ಕಾಂಗ್ರೆಸ್ ಹೈಕಮಾಂಡ್ ಎದುರು ನಿಷ್ಠುರವಾಗಿ ವರ್ತಿಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬದಲಾದ ರಾಜಕೀಯ ಸಂದರ್ಭದಲ್ಲಿ ಅಸಹಾಯಕರಂತೆ ಕಾಣಿಸುತ್ತಿದ್ದಾರೆ. ಆಪ್ತರ ತಲೆದಂಡಗಳನ್ನು ಪ್ರತಿರೋಧವಿಲ್ಲದೆ ಒಪ್ಪಿಕೊಳ್ಳುವ ಹಾಗೂ ಸರ್ಕಾರದ ವಿರುದ್ಧ ಸಚಿವರೇ ಮಾತನಾಡುತ್ತಿದ್ದರೂ ಮೌನವಾಗಿರುವ ಸ್ಥಿತಿ ಅವರದ್ದಾಗಿದೆ.
2014ರ ಲೋಕಸಭೆ ಚುನಾವಣೆಯ ಹೀನಾಯ ಸೋಲಿನ ಬಳಿಕ ನಿಶ್ಶಕ್ತವಾಗಿದ್ದ ಕಾಂಗ್ರೆಸ್ ಹೈಕಮಾಂಡ್, 2024ರ ಚುನಾವಣೆ ನಂತರ ಬಲಿಷ್ಠಗೊಳ್ಳತೊಡಗಿದೆ. ತಮ್ಮ ಸಾಮರ್ಥ್ಯ, ಚಾಣಾಕ್ಷತೆಯಿಂದ ವರಿಷ್ಠರನ್ನೇ ಬಳುಕಿಸುತ್ತಿದ್ದ ಸಿದ್ದರಾಮಯ್ಯ ಅವರನ್ನು ಬಾಗಿಸುವತ್ತ ಆ ಪಕ್ಷದ ಹೈಕಮಾಂಡ್ ಮುನ್ನಡೆಯುತ್ತಿದ್ದು, ಇತ್ತೀಚಿನ ವಿದ್ಯಮಾನಗಳು ಇದನ್ನು ಪುಷ್ಟೀಕರಿಸುವಂತಿವೆ.
‘ಅಹಿಂದ’ ಸಮುದಾಯದ ಪ್ರಶ್ನಾತೀತ ನಾಯಕತ್ವ, ಯಾರನ್ನು ಬೇಕಾದರೂ ಮಣಿಸಬಹುದಾದ ವಿಶಿಷ್ಟ ಮಾತುಗಾರಿಕೆ ಹೊಂದಿರುವ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬಂದಾರಭ್ಯ ಯಾರಿಗೂ ಅಳುಕಿದವರಲ್ಲ. ತಾವು ನಡೆದದ್ದೇ ಹಾದಿ ಎಂದು ಮುಂದೆ ಸಾಗಿದವರು. ಅವಕಾಶಗಳ ದಾರಿ ತೆರೆದುಕೊಂಡಾಗ ಆ ಕಾಲಕ್ಕೆ ಬೇಕಾದ ಪಟ್ಟುಗಳನ್ನು ಹಾಕಿ, ಅದನ್ನು ದಕ್ಕಿಸಿಕೊಂಡವರು. ಈ ಅವಧಿಯಲ್ಲಿ, ತನ್ನದೇ ತಪ್ಪುಗಳಿಂದಾಗಿ ಕಾಂಗ್ರೆಸ್ ಹೈಕಮಾಂಡ್ ದುರ್ದಿನಗಳನ್ನು ಎದುರಿಸುತ್ತಲೇ ಹೋದದ್ದು, ಸಿದ್ದರಾಮಯ್ಯ ಅವರಿಗೆ ವರವಾಯಿತು. ಈಗ, ಮೈಸೆಟೆದು ಕುಳಿತಿರುವ ಕಾಂಗ್ರೆಸ್ ಹೈಕಮಾಂಡ್, ಸಿದ್ದರಾಮಯ್ಯ ಅವರ ಕೋಟೆಯೊಳಗೆ ಲಗ್ಗೆ ಇಡತೊಡಗಿದೆ.
2009ರಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಲೋಕಸಭೆ ಚುನಾವಣೆಗೆ ನಿಲ್ಲಿಸಿದ ಹೈಕಮಾಂಡ್, ಅವರನ್ನು ದೆಹಲಿಗೆ ಕರೆಯಿಸಿಕೊಂಡಿತು. ಗೆದ್ದ ಅವರು ಮಂತ್ರಿಯೂ ಆದರು. ಕಾಂಗ್ರೆಸ್‌ಗೆ ಬಂದು ಕೆಲವೇ ವರ್ಷ ಕಳೆದಿತ್ತು. ಖರ್ಗೆಯವರಿಂದ ತೆರವಾದ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಹಲವು ಆಕಾಂಕ್ಷಿಗಳಿದ್ದರೂ ಸಿದ್ದರಾಮಯ್ಯ ತಮ್ಮದೇ ಪಟ್ಟುಗಳನ್ನು ಹಾಕಿ, ವಿಪಕ್ಷನಾಯಕ ಸ್ಥಾನ ಗಳಿಸಿಕೊಂಡರು. ಅದು ಕಾಂಗ್ರೆಸ್‌ನ ಅವರ ರಾಜಕೀಯದಲ್ಲಿ ಮಹತ್ವದ ತಿರುವು. ಅದೇ ವೇಳೆ,ವಿಧಾನ ಪರಿಷತ್ತಿನಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ತಮ್ಮ ಆಪ್ತ ಸಿ.ಎಂ. ಇಬ್ರಾಹಿಂ ಅವರನ್ನು ಅಭ್ಯರ್ಥಿಯಾಗಿಸಲು ಸಿದ್ದರಾಮಯ್ಯ ಪಣತೊಟ್ಟಿದ್ದರು. ಅದಕ್ಕೆ, ಅಡೆತಡೆಗಳು ಎದುರಾದಾಗ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ಕೊಡುವ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸಿದ್ದರು.
ಅಕ್ರಮ ಗಣಿಗಾರಿಕೆಯ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಪಾದಯಾತ್ರೆ ಸಂಚಲನ ಸೃಷ್ಟಿಸಿತು. ಆಗ ಕೆಪಿಸಿಸಿ ಅಧ್ಯಕ್ಷರಾಗಿದ್ದವರು ಆರ್.ವಿ. ದೇಶಪಾಂಡೆ, ಕಾರ್ಯಾಧ್ಯಕ್ಷರಾಗಿದ್ದವರು ಡಿ.ಕೆ. ಶಿವಕುಮಾರ್. ಪಾದಯಾತ್ರೆಯ ಯಶಸ್ಸು ಸಿದ್ದರಾಮಯ್ಯನವರಿಗೆ ದಕ್ಕಿ, ಅವರ ವರ್ಚಸ್ಸು ಇಮ್ಮಡಿಗೊಂಡಿತು.
2013ರಲ್ಲಿ ಕಾಂಗ್ರೆಸ್‌ಗೆ ಬಹುಮತ ಬಂದಾಗ, ಮುಖ್ಯಮಂತ್ರಿ ಸ್ಥಾನಕ್ಕೆ ಸಹಜವಾಗಿಯೇ ಹೈಕಮಾಂಡ್ ಆಯ್ಕೆ ಸಿದ್ದರಾಮಯ್ಯ ಆಗಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದ್ದರಿಂದಾಗಿ, ಹೈಕಮಾಂಡ್ ತೀರಾ ದುರ್ಬಲವಾಯಿತು. ಆಗಲೂ ಕೆಲವೊಮ್ಮೆ ನಾಯಕತ್ವ ಬದಲಾವಣೆಯ ಪ್ರಶ್ನೆ ಎದುರಾಗಿದ್ದರೂ– ಸಿದ್ದರಾಮಯ್ಯ ವರ್ಚಸ್ಸು, ಪ್ರಭಾವಳಿ ಮುಂದೆ
ಅದು ನಿಲ್ಲಲಿಲ್ಲ. 2019ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮತ್ತೆ ವಿರೋಧ ಪಕ್ಷದ ನಾಯಕತ್ವವನ್ನು ತಮ್ಮದಾಗಿಸಿಕೊಂಡರು.
2023ರ ವಿಧಾನಸಭೆ ಚುನಾವಣೆ ಹೊತ್ತಿಗೆ ಕಾಂಗ್ರೆಸ್‌ನಲ್ಲಿ ಪರಿಸ್ಥಿತಿ ಬದಲಾಗಿತ್ತು. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಪಕ್ಷದಲ್ಲಿ ಹಿಡಿತ ಸಾಧಿಸಿದರು. ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿತು. ಶಿವಕುಮಾರ್ ಅವರ ಪೈಪೋಟಿ ಎದುರಿಸಿದ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಸ್ಥಾನವನ್ನು ತನ್ನದಾಗಿಸಿಕೊಂಡರು.
ವಾಲ್ಮೀಕಿ ನಿಗಮದ ಹಣ ವರ್ಗಾವಣೆಯ ಅಕ್ರಮ ಸರ್ಕಾರಕ್ಕೆ ಬರಸಿಡಿಲು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆಯಲ್ಲಿ ಅಕ್ರಮದ ಆರೋಪವು ಸ್ವತಃ ಸಿದ್ದರಾಮಯ್ಯ ಅವರ ಮೇಲೆಯೇ ಬಂದಿತು. ಇದು, ಅವರ ರಾಜಕೀಯ ಜೀವನದಲ್ಲಿ ಬಲವಾದ ಹಿನ್ನಡೆ.
ಲೋಕಸಭೆಯಲ್ಲಿ 99 ಸ್ಥಾನ ಗಳಿಸಿದ ಕಾಂಗ್ರೆಸ್, ದೇಶದಲ್ಲಿ ಚೇತರಿಕೆ ಕಾಣತೊಡಗಿತು. 2018–2023ರಲ್ಲಿ ಸಿದ್ದರಾಮಯ್ಯ ಹೇಳಿದ್ದೆಲ್ಲವೂ ನಡೆಯುತ್ತಿತ್ತು. ಈಗ, ಪಕ್ಷದ ಮೇಲೆ ಹಿಡಿತ ಸಾಧಿಸಿರುವ ರಾಷ್ಟ್ರ ನಾಯಕರು, ಸರ್ಕಾರದ ನಡೆಯನ್ನು ನಿಕಶಕ್ಕೆ ಒಳಪಡಿಸುತ್ತಿದ್ದಾರೆ.
ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಅಂಗೀಕರಿಸಲು ಮುಂದಾಗಿದ್ದ ಸಿದ್ದರಾಮಯ್ಯ, ಸಚಿವ ಸಂಪುಟ ಸಭೆಗೆ ದಿನಾಂಕವನ್ನೂ ನಿಗದಿ ಮಾಡಿ, ಅಂದೇ ತೀರ್ಮಾನವನ್ನು ತೆಗೆದುಕೊಳ್ಳುವ ಛಲದಲ್ಲಿದ್ದರು. ‘ಹಳೆಯ ವರದಿ ಒಪ್ಪಲಾಗದು. ಅದನ್ನು ಕೈಬಿಟ್ಟು, ಹೊಸದಾಗಿ ಸಮೀಕ್ಷೆ ನಡೆಸಿ’ ಎಂದು ವರಿಷ್ಠರು ಕಟ್ಟಪ್ಪಣೆ ಮಾಡಿದರು. ಈ ನಡೆಗೆ ಒಕ್ಕಲಿಗ ಹಾಗೂ ಲಿಂಗಾಯತ ನಾಯಕರ ಒತ್ತಡವೇ ಕಾರಣವೆಂಬುದು ರಹಸ್ಯವಲ್ಲ. ‘ನೀವು ಅಂದುಕೊಂಡಂತೆ ನಡೆಯದು; ನಮ್ಮ ಸಮ್ಮತಿಯೂ ಬೇಕು’ ಎಂಬಂತೆ ಸಿದ್ದರಾಮಯ್ಯನವರಿಗೆ ಹೈಕಮಾಂಡ್ ತಡೆ ಹಾಕಿಯೇ ಬಿಟ್ಟಿತು.
ವಿಧಾನ ಪರಿಷತ್ತಿಗೆ ಯಾರನ್ನು ಆಯ್ಕೆ ಮಾಡಬೇಕು ಎಂಬ ವಿಷಯ, 10 ವರ್ಷ ಸಿದ್ದರಾಮಯ್ಯನವರ ಸಲಹೆಯಂತೆಯೇ ನಡೆಯುತ್ತಿತ್ತು. ಈ ಬಾರಿ, ಹೈಕಮಾಂಡ್ ಒಪ್ಪಿಗೆಯ ಮೇರೆಗೆ ಕಳುಹಿಸಲಾದ ನಾಲ್ವರ ನಾಮನಿರ್ದೇಶನದ ಪಟ್ಟಿಗೆ ವರಿಷ್ಠರೇ ಕೊನೆಗಳಿಗೆಯಲ್ಲಿ ತಡೆಯೊಡ್ಡಿದರು. ಈವರೆಗೂ ಇದಕ್ಕೆ ಒಪ್ಪಿಗೆ ಸಿಕ್ಕಿಲ್ಲ.
‘ಆರ್‌ಸಿಬಿ ವಿಜಯೋತ್ಸವ’ದ ವೇಳೆ ನಡೆದ ಕಾಲ್ತುಳಿತದ ದುರಂತ ಸರ್ಕಾರಕ್ಕೆ ದೊಡ್ಡ ಮುಖಭಂಗ. ಈ ಪ್ರಕರಣದಲ್ಲಿ ತಮ್ಮ ಅತ್ಯಾಪ್ತರಾಗಿದ್ದ, ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು ಅವರನ್ನು ಸ್ವತಃ ಸಿದ್ದರಾಮಯ್ಯ ಅವರೇ ಕಿತ್ತೊಗೆದರು. ಇದಕ್ಕೆ, ಹೈಕಮಾಂಡ್ ನಿರ್ದೇಶನ ಇತ್ತೋ ಇಲ್ಲವೋ ಬೇರೆ ಮಾತು. ಆದರೆ, ಆಪ್ತನನ್ನು ಉಳಿಸಿಕೊಳ್ಳಲಾಗದ ಸ್ಥಿತಿ ಅವರದ್ದಾಗಿತ್ತು.
ಕೆ.ಎನ್. ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿದ್ದು ಇದರ ಉತ್ತುಂಗ. ಸಂಪುಟದಲ್ಲಿ ಯಾರು ಇರಬೇಕು ಎಂಬುದು ಮುಖ್ಯಮಂತ್ರಿ ತೀರ್ಮಾನ. ಸಚಿವರ ಸೇರ್ಪಡೆ ಅಥವಾ ಕೈಬಿಡುವುದು ಹೈಕಮಾಂಡ್‌ನ ಅಂಕೆಗೆ ಒಳಪಟ್ಟಿ ರುವುದು ಎಲ್ಲ ಪಕ್ಷಗಳಲ್ಲೂ ಸಂಪ್ರದಾಯವಾಗಿದೆ. ಸಚಿವರನ್ನು ಹೊರದಬ್ಬಬೇಕಾದಾಗ ರಾಜೀನಾಮೆ ಪಡೆದು ಗೌರವಯುತವಾಗಿ ಕಳುಹಿಸಲಾಗುತ್ತದೆ. ಆದರೆ, ಅಧಿವೇಶನ ನಡೆಯುವಾಗಲೇ ತಮ್ಮ ಆಪ್ತ ಸಚಿವರೊಬ್ಬರನ್ನು ವಜಾಗೊಳಿಸುವ ಪರಿಸ್ಥಿತಿ ಮುಖ್ಯಮಂತ್ರಿಗೆ ಎದುರಾಗಿದ್ದು ಅಪರೂಪ.
ಮತ ಕಳವು ಮುಂದಿಟ್ಟು ರಾಹುಲ್ ಗಾಂಧಿ ನಡೆಸುತ್ತಿರುವ ಆಂದೋಲನದ ಬಗ್ಗೆಯೇ ವ್ಯತಿರಿಕ್ತವಾಗಿ ಮಾತನಾಡಿದ್ದ ರಾಜಣ್ಣ ಅವರನ್ನು ವಜಾಗೊಳಿಸದೇ ಅನ್ಯಮಾರ್ಗ ಆ ಪಕ್ಷಕ್ಕೆ ಇರಲಿಲ್ಲ. ಸಿದ್ದರಾಮಯ್ಯನವರನ್ನು ಸದಾ ಸಮರ್ಥಿಸುವ ಸೇನಾನಿಯಾಗಿದ್ದ ರಾಜಣ್ಣ ಅವರ ರಕ್ಷಾಕವಚ ದಂತಿದ್ದರು. ಡಿ.ಕೆ. ಶಿವಕುಮಾರ್ ಉರುಳಿಸುತ್ತಿದ್ದ ದಾಳಗಳಿಗೆ, ಪ್ರತಿದಾಳಗಳನ್ನು ಉರುಳಿಸುತ್ತಿದ್ದರು. ಅದೂ ಅವರ ಸಚಿವ ಸ್ಥಾನಕ್ಕೆ ಉರುಳಾಯಿತು. ರಾಜಣ್ಣ ತಮ್ಮ ಸ್ವಯಂಕೃತ ಪ್ರಮಾದದಿಂದ ವಜಾ ಆದರೂ, ತಮ್ಮ ಆಪ್ತ ಬಣದ ಒಬ್ಬೊಬ್ಬರನ್ನೇ ಹೀಗೆ ಕಳೆದುಕೊಳ್ಳಬೇಕಾದ ಸ್ಥಿತಿ ಸಿದ್ದರಾಮಯ್ಯ ನವರಿಗೆ ಮೇಲಿಂದ ಮೇಲೆ ಬರುತ್ತಿದೆ. ಹಿಂದಿನ ಅವಧಿಯಲ್ಲಿ ಇಂತಹ ಸನ್ನಿವೇಶ ಎದುರಾಗಿದ್ದರೆ ಸಡ್ಡು ಹೊಡೆಯುತ್ತಿದ್ದ ಅವರು, ಈಗ ಹೈಕಮಾಂಡ್‌ಗೆ ಮಣಿಯ ತೊಡಗಿರುವುದರ ಸೂಚನೆ ಇದು.
ಅನೇಕ ವಿಷಯಗಳಲ್ಲಿ ಸಚಿವ ಸಂಪುಟದಲ್ಲಿ ಭಿನ್ನಮತ ಇರುವುದು ಬಹಿರಂಗವಾಗುತ್ತಿದೆ.ವಿರೋಧ ಪಕ್ಷಗಳು ಸರ್ಕಾರವನ್ನು ಟೀಕಿಸಿ, ಬೀದಿಯಲ್ಲಿ ಮಾನ ಹರಾಜು ಹಾಕುವುದು ಸಾಮಾನ್ಯ. ಆದರೆ, ಇಲ್ಲಿ ಸರ್ಕಾರವೇ ಸರ್ಕಾರದ ವಿರುದ್ಧ ಮಾತ ನಾಡತೊಡಗಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವಿರುದ್ಧ ಲಿಂಗಾಯತ, ಒಕ್ಕಲಿಗ ಸಚಿವರೇ ಮಾತನಾಡಿದ್ದರು. ಅದನ್ನು ಜಾರಿಗೊಳಿಸಲು ಬಿಡಲಿಲ್ಲ. ಒಳ ಮೀಸಲಾತಿಗಾಗಿ ನಡೆಸಿದ ಸಮೀಕ್ಷೆಯ ಬಗ್ಗೆ ಹೊರಗೆ ಯಾರು ಆಕ್ಷೇಪಿಸಿಲ್ಲ. ಅದರ ವಿರುದ್ಧ ಸಮುದಾಯವನ್ನು ಎತ್ತಿಕಟ್ಟುವ ಕೆಲಸವನ್ನು ಕೆಲವರು ಮಾಡುತ್ತಿರುವುದು ರಹಸ್ಯವೇನಲ್ಲ.
ಧರ್ಮಸ್ಥಳದ ಪ್ರಕರಣದಲ್ಲಿ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿದೆ. ಅಲ್ಲಿನ ತನಿಖೆಯ ಕುರಿತಾಗಿ ವಿರೋಧ ಪಕ್ಷ ಮತ್ತು ಸಾರ್ವಜನಿಕರು ಸಂಶಯಪಡುವುದು ತಪ್ಪೇನಲ್ಲ. ಸರ್ಕಾರವನ್ನು ಸಮರ್ಥಿಸಿಕೊಳ್ಳಬೇಕಾದವರು ತಮ್ಮದೇ ಸರ್ಕಾರದ ನಡೆಯ ಬಗ್ಗೆ ಸಂಶಯಪಟ್ಟರೆ ಜನರು ಯಾರನ್ನು ನಂಬಬೇಕು.
‘ಧರ್ಮಸ್ಥಳದ ವಿರುದ್ಧ ದೊಡ್ಡ ಷಡ್ಯಂತ್ರ’ ಎಂದು ಶಿವಕುಮಾರ್, ‘ದೊಡ್ಡ ಆರೋಪ ಬಂದಾಗ ತನಿಖೆ ನಡೆದು ಸತ್ಯ ಹೊರಬಂದು ಆರೋಪ ಮುಕ್ತ ಮಾಡಬೇಕಲ್ಲವೇ? ’ ಎಂದು ಗೃಹ ಸಚಿವ ಪರಮೇಶ್ವರ ಸದನದಲ್ಲಿ ಹೇಳಿದ್ದಾರೆ. ಧರ್ಮಸ್ಥಳದ ಮೇಲೆ ನಂಬಿಕೆ ಅವರ ಖಾಸಗಿ ವಿಷಯ. ಸರ್ಕಾರದ ತೀರ್ಮಾನಕ್ಕೆ ಸಚಿವ ಸಂಪುಟ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಬೇಕೇ ವಿನಾ, ಸದನದಲ್ಲಿ ಹೇಳುವುದು ಸಂಸದೀಯ ನಡೆಯಲ್ಲ. ಅದರಲ್ಲೂ ಸಂವಿಧಾನದ ಆಶಯ ಕಾಪಾಡುವ ಪವಿತ್ರ ವೇದಿಕೆಯಾದ ಶಾಸನ
ಸಭೆಯಲ್ಲಿ ಸಚಿವರು ಹೀಗೆ ಮಾತನಾಡಿದರೆ, ಸರ್ಕಾರದ ನಡೆಯ ಬಗ್ಗೆಯೇ ಸಂಶಯಪಡುವ ಕಾಲ ಶುರುವಾಗುತ್ತದೆ.
ಪಕ್ಷದ ನಡೆಯ ವಿರುದ್ಧ ಮಾತನಾಡಿದ್ದಕ್ಕೆ ರಾಜಣ್ಣ ವಜಾಗೊಂಡರು. ಸರ್ಕಾರದ ವಿರುದ್ಧವೇ ಶಿವಕುಮಾರ್ ಧ್ವನಿ ಎತ್ತಿದ್ದಾರೆ. ಸದನದಲ್ಲೇ ಸಚಿವರು ಹೀಗೆ ಮಾತನಾಡುತ್ತಾರೆ ಎಂದರೆ, ಮುಖ್ಯಮಂತ್ರಿಗೆ ಸಚಿವರ ಮೇಲೆ ಹಿಡಿತವಿಲ್ಲ ಎಂಬುದು ಸ್ಪಷ್ಟ. ಸಿದ್ದರಾಮಯ್ಯನವರ ಕೈ ಸೋಲುತ್ತಿರುವುದಕ್ಕೆ ಇದಕ್ಕಿಂತ ನಿದರ್ಶನ ಬೇಕೆ?
ಶ್ರೀಸಾಮಾನ್ಯರು ವಿರೋಧ ಪಕ್ಷಗಳು ಸರ್ಕಾರದ ನಡೆಯನ್ನು ಟೀಕಿಸುವುದು ಸರ್ವಮಾನ್ಯ. ಆದರೆ ಕರ್ನಾಟಕದಲ್ಲಿ ಸರ್ಕಾರವೇ ಸರ್ಕಾರದ ವಿರುದ್ಧ ಮಾತನಾಡತೊಡಗಿದೆ. ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ವಿರುದ್ಧ ಲಿಂಗಾಯತ ಒಕ್ಕಲಿಗರ ಸಚಿವರು ಒಳ ಮೀಸಲಾತಿ ಸಮೀಕ್ಷೆ ಕುರಿತು ಬಲಗೈ ಸಮುದಾಯದ ಸಚಿವರ ಮಾತುಗಳನ್ನು ಈ ರಿವಾಜಿನಲ್ಲಿಯೇ ನೋಡಬೇಕು. ‘ಧರ್ಮಸ್ಥಳದ ಪ್ರಕರಣದಲ್ಲಿ ಷಡ್ಯಂತ್ರ ನಡೆಯುತ್ತಿದೆ ದರ್ಶನ್ ಜಾಮೀನು ರದ್ದಾಗಿದ್ದು ಕೇಳಿ ಶಾಕ್ ಆಯಿತು’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಎಸ್‌ಐಟಿ ಬಗೆಗೆ ಸ್ವತಂ ಗೃಹ ಸಚಿವರೂ ಆಗಿರುವ ಜಿ. ಪರಮೇಶ್ವರ ಪ್ರಸ್ತಾಪಿಸಿದ ವಿಷಯಗಳು ಇದಕ್ಕೆ ಪುರಾವೆಯಂತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.