ADVERTISEMENT

ಸೀಮೋಲ್ಲಂಘನ | ಪಾಕಿಸ್ತಾನದ ದಿವಾಳಿ ಸನ್ನಿಹಿತವೇ?

ನೆರೆಯ ಶ್ರೀಲಂಕಾ ಮತ್ತು ಪಾಕಿಸ್ತಾನದ ಸದ್ಯದ ಪರಿಸ್ಥಿತಿಯಲ್ಲಿ ನಮಗೂ ಪಾಠವಿದೆ

ಸುಧೀಂದ್ರ ಬುಧ್ಯ
Published 17 ಜನವರಿ 2023, 19:32 IST
Last Updated 17 ಜನವರಿ 2023, 19:32 IST
   

ಪಾಕಿಸ್ತಾನದ ಪ್ರಧಾನಿ ಶಹಬಾಜ್‌ ಷರೀಫ್ ಅವರ ನಸೀಬು ಸರಿ ಇದ್ದಂತಿಲ್ಲ. ಹಿಂದಿನ ಏಪ್ರಿಲ್ ತಿಂಗಳಿನಲ್ಲಿ ಪಾಕಿಸ್ತಾನದ ರಾಜಕೀಯ ವಲಯದಲ್ಲಿ ಕ್ಷಿಪ್ರ ನಾಟಕೀಯ ಬೆಳವಣಿಗೆಗಳು ನಡೆದು, ಇಮ್ರಾನ್ ಖಾನ್ ಪ್ರಧಾನಿ ಪಟ್ಟದಿಂದ ಕೆಳಗಿಳಿದು ಶಹಬಾಜ್ ಷರೀಫ್‌ ಅವರಿಗೆ ದಾರಿ ಮಾಡಿಕೊಟ್ಟಿದ್ದೇನೋ ಖರೆ. ಆದರೆ ಮಾಜಿ ಕ್ರಿಕೆಟಿಗ, ವೇಗದ ಬೌಲರ್ ಇಮ್ರಾನ್ ಖಾನ್ ರಾಜಕೀಯ ವಾಗಿ ಶಹಬಾಜ್‌ ಅವರತ್ತ ರಭಸದಿಂದ ಚೆಂಡನ್ನು ತೂರಿಬಿಡುತ್ತಲೇ ಬಂದರು.

ಅವೆಲ್ಲವೂ ಒಂದು ಹಂತಕ್ಕೆ ಮುಗಿಯಿತು ಎನ್ನುವ ಷ್ಟರಲ್ಲಿ ಅಪ್ಪಳಿಸಿದ ಪ್ರಕೃತಿ ವಿಕೋಪವು ಕೈಗೆ ಬರಬೇಕಿದ್ದ ಬೆಳೆಯನ್ನು ನುಂಗಿಹಾಕಿತು. ಆಹಾರದ ಅಭಾವ ಕಾಡ ತೊಡಗಿತು. ಎಷ್ಟರಮಟ್ಟಿಗೆ ಎಂದರೆ, ಇದೀಗ ಅಲ್ಲಿನ ಬಡವರು ಒಂದಿಷ್ಟು ಗೋಧಿ ಸಿಕ್ಕರೆ ಸಾಕು, ಪಾವು ಬೇಳೆ ಸಿಕ್ಕರೆ ನಾಲ್ಕು ದಿನ ಬದುಕು ನಡೆದೀತು ಎಂದು ಕಾದು ನಿಂತಿದ್ದಾರೆ. ಗೋಧಿ ಮೂಟೆಗಳನ್ನು ಹೊತ್ತ ಸರ್ಕಾರಿ ವಾಹನ ಬರುತ್ತಿದ್ದಂತೆಯೇ ಅದಕ್ಕೆ ಮುತ್ತಿಗೆ ಹಾಕು ತ್ತಿದ್ದಾರೆ. ಒಂದು ಮೂಟೆಗೆ ಹತ್ತಾರು ಕೈಗಳು ಸೇರಿ ಜಟಾಪಟಿ ನಡೆಯುತ್ತಿರುವ ಚಿತ್ರಗಳು ಪ್ರಕಟವಾಗುತ್ತಿವೆ. ಪ್ರಧಾನಿ ಷರೀಫ್ ಮತ್ತು ಸೇನಾ ಮುಖ್ಯಸ್ಥ ಸೈಯದ್ ಮುನೀರ್ ಗೋಣು ಬಗ್ಗಿಸಿ ಸಹಾಯಕ್ಕಾಗಿ ಇಸ್ಲಾಮಿಕ್ ರಾಷ್ಟ್ರಗಳ ಕದ ಬಡಿಯುತ್ತಿದ್ದಾರೆ.

