ಹೊಸ ವರ್ಷದ ಮೊದಲ ತಿಂಗಳಲ್ಲಿ ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರವು 20 ತಿಂಗಳುಗಳನ್ನು ಪೂರ್ಣಗೊಳಿಸಲಿದೆ. ಅಂದರೆ, ಒಟ್ಟು 60 ತಿಂಗಳುಗಳ (5 ವರ್ಷಗಳು) ಆಡಳಿತ ಅವಧಿಯ ಮೂರನೆಯ ಒಂದರಷ್ಟು ಅವಧಿ ಪೂರ್ಣಗೊಂಡಂತಾಗುತ್ತದೆ. ಸರ್ಕಾರದ ಮೌಲ್ಯಮಾಪನದಲ್ಲಿ ಮುಂದಿನ 20 ತಿಂಗಳುಗಳು ಮಹತ್ವದ ಹಂತವಾಗಲಿದೆ. ಬೇರೆ ಬೇರೆ ಪಕ್ಷಗಳ ನೇತೃತ್ವದ ಈ ಹಿಂದಿನ ಸರ್ಕಾರಗಳು ತಮ್ಮ ಅವಧಿಯ ಎರಡನೆಯ 20 ತಿಂಗಳುಗಳಲ್ಲಿ ಎಡವಿದ್ದು ಕಾಣುತ್ತದೆ. ಆಡಳಿತದಲ್ಲಿ ಲಯ ತಪ್ಪಿದ್ದು ಹಾಗೂ ಆದ್ಯತೆಗಳ ಕಡೆ ಗಮನ ಇಲ್ಲದಿದ್ದುದು ಗೋಚರಿಸುತ್ತದೆ. ಈ ಹಂತದಲ್ಲಿನ ವೈಫಲ್ಯಗಳಿಂದ ಚೇತರಿಸಿಕೊಳ್ಳಲು ಆ ಸರ್ಕಾರಗಳಿಗೆ ಬಹಳ ಕಷ್ಟವಾಯಿತು. 1985ರ ನಂತರ ಕರ್ನಾಟಕದಲ್ಲಿ ಯಾವ ಪಕ್ಷಕ್ಕೂ ಸತತ ಎರಡನೆಯ ಅವಧಿಗೆ ಬಹುಮತ ಪಡೆದುಕೊಳ್ಳಲು ಆಗದೇ ಇದ್ದುದಕ್ಕೆ ಕಾರಣ ಏನು ಎಂಬುದನ್ನು ಇದು ವಿವರಿಸುತ್ತದೆ.
ಮೂರು ತತ್ವಗಳು ರಾಜ್ಯ ಸರ್ಕಾರವೊಂದರ ಯಶಸ್ಸನ್ನು ವ್ಯಾಖ್ಯಾನಿಸುತ್ತವೆ, ತೀರ್ಮಾನಿಸುತ್ತವೆ. ಆಡಳಿತದಲ್ಲಿ ದಕ್ಷತೆ, ಆಡಳಿತಾರೂಢ ಪಕ್ಷದಲ್ಲಿನ ಒಗ್ಗಟ್ಟು ಮತ್ತು ಸಮಾಜದಲ್ಲಿ ಸಾಮರಸ್ಯವು ಆ ಮೂರು ತತ್ತ್ವಗಳು. ಹಿಂದಿನ ಸರ್ಕಾರಗಳ ಕೆಲಸಗಳನ್ನು ಪರಿಶೀಲಿಸಿದಾಗ ಈ ಮೂರು ತತ್ವಗಳನ್ನು ಅಥವಾ ಮೂರರ ಪೈಕಿ ಕನಿಷ್ಠ ಎರಡನ್ನು ಪಾಲಿಸುವಲ್ಲಿನ ವೈಫಲ್ಯವು ಕಾಣುತ್ತದೆ. ಈಗಿನ ಸಂದರ್ಭದಲ್ಲಿ ಈ ಮೂರೂ ತತ್ವಗಳ ವಿಶ್ಲೇಷಣೆ ಆಗಬೇಕಿದೆ.
ಪಕ್ಷವೊಂದರ ನೇತೃತ್ವದ ಸರ್ಕಾರವು ಆಡಳಿತದ ಪ್ರಮುಖ ಸೂಚಕಗಳಲ್ಲಿ ತಕ್ಕಮಟ್ಟಿಗೆ ಚೆನ್ನಾಗಿ ಸಾಧನೆ ತೋರಿದೆ ಎಂದು ಮತದಾರರು ಭಾವಿಸಿದಾಗ, ಆ ಪಕ್ಷವು ಅಧಿಕಾರಕ್ಕೆ ಮರಳಿದೆ ಎಂಬುದಕ್ಕೆ ದೇಶದಾದ್ಯಂತ ಹಲವಾರು ನಿದರ್ಶನಗಳು ಸಿಗುತ್ತವೆ. 2024ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟದಲ್ಲಿ ಕಾಂಗ್ರೆಸ್ ಪಕ್ಷವು 9 ಸ್ಥಾನಗಳನ್ನು ಗೆದ್ದುಕೊಂಡಿದ್ದರ ಹಿಂದೆ, ಇಲ್ಲಿನ ಕಾಂಗ್ರೆಸ್ ನೇತೃತ್ವದ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಜನ ಹೊಂದಿದ್ದ ಭಾವನೆ ಕೆಲಸ ಮಾಡಿತ್ತು ಎಂಬುದನ್ನು ಲೋಕಸಭಾ ಚುನಾವಣೆಯ ನಂತರ ಕರ್ನಾಟಕದಲ್ಲಿ ನಡೆದ ಲೋಕನೀತಿ ಚುನಾವಣೋತ್ತರ ಅಧ್ಯಯನವು ಕಂಡುಕೊಂಡಿದೆ. ಮಹಿಳಾ ಮತದಾರರು ಕಾಂಗ್ರೆಸ್ಸಿಗೆ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಿದ್ದು ಕೂಡ ಇದನ್ನೇ ಸೂಚಿಸುತ್ತದೆ. ವಿಧಾನಸಭೆಗೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಎಲ್ಲ ಸ್ಥಾನಗಳನ್ನು ಗೆದ್ದುಕೊಂಡಿದ್ದು, ಇತರ ಹಲವು ಮಹತ್ವದ ಅಂಶಗಳೊಂದಿಗೆ, ಅನುಷ್ಠಾನಕ್ಕೆ ಬಂದ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರು ಹೊಂದಿರುವ ಭಾವನೆಯನ್ನು ತೋರಿಸುತ್ತಿದೆ. ಅಂದರೆ, ಸಮಾಜದ ವಿವಿಧ ವರ್ಗಗಳ ಆಕಾಂಕ್ಷೆಗಳಿಗೆ ಸ್ಪಂದಿಸುವುದಕ್ಕೆ ಆದ್ಯತೆ ನೀಡುವ ಆಡಳಿತವು ಯಶಸ್ಸು ಪಡೆಯುವುದು ಖಚಿತ.
ಸರ್ಕಾರ ಹಾಗೂ ಅದರ ನಾಯಕತ್ವದ ಸ್ಥಾನಗಳಲ್ಲಿರುವವರು ಹಗರಣಗಳ ಆರೋಪಗಳಿಗೆ ಗುರಿಯಾದಾಗ, ವಿವಾದಗಳಿಗೆ ತುತ್ತಾದಾಗ ಜನರ ಗಮನವು ಅತ್ತ ಸಾಗುತ್ತದೆ. ಇದು ಆಡಳಿತದಲ್ಲಿ ದಕ್ಷತೆಗೆ ಗಮನ ಕೊಡುವುದರ ಜೊತೆ ನಂಟು ಹೊಂದಿದೆ. ಹಿಂದೆಲ್ಲ ಇದು ಆಡಳಿತದ ಮೇಲೆ ಇರಬೇಕಿದ್ದ ಗಮನವು ಸರಣಿ ವಿವಾದಗಳಿಂದ ಸೃಷ್ಟಿಯಾಗುವ ಬೆಂಕಿಯನ್ನು ಆರಿಸುವುದರ ಕಡೆ ಸಾಗುವಂತೆ ಮಾಡಿದೆ. ಕರ್ನಾಟಕದಲ್ಲಿನ ಈಗಿನ ಸರ್ಕಾರವು ಇದೇ ಬಗೆಯ ಸವಾಲನ್ನು ಎದುರಿಸುತ್ತಿದೆ. ಅಧಿಕಾರ ದುರ್ಬಳಕೆಗೆ ಸಂಬಂಧಿಸಿದ ಆರೋಪಗಳಿಂದ ಹೊರಬರಲು ಮುಂದಿನ 20 ತಿಂಗಳುಗಳ ಅವಧಿಯಲ್ಲಿ ಸಾಧ್ಯವಾಗುತ್ತದೆಯೇ ಅಥವಾ ಈ ಆರೋಪಕ್ಕೆ ಸಂಬಂಧಿಸಿದ ಬೆಳವಣಿಗೆಗಳು ಸರ್ಕಾರದ ಹೆಸರನ್ನು ಇನ್ನಷ್ಟು ಹಾಳುಮಾಡುತ್ತವೆಯೇ?
ಹಿಂದೆ ಆಡಳಿತದ ಚುಕ್ಕಾಣಿ ಹಿಡಿದಿದ್ದ ಪಕ್ಷಗಳ ಬಂಡಿಯು ಹಳಿತಪ್ಪುವಂತೆ ಮಾಡಿದ ಬಹಳ ಮಹತ್ವದ ಇನ್ನೊಂದು ಅಂಶವಿದೆ. ಅದು ಆಡಳಿತಾರೂಢ ಪಕ್ಷದಲ್ಲಿನ ಒಗ್ಗಟ್ಟು. ಪಕ್ಷದಲ್ಲಿನ ಒಗ್ಗಟ್ಟಿನ ಆಧಾರದಲ್ಲಿ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ ನಿದರ್ಶನಗಳು ಇವೆ. ಆಡಳಿತಾರೂಢ ಪಕ್ಷದಲ್ಲಿ ಒಳಜಗಳವು ನಿರಂತರವಾಗಿ ನಡೆದಿದ್ದರೆ ಮತದಾರರು ಆ ಪಕ್ಷವನ್ನು ಅಧಿಕಾರದಿಂದ ಇಳಿಸಿದ್ದಿದೆ. 2013ರ {2023} ವಿಧಾನಸಭಾ ಚುನಾವಣೆಯನ್ನು ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಒಗ್ಗಟ್ಟಿನಿಂದ ಎದುರಿಸಿತ್ತು. ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಪ್ರಶ್ನೆಯನ್ನು ಬದಿಗೆ ಇರಿಸಿದ್ದ ಪಕ್ಷವು, ಅಧಿಕಾರಕ್ಕೆ ಬರುವುದು ಮೊದಲು, ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಯನ್ನು ಆಮೇಲೆ ಎತ್ತಿಕೊಳ್ಳುವುದು ಎನ್ನುವ ಸೂತ್ರವನ್ನು ಪಾಲಿಸಿತ್ತು. ಆಗ ಆಡಳಿತದ ಚುಕ್ಕಾಣಿ ಹಿಡಿದಿದ್ದ ಪಕ್ಷವಾದ ಬಿಜೆಪಿಯಲ್ಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಒಗ್ಗಟ್ಟು ಇಲ್ಲದಿದ್ದುದು ಬಹಿರಂಗವಾಗಿ ಕಾಣುತ್ತಿತ್ತು.
ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಕಾಂಗ್ರೆಸ್ ಪಕ್ಷವು, ಇಬ್ಬರು ನಾಯಕರ ನಡುವೆ ಸಹಮತವನ್ನು ಮೂಡಿಸುವ ಮೂಲಕ ನಾಯಕತ್ವದ ವಿಷಯವನ್ನು ಇತ್ಯರ್ಥಪಡಿಸಿಕೊಂಡಿತು. ಆದರೆ ಆಂತರಿಕ ಭಿನ್ನಮತವು ಕಾಲಕಾಲಕ್ಕೆ ಬಹಿರಂಗವಾಗುತ್ತಿದೆ. ನಾಯಕರ ಬೆಂಬಲಿಗರ ನಡುವಿನ ಮುಸುಕಿನ ಗುದ್ದಾಟವು ಎದ್ದುಕಾಣುವಂತೆ ಇದೆ. ಆಂತರಿಕ ಕಚ್ಚಾಟಕ್ಕೆ ಅಂತ್ಯ ಹೇಳುವುದಕ್ಕೆ ಪಕ್ಷದ ಹೈಕಮಾಂಡ್ ಆಗಾಗ ಮಧ್ಯಪ್ರವೇಶ ಮಾಡಬೇಕಾಗಿ ಬಂದಿದೆ. ಆದರೆ, ರಾಜ್ಯದ ಬಿಜೆಪಿ ಘಟಕದಲ್ಲಿ ಕೂಡ ಆಂತರಿಕ ಭಿನ್ನಮತವು ತೀವ್ರವಾಗಿರುವುದು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ಸಿಗೆ ಅನುಕೂಲಕರವಾಗಿ ಒದಗಿಬಂದಿದೆ.
ಮುಂದಿನ 20 ತಿಂಗಳುಗಳ ಅವಧಿಯು ಆಡಳಿತಾರೂಢ ಪಕ್ಷಕ್ಕೆ ಹಾಗೂ ಪ್ರಮುಖ ವಿರೋಧ ಪಕ್ಷಕ್ಕೆ ಸಮಾನವಾಗಿ ಮಹತ್ವದ್ದಾಗಿರುತ್ತದೆ. ಆಂತರಿಕ ಕಚ್ಚಾಟವನ್ನು ಹತ್ತಿಕ್ಕಿ, ತನ್ನ ಎದುರಾಳಿ ಪಕ್ಷಕ್ಕೆ ಒಗ್ಗಟ್ಟಿನಿಂದ ಸವಾಲು ಹಾಕಲು ಯಾರಿಗೆ ಸಾಧ್ಯವಾಗುತ್ತದೆ ಎಂಬುದು ಬಹಳ ಮುಖ್ಯವಾಗುತ್ತದೆ. ಪಕ್ಷಗಳೊಳಗಿನ ಆಂತರಿಕ ಕಚ್ಚಾಟವು ನಿರಂತರವಾಗಿ ಮುಂದುವರಿದರೆ ಪಕ್ಷಕ್ಕೆ ಹಿನ್ನಡೆ ಆಗುತ್ತದೆ ಎಂಬುದನ್ನು ಹಿಂದಿನ ಅನುಭವ ಹೇಳುತ್ತದೆ. ನಾಯಕತ್ವದ ಮಟ್ಟದಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಮಹತ್ವದ್ದಾಗುತ್ತದೆ. ಹಾಗೆಯೇ, ನಾಯಕತ್ವದ ಸ್ಥಾನಗಳಲ್ಲಿ ಇರುವವರು ನೀತಿಗಳಲ್ಲಿ ಮುಂದುವರಿಕೆ ಇರುತ್ತದೆ ಎಂಬುದನ್ನು ತೋರಿಸಿಕೊಡಬೇಕಾಗುತ್ತದೆ.
ಸಮಾಜದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕಿರುವುದು ಕೊನೆಯ ತತ್ವ. ಸಾಮರಸ್ಯವು ಹಲವು ಅಂಶಗಳ ಕಾರಣದಿಂದಾಗಿ ಸಾಧ್ಯವಾಗುವಂಥದ್ದು. ಕಾನೂನು ಮತ್ತು ಸುವ್ಯವಸ್ಥೆ, ಮಹಿಳೆಯರ ಸುರಕ್ಷತೆ, ಸಮಾಜದಲ್ಲಿ ಧಾರ್ಮಿಕ ಸಾಮರಸ್ಯ, ಸ್ಥಳೀಯ ಮಟ್ಟದಲ್ಲಿ ವಿವಿಧ ಜಾತಿ ಗುಂಪುಗಳ ನಡುವೆ ಸ್ನೇಹಮಯ ವಾತಾವರಣ ಸಾಧ್ಯವಾಗುವುದು ಹಾಗೂ ವಿವಿಧ ಬಗೆಯ ಸಾಮಾಜಿಕ ಒಡಕುಗಳನ್ನು ಮತ್ತು ಕಹಿಗಳನ್ನು ನಿಯಂತ್ರಣದಲ್ಲಿ ಇರುಸುವುದರ ಜೊತೆ ಸಾಮಾಜಿಕ ಸಾಮರಸ್ಯವು ನಂಟು ಹೊಂದಿದೆ. ಸಾಮಾಜಿಕ ಸಾಮರಸ್ಯ ಸಾಧ್ಯವಾಗಬೇಕು ಎಂದಾದರೆ ಆಡಳಿತದ ಚುಕ್ಕಾಣಿ ಹಿಡಿದಿರುವ ಪಕ್ಷವು ಒಂದೆ ಹೆಜ್ಜೆ ಮುಂದಕ್ಕೆ ಬಂದು ಕೆಲಸ ಮಾಡಬೇಕಾಗುತ್ತದೆ. ಸಮಾಜದ ವಿವಿಧ ಪಾಲುದಾರರ ನಡುವೆ ವಿಶ್ವಾಸ ಮೂಡಿಸುವ ಕೆಲಸವನ್ನು ಮಾಡಬೇಕಾಗುತ್ತದೆ. ಆ ಪಕ್ಷದ ನಾಯಕರು ಮುತ್ಸದ್ದಿಗಳಂತೆ ವರ್ತಿಸಬೇಕಾಗುತ್ತದೆ.
ಮುಂದಿನ 20 ತಿಂಗಳುಗಳಲ್ಲಿ ಈ ಎಲ್ಲ ಗುಣಗಳು ಕಾಣುತ್ತವೆಯೇ ಎಂಬುದನ್ನು ಮತದಾರರು ಗಮನಿಸಬಹುದು. ಈ ಕೆಲಸಗಳಲ್ಲಿ ಲೋಪ ಕಂಡುಬಂದರೆ ಸಾರ್ವಜನಿಕರ ವಿಶ್ವಾಸಕ್ಕೆ ಧಕ್ಕೆ ಉಂಟಾಗಬಹುದು. ಕೊನೆಯಲ್ಲಿ, ಯಶಸ್ಸಿನ ಮಂತ್ರದ ಕಡೆ ಮತ್ತೊಮ್ಮೆ ಗಮನಹರಿಸಬೇಕು: ಆಡಳಿತದಲ್ಲಿ ದಕ್ಷತೆ, ಆಡಳಿತಾರೂಢ ಪಕ್ಷದಲ್ಲಿನ ಒಗ್ಗಟ್ಟು ಮತ್ತು ಸಮಾಜದಲ್ಲಿ ಸಾಮರಸ್ಯ ಆ ಮಂತ್ರ. ಈ ದಿಸೆಯಲ್ಲಿ ಮುಂದಿನ 20 ತಿಂಗಳು ಬಹಳ ಮಹತ್ವದ್ದಾಗಿರುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.