೆ ಕೆಲವು ಮುಸ್ಲಿಂ ಯುವಕರು ತಮ್ಮ ರಕ್ತವನ್ನು ದಾನ ಮಾಡಿದರು. ಬೆಳಗಾವಿಯಲ್ಲಿ ನಡೆದ ಈದ್‌ ಮಿಲಾದ್ ಮೆರವಣಿಗೆಯಲ್ಲಿ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡರು. ಭಾರತೀಯ ಸಮಾಜದಲ್ಲಿ ಹಾಸುಹೊಕ್ಕಾಗಿರುವ ಸಹಬಾಳ್ವೆಯ ಚಹರೆಗಳು ದೊಡ್ಡ ಸುದ್ದಿಯಾಗಲಿಲ್ಲ.

ರಾಯಚೂರಿನ ಗಂಗಾನಿವಾಸ್ ರಸ್ತೆಯಲ್ಲಿ ಹೋಗುತ್ತಿದ್ದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ಮೇಲೆ ಕಲ್ಲೆಸೆತ ನಡೆಯಿತು. ಪರಿಸ್ಥಿತಿ ಉದ್ವಿಗ್ನತೆಗೆ ತಿರುಗಿತು. ವಿಡಿಯೊದಲ್ಲಿ ಸೆರೆಯಾಗಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದರು. ಅವರಿಬ್ಬರೂ ಹಿಂದೂಗಳೆಂದು ಗೊತ್ತಾಯಿತು. ಅಲ್ಲಿಗೆ ಪ್ರಕರಣ ತಣ್ಣಗಾಯಿತು. 

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಅಲ್ಲಿನ ರಾಮ್ ರಹೀಂ ನಗರದ ಮಸೀದಿ ಎದುರು ಹೋಗುತ್ತಿದ್ದಾಗ, ಮೆರವಣಿಗೆಯ ಮೇಲೆ ಕಲ್ಲು ತೂರಿದ ಘಟನೆ ನಡೆಯಿತು. ಈ ‍ಪ್ರಕರಣದಲ್ಲಿ 21 ಮುಸ್ಲಿಂ ಯುವಕರನ್ನು ಪೊಲೀಸರು ಬಂಧಿಸಿದರು. ಪರಿಸ್ಥಿತಿ ತಹಬಂದಿಗೆ ಬಂದಂತಿತ್ತು. ಮದ್ದೂರಿಗೆ ಭೇಟಿ ನೀಡಿದ ವಿರೋಧ ಪಕ್ಷದ ನಾಯಕರು ಖಂಡನೆಯ ಹೆಸರಿನಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದರು. ದುಷ್ಟಜಂತುಗಳು ಎಸಗಿದ ಹೀನಕೃತ್ಯವನ್ನು ರಾಷ್ಟ್ರಮಟ್ಟದ ಸುದ್ದಿ ಮಾಡಲಾಯಿತು. ದೇಶಸೇವೆ ಮಾಡಿ ಎಂದು ರಾಜ್ಯದ ಜನ ದೆಹಲಿಗೆ ಕಳುಹಿಸಿದ ಕಾರಣಕ್ಕೆ ಕೇಂದ್ರ ಸಚಿವರಾಗಿರುವ ಪ್ರಲ್ಹಾದ ಜೋಶಿ, ಎಚ್.ಡಿ. ಕುಮಾರಸ್ವಾಮಿ ಮ‌ದ್ದೂರಿನ ದುಷ್ಕೃತ್ಯವನ್ನು ಜಾಗತಿಕ ಸುದ್ದಿಯಾಗಿಸಲು ತಮ್ಮ ಬೆವರು ಹರಿಸಿದರು. 