ಹಾಗಂತ ಪಾಕಿಸ್ತಾನ ಆರ್ಥಿಕವಾಗಿ ದುಃಸ್ಥಿತಿಗೆ ತಲುಪಿರುವುದು ಇದು ಮೊದಲೇನಲ್ಲ. ಈ ಎಪ್ಪತ್ತೈದು ವರ್ಷಗಳಲ್ಲಿ ಅದು ಇತರ ದೇಶಗಳ ಸಹಾಯಧನಕ್ಕಾಗಿ ನಾಲ್ಕಾರು ಬಾರಿ ಕೈವೊಡ್ಡಿ ನಿಂತಿದೆ. ದಿವಾಳಿ ಅಂಚಿಗೆ ಹೋಗಿದ್ದೂ ಇದೆ. ಸೌದಿ ಅರೇಬಿಯಾ ಒಂದಿಷ್ಟು ವರ್ಷಗಳ ಕಾಲ ಪಾಕಿಸ್ತಾನದ ಕಿಸೆ ಬರಿದಾಗದಂತೆ ನೋಡಿಕೊಂಡಿತು. ತರಬೇತಿ ಹೊಂದಿದ ಸೇನೆಯ ಜೊತೆಗೆ ಅಣ್ವಸ್ತ್ರವನ್ನು ಹೊಂದಿರುವ ಪಾಕಿಸ್ತಾನ ತನ್ನ ರಕ್ಷಣೆಗೆ ಬೇಕಾದೀತು ಎಂಬ ಲೆಕ್ಕಾಚಾರದ ಜೊತೆಗೆ, ಇಸ್ಲಾಮಿಕ್ ರಾಷ್ಟ್ರ ಎಂಬ ಮತೀಯ ಮಮಕಾರದಿಂದ ಪಾಕಿಸ್ತಾನದ ಆರ್ಥಿಕತೆ ಕುಸಿದಾಗಲೆಲ್ಲಾ ಆಸರೆಗೆ ಸೌದಿ ಅರೇಬಿಯಾ ತನ್ನ ಭುಜ ಒಡ್ಡಿತ್ತು.

ADVERTISEMENT

ಯಾವಾಗ ಅಮೆರಿಕದ ಅವಳಿ ಕಟ್ಟಡದ ಮೇಲೆ ದಾಳಿ ನಡೆದು ಆ ದೇಶ ‘ಭಯೋತ್ಪಾದನೆಯ ವಿರುದ್ಧ ಸಮರ’ ಘೋಷಿಸಿ ಅಫ್ಗಾನಿಸ್ತಾನಕ್ಕೆ ಬಂದಿಳಿಯಿತೋ, ಆಗ ಪಾಕಿಸ್ತಾನಕ್ಕೆ ಡಾಲರ್ ಥೈಲಿ ಕಾಣಿಸಿತು. ಪಶ್ಚಿಮ ದೇಶಗಳಿಂದ ಪಡೆದಿದ್ದ ಸಾಲ ಮನ್ನಾ ಆಯಿತು. ಬಿನ್ ಲಾಡೆನ್‌ನನ್ನು ತನ್ನ ಒಡಲಿನಲ್ಲಿ ಪೋಷಿಸುತ್ತಲೇ, ಭಯೋತ್ಪಾದನೆಯ ವಿರುದ್ಧದ ಸಮರಕ್ಕೆ ಸಹಕಾರ ನೀಡುವ ನೆಪದಲ್ಲಿ ಅಮೆರಿಕದ ಡಾಲರ್ ಗಂಟನ್ನು ಪಾಕಿಸ್ತಾನ ಕರಗಿಸತೊಡಗಿತು. ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾದ ಬಳಿಕ ಪಾಕಿಸ್ತಾನದ ಈ ತಂತ್ರಕ್ಕೆ ಕಡಿವಾಣ ಬಿತ್ತು. ಅಫ್ಗಾನಿಸ್ತಾನದ ಉಸಾಬರಿ ಸಾಕು ಎಂದು ಅಮೆರಿಕ ನಿರ್ಧರಿಸಿದಾಗ ಪಾಕಿಸ್ತಾನಕ್ಕೆ ಮತ್ತೊಮ್ಮೆ ದಾರಿ ಕಾಣದಾಯಿತು.

ಹಾಗಾದರೆ ಪಾಕಿಸ್ತಾನದ ಈ ದೈನೇಸಿ ಸ್ಥಿತಿಗೆ ಕಾರಣವೇನು? ಭಾರತ ದ್ವೇಷವನ್ನು ಉಚ್ಛ್ವಾಸ ನಿಶ್ವಾಸ ಮಾಡುತ್ತಾ, ತನ್ನ ಸೇನೆಗೆ ಶಕ್ತಿ ತುಂಬುವ ಕಡೆಗೆ ಗಮನ ಕೊಟ್ಟ ಪಾಕಿಸ್ತಾನವು ನೇರ ಹಣಾಹಣಿಯಲ್ಲಿ ಹಿನ್ನಡೆಯಾದಾಗ ಭಯೋತ್ಪಾದನೆ ಎಂಬ ಅಡ್ಡದಾರಿ ಹಿಡಿಯಿತು ಮತ್ತು ತನ್ನೆಲ್ಲಾ ಶಕ್ತಿಯನ್ನು ಆ ದಿಸೆಯಲ್ಲಿ ಬಳಸಿತು. ಆರ್ಥಿಕ ಶಿಸ್ತು ರೂಢಿಸಿಕೊಳ್ಳುವುದನ್ನು, ಅಗತ್ಯ ವಸ್ತುಗಳ ವಿಷಯದಲ್ಲಿ ಸ್ವಾವಲಂಬನೆ ಸಾಧಿಸುವುದನ್ನು ಮರೆಯಿತು. ಆಮದು ಮಾಡಿಕೊಳ್ಳುವ ಉತ್ಪನ್ನಗಳ ದೇಶೀಯ ಲಭ್ಯತೆಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ಅಧಿಕಾರಕ್ಕೆ ಬಂದ ಪಕ್ಷಗಳು ಕಲ್ಯಾಣ ಯೋಜನೆಗಳ ಮೂಲಕ ಜನರ ಒಲವು ಹಿಡಿದಿಟ್ಟು ಕೊಳ್ಳಲು ಸಬ್ಸಿಡಿಗಳನ್ನು ಹೆಚ್ಚಿಸಿದವು. ಖಜಾನೆಯ ಮೇಲೆ ಹೊರೆ ಅಧಿಕಗೊಂಡಿತು.

ಈ ನಡುವೆ ಪ್ರಾಂತೀಯ ಹಿತಾಸಕ್ತಿಯ ದೃಷ್ಟಿ ಯಿಂದ ಪಾಕಿಸ್ತಾನದ ಮೂಗಿಗೆ ಚೀನಾ ತುಪ್ಪ ಸವರಿತು. ಮೂಲಸೌಕರ್ಯ ಯೋಜನೆಯ ಅಭಿವೃದ್ಧಿಗೆ ಸಾಲವನ್ನು ಮೊಗೆಮೊಗೆದು ನೀಡಿತು. ವರಮಾನ ತರದ ಸೇತುವೆಗಳು, ರೈಲ್ವೆ ಲೈನ್ ಯೋಜನೆಗಳು ಆರಂಭವಾದವು. ಅಭಿವೃದ್ಧಿಯ ಗುಂಗಿನಲ್ಲಿ ಸಾಲ ತಂದು ಈ ಯೋಜನೆಗಳನ್ನು ಆರಂಭಿಸಿದ ಪಾಕಿಸ್ತಾನ, ಇವು ಗಳಿಂದ ಗಳಿಸಬಹುದಾದ ವರಮಾನ ಎಷ್ಟು ಎಂದು ಅಂದಾಜಿಸುವ ಕೆಲಸ ಮಾಡಲಿಲ್ಲ. ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ (ಸಿಪಿಇಸಿ) ಯೋಜನೆ ಸಾಲದ ಹೊರೆಯನ್ನು ಇನ್ನಷ್ಟು ಹೆಚ್ಚಿಸಿತು. ಪಾಕಿಸ್ತಾನದ ಒಟ್ಟು ಸಾಲದ ಪೈಕಿ ಚೀನಾದಿಂದ ಪಡೆದ ಸಾಲ ಶೇಕಡ 30 ದಾಟಿತು.

ಪರಿಸ್ಥಿತಿ ಬಿಗಡಾಯಿಸಿದಾಗ ಇಮ್ರಾನ್ ಖಾನ್, ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ (ಐಎಂಎಫ್) ಪಾರುಗಾಣಿಕೆಗೆ ಕೈ ಒಡ್ಡಿದರು. ಮೊದಲ ಕಂತಿನ ಹಣ ಬಂತು. ಆದರೆ ಅದರೊಂದಿಗೆ ಕೆಲವು ಷರತ್ತುಗಳೂ ಬಂದವು. ವಿತ್ತೀಯ ಕೊರತೆಯನ್ನು ಕಡಿಮೆ ಮಾಡುವ ಕ್ರಮ ಕೈಗೊಳ್ಳಬೇಕು, ಬ್ಯಾಂಕಿಂಗ್ ಮತ್ತು ತೆರಿಗೆ ನೀತಿಗಳಲ್ಲಿ ಸುಧಾರಣೆ ತರಬೇಕು, ವಿದ್ಯುತ್ ಸಬ್ಸಿಡಿಗಳನ್ನು ಹಂತಹಂತವಾಗಿ ತೆಗೆಯಬೇಕು ಎಂಬ ಷರತ್ತನ್ನು ಐಎಂಎಫ್ ವಿಧಿಸಿತು. ಆ ಷರತ್ತುಗಳನ್ನು ಪಾಲಿಸಲು ಪಾಕಿಸ್ತಾನ ತಿಣುಕುತ್ತಿರುವಾಗಲೇ ಕೊರೊನಾದ ಹೊಡೆತ ಬಿತ್ತು.

ಪಾಕಿಸ್ತಾನದಿಂದ ರಫ್ತಾಗುವ ಸಿಮೆಂಟ್, ಜವಳಿ, ಚರ್ಮ ಮತ್ತು ಕ್ರೀಡಾ ಸಾಮಗ್ರಿಗಳಿಗೆ ಬೇಡಿಕೆ ಕುಸಿಯಿತು. ಬಹುತೇಕ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಮತ್ತು ಅನಿವಾರ್ಯವಲ್ಲದ ವಸ್ತುಗಳನ್ನು ರಫ್ತು ಮಾಡುವ ಕಾರಣದಿಂದ, ರಫ್ತು ಮತ್ತು ಆಮದಿನ ನಡುವಿನ ಅಂತರ ಹೆಚ್ಚಿತು. ಫೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ ಪಾಕಿಸ್ತಾನವನ್ನು ಕಂದುಪಟ್ಟಿಯಲ್ಲಿ ಇಟ್ಟ ಕಾರಣದಿಂದ ಆ