
ಕರ್ನಾಟಕದಿಂದ ಲೋಕಸಭೆಗೆ ಚುನಾಯಿತರಾದ ಸಂಸದರು ಹಾಗೂ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿರುವವರು ತವರಿನ ಹಿತಚಿಂತಿಸುವ ಬದಲು, ರಾಜ್ಯ ಸರ್ಕಾರ ಟೀಕಿಸುವುದನ್ನೇ ಪೂರ್ಣಾವಧಿ ರಾಜಕಾರಣ ಮಾಡಿಕೊಂಡಿರುವಂತಿದೆ.
ಕುವೆಂಪು ಅವರ ‘ಕನ್ನಡಮ್ಮನ ಹರಕೆ’ ಪದ್ಯವು ಕನ್ನಡ ಮಾಧ್ಯಮದಲ್ಲಿ ಓದಿದ ಎಲ್ಲರ ಬಾಯಲ್ಲಿ ನಲಿದಾಡುತ್ತಿರುತ್ತದೆ. ನಮ್ಮ ನಾಡಿನ ಸಂಸದರು ಈ ಪದ್ಯವನ್ನು ಒಮ್ಮೆಯಾದರೂ ಓದಿರುತ್ತಾರೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಮೂರನೇ ಬಾರಿ ಅಧಿಕಾರಕ್ಕೆ ಬಂದು ಒಂದೂ ಮುಕ್ಕಾಲು ವರ್ಷ ಕಳೆದಿರುವ ಹೊತ್ತಿನಲ್ಲಿ ಕನ್ನಡಮ್ಮನ ಜೋಗುಳದ ಹರಕೆ ಏನು ಎಂಬುದನ್ನು ಸಂಸದರಿಗೆ ನೆನಪಿಸಲೇಬೇಕಾಗಿದೆ.
‘ಕನ್ನಡಕೆ ಹೋರಾಡು/ ಕನ್ನಡದ ಕಂದಾ/ ಕನ್ನಡವ ಕಾಪಾಡು/ ನನ್ನ ಆನಂದಾ/ ಜೋಗುಳದ ಹರಕೆಯಿದು/ ಮರೆಯದಿರು, ಚಿನ್ನಾ/ ಮರೆತೆಯಾದರೆ ಅಯ್ಯೊ/ ಮರೆತಂತೆ ನನ್ನ...’ ಎಂದು ಹೇಳುವ ಕುವೆಂಪು ಅವರು, ಕನ್ನಡಮ್ಮನ ಅಂತರಂಗದ ತುಡಿತವನ್ನು ಪ್ರತಿಪಾದಿಸಿದ್ದಾರೆ. ಸಂಸದರು ಈ ಪದ್ಯದ ಆಶಯವನ್ನು ತಮ್ಮ ಎದೆಯೊಳಗೆ ಬಿಟ್ಟುಕೊಂಡರೆ ಅವರ ಅಂತಃಸಾಕ್ಷಿ ಆಗಲಾದರೂ ಕಲಕೀತು.
ಕೇಂದ್ರ ಮತ್ತು ರಾಜ್ಯದಲ್ಲಿ ಭಿನ್ನ ಪಕ್ಷಗಳ ಸರ್ಕಾರ ಇದ್ದಾಗಲೆಲ್ಲ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಇದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸಿದಾಗ ಬಹಳ ಒಳಿತಾಗಿತ್ತು ಎಂದೇನಿಲ್ಲ. ಹೀಗಾಗಿಯೇ ನಿರಂತರವಾಗಿ ಕರ್ನಾಟಕದ ಜನ ಬಿಜೆಪಿಗೆ ಅತಿ ಹೆಚ್ಚು ಸ್ಥಾನ ಕೊಟ್ಟಿದ್ದಿರಬಹುದು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನ ಗೆದ್ದಿತ್ತು. 2024ರಲ್ಲಿ ಒಂಬತ್ತು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದ್ದು, ಬಿಜೆಪಿ ಸಂಖ್ಯೆ 17ಕ್ಕೆ ಕುಸಿದಿದೆ. ಕೇಂದ್ರದ ತಾರತಮ್ಯ ಧೋರಣೆಯ ಬಗ್ಗೆ ಕನ್ನಡಿಗರು ನೀಡಿದ ತೀರ್ಪು ಇದು ಎಂದು ಹೇಳಲಿಕ್ಕೇನೂ ಅಡ್ಡಿಯಿಲ್ಲ.
ನಮ್ಮ ಜನ ಆಯ್ಕೆ ಮಾಡಿರುವವರು ಸಾಮಾನ್ಯರೇನಲ್ಲ. ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಸಚಿವರಾಗಿ ಅನುಭವ ಇರುವ ಗೋವಿಂದ ಕಾರಜೋಳ, ವಿ. ಸೋಮಣ್ಣ, ಕೋಟ ಶ್ರೀನಿವಾಸ ಪೂಜಾರಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಕೆ. ಸುಧಾಕರ್, ಕೇಂದ್ರ–ರಾಜ್ಯದಲ್ಲಿ ಸಚಿವರಾಗಿದ್ದ ರಮೇಶ ಜಿಗಜಿಣಗಿ, ಶೋಭಾ ಕರಂದ್ಲಾಜೆ ಹಾಗೂ ಕೇಂದ್ರ ಸಚಿವರಾಗಿರುವ ಪ್ರಲ್ಹಾದ ಜೋಶಿ ಇಲ್ಲಿನವರು.
ರಾಜ್ಯಸಭೆಯಲ್ಲಿ ಎಚ್.ಡಿ. ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ಜೈರಾಂ ರಮೇಶ್, ಪ್ರಭಾವಿಗಳಾದ ವೀರೇಂದ್ರ ಹೆಗ್ಗಡೆ, ಸುಧಾಮೂರ್ತಿ ನಮ್ಮ ಪ್ರತಿನಿಧಿಗಳು. 2014ರಿಂದೀಚೆಗೆ ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಅವರೂ ಕರ್ನಾಟಕದ ಪ್ರತಿನಿಧಿಯೇ.
ಒಂದೂ ಮುಕ್ಕಾಲು ವರ್ಷದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಸಚಿವರು, ಸಂಸದರಿಂದ ನಾಡಿಗೆ ಆಗಿದ್ದೇನು ಎಂದು ನೋಡಿದರೆ, ನಾಡಿನ ಪರಿವರ್ತನೆಗೆ ಯಾರೊಬ್ಬರೂ ತಮ್ಮ ಕಾಣ್ಕೆ ಕೊಟ್ಟಿರುವುದು ಕಾಣುವುದಿಲ್ಲ. ಕೇಂದ್ರದಲ್ಲಿ ಹೊಸ ಸರ್ಕಾರ ಬಂದ ಬಳಿಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ದೊಡ್ಡ ಮಟ್ಟದ ಸಭೆ ನಡೆಸಿದ್ದರು. ಕೇಂದ್ರದ ಸಚಿವರು, ಸಂಸದರನ್ನು ಸಭೆಗೆ ಬರಮಾಡಿಕೊಂಡು ರಾಜ್ಯದ ಪ್ರಸ್ತಾವನೆ ಹಾಗೂ ಬೇಡಿಕೆಗಳ ಪಟ್ಟಿ ಕೊಟ್ಟು ಆದ್ಯತೆ ಮೇರೆಗೆ ಈಡೇರಿಸುವಂತೆ ಕೋರಿದ್ದರು. ಕರ್ನಾಟಕ ಸರ್ಕಾರದ ದೆಹಲಿ ಪ್ರತಿನಿಧಿಯಾಗಿರುವ ಟಿ.ಬಿ. ಜಯಚಂದ್ರ ಅವರು ಈ ಪಟ್ಟಿ ಹಿಡಿದುಕೊಂಡು ಬೆವರು ಸುರಿಸಿದ್ದಷ್ಟೇ ಬಂತು. ಯಾವುದೇ ಕಡತವೂ ಮುಂದೆ ಹೋಗಲಿಲ್ಲ.
ರಾಜ್ಯದ 52 ಪ್ರಸ್ತಾವಗಳು ಕೇಂದ್ರದ ಮುಂದೆ ಬಾಕಿ ಇವೆ. ರಾಜ್ಯದ ಹಿತಕ್ಕೆ ಬಹುಮುಖ್ಯವಾದ ನೀರಾವರಿ ಯೋಜನೆಗಳ ಅನುಮೋದನೆಯ ಕಡತಗಳ ಮೇಲಿನ ದೂಳು ಕೊಡಹುವ ಗೋಜಿಗೆ ಸಚಿವರು ಹೋಗಿಯೇ ಇಲ್ಲ. 2019ರ ಲೋಕಸಭೆ ಚುನಾವಣೆ ವೇಳೆ ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರ ಬಂದರೆ 24 ಗಂಟೆಯೊಳಗೆ ಮಹದಾಯಿ ಯೋಜನೆ ಜಾರಿ ಮಾಡುವುದಾಗಿ ಬಿಜೆಪಿ ನಾಯಕರು ಘೋಷಿಸಿದ್ದರು. ಈವರೆಗೂ ಏನೂ ಆಗಿಯೇ ಇಲ್ಲ. ಕೃಷ್ಣಾ ನದಿ ನೀರಿನ ಹಂಚಿಕೆಗೆ ಸಂಬಂಧಿಸಿ 2013ರಲ್ಲೇ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಗೆಜೆಟ್ ಅಧಿಸೂಚನೆ ಈವರೆಗೆ ಹೊರಬಿದ್ದಿಲ್ಲ. ಎತ್ತಿನಹೊಳೆ ಯೋಜನೆಗೆ 432 ಎಕರೆ ಅರಣ್ಯ ಬಳಕೆಗೆ ಕೇಂದ್ರದ ತಕರಾರು ಹಾಗೆಯೇ ಇದೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ ₹5,300 ಕೋಟಿ ಅನುದಾನ ನೀಡುವುದಾಗಿ 2023ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಹೇಳಿತ್ತು. ಅದು ಆಗಿಲ್ಲ. ಮೇಕೆದಾಟು ಯೋಜನೆ ಪ್ರಶ್ನಿಸಿದ್ದ ತಮಿಳುನಾಡಿನ ತಕರಾರು ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ. ಕೇಂದ್ರ ಜಲ ಆಯೋಗದ ಅನುಮೋದನೆ ಯಾವಾಗ ಸಿಗುತ್ತದೆಯೋ ಗೊತ್ತಿಲ್ಲ.
15ನೇ ಹಣಕಾಸು ಆಯೋಗದ ಮಧ್ಯಂತರ ವರದಿಯ ಶಿಫಾರಸಿನಂತೆ ರಾಜ್ಯಕ್ಕೆ ಕೇಂದ್ರ ಸರ್ಕಾರ ₹4,600 ಕೋಟಿ ನೀಡಬೇಕಾಗಿತ್ತು. ತೆರಿಗೆ ಹಂಚಿಕೆಯಲ್ಲಿನ ಪಾಲು, ಅಭಿವೃದ್ಧಿ ಅನುದಾನ ಸೇರಿದಂತೆ ಸುಮಾರು ₹11 ಸಾವಿರ ಕೋಟಿ ಕೇಂದ್ರದಿಂದ ಬರಬೇಕಾಗಿದೆ. ಎರಡನೇ ಬಾರಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ನಿರ್ಮಲಾ ಸೀತಾರಾಮನ್ ಅವರ ಬಳಿಯೇ ಹಣಕಾಸು ಖಾತೆ ಇದ್ದರೂ ಪೈಸೆ ಕೂಡ ಬಿಡುಗಡೆ ಆಗಿಲ್ಲ.
ಸಚಿವರು ಏನೆಲ್ಲ ಮಾಡಿದ್ದಾರೆ ಎಂದು ಹುಡುಕಿದರೆ ಸಮಾಧಾನಕರ ಬಹುಮಾನವನ್ನು ಕೆಲವರಿಗೆ ಕೊಡಬಹುದು. ಎಚ್.ಡಿ. ಕುಮಾರಸ್ವಾಮಿ ಅವರು, ಬಳ್ಳಾರಿ ಜಿಲ್ಲೆಯ ಸಂಡೂರಿನ ದೇವದಾರಿ ಕಬ್ಬಿಣದ ಅದಿರು ಗಣಿ ಕಾರ್ಯಾಚರಣೆಗೆ ಸಂಬಂಧಿಸಿದ ಕುದುರೆಮುಖ ಕಬ್ಬಿಣದ ಅದಿರು ಕಂಪನಿಯ (ಕೆಐಒಸಿಎಲ್) ಕಡತಕ್ಕೆ ತಮ್ಮ ಮೊದಲ ಸಹಿ ಹಾಕುವ ಮೂಲಕ ರಾಜ್ಯದ ಪರ ಕಾಳಜಿ ಪ್ರದರ್ಶಿಸಿದರು. ಎಚ್ಎಂಟಿ, ಭದ್ರಾವತಿ ವಿಐಎಸ್‌ಎಲ್ ಪುನರುಜ್ಜೀವನ ಅವರ ಕನಸು. ಆದರೆ, ರಾಜ್ಯ ಸರ್ಕಾರ ಅದಕ್ಕೆ ಸ್ಪಂದಿಸದೇ ಅಡ್ಡಗಾಲು ಹಾಕುತ್ತಲೇ ಇದೆ.
ಕಾಂಗ್ರೆಸ್ ಸರ್ಕಾರವನ್ನು ಬೈಯುವುದನ್ನೇ ವೃತ್ತಿ ಮಾಡಿಕೊಂಡಿರುವ ಪ್ರಲ್ಹಾದ ಜೋಶಿ, ರಾಜ್ಯದ ಅನ್ನಭಾಗ್ಯ ಯೋಜನೆಗೆ ಅಕ್ಕಿ ಪೂರೈಸದೇ ಸತಾಯಿಸಿದರು. ಬೆಂಗಳೂರು–ಧಾರವಾಡ, ಬೆಂಗಳೂರು–ಬೆಳಗಾವಿಗೆ ವಂದೇ ಭಾರತ್ ರೈಲು ಆರಂಭಕ್ಕೆ ಒತ್ತಡ ಹಾಕಿದ್ದಷ್ಟೇ ಇವರ ಸಾಧನೆ. ಬೆಂಗಳೂರು–ಹುಬ್ಬಳ್ಳಿ ಮಧ್ಯದ ಎಕ್ಸ್‌ಪ್ರೆಸ್ ರೈಲು ಆರಂಭಕ್ಕೆ ಮುತುವರ್ಜಿ, ವಿವಾದದ ಅಲೆ ಎಬ್ಬಿಸಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯಿಂದ ಒಪ್ಪಿಗೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಲೆಕ್ಕಕ್ಕೆ ಸಿಗುತ್ತದೆ.
ತಾವು ಪ್ರತಿನಿಧಿಸುವ ತುಮಕೂರು ಕ್ಷೇತ್ರಕ್ಕೆ ಯೋಜನೆಗಳನ್ನು ತರುವಲ್ಲಿ ಹೆಚ್ಚಿನ ಆಸಕ್ತಿ ತೋರಿರುವ ವಿ. ಸೋಮಣ್ಣ, ತುಮಕೂರು–ದಾವಣಗೆರೆ ರೈಲ್ವೆ ಕಾಮಗಾರಿಗೆ ವೇಗ ತಂದಿದ್ದಾರೆ. ಕ್ಷೇತ್ರಕ್ಕೆ ₹500 ಕೋಟಿಗೂ ಹೆಚ್ಚಿನ ಮೊತ್ತದ ರೈಲ್ವೆ ಮೇಲ್ಸೇತುವೆಗಳನ್ನು ಮಂಜೂರು ಮಾಡಿಸಿದ್ದಾರೆ. ₹3,340 ಕೋಟಿ ಮೊತ್ತದ ಬಳ್ಳಾರಿ–ಚಿಕ್ಕಜಾಜೂರು ರೈಲ್ವೆ ಹಳಿ ಡಬ್ಲಿಂಗ್ ಯೋಜನೆಗೆ ಸಚಿವ ಸಂಪುಟದ ಒಪ್ಪಿಗೆ ಕೊಡಿಸಿದ್ದು ಇವರ ಹೆಗ್ಗಳಿಕೆ.
ಕೋಮುಗಲಭೆಗೆ ಬೆಂಕಿ ಸುರಿಯವುದನ್ನೇ ತಮ್ಮ ಕಾಯಕ ಮಾಡಿಕೊಂಡಂತಿರುವ ಶೋಭಾ ಕರಂದ್ಲಾಜೆ, ಬೆಂಗಳೂರು ಸಂಸದೆ ಎಂಬುದನ್ನೇ ಮರೆತಿದ್ದಾರೆ. ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣಗಳನ್ನು ಎನ್‌ಐಎಗೆ ಒಪ್ಪಿಸಬೇಕು ಎಂದು ಪತ್ರ ಬರೆದಿದ್ದೇ ಇವರ ಹಿರಿಮೆ.
ಚುನಾವಣೆ ವೇಳೆ ಪಕ್ಷ ರಾಜಕಾರಣ ನಡೆಸಿ, ಎದುರಾಳಿ ಪಕ್ಷವನ್ನು ದೂಷಿಸುವುದು ತಪ್ಪೇನಲ್ಲ. ಅಧಿಕಾರಕ್ಕೆ ಏರಿದ ಬಳಿಕ ರಾಜ್ಯದ ಹಿತ ಕಾಯುವ, ರಾಜ್ಯದ ಬೇಡಿಕೆ, ಪ್ರಸ್ತಾವನೆಗಳನ್ನು ಆಯಾ ಇಲಾಖೆಯಲ್ಲಿ ಅನುಮೋದನೆ ಕೊಡಿಸುವ ಕೆಲಸವನ್ನು ಮಾಡಬೇಕು. ಅದನ್ನು ಬಿಟ್ಟು ದೆಹಲಿಯಲ್ಲಿ ಕುಳಿತು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರನ್ನು ನಿತ್ಯವೂ ಟೀಕಿಸಿ, ಕರ್ನಾಟಕದಲ್ಲಿ ಅರಾಜಕ ಸರ್ಕಾರ ಇದೆ ಎಂದು ರಾಷ್ಟ್ರಮಟ್ಟದಲ್ಲಿ ಬಿಂಬಿಸುವುದರಿಂದ ಬಿಜೆಪಿಗೆ ಏನೂ ಲಾಭವಾಗದು. ಅನ್ನ, ನೀರು, ವಿದ್ಯೆ, ಸವಲತ್ತು ಕೊಟ್ಟು ತಮ್ಮನ್ನು ಈ ಮಟ್ಟಕ್ಕೆ ಬೆಳೆಯಿಸಿದ ಮಾತೃಭೂಮಿಗೆ ಮಾಡುವ ದ್ರೋಹವೂ ಹೌದು. ರಾಜ್ಯ ಸರ್ಕಾರದ ಕೆಟ್ಟ ನಡವಳಿಕೆಗಳನ್ನು ಟೀಕಿಸಿ, ಒಳಿತನ್ನು ಮೆಚ್ಚಿದರೆ ಇಲ್ಲಿಯೂ ಉತ್ತಮ ವಾತಾವರಣ ಇದೆ ಎಂಬುದು ಹೊರಜಗತ್ತಿಗೆ ಗೊತ್ತಾಗುತ್ತದೆ. ತಾವು ಪ್ರಧಾನಿ ನರೇಂದ್ರ ಮೋದಿಯ ಕಾಲಾಳುಗಳಲ್ಲ; ತಾವು ಕರ್ನಾಟಕವನ್ನು ಪ್ರತಿನಿಧಿಸುವ ರಾಯಭಾರಿಗಳಂತೆ ಸಂಸದರು, ಸಚಿವರು ನಡೆದುಕೊಂಡರೆ ಅವರನ್ನು ಗೆಲ್ಲಿಸಿದ್ದು ಸಾರ್ಥಕವಾದೀತು.
ಕೇಂದ್ರ ಸಚಿವರು ರಾಜ್ಯ ಸರ್ಕಾರದ ವಿರುದ್ಧ ಆಡುವ ಮಾತುಗಳಲ್ಲಿ ಶೇ 1ರಷ್ಟು ಶಬ್ದಗಳನ್ನು ನರೇಂದ್ರ ಮೋದಿ, ಅಮಿತ್ ಶಾ ಮುಂದೆ ಉದುರಿಸಿದ್ದರೆ, ಧೈರ್ಯ ಮಾಡಿ ಅವರ ಕಿವಿಗಳಲ್ಲಿ ಉಸುರಿದರೆ ನಾಡಿನ ಹಣೆಬರಹವೇ ಬದಲಾಗುತ್ತಿತ್ತು. ಕೇಂದ್ರದ ತಾರತಮ್ಯ ಧೋರಣೆಯ ಬಗ್ಗೆ ಕನ್ನಡಿಗರಲ್ಲಿ ಇರುವ ಬೇಸರ, ಅಸಹನೆಯ ಎಳೆಯಾದರೂ ಅವರ ಅರಿವಿಗೆ ಬರುತ್ತಿತ್ತು.
ಕೇಂದ್ರ ಸಚಿವರಾಗಿದ್ದುಕೊಂಡು, ರಾಜ್ಯದ ಆಡಳಿತ ವೈಫಲ್ಯದ ಬಗ್ಗೆಯೇ ದಿನವೂ ನೀವು ಮಾತನಾಡುವುದನ್ನು ನೋಡಿದರೆ ಇಲ್ಲಿರುವ ನಿಮ್ಮದೇ ಪಕ್ಷದ– ಅಧಿಕೃತ ವಿರೋಧ ಪಕ್ಷದ– ನಾಯಕರು, ರಾಜ್ಯ ಘಟಕದ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಖುಲ್ಲಂಖುಲ್ಲಾ ಅಸಮರ್ಥರು ಎಂದು ನೀವೇ ಹೇಳಿದಂತಾಗಲಿಲ್ಲವೇ? ನಿಮ್ಮ ಪಕ್ಷದ ನಾಯಕರು ರಾಜ್ಯ ಸರ್ಕಾರವನ್ನು ಎದುರಿಸುವಲ್ಲಿ ಸೋತಿದ್ದಾರೆ ಎಂದಾದರೆ, ನೀವೇ ಇಲ್ಲಿ ಬಂದು ನಾಯಕತ್ವ ವಹಿಸಿಕೊಳ್ಳಬಹುದಲ್ಲವೇ? ಈಗಲೂ ಕಾಲ ಮಿಂಚಿಲ್ಲ. ಕೇಂದ್ರ ಸಚಿವರಾಗಿದ್ದುಕೊಂಡು ಕೆಲಸ ಮಾಡುವುದು ಸಾಕಷ್ಟಿದೆ. ಇನ್ನಾದರೂ ಅದನ್ನು ಮಾಡಿ.
‘ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ! ಕನ್ನಡಕ್ಕಾಗಿ ಕೊರಳೆತ್ತು; ಅಲ್ಲಿ ಪಾಂಚಜನ್ಯ ಮೂಡುತ್ತದೆ. ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು, ಇಂದು ಅದೇ ಗೋವರ್ಧನ ಗಿರಿಧಾರಿಯಾಗುತ್ತದೆ’ ಎಂದು ಕುವೆಂಪು ಹೇಳಿದ್ದರು. ನೀವು ಇದಾವುದನ್ನೂ ಮಾಡುವುದು ಬೇಡ. ಪ್ರಧಾನಿ ಮೋದಿಯವರನ್ನು ಮೆಚ್ಚಿಸುವ ಕಾಯಕ ಮಾಡುವುದರ ಬದಲು, ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಹಾಕಿದವರು ಮೆಚ್ಚುವಂತಹ ಕೆಲಸವನ್ನಾದರೂ ಮಾಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.