ADVERTISEMENT

ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ನಾಯಕರನ್ನು ಛಾಯಾ (ಶಾಡೊ) ಮುಖ್ಯಮಂತ್ರಿ ಎಂದೇ ಕರೆಯಲಾಗುತ್ತದೆ. ಸಚಿವರ ಅಧಿಕಾರ, ಸರ್ಕಾರಿ ನಿವಾಸ, ಕಾರು, ಪ್ರಯಾಣ ಭತ್ಯೆಯೂ ಇದೆ. ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸುವ ಅಧಿಕಾರವೂ ಇರುತ್ತದೆ. ಸರ್ಕಾರದ ಖರ್ಚುವೆಚ್ಚಗಳ ಮೇಲೆ ನಿಗಾ ಇಡುವ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಸ್ಥಾನವೂ ಅವರಿಗೆ ಮೀಸಲು. ಸರ್ಕಾರದ ವೈಫಲ್ಯ, ಭ್ರಷ್ಟಾಚಾರ, ಜನವಿರೋಧಿ ಧೋರಣೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಹೊಣೆ ವಿರೋಧ ಪಕ್ಷದ್ದಾಗಿರುತ್ತದೆ. ತನ್ನ ಅಧಿಕೃತ ಕರ್ತವ್ಯವನ್ನು ವಿರೋಧ ಪಕ್ಷ ಸಮರ್ಥವಾಗಿ ನಿರ್ವಹಿಸಿದರೆ ಸರ್ಕಾರ ನಡೆಸುವವರು ನಿತ್ಯವೂ ಕತ್ತಿಯ ಮೇಲಿನ ನಡಿಗೆ ಮಾಡಬೇಕಾದಂತಹ ಜಾಗೃತಾವಸ್ಥೆಯಲ್ಲಿ ಇರಬೇಕಾಗುತ್ತದೆ. 

ಸಮರ್ಥ ನಾಯಕರಿಲ್ಲದ ಬಿಜೆಪಿ ಹಾಗೂ ಜೆಡಿಎಸ್‌ ಈ ವಿಷಯದಲ್ಲಿ ಎಡವಿ ಬಿದ್ದಿವೆ. ಸರ್ಕಾರ ಬಂದ ಆರಂಭಿಕ ದಿನಗಳಲ್ಲಿ ಕೆಲವು ಹೋರಾಟಗಳ ಮೂಲಕ ಜನರನ್ನು ಜಾಗೃತಗೊಳಿಸುವ ಕೆಲಸವನ್ನು ಬಿಜೆಪಿ ಮಾಡಿದ್ದುಂಟು. ಆದರೆ, ನಾಯಕತ್ವಕ್ಕಾಗಿನ ಕಚ್ಚಾಟ, ವಿಪಕ್ಷ ನಾಯಕ ಆರ್. ಅಶೋಕ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ನಾಯಕರಲ್ಲಿರುವ ಅಸಮಾಧಾನ ಪಕ್ಷದ ಬುಡವನ್ನೇ ಅಲುಗಾಡಿಸಿದೆ. ಯಾವುದೇ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ದಿಟ್ಟತನವೂ ಕಾಣಿಸುತ್ತಿಲ್ಲ. ಪಕ್ಷದವರೇ ತಮ್ಮ ನಾಯಕರನ್ನು ಬಹಿರಂಗವಾಗಿ ಟೀಕಿಸುತ್ತಿರುವಂತೆ ‘ಹೊಂದಾಣಿಕೆ’ ಹೊಂಡದಲ್ಲಿ ಬಿಜೆಪಿ ಹೂತುಹೋಗಿದೆ. 

ಬಿಜೆಪಿ ಅಧಿಕಾರದಲ್ಲಿದ್ದಾಗ ಶೇ 40ರ ಲಂಚ ಪ್ರಕರಣ ಸೇರಿದಂತೆ ಹಲವು ಹಗರಣಗಳನ್ನು ಮುಂದಿಟ್ಟು ಕಾಂಗ್ರೆಸ್‌ ಆಂದೋಲನವನ್ನೇ ನಡೆಸಿತ್ತು. ಈಗ ಲಂಚ ಪ್ರಮಾಣ ಶೂನ್ಯಕ್ಕೆ ಬಂದು ನಿಂತಿಲ್ಲ. ಕಾಂಗ್ರೆಸ್ ನಾಯಕರೇ ಹೇಳುವಂತೆ ಬಿಜೆಪಿ ಸರ್ಕಾರದ ಅವಧಿಯ ಪ್ರಮಾಣವನ್ನು‌ ನೆಗೆದು, ಮುಂದೆ ಹೋಗಿದೆ. ಬಹುತೇಕ ಕಚೇರಿಗಳಲ್ಲಿ ಲಂಚ ಕೊಡದೇ ಕೆಲಸವೇ ಆಗುತ್ತಿಲ್ಲ. ಹಗರಣಗಳಂತೂ ದೃಷ್ಟಿಬೊಟ್ಟಿನಂತೆ ಕಣ್ಣಿಗೆ ಕುಕ್ಕುತ್ತಿವೆ. ಮಳೆ ತಂದ ಹಾನಿಯಿಂದಾಗಿ ರೈತರ ಗೋಳು ಕೇಳುವವರೇ ಇಲ್ಲ. ಈ ಹೊತ್ತಿನಲ್ಲಿ ಬಿ.ಎಸ್. ಯಡಿಯೂರಪ್ಪ ಸಕ್ರಿಯವಾಗಿದ್ದರೆ, ಎಚ್.ಡಿ. ಕುಮಾರಸ್ವಾಮಿ ಕೇಂದ್ರಕ್ಕೆ ಹೋಗದೇ ಇದ್ದಿದ್ದರೆ, ಸರ್ಕಾರ ನಡೆಸುವವರು ನಿದ್ದೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. 

ವಿಪಕ್ಷವೆಂಬುದು ವಿಫಲ ಪಕ್ಷವಾಗಿದೆ. ಹೀಗಾಗಿಯೇ, ಜನರಿಗೆ ಸಂಬಂಧಿಸದೇ ಇರುವ ವಿಷಯ ಮುಂದಿಟ್ಟು ದಿನವೂ ಆ ಚಲೋ ಈ ಚಲೋ ಮಾಡುವುದಕ್ಕೆ ನಾಯಕರು ಸೀಮಿತರಾಗಿದ್ದಾರೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದ ಮೇರೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿತು. ತನಿಖೆ ಆರಂಭವಾಗಿ ಶವಗಳ ಅವಶೇಷ ಪತ್ತೆಯ ಕಾರ್ಯಾಚರಣೆ ಚುರುಕುಗೊಳ್ಳುವವರೆಗೂ ಸುಮ್ಮನಿದ್ದ ಬಿಜೆಪಿ ದಿಗ್ಗನೆದ್ದು, ಧರ್ಮಸ್ಥಳ ಚಲೋ ನಡೆಸಿತು. 

ಬುಕರ್ ಪ್ರಶಸ್ತಿ ಮುಡಿಗೇರಿಸಿಕೊಂಡು ದೇಶಕ್ಕೆ ಹೆಮ್ಮೆ ತಂದ ಬಾನು ಮುಷ್ತಾಕ್ ಅವರನ್ನು ನಾಡಹಬ್ಬ ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದಾಗಲೂ ಬಿಜೆಪಿ ಸುಮ್ಮನಿತ್ತು. ಮಧ್ಯರಾತ್ರಿ ಎಚ್ಚರಗೊಂಡಂತೆ ಎದ್ದು ಕುಳಿತ ಬಿಜೆಪಿ, ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತಲ್ಲದೇ ಹೋರಾಟಕ್ಕೂ ಇಳಿಯಿತು. ಮದ್ದೂರಿನಲ್ಲಿ ಕಲ್ಲು ತೂರಿದ ಪುಂಡರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದರು. ಹಾಗಿದ್ದರೂ ಮದ್ದೂರು ಚಲೋ ನಡೆಸಲಾಯಿತು. ಇವು ಯಾವುವೂ ಬಿಜೆಪಿ ನಾಯಕರ ತಲೆಗೆ ಹೊಳೆದ ಹೋರಾಟದ ಹೊಳಹುಗಳಲ್ಲ. ದೆಹಲಿಯಲ್ಲಿ ಕುಳಿತು ಕರ್ನಾಟಕದ ‘ಕಮಲ’ವನ್ನು ಆಡಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ‘ಎಕ್ಸ್‌’ ಮಹಿಮೆ. ಸಂತೋಷ್ ಅವರನ್ನು ಮೆಚ್ಚಿಸಲೋಸುಗ ಬೀದಿಗೆ ಇಳಿದಿದ್ದಕ್ಕೆ ಸಾಕ್ಷ್ಯ ಬೇಕಾದರೆ ಆ ಪಕ್ಷದ ರಾಜ್ಯ ನಾಯಕರ ‘ಎಕ್ಸ್‌’ ಖಾತೆಯಲ್ಲೊಮ್ಮೆ ಇಣುಕಿದರೆ ಸಾಕು.

ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲೆಂಬಂತೆ, ಜನರ ಮನಸ್ಸನ್ನು ಕದಡುವ ವಿಷಯವನ್ನು ಮುಂದಿಟ್ಟುಕೊಂಡ ಬಿಜೆಪಿ ನಾಯಕರು ಪೈಪೋಟಿಗೆ ಬಿದ್ದವರಂತೆ ಹೋರಾಟಕ್ಕೆ ಇಳಿದಿದ್ದಾರೆ. ಮಾತನ್ನೇ ಆಡದಂತಿದ್ದ ಸ್ವಯಂ ಘೋಷಿತ ‘ಸಜ್ಜನ’ರೆಲ್ಲ ತಮ್ಮ ಪಕ್ಷದ ಯಾವ ಕೂಗುಮಾರಿಗಳಿಗೂ ಕಡಿಮೆ ಇಲ್ಲವೆಂಬಂತೆ ತೋರಿಸಿಕೊಳ್ಳತೊಡಗಿದ್ದಾರೆ. 

ಕೋಮುವಿಷ ಬಿತ್ತಿದರೆ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರ ಹಿಡಿಯಬಹುದೆಂಬ ಹುಳವನ್ನು ಬಿಜೆಪಿ ಮಂದಿಯ ತಲೆಗೆ ಬಿಟ್ಟವರು ಯಾರೋ, ಇಲ್ಲಿ ಗದ್ದಲ ಎಬ್ಬಿಸುವವರು ಮತ್ಯಾರೋ, ಪ್ರಾಣವನ್ನು ಕಳೆದುಕೊಳ್ಳುವವರು ಮಾತ್ರ ಬಡ ಕುಟುಂಬಗಳ ಮಕ್ಕಳು. ಧರ್ಮದ ಹೆಸರಿನ ರಾಜಕಾರಣ ತಮ್ಮ ಕೈಹಿಡಿಯುವುದಿಲ್ಲ ಎಂಬುದು ಬಿಜೆಪಿ ನಾಯಕರಿಗೆ ಗೊತ್ತಿಲ್ಲದ ಸಂಗತಿಯೇನಲ್ಲ. ರಾಜ್ಯದಲ್ಲಿ ಎರಡು ಬಾರಿ ಬಿಜೆಪಿ ಅಧಿಕಾರ ಹಿಡಿದರೂ ಅದು ಬಹುಮತ ಪಡೆದು ಅಧಿಕಾರಕ್ಕೆ ಬಂದಿದ್ದಲ್ಲ. ‘ಆಪರೇಷನ್ ಕಮಲ’ದ ಹೀನಹಾದಿಯಲ್ಲಿ ಗದ್ದುಗೆಗೇರಿದ್ದಷ್ಟೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಭಾವಳಿ ಸಾಕಷ್ಟಿದ್ದರೂ 2018ರಲ್ಲಿ ಬಿಜೆಪಿ ಅಧಿಕಾರದ ಹತ್ತಿರವೂ ಸುಳಿಯಲಿಲ್ಲ. 2019ರಲ್ಲಿ ಆಪರೇಷನ್ ಕಮಲ ನಡೆಸಿ, ಯಡಿಯೂರಪ್ಪ ಮುಖ್ಯಮಂತ್ರಿಯಾದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಜಾಬ್, ಹಲಾಲ್‌, ಆಜಾನ್, ಮುಸ್ಲಿಮರ ವ್ಯಾಪಾರ– ಮುಸ್ಲಿಂ ಚಾಲಕರ ವಾಹನಗಳಿಗೆ ನಿರ್ಬಂಧ, ಮುಸ್ಲಿಂ ಮೀಸಲಾತಿ ರದ್ದು, ಪಠ್ಯದ ಕೋಮುವಾದೀಕರಣ, ಉರಿಗೌಡ–ನಂಜೇಗೌಡ ಎಂಬ ಹುಸಿ ಪಾತ್ರಗಳ ಸೃಷ್ಟಿ, ಹೀಗೆ ಏನೆಲ್ಲಾ ಮಾಡಲಾಯಿತು. 2023ರಲ್ಲಿ ಅಧಿಕಾರದಲ್ಲಿದ್ದರೂ ಆ ಪಕ್ಷದ ಬಲ 66ರಿಂದ ಮೇಲೇಳಲಿಲ್ಲ. ಈಗ ಮತ್ತದೇ ಹಳೇ ಕಸುಬು ಹಿಡಿದು, ಮತ ಒಡೆದು ಅಧಿಕಾರ ಹಿಡಿಯಬಹುದೆಂಬ ಕನಸಿನ ದಾರಿಯಲ್ಲಿ ಬಿಜೆಪಿ ಹೊರಟಿದೆ. ಕಡಿ–ಕೊಲ್ಲು, ಬುಲ್ಡೋಜರ್‌ ‘ಸೇವೆ’ಯ ಮಾತುಗಳು ರಾರಾಜಿಸಲಾರಂಭಿಸಿವೆ. ಹೇಗಾದರೂ ಅಧಿಕಾರಕ್ಕೆ ಬಂದರೆ ಮಂತ್ರಿಗಿರಿ ಹಿಡಿಯುವ ತವಕದಲ್ಲಿ ಸಂತೋಷ್ ಅವರನ್ನು ಓಲೈಸಲು ಎಲ್ಲರೂ ತುದಿಗಾಲಲ್ಲಿ ನಿಂತಂತಿದ್ದಾರೆ. ಜನರನ್ನು ಸಂಘರ್ಷಕ್ಕೆ ದೂಡಿ ಸಂಕಟಕ್ಕೆ ಸಿಲುಕಿಸುವ ಇಂತಹ ತಂತ್ರಗಾರಿಕೆ ಬದಲು, ಜನರ ಕಷ್ಟಗಳಲ್ಲಿ ಭಾಗಿಯಾಗಿ, ಅವರಿಗೆ ಸಂತೋಷ ತಂದರೆ ಅಧಿಕಾರಕ್ಕೆ ಹತ್ತಿರವಾದರೂ ಆಗಬಹುದು. ಇಲ್ಲದಿದ್ದರೆ, ಮತ್ತೊಂದು ಅವಧಿ ಪೂರ್ತಿ ‘ಬೆಂಕಿ’ಯ ನೆಂಟಸ್ತಿಕೆಯನ್ನೇ ನೆಚ್ಚಿಕೊಳ್ಳಬೇಕಾದೀತು. 

ಕೋಮುಸಂಘರ್ಷಕ್ಕೆ ಕಡ್ಡಿಗೀರುತ್ತಿರುವವರು ‘ಹೊಡೆಯುವುದು ಗೊತ್ತು, ತಲೆ ಕಡಿಯುವುದು ಗೊತ್ತು’ ಎನ್ನುತ್ತಾ, ಖಾಲಿ ಹಾಳೆಯಂತಿರುವ ಯುವಕರಲ್ಲಿ ಯುದ್ಧೋನ್ಮಾದ ಬಿತ್ತುತ್ತಿದ್ದಾರೆ. ‘ಬಡವರ ಮಕ್ಕಳನ್ನು ಬೆಂಕಿಗೆ ತಳ್ಳಿ ತಮ್ಮ ಅಸ್ತಿತ್ವ ಬಲಪಡಿಸಿಕೊಳ್ಳುತ್ತಿರುವ ಇಂತಹವರೆಲ್ಲ, ತಮ್ಮ ಮಕ್ಕಳನ್ನು ದೇಶ–ವಿದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಓದಿಸುತ್ತಿದ್ದಾರೆ. ಯಾರದೋ ಮಕ್ಕಳನ್ನು ಬಾವಿಗೆ ತಳ್ಳುವ ಮೊದಲು, ತಾವೇ ಹೇಳುವ ಧರ್ಮರಕ್ಷಣೆಗೆ ತಮ್ಮ ಮಕ್ಕಳ ಕೈಗೆ ದೊಣ್ಣೆ–ಮಚ್ಚು ಕೊಡುತ್ತಾರೆಯೇ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಲಿ’ ಎಂದು ಬಿಜೆಪಿ ಕಾರ್ಯಕರ್ತರೇ ಅಸಹನೆ ವ್ಯಕ್ತಪಡಿಸುತ್ತಾರೆ.

ಕಮಲ ಕೆಸರಿನಲ್ಲಿ ಅರಳುತ್ತದೆ. ಹಿಂದೆ ಸರ್ಕಾರ ನಡೆಸಿದ ಹೊತ್ತಿನೊಳಗೆ ಅಭಿವೃದ್ಧಿಯನ್ನು ಬದಿಗೆ ಸರಿಸಿ, ಕೋಮುಕೆಸರಿನಲ್ಲಿಯೇ ಕಮಲ ಅರಳಿಸಲು ಬಿಜೆಪಿಯವರು ಹೊರಟರು. ಶಾಂತಿ–ಸೌಹಾರ್ದ ಬಯಸುವ ನಾಡವರು ಕಮಲವನ್ನೇ ಮುದುಡಿಸಿದರು. ಸದ್ಯ ಎತ್ತು ಏರಿಗೆ–ಕೋಣ ನೀರಿಗೆ ಎಂಬ ಸ್ಥಿತಿಯಲ್ಲಿರುವ ಬಿಜೆಪಿಯನ್ನು ಕೆಸರಿಗೆ ಕೊಂಡೊಯ್ಯುವ ಯತ್ನದಲ್ಲಿ ಕೆಲವರಿದ್ದಾರೆ. ಕಮಲ ಅರಳಲು ಕೆಸರಷ್ಟೇ ಸಾಲದು. ಶುದ್ಧ ನೀರು, ಗಾಳಿಯೂ ಬೇಕು. ಅವುಗಳನ್ನೇ ವಿಷವಾಗಿಸಿದರೆ ಅರಳಬಹುದಾದ ಕಮಲ, ಮುದುಡುವುದಲ್ಲ, ಸುರುಟಿಯೇ ಹೋಗಲಿದೆ. ಕೋಮುಕೆಸರಿನಲ್ಲಿ ಹೊರಳಾಡುವ ತಮ್ಮ ಚಾಳಿ ಬಿಟ್ಟು, ತಮಗೆ ಕೊಟ್ಟ ಅಧಿಕಾರವನ್ನು ಸರ್ಕಾರವನ್ನು ಶುದ್ಧವಾಗಿಸಲು ಬಳಸಲಿ. ಆಗ ಜನರಿಗೆ ನೆಮ್ಮದಿ ದಕ್ಕೀತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.