ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಎರಡು ವರ್ಷ ಪೂರೈಸುವ ಹೊಸ್ತಿಲಿನಲ್ಲಿದೆ. ಬಹುಮತ ಇರುವ ಸರ್ಕಾರವನ್ನು ಅಸ್ಥಿರಗೊಳಿಸುವ ಕ್ಷುದ್ರ ರಾಜಕಾರಣ ವನ್ನು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನಡೆಸುತ್ತಲೇ ಬಂದಿದೆ. ಅಂತಹ ವಿಷಮ ಪರಿಸ್ಥಿತಿಯೊಳಗೆ, ಬಲಿಷ್ಠ ಬಿಜೆಪಿಯ ಎದುರಾಳಿ ಪಕ್ಷದ ಸರ್ಕಾರವೊಂದು ಎರಡು ವರ್ಷ ಪೂರ್ಣಗೊಳಿಸುವುದು ಸವಾಲಿನ ಕೆಲಸ. ಅನುದಾನ ಹಂಚಿಕೆಯಲ್ಲಿ ತಾರತಮ್ಯ, ನೀಡಿಕೆಯಲ್ಲಿ ವಿಳಂಬ, ಅಸಹಕಾರದ ನಡುವೆಯೇ ಹಲವು ಏಳುಬೀಳುಗಳನ್ನು ಕಂಡಿರುವ ಸರ್ಕಾರ ಮೂರನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಹೊತ್ತಿನೊಳಗೆ ಹಿಂದಣ ಹೆಜ್ಜೆಗಳ ತಪ್ಪುಗಳ ವಿಮರ್ಶೆ, ಮುಂದಣ ನಡೆಯತ್ತ ಬೆಳಕು ಹಾಯಿಸಿಕೊಳ್ಳದೇ ಹೋದರೆ, 2028ರ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಪಾಲಿಗೆ ಕತ್ತಲೆಯ ಕೂಪವಾದೀತು.
ಸರ್ಕಾರ ನಡೆಸುವವರು ಸಾಗಿ ಬಂದ, ಸಾಗುತ್ತಿರುವ ಹಾದಿ ನೋಡಿದರೆ, ಈ ಸುಡು ಎಚ್ಚರ ಕಾಂಗ್ರೆಸ್‌ನವರಲ್ಲಿ ಕಾಣಿಸುತ್ತಿಲ್ಲ. ನಡೆಯುವವರು–ಓಡುವವರು ಎಡವಿ ಬೀಳುವುದು ಸಹಜ; ಸಚಿವರು, ನಾಯಕರು ಎದುರಿಸಿದ ಆಪಾದನೆಗಳು, ತನಿಖೆಗಳು, ಮೈಮೇಲೆ ಎಳೆದುಕೊಂಡ ವಿವಾದಗಳನ್ನು ಗಮನಿಸಿದರೆ ಕೆಲವು ನಾಯಕರು ಕುಳಿತಲ್ಲೇ ನೆಲಕ್ಕೆ ಬಿದ್ದಿರುವುದು ಕಾಣಿಸುತ್ತದೆ.
ಎರಡೂವರೆ ವರ್ಷದ ಬಳಿಕ ಅಧಿಕಾರ ಹಸ್ತಾಂತರವೆಂಬ ಸೊಲ್ಲು ಆಡಳಿತಾರೂಢರಲ್ಲಿ, ಅಧಿಕಾರಿ ಗಳಲ್ಲಿ ಹುಟ್ಟಿಸಿದ ಗೊಂದಲ ಹಾಗೂ ಅಪನಂಬಿಕೆ ಸದ್ಯಕ್ಕೆ ಮರೆಗೆ ಸರಿದಂತಿದೆ. ಆದರೆ, ಸುಮಾರು ಒಂದೂವರೆ ವರ್ಷ ಈ ಮಾತಿನ ಸುತ್ತಲೇ ಗಿರಕಿ ಹೊಡೆದ ವಾಗ್ವಾದಗಳು ಆಡಳಿತದ ಮೇಲೆ ದುಷ್ಪರಿಣಾಮ ಬೀರಿದ್ದಂತೂ ಸತ್ಯ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ಎಚ್ಚರಿಕೆ ಕೊಟ್ಟರೂ ಕೆಲವರು ತಮ್ಮ ಮಾತಿನಿಂದ ಬದಿಗೆ ಸರಿಯಲಿಲ್ಲ. ಇನ್ನಿರುವ ಅವಧಿಯಲ್ಲಿಯಾದರೂ ಇಂತಹ ಗೊಂದಲಗಳಿಗೆ ಆಸ್ಪದ ಇಲ್ಲದಂತೆ ಆಡಳಿತ ನಡೆಸಬೇಕಾದ ಹೊಣೆ ಅಧಿಕಾರಸ್ಥರ ಮೇಲಿದೆ.
ಒಂದು ವೇಳೆ ಇಂತಹ ಒಪ್ಪಂದ ಆಗಿದ್ದೇ ಆದಲ್ಲಿ, ಅದನ್ನು ಹೈಕಮಾಂಡ್ ಮತ್ತು ಶಾಸಕಾಂಗ ಪಕ್ಷದ ಸಭೆಯೊಳಗೆ ಇತ್ಯರ್ಥಪಡಿಸಿಕೊಳ್ಳಬೇಕೇ ವಿನಾ ಹಳ್ಳಿಕಟ್ಟೆಯಲ್ಲಿ ಕಾಲೆಳೆಯುವ ರೀತಿಯ ಹರಟೆಯಾಗದಂತೆ ಎಚ್ಚರ ವಹಿಸಬೇಕು. ಹಾದಿಬೀದಿಯೊಳು ಇನ್ನೊಬ್ಬರ ಹಳಿಯುತ್ತಾ, ತಮ್ಮೊಳಗೆ ಹಳಿಹಳಿಸುತ್ತಾ ಹೋದರೆ ಅದು ಸರ್ಕಾರವನ್ನು, ಪಕ್ಷವನ್ನು ಹಳ್ಳಕ್ಕೆ ದೂಡುತ್ತದೆ. ಹೀಗಾದಲ್ಲಿ, ಅದು ತಮ್ಮ ಮೇಲೆ ನಂಬುಗೆ ಇಟ್ಟು ಮತ ಹಾಕಿದ ರಾಜ್ಯದ ಜನರಿಗೆ ಮಾಡಿದ ದ್ರೋಹಕ್ಕೆ ಸಮ.
‘ಬಿಜೆಪಿ ನೇತೃತ್ವದ ಸರ್ಕಾರ ಭ್ರಷ್ಟಾಚಾರದ ಆಗರವಾಗಿದೆ’ ಎಂದು ಇದೇ ಕಾಂಗ್ರೆಸ್ಸಿಗರು ತಿಂಗಳು ಗಟ್ಟಲೆ ಹರತಾಳ ನಡೆಸಿದ್ದರು. ಈಗಿನ ಸರ್ಕಾರವೂ ಅದರಿಂದ ಹೊರತಾದ ಶುಭ್ರತೆಯನ್ನೇನೂ ಮೈಗೂಡಿಸಿ ಕೊಳ್ಳಲಿಲ್ಲ. ವಾಲ್ಮೀಕಿ ನಿಗಮದ ಬಹುಕೋಟಿ ಅಕ್ರಮ, ಸಚಿವ ಬಿ. ನಾಗೇಂದ್ರ ರಾಜೀನಾಮೆಯು ಸರ್ಕಾರಕ್ಕೆ ಆರಂಭದ ಕಪ್ಪುಚುಕ್ಕಿ. ಅದಾದ ಬಳಿಕ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಪರ್ಯಾಯ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರಿಸಬೇಕಾಯಿತು. ಈ ಎರಡು ಸಂಗತಿಗಳು ಸರ್ಕಾರವನ್ನು ಬೆನ್ನು ಬಿಡದೇ ಕಾಡಿದವು. ಬಿಜೆಪಿ ನೇತೃತ್ವದ ಸರ್ಕಾರವನ್ನು ಶೇ 40ರ ಕಮಿಷನ್ ಸರ್ಕಾರ ಎಂದು ಕಾಂಗ್ರೆಸ್ ನಾಯಕರು ಜರೆದಿದ್ದರು. ಕೋವಿಡ್, ಕಾಮಗಾರಿ ಗುತ್ತಿಗೆ ಹಾಗೂ ಪೊಲೀಸ್ ನೇಮಕಾತಿಗಳಲ್ಲಿನ ಅಕ್ರಮದ ಆರೋಪ
ಗಳನ್ನು ಬಿಜೆಪಿ ಹೊತ್ತುಕೊಂಡಿತು.
ಇದನ್ನು ಜನರ ಮುಂದಿಟ್ಟೇ ಕಾಂಗ್ರೆಸ್ ಅಧಿಕಾರದ ಗದ್ದುಗೆಗೆ ಏರಿತು. ಈ ಎಲ್ಲದರ ಬಗ್ಗೆ ತನಿಖಾ ಆಯೋಗಗಳನ್ನು ಸರ್ಕಾರ ರಚಿಸಿತು. ಶೇ 40ರ ಕಮಿಷನ್ ಆರೋಪದ ಕುರಿತು ದೊಡ್ಡ ಮಟ್ಟದ ದಾಖಲೆಯು ತನಿಖಾ ಆಯೋಗಕ್ಕೆ ಲಭ್ಯವಾದಂತಿಲ್ಲ. ಕೋವಿಡ್ ಅಕ್ರಮದ ಬಗ್ಗೆ ಆಯೋಗ ವರದಿ ಕೊಟ್ಟಿದ್ದರೂ ಸರ್ಕಾರ ಇನ್ನೂ ಕ್ರಮವನ್ನೇ ಕೈಗೊಂಡಿಲ್ಲ. ಈ ಎಲ್ಲದರ ಮಧ್ಯೆಯೇ, ಈಗಿನ ಸರ್ಕಾರದಲ್ಲೂ ಶೇ 40ಕ್ಕಿಂತ ಹೆಚ್ಚು ಕಮಿಷನ್ ಪಡೆಯ ಲಾಗುತ್ತಿದೆ ಎಂಬ ಆಪಾದನೆಯನ್ನು ಗುತ್ತಿಗೆದಾರರ ಸಂಘ ಮಾಡಿದೆ. ಅದನ್ನೂ ತನಿಖೆಗೆ ವಹಿಸುವ ಜತೆಗೆ, ಹಿಂದೆ ಮಾಡಿದ ಆರೋಪಗಳನ್ನು ಸಾಬೀತುಪಡಿಸುವ ಜವಾಬ್ದಾರಿಯು ಸರ್ಕಾರದ ಮೇಲಿದೆ.
ಎರಡು ವರ್ಷದ ಸಂಭ್ರಮಾಚರಣೆ ವೇಳೆ, ‘ನಾಡಿನ ಏಳು ಕೋಟಿ ಜನರ ಬೆಳಕು; ಗ್ಯಾರಂಟಿ ಬದುಕು’ ಎಂಬ ಉದ್ಘೋಷವನ್ನು ಸರ್ಕಾರ ಮಾಡಿದೆ. ‘ಗ್ಯಾರಂಟಿಗಳಿಂದ ರಾಜ್ಯದ ಆರ್ಥಿಕತೆ ದಿವಾಳಿಯಾಗಲಿದೆ’ ಎಂದು ದೇಶದಾದ್ಯಂತ ಡಂಗೂರ ಬಾರಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು, ನಂತರ ‘ಮೋದಿ ಗ್ಯಾರಂಟಿ’ ಎಂದು ಘೋಷಿಸಿಕೊಂಡರು. ಬಳಿಕ ನಡೆದ ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯೇ ‘ಗ್ಯಾರಂಟಿ’ ಮೊರೆ ಹೋಗಿದ್ದು, ಈ ದಶಕದ ಅತಿ ದೊಡ್ಡ ವ್ಯಂಗ್ಯ.
ಗ್ಯಾರಂಟಿಗಳು ಜನರ ಬಾಳನ್ನು ಹಸನಾಗಿಸಿ, ಬಸವಳಿದಿದ್ದ ಜನರಿಗೆ ನೆಮ್ಮದಿಯ ಉಸಿರಾಡಲು ಆಮ್ಲಜನಕ ಕೊಟ್ಟಿವೆ. ಅದೇ ಹೊತ್ತಿಗೆ ಸರ್ಕಾರವು ಬಸ್ ಪ್ರಯಾಣ ದರ, ವಿವಿಧ ತೆರಿಗೆ, ನೀರು, ವಿದ್ಯುತ್, ಮದ್ಯದ ದರಗಳನ್ನೂ ಏರಿಸಿದೆ. ತನ್ನ ಮೇಲಿನ ಹೊರೆ ತಪ್ಪಿಸಲು ಸೋರಿಕೆ ತಡೆಗಟ್ಟಿ, ಪರ್ಯಾಯ ವರಮಾನ ಮೂಲ ಹುಡುಕಬೇಕಾದ ಸರ್ಕಾರ, ದರ ಏರಿಕೆಯ ದಾರಿ ಹಿಡಿದಿರುವುದು ಜನವಿರೋಧಿ ಕ್ರಮ. ಇನ್ನಾದರೂ ಜನರ ಮೇಲೆ ದರ ಸವಾರಿ ನಿಲ್ಲಿಸಿ, ಸಂಪನ್ಮೂಲಕ್ಕೆ ಅನ್ಯ ಮಾರ್ಗ ಹುಡುಕುವ ‘ಆದರ್ಶ ರಾಜ್ಯ’ದ ಹಾದಿ ಹಿಡಿಯಬೇಕು.
ಗ್ಯಾರಂಟಿಗಳ ಜತೆಗೆ ಅಭಿವೃದ್ಧಿಯ ಖಾತರಿಯೂ ಸರ್ಕಾರದ ಆದ್ಯತೆಯಾಗಬೇಕು. ನೀರಾವರಿ, ಮೂಲಸೌಕರ್ಯ, ಕೈಗಾರಿಕೆಯಂತಹ ಕ್ಷೇತ್ರಗಳಲ್ಲಿ ಬೃಹತ್ ಹೂಡಿಕೆಗಳು ಈ ಮಧ್ಯೆ ಕಾಣಿಸುತ್ತಲೇ ಇಲ್ಲ. ಹಸಿವು ನೀಗಿಸುವ ತಕ್ಷಣದ ಯೋಜನೆಗಳ ಜತೆಗೆ, ಉದ್ಯೋಗ ಸೃಷ್ಟಿ, ಬಂಡವಾಳ ಆಕರ್ಷಣೆಯಂತಹ ದೂರಗಾಮಿ ಯೋಜನೆಗಳ ಕಡೆ ಕೈತೋರದಿದ್ದರೆ, ಅಭಿವೃದ್ಧಿಯ ಚಹರೆಗಳೇ ಮಾಯವಾಗಿ ಪ್ರಗತಿಯ ಸೂಚ್ಯಂಕದಲ್ಲಿ ರಾಜ್ಯ ಕೊನೆಯ ಸ್ಥಾನಕ್ಕೆ ಪೈಪೋಟಿ ನಡೆಸುವ ಪರಿಸ್ಥಿತಿ ಬಂದೊದಗುವ ಅಪಾಯವೂ ಇದೆ.
ಆಡಳಿತವನ್ನು ಚುರುಕುಗೊಳಿಸಬೇಕಾದ ಸಚಿವರ ಪೈಕಿ ಕೆಲವರು ಉತ್ಸಾಹ ತೋರುತ್ತಿದ್ದರೆ, ಮತ್ತೆ ಕೆಲವರು ತಮಗೆ ವಹಿಸಿದ ಖಾತೆಯ ಬಗ್ಗೆ ಅತೀವ ನಿರ್ಲಕ್ಷ್ಯದಲ್ಲಿದ್ದಾರೆ. ಆಡಳಿತದ ಮೆದುಗತಿಗೆ ಇರುವ ಇಂತಹ ಕಾರಣಗಳನ್ನು ಪತ್ತೆ ಹಚ್ಚಿ, ಮಲಗಿದವರನ್ನು ಎಚ್ಚರಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡಲೇಬೇಕಿದೆ.
2023ರ ಚುನಾವಣೆ ಪೂರ್ವದಲ್ಲಿ ಕರ್ನಾಟಕ ವನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ವನ್ನಾಗಿ ಮರು ಸ್ಥಾಪಿಸುವುದಾಗಿ ಕಾಂಗ್ರೆಸ್ ನೇತಾರರು ವಾಗ್ದಾನ ಮಾಡಿದ್ದರು. ಈವರೆಗೂ ಕೋಮುವಾದಿಗಳ ಉಪಟಳಕ್ಕೆ ಕಡಿವಾಣ ಬಿದ್ದಿಲ್ಲ. ಜಾತಿಯ ಹೆಸರಿನ ದೌರ್ಜನ್ಯಗಳು ನಡೆಯುತ್ತಲೇ ಇವೆ. ಬಿಜೆಪಿಯ ಕೆಲವು ಶಾಸಕರು ತುಸು ಲಜ್ಜೆಯೂ ಇಲ್ಲದಂತೆ ವೇದಿಕೆಯ ಮುಂದೆ ನಿಂತು, ಕೋಮುದ್ವೇಷದ ಭಾಷಣ ಮಾಡುತ್ತಲೇ ಇದ್ದಾರೆ. ಹೆಣಗಳ ಮೇಲೆ, ಕೋಮುದ್ವೇಷ ವಿಚಾರದ ಮೇಲೆ ನಡೆಸಿದ ರಾಜಕೀಯವು 2023ರಲ್ಲಿ ಫಲ ಕೊಡದೇ, ಬಿಜೆಪಿ ಹೀನಾಯ ಪೆಟ್ಟು ತಿಂದಿತ್ತು. ಹಾಗಿದ್ದರೂ ಆ ಪಕ್ಷಕ್ಕೆ ಬುದ್ಧಿ ಬಂದಂತಿಲ್ಲ. ಇಂತಹ ಮನುಷ್ಯ ದ್ವೇಷಿಗಳಿಗೆ ಕಡಿವಾಣ ಹಾಕಬೇಕಾದ ದಕ್ಷತೆಯನ್ನು ಗೃಹ ಸಚಿವ ಜಿ. ಪರಮೇಶ್ವರ ತೋರುತ್ತಿಲ್ಲ.
ಇನ್ನಾದರೂ ಆ ನಿಟ್ಟಿನಲ್ಲಿ ನಿಷ್ಠುರ ಕ್ರಮವಾಗಬೇಕಿದೆ. ಸಭೆಗಳನ್ನು ನಡೆಸಿ
ಎಚ್ಚರಿಕೆ ಕೊಟ್ಟರೆ ಸಾಲದು ಸಿದ್ದರಾಮಯ್ಯನವರೇ; ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದಂತೆ ನಟ್ಟು–ಬೋಲ್ಟು ಬಿಗಿ ಮಾಡುವ ಕೆಲಸ ಖಡಾಖಂಡಿತವಾಗಿ ಆಗಲೇಬೇಕಿದೆ. ಕೋಮುದ್ವೇಷ ಬಿತ್ತುವವರು, ಭ್ರಷ್ಟರು, ಕೆಲಸ ಮಾಡದ ಸಚಿವರು, ಅಧಿಕಾರಿಗಳ ಹಂತದಿಂದಲೇ ಈ ಕೆಲಸ ಆರಂಭಿಸಬೇಕಿದೆ. ಇದೇ 20ರಂದು ಹೊಸಪೇಟೆಯಲ್ಲಿ ನಡೆಯಲಿರುವ ಸಂಭ್ರಮಾಚರಣೆ ವೇಳೆ, ಈ ಘೋಷಣೆಯನ್ನು
ಸಿದ್ದರಾಮಯ್ಯನವರು ಮಾಡಲಿ. ಇಲ್ಲದಿದ್ದರೆ ಹೆಚ್ಚೇನೂ ಬೇಡ, ಮೂರೇ ವರ್ಷಗಳಲ್ಲಿ ರಾಜ್ಯದ ಜನರೇ
ಕಾಂಗ್ರೆಸ್‌ನ ನಟ್ಟು–ಬೋಲ್ಟು ಬಿಗಿ ಮಾಡುವುದಲ್ಲ; ನಟ್ಟು ಬೋಲ್ಟು, ಟೈರು ಎಲ್ಲವನ್ನೂ ಬಿಚ್ಚಿ ನಡುಬೀದಿಯಲ್ಲಿ ನಿಲ್ಲಿಸುತ್ತಾರೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.