ADVERTISEMENT

ಗತಿಬಿಂಬ ಅಂಕಣ: ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗ್ತಾರಾ ?

ವೈ.ಗ.ಜಗದೀಶ್‌
Published 1 ಮಾರ್ಚ್ 2026, 4:30 IST
Last Updated 1 ಮಾರ್ಚ್ 2026, 4:30 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ   

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಅನವರತ ನಡೆಯುತ್ತಿರುವ ಹಗ್ಗಜಗ್ಗಾಟ ಕೊನೆಗಾಣುವ ಲಕ್ಷಣ ಕಾಣಿಸುತ್ತಿಲ್ಲ. ಇಂತಹ ಸನ್ನಿವೇಶವನ್ನು ತಮ್ಮ ಪರ ಅಲೆಯಾಗಿ ಪರಿವರ್ತಿಸಿಕೊಳ್ಳುವ ಅವಕಾಶವನ್ನು ಕೈಚೆಲ್ಲಿ ಕುಳಿತಿರುವ ಬಿಜೆಪಿ–ಜೆಡಿಎಸ್‌ ನಾಯಕರು, 2028ಕ್ಕೆ ಯಾರು ಮುಖ್ಯಮಂತ್ರಿ ಎಂಬ ವಾದಕ್ಕೆ ಬಿದ್ದಿದ್ದಾರೆ.

ಜನರ ಕಷ್ಟಗಳಿಗೆ ಧ್ವನಿಯಾಗಿ, ಅವರ ಜತೆ ನಿಂತು ಹೋರಾಟ ಕಟ್ಟಿ ಬರಲಿರುವ ಚುನಾವಣೆಯಲ್ಲಿ ಜನಾದೇಶ ಪಡೆದ ಬಳಿಕ ‘ಅಧಿಕಾರ’ ಹಿಡಿಯುವ ಚರ್ಚೆಯನ್ನು ವಿಪಕ್ಷಗಳ ನಾಯಕರು ನಡೆಸಿದ್ದರೆ ಅದಕ್ಕೊಂದು ಅರ್ಥ ಇರುತ್ತಿತ್ತು. ಕುರ್ಚಿ ಸಿಗುವ ಮೊದಲೇ ಅದರ ಕಾಲು ಹಿಡಿದು ಜಗ್ಗಾಡುತ್ತಿರುವ ಎರಡೂ ಪಕ್ಷಗಳ ನಾಯಕರ ಆಟವನ್ನು ಈಗಲೇ ಜನ ಅರ್ಥ ಮಾಡಿಕೊಂಡರೆ, ಬಹುಶಃ ಚುನಾವಣೆಯಲ್ಲಿ ಅವರಿಗೆ ಬಹುಮತಕ್ಕೆ ಬೇಕಾದಷ್ಟು ಸಂಖ್ಯೆ ಕೊಡಲಿಕ್ಕಿಲ್ಲ.  ಏಕೆಂದರೆ, ಎರಡು ಅವಧಿಯ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆಗಾಗಿ ನಡೆದ ಯತ್ನಗಳು, ಜೆಡಿಎಸ್‌–ಬಿಜೆಪಿ ಹಾಗೂ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದ ಅವಧಿಯಲ್ಲಿ ನಾಯಕತ್ವಕ್ಕಾಗಿ ನಡೆದ ಹಣಾಹಣಿಗಳನ್ನು ಮತದಾರರು ಗಂಭೀರವಾಗಿ ಪರಿಗಣಿಸಿದ್ದರು. ಹೀಗಾಗಿಯೇ, 2013 ಮತ್ತು 2023ರಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಕೊಟ್ಟರು. ಹಾಗಂತ, ರಾಜ್ಯದ ಜನ ಕಾಂಗ್ರೆಸ್‌ ಪರವಾಗಿಯೇ ಇದ್ದಾರೆಂದು ಭಾವಿಸಬೇಕಾಗಿಲ್ಲ. 2013–2018ರ ಅವಧಿಯಲ್ಲಿ ನಾಯಕತ್ವದ ಜಗಳಕ್ಕೆ ಅವಕಾಶ ಇಲ್ಲದೇ, ಉತ್ತಮ ಆಡಳಿತವನ್ನು ನೀಡಿದರೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಮತ್ತೆ ಬಹುಮತವನ್ನು ರಾಜ್ಯದ ಜನ ಕೊಡಲಿಲ್ಲ. 

ಆಡಳಿತ ಪಕ್ಷದ ಆಂತರಿಕ ಕದನ, ಅದರಿಂದಾಗುವ ಆಡಳಿತ ವೈಫಲ್ಯ, ಮೇರೆ ಮೀರಿದ ಭ್ರಷ್ಟಾಚಾರವನ್ನು ದೀರ್ಘಕಾಲ ನಾಡಿನ ಜನ ಸಹಿಸುವವರಲ್ಲ. ಆ ಕಾರಣಕ್ಕೆ, ಸಾಮಾನ್ಯವಾಗಿ ಐದು ವರ್ಷಕ್ಕೊಮ್ಮೆ ಬಂದೊದಗುವ ಚುನಾವಣೆಯಲ್ಲಿ ತಮ್ಮ ‘ಶಕ್ತಿ ಪ್ರದರ್ಶನ’ವನ್ನು ರಾಜ್ಯದ ವಿವೇಚನಾಯುತ ಮತದಾರರು ಮಾಡುತ್ತಲೇ ಬಂದಿದ್ದಾರೆ.

ADVERTISEMENT

ಈಗಿನ ಕಾಂಗ್ರೆಸ್ ಸರ್ಕಾರದ ಎರಡೂವರೆ ವರ್ಷದ ಆಡಳಿತವನ್ನು ಜನ ಗಮನಿಸುತ್ತಲೇ ಇದ್ದಾರೆ. ಮುಖ್ಯಮಂತ್ರಿ ಪಟ್ಟಕ್ಕಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಾಕುತ್ತಿರುವ ಪಟ್ಟು, ಶಾಸಕಾಂಗ ಪಕ್ಷವೇ ತನ್ನನ್ನು ನಾಯಕನನ್ನಾಗಿ ಆಯ್ಕೆ ಮಾಡಿರುವುದರಿಂದಾಗಿ ಸ್ಥಾನ ಬಿಟ್ಟು ಕದಲುವುದಿಲ್ಲವೆಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಚಲ ನಿರ್ಧಾರದಿಂದಾಗಿ ಪಕ್ಷದ ಆಂತರಿಕ ಸಂಘರ್ಷ ಬಿಗಡಾಯಿಸುತ್ತಲೇ ಇದೆ. ಇದರ ಪರಿಣಾಮವಾಗಿ, ಆಡಳಿತ ಯಂತ್ರ ಹಳಿ ತಪ್ಪಿದೆ; ಅಭಿವೃದ್ಧಿ ಚಟುವಟಿಕೆಗಳಿಗೆ ಗ್ರಹಣ ಬಡಿದಿದೆ. ‘ಗ್ಯಾರಂಟಿ’ಗಳು ತಂದಿತ್ತ ‘ಹಿತಾನುಭವ’ ದ ಹೊರತಾಗಿ, ಆಡಳಿತದ ‘ಸುಖಾನುಭವ’ ಜನರಿಗೆ ವೇದ್ಯವಾಗುತ್ತಿಲ್ಲ. ಇಂತಹ ಹೊತ್ತಿನೊಳಗೆ, ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಬಹುದಾದ ವಿಪುಲ ಅವಕಾಶಗಳಿದ್ದರೂ ಮುಂದಿನ ಚುನಾವಣೆಯಲ್ಲಿ ಅಧಿಕಾರ ಹಿಡಿಯುವುದಷ್ಟೇ ವಿಪಕ್ಷಗಳ ಆದ್ಯತೆಯಾದಂತಿದೆ. ಅಂತಹ ಗುರಿ ತಪ್ಪೇನಲ್ಲ; ಆ ಗುರಿಯನ್ನು ಸಾಧಿಸುವ, ವಿಧಾನಸೌಧದ ಮೂರನೇ ಮಹಡಿಯೇರಿ ಕುರ್ಚಿ ಹಿಡಿಯಲು ಬೇಕಾದ ಮಾರ್ಗಗಳೂ ಸ್ಪಷ್ಟವಾಗಿ ಇರಬೇಕು. ಆ ದಾರಿಯೇ ಗೊತ್ತಿಲ್ಲದೇ ‘ಕೂಗುಮಾರಿ’ಯಾದರಷ್ಟೇ ಗೆಲುವು ಸಲೀಸು ಎಂಬ ಲೆಕ್ಕಾಚಾರದಲ್ಲಿರುವಂತಿದೆ ವಿಪಕ್ಷಗಳ ನಾಯಕರ ವರ್ತನೆ.

ಚುನಾವಣೆಗೆ ಸರಿಸುಮಾರು ಎರಡುಕಾಲು ವರ್ಷಗಳಿರುವಾಗಲೇ ಇಂತಹದೊಂದು ಚರ್ಚೆಯನ್ನು ಹುಟ್ಟುಹಾಕಿದ್ದು, ರಾಜಕೀಯದಲ್ಲಿ ಇನ್ನೂ ಕೂಸಾಗಿರುವ ನಿಖಿಲ್ ಕುಮಾರಸ್ವಾಮಿ. ‘ಜೆಡಿಎಸ್‌ ಅತಿ ಹೆಚ್ಚು ಸ್ಥಾನ ಗಳಿಸಲಿದ್ದು 2028ರಲ್ಲಿ ಕುಮಾರಸ್ವಾಮಿಯವರು ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ’ ಎಂದು ಅತಿ ಉತ್ಸಾಹದಿಂದ ಘೋಷಿಸಿಬಿಟ್ಟರು. ಮತ್ತೆ ಅಧಿಕಾರ ಹಿಡಿಯುವ ತವಕದಲ್ಲಿರುವ ಬಿಜೆಪಿ ನಾಯಕರು, ಈ ಮಾತಿನಿಂದ ತುಸು ಬೆಚ್ಚಿಬಿದ್ದರು. ಬಹುತೇಕರು ಬಹಿರಂಗವಾಗಿ ಮಾತನಾಡಲಿಲ್ಲ. ಪಕ್ಷದ ವೇದಿಕೆಯಲ್ಲಿ ಈ ಬಗ್ಗೆ ಗಂಭೀರವಾದ ಚರ್ಚೆಗಳು ನಡೆದವು. ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ‘ಬಿಜೆಪಿ ಬಹುಮತ ಪಡೆದರೆ ನಮ್ಮ ಪಕ್ಷದವರೇ ಮುಖ್ಯಮಂತ್ರಿ’ ಎಂದು ತಿರುಗೇಟಿನ ರೂಪದಲ್ಲಿ ಮಾತು ಹರಿಯಬಿಟ್ಟರು. ಇದು ಯಾಕೋ ಅನಾಹುತಕ್ಕೆ ದಾರಿಯಾಗುತ್ತದೆ ಎಂದರಿತ ಕೇಂದ್ರ ಸಚಿವರೂ ಆಗಿರುವ ಎಚ್.ಡಿ. ಕುಮಾರಸ್ವಾಮಿ, ‘ಕೂಸು ಹುಟ್ಟುವ ಮುಂಚೆಯೇ ಕುಲಾವಿ ಹೊಲಿಸುವುದೇಕೆ? ಈಗಿನ ಕೆಟ್ಟ ಸರ್ಕಾರ ತೊಲಗಿಸುವುದಷ್ಟೇ ತಮ್ಮ ಮೊದಲ ಗುರಿ’ ಎಂದರು. ಇದೇ ಮಾದರಿಯ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ, ‘ಮುಂದಿನ ಮುಖ್ಯಮಂತ್ರಿ ಯಾರು ಎಂಬುದರ ಬಗ್ಗೆ ನಮ್ಮಲ್ಲಿ ಯಾವ ತೀರ್ಮಾನವೂ ಆಗಿಲ್ಲ. ಕೂಸು ಹುಟ್ಟುವ ಮುಂಚೆಯೇ ಕುಲಾವಿ ಹೊಲಿಸುವುದು ಸರಿಯಲ್ಲ. ಮೊದಲು ಒಟ್ಟಾಗಿ ಸೇರಿ ಚುನಾವಣೆ ಗೆಲ್ಲಬೇಕು’ ಎಂದು ಹೇಳಿದರು.

‘ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡುವುದು ತಮ್ಮ ಕೈಯಲ್ಲಿ ಇಲ್ಲ. ಅದೇನಿದ್ದರೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ತೀರ್ಮಾನ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಈಚೆಗೆ ಹೇಳಿದ್ದಾರೆ. ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಬೇಕು ಎಂಬ ಆಸೆಯಿದ್ದರೂ, ಅದು ಮೋದಿ–ಶಾ ಜೋಡಿಯ ಮರ್ಜಿಗೆ ಬಿಟ್ಟಿದ್ದು ಎಂಬುದು ದೇವೇಗೌಡರಿಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಹೀಗಾಗಿಯೇ, ತಮ್ಮದೊಂದು ದಾಳವನ್ನು ಹೀಗೆ ಉರುಳಿಸಿದ್ದಾರೆ. ಏತನ್ಮಧ್ಯೆ, ತಮ್ಮ ಈಗಿನ ಸ್ವಕ್ಷೇತ್ರ ಮಂಡ್ಯದಲ್ಲಿ ಮಾತನಾಡಿದ ಕುಮಾರಸ್ವಾಮಿ, ‘ಐದು ವರ್ಷ ಸರ್ಕಾರ ನಡೆಸಲು, ರಾಜ್ಯದ ಜನರು ಅವಕಾಶ‌ ನೀಡಿದರೆ ಕರ್ನಾಟಕವನ್ನು ದೇಶದಲ್ಲೇ ಮಾದರಿ ರಾಜ್ಯ ಮಾಡುತ್ತೇನೆ’ ಎನ್ನುವ ಮೂಲಕ ಮತ್ತೆ ಮುಖ್ಯಮಂತ್ರಿಯಾಗಬೇಕೆಂಬ ತಮ್ಮ ಅಭಿಲಾಶೆಯನ್ನು ಹೊರ ಹಾಕಿದ್ದಾರೆ.

ರಾಜ್ಯದ ಕಳೆದ ಎರಡು ದಶಕಗಳ ಚುನಾವಣಾ ಚರಿತ್ರೆಯನ್ನು ಗಮನಿಸಿದರೆ ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳಿಗೆ ಯಾವತ್ತೂ ಅಧಿಕಾರ ಹಿಡಿಯುವಷ್ಟು ಬಹುಮತ ಬಂದಿಲ್ಲ. 1994ರಲ್ಲಿ ಬಹುಮತ ಪಡೆದಿದ್ದರಿಂದಾಗಿ ದೇವೇಗೌಡರು ಮುಖ್ಯಮಂತ್ರಿಯಾದರು. ಆ ಬಳಿಕ 1999, 2013, 2023ರಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಜನಾದೇಶವನ್ನು ರಾಜ್ಯದ ಜನರ ಕೊಟ್ಟಿದ್ದಾರೆ ವಿನಾ ಬಿಜೆಪಿ ಮತ್ತು ಜೆಡಿಎಸ್‌ಗೆ ಅಲ್ಲ.

2004ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 79, ಕಾಂಗ್ರೆಸ್‌ 65, ಜೆಡಿಎಸ್‌ 58 ಸ್ಥಾನಗಳನ್ನು ಗೆದ್ದಿದ್ದವು. ಅಂದು ಅತಿ ಹೆಚ್ಚು ಸ್ಥಾನ ಗೆದ್ದರೂ ಅಧಿಕಾರ ಹಿಡಿಯುವಷ್ಟು ಸರಳ ಬಹುಮತ ಬಿಜೆಪಿಗೆ ಸಿಗಲಿಲ್ಲ. ವಿರೋಧಿಗಳಾಗಿ ಸೆಣಸಿದ್ದ ಕಾಂಗ್ರೆಸ್–ಜೆಡಿಎಸ್‌ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬಂದಿತು. ಆದರೆ, ಅದು ಬಹುಕಾಲ ಮುಂದುವರಿಯಲಿಲ್ಲ. ಎಚ್.ಡಿ. ಕುಮಾರಸ್ವಾಮಿ ಸಖ್ಯ ಬೆಳೆಸಿದ ಯಡಿಯೂರಪ್ಪ ಮೈತ್ರಿ ಸರ್ಕಾರ ರಚಿಸಿದರು.

‘ಕುಮಾರಸ್ವಾಮಿ ವಿಶ್ವಾಸದ್ರೋಹ ಮಾಡಿದರು’ ಎಂಬ ದೋಷಾರೋಪ ಮುಂದಿಟ್ಟು ಯಡಿಯೂರಪ್ಪ ಅವರು 2008ರಲ್ಲಿ ಮಧ್ಯಂತರ ಚುನಾವಣೆ ಎದುರಿಸಿದರು. ಆಗಲೂ ಬಿಜೆಪಿ ಗೆದ್ದಿದ್ದು 110 ಸ್ಥಾನ. ಕಾಂಗ್ರೆಸ್‌ 80, ಜೆಡಿಎಸ್‌ 28 ಸ್ಥಾನಗಳನ್ನು ಗೆದ್ದಿದ್ದವು. ಪಕ್ಷೇತರರ ಬೆಂಬಲ ಪಡೆದ ಯಡಿಯೂರಪ್ಪ ಕೊನೆಗೂ ಮುಖ್ಯಮಂತ್ರಿಯಾದರು. 

2013ರಲ್ಲಿ ಕಾಂಗ್ರೆಸ್‌ 122, ಬಿಜೆಪಿ 40, ಜೆಡಿಎಸ್ 40, ಯಡಿಯೂರಪ್ಪ ನೇತೃತ್ವದ ಕೆಜೆಪಿ 6, ಬಿ.ಶ್ರೀರಾಮುಲು ನೇತೃತ್ವದ ಬಿಎಸ್‌ಆರ್‌ 2 ಸ್ಥಾನಗಳಲ್ಲಿ ವಿಜಯ ಸಾಧಿಸಿತ್ತು. ಸಹಜವಾಗಿ ಕಾಂಗ್ರೆಸ್ ಅಧಿಕಾರ ಹಿಡಿಯಿತು. 

2018ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನು ದಕ್ಕಿಸಿಕೊಂಡಿತು. ಅಧಿಕಾರ ಹಿಡಿಯಲು ಬೇಕಾದ ಸರಳ ಬಹುಮತ 113 ತಲುಪಲು ಆಗಲೂ ಸಾಧ್ಯವಾಗಲಿಲ್ಲ. ಕಾಂಗ್ರೆಸ್‌ 80, ಜೆಡಿಎಸ್‌ 37 ಸ್ಥಾನಗಳಲ್ಲಿ ಜಯಗಳಿಸಿದ್ದವು. ಮತ್ತೆ ಜೆಡಿಎಸ್–ಕಾಂಗ್ರೆಸ್‌ ಕೂಡಿಕೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಆದರೆ, ಅದು ಹೆಚ್ಚುಕಾಲ ಬಾಳಲಿಲ್ಲ. ಒಂದೇ ವರ್ಷದಲ್ಲಿ ‘ಆಪರೇಷನ್ ಕಮಲ’ ನಡೆಸಿದ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾದರು. 

ಈಗಿನ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. 2023ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 135, ಬಿಜೆಪಿ 66, ಜೆಡಿಎಸ್‌ 19 ಸ್ಥಾನಗಳಲ್ಲಿ ಗೆದ್ದಿದ್ದವು.  ಸಹಜವಾಗಿ ಕಾಂಗ್ರೆಸ್ ಅಧಿಕಾರ ಹಿಡಿಯಿತು.

ಕಾಂಗ್ರೆಸ್‌ 135 ಸ್ಥಾನ ಗೆದ್ದಿದ್ದರೆ, ಬಳಿಕ ನಡೆದ ಉಪಚುನಾವಣೆಯಲ್ಲಿ ಎರಡನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ಪಕ್ಷೇತರರಾಗಿ ಗೆದ್ದಿರುವ ಮೂವರ ಬಲ ಕಾಂಗ್ರೆಸ್‌ಗೆ ಇದೆ. 66 ಗೆದ್ದಿದ್ದ ಬಿಜೆಪಿ, ಉಪ ಚುನಾವಣೆಯಲ್ಲಿ ಒಂದನ್ನು ಕಳೆದುಕೊಂಡು 65ಕ್ಕೆ ಇಳಿದಿದೆ. ಆ ಪೈಕಿ ಮೂವರನ್ನು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಕ್ಕೆ ಉಚ್ಚಾಟಿಸಲಾಗಿದೆ. ಆರೇಳು ಶಾಸಕರು ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನಾಯಕತ್ವವನ್ನು ಒಪ್ಪದೇ ಭಿನ್ನ ಚಟುವಟಿಕೆ ನಡೆಸುತ್ತಲೇ ಇದ್ದಾರೆ. 

ವಿರೋಧ ಪಕ್ಷ ಬಿಜೆಪಿಯಲ್ಲಿ ಒಗ್ಗಟ್ಟಿನ ಬದಲು ನಾಲ್ಕೈದು ಬಲವಾದ ಗುಂಪುಗಳಿವೆ. ಅಧ್ಯಕ್ಷ ವಿಜಯೇಂದ್ರ ಅವರದ್ದು ಒಂದು ಗುಂಪು. ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರದ್ದು ಮತ್ತೊಂದು ಗುಂಪು. ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್ ಜತೆಗಿರುವುದು ಮಗುದೊಂದು ಗುಂಪು. ರಮೇಶ ಜಾರಕಿಹೊಳಿ ತಮ್ಮದೇ ಬಣ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ. ಸದಾನಂದಗೌಡ, ಜಗದೀಶ ಶೆಟ್ಟರ್ ಮತ್ತಿತರರು ತಟಸ್ಥ ಬಣದಲ್ಲಿದ್ದಾರೆ. ಯಾವ ಗುಂಪಿನವರು ಮೇಲೆ ಹೋದರೂ ಮತ್ತೊಂದು ಗುಂಪಿನವರು ಕಾಲು ಹಿಡಿದು ಜಗ್ಗುತ್ತಲೇ ಇರುತ್ತಾರೆ; ಇದು ಬಿಜೆಪಿಯ ಸದ್ಯದ ಸ್ಥಿತಿ.

ಅತ್ತ ಜೆಡಿಎಸ್‌ನ ಪರಿಸ್ಥಿತಿ ಕೂಡ ಚೆನ್ನಾಗಿಲ್ಲ. 2023ರ ಚುನಾವಣೆಯಲ್ಲಿ ಜೆಡಿಎಸ್‌ ಬಲ  19ಕ್ಕೆ ಕುಸಿಯಿತು. ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆ ಕೊಟ್ಟ ಕಾರಣಕ್ಕೆ ನಡೆದ ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದರಿಂದಾಗಿ, ಶಾಸಕರ ಬಲ 18ಕ್ಕೆ ಇಳಿಯಿತು. 224 ಸದಸ್ಯ ಬಲದ ವಿಧಾನಸಭೆಯಲ್ಲಿ ಶೇ 10ರಷ್ಟು ಗೆಲ್ಲದ ಜೆಡಿಎಸ್‌ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವ ಕನಸಿನಲ್ಲಿದೆ.

ಜೆಡಿಎಸ್‌ಗೆ ಸದ್ಯಕ್ಕೆ ಜೀವಜಲ ಇರುವುದು ಬಿಜೆಪಿ ಜತೆಗಿನ ನಂಟು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡ ಜೆಡಿಎಸ್‌, ಆ ಚುನಾವಣೆಯಲ್ಲಿ ರಾಜ್ಯದ ಆಡಳಿತರೂಢ ಕಾಂಗ್ರೆಸ್‌ ಅನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಯಿತು. ಬಿಜೆಪಿ–ಜೆಡಿಎಸ್‌ ಪ್ರತ್ಯೇಕವಾಗಿ ಚುನಾವಣೆ ಎದುರಿಸಿದ್ದರೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 15–17ರಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇತ್ತು. ಆದರೆ, ವಿರೋಧ ಪಕ್ಷಗಳು ಜಂಟಿ ಸಮರಾಭ್ಯಾಸ ನಡೆಸಿದ್ದರಿಂದಾಗಿ ಫಲಿತಾಂಶ ಉಲ್ಟಾ ಆಯಿತು. ಬಿಜೆಪಿ 17 ಸ್ಥಾನ, ಜೆಡಿಎಸ್ 2 ಸ್ಥಾನ ಗೆದ್ದರೆ, ಕಾಂಗ್ರೆಸ್‌ 9 ಕ್ಕೆ ಸೀಮಿತವಾಯಿತು.

ಮೈತ್ರಿ ಮಾಡಿಕೊಂಡಿದ್ದರಿಂದಲೇ ಕುಮಾರಸ್ವಾಮಿ ಕೇಂದ್ರ ಸಚಿವರಾದರು. ಪಕ್ಷಕ್ಕೆ ಎಲ್ಲ ರೀತಿಯ ನೆರವು ತಂದುಕೊಡುವುದು ಸಾಧ್ಯವಾಯಿತು. ಈಗ ಪಕ್ಷವನ್ನು ಸಂಘಟಿಸುವತ್ತ ಮನಸ್ಸು ಮಾಡಿರುವ ಅವರು, ರಾಜ್ಯದಾದ್ಯಂತ ಓಡಾಟ ಶುರುಮಾಡಿದ್ದಾರೆ. ತಮ್ಮ ತಂದೆ, ತಾವು ಹಾಗೂ ತಮ್ಮ ಮಗ ಬಿಟ್ಟರೆ ಮುಂಚೂಣಿ ನಾಯಕರ ಕೊರತೆಯನ್ನು ಜೆಡಿಎಸ್‌ ಎದುರಿಸುತ್ತಿದ್ದು, ಹೊಸ ನಾಯಕತ್ವವನ್ನು ಪಕ್ಷಕ್ಕೆ ತಂದರಷ್ಟೇ ನಿರೀಕ್ಷಿತ ಯಶಸ್ಸು ಸಿಗಬಹುದು.

ಕಾಂಗ್ರೆಸ್ ಸರ್ಕಾರದ ವೈಫಲ್ಯ ಮತ್ತು ಆಡಳಿತ ವಿರೋಧಿ ಅಲೆಗಳು ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ಗೆ ವರವಾಗಬಹುದು. ಆದರೆ, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದರೆ ಒಕ್ಕಲಿಗ ಮತಗಳು ಜೆಡಿಎಸ್‌ ಪಾಲಾಗದೇ ಕಾಂಗ್ರೆಸ್‌ ತೆಕ್ಕೆಯಲ್ಲಿಯೇ ಉಳಿಯುವ ಸಾಧ್ಯತೆಯೂ ಇದೆ.

ಬಲಿಷ್ಠ ನಾಯಕತ್ವ, ಅಹಿಂದ ಮತ ಬೆಂಬಲ ಇರುವ ಕಾಂಗ್ರೆಸ್‌ ಅನ್ನು 2028ರ ಚುನಾವಣೆಯಲ್ಲಿ ಮಣಿಸಬೇಕಾದರೆ ಬಿಜೆಪಿಗೆ ಜೆಡಿಎಸ್‌ನ ಊರುಗೋಲು ಅತ್ಯವಶ್ಯ. ಅದು ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ಗೊತ್ತಿರುವ ಸಂಗತಿ. ಹೀಗಾಗಿ, ಜೆಡಿಎಸ್‌ ಸಖ್ಯ ತೊರೆಯುವ ಸಾಧ್ಯತೆ ಕಡಿಮೆ. ಆಡಳಿತರೂಢ ಕಾಂಗ್ರೆಸ್‌ನ ಪರಿಸ್ಥಿತಿ, ಆಡಳಿತ ವೈಖರಿ ಹೀಗೆಯೇ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಈಗಿರುವ ಅಧಿಕೃತ ಸಂಖ್ಯೆಯಾದ 135ರಲ್ಲಿ (ಎಚ್.ವೈ. ಮೇಟಿ ಹಾಗೂ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ಎರಡು ಸ್ಥಾನಕ್ಕೆ ಚುನಾವಣೆ ನಡೆಯಬೇಕಾಗಿದೆ) ಅರ್ಧಕ್ಕೆ ಇಳಿಯುವ ಅಪಾಯವೇ ಹೆಚ್ಚು. ಹಾಗಾದಲ್ಲಿ ಮಾತ್ರ ವಿರೋಧ ಪಕ್ಷಗಳ ಸದ್ಯದ ಮೈತ್ರಿ ಕೂಟ ಅಧಿಕಾರದ ಹೊಸ್ತಿಲಿಗೆ ಬಂದು ನಿಲ್ಲುವುದು ಸಾಧ್ಯ.

ವಿಧಾನಸಭೆ ಚುನಾವಣೆಯೊಳಗೆ ಬೆಂಗಳೂರಿನ ಐದು ಪಾಲಿಕೆ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಬರಲಿವೆ. ಅವುಗಳಲ್ಲಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದರೆ ತನ್ನ ತಳವೇ ಕುಸಿದು ಹೋಗುವ ಆತಂಕದಲ್ಲಿ ಜೆಡಿಎಸ್ ಇದೆ. ಆ ಚುನಾವಣೆಗಳ ಹೊಂದಾಣಿಕೆ, ಸೋಲು–ಗೆಲುವುಗಳು ವಿಧಾನಸಭೆ ಚುನಾವಣೆಯ ಮೈತ್ರಿಯನ್ನು ನಿರ್ಧರಿಸಲಿವೆ. ಮತ್ತೊಂದು ಬಾರಿ ಮುಖ್ಯಮಂತ್ರಿಯಾಗಲೇಬೇಕೆಂಬ ತವಕದಲ್ಲಿರುವ ಕುಮಾರಸ್ವಾಮಿ ಹಾಗೂ ಮಗ ಮುಖ್ಯಮಂತ್ರಿಯಾಗಬೇಕೆಂಬ ಕನಸಿನಲ್ಲಿರುವ ದೇವೇಗೌಡರು, ವಿಧಾನಸಭೆ ಚುನಾವಣೆಯ ಸೀಟು ಹೊಂದಾಣಿಕೆ ವೇಳೆ, ಹೆಚ್ಚಿನ ಸ್ಥಾನಕ್ಕೆ ಪಟ್ಟು ಹಿಡಿಯುವ ಸಂಭವವೇ ಹೆಚ್ಚಾಗಿದೆ. ಆ ವೇಳೆ, ಮೈತ್ರಿಯ ಮುಂದುವರಿಕೆಯ ಹಣೆಬರಹ ನಿರ್ಧಾರವಾಗಲಿದೆ.

ಮೈತ್ರಿಕೂಟ ಜಂಟಿಯಾಗಿ ಚುನಾವಣೆ ಎದುರಿಸಿ ಒಂದು ವೇಳೆ, ಬಿಜೆಪಿಯೇ ಹೆಚ್ಚು ಸ್ಥಾನಗಳಲ್ಲಿ ಗೆದ್ದರೆ ಮುಖ್ಯಮಂತ್ರಿ ಪಟ್ಟಕ್ಕಾಗಿ ಆ ಪಕ್ಷದ ನಾಯಕರು ಸಹಜವಾಗಿಯೇ ಪಟ್ಟು ಹಿಡಿಯಬಹುದು. ಆದರೆ, ನರೇಂದ್ರ ಮೋದಿ ಹಾಗೂ ಅಮಿತ್ ಶಾ ಮಧ್ಯಪ್ರವೇಶಿಸಿ ‘ಮೈತ್ರಿ ಧರ್ಮ’ ಪಾಲನೆ ಅನುಸಾರ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿ ಎಂದು ಬಯಸಿದರೆ ಆಗಷ್ಟೇ ದೇವೇಗೌಡರ ಕನಸು ಸಾಕಾರಗೊಳ್ಳಲಿದೆ. ಅದು ಈಡೇರಬೇಕಾದರೆ ಜೆಡಿಎಸ್‌ ಕನಿಷ್ಠ 40ರ ಆಸುಪಾಸಿನ ಕ್ಷೇತ್ರಗಳನ್ನಾದರೂ ಗೆಲ್ಲಲೇಬೇಕು.  ಹಾಗಾದರೂ, ಅದೇನೂ ಐದು ವರ್ಷ ಪರ್ಯಂತ ನಿಶ್ಚಿತ ಅಧಿಕಾರ ಎಂದು ಭಾವಿಸಬೇಕಾಗಿಲ್ಲ. ಅನ್ಯ ರಾಜ್ಯಗಳಲ್ಲಿ ಬಿಜೆಪಿ ನಡೆಸಿದ ಪ್ರಯೋಗ ನೋಡಿದರೆ, 2028ರ ನಂತರದ ಮುಂದಿನ ಐದು ವರ್ಷ ಏನೂ ಆಗಬಹುದು. ಇವೆಲ್ಲವೂ ಖಚಿತವಾಗಬೇಕಾದರೆ ಇನ್ನೂ ಸುಮಾರು ಎರಡುಕಾಲು ವರ್ಷ ಕಾಯಲೇಬೇಕು. ಅಷ್ಟು ಕಾಯಲು ಇಷ್ಟವಿಲ್ಲದ ನಾಯಕರು ಈಗಲೇ ಮುಖ್ಯಮಂತ್ರಿ ಪಟ್ಟಕ್ಕಾಗಿ ಟವೆಲ್ ಹಾಕುತ್ತಿರುವುದು ಮಾತ್ರ ಸೋಜಿಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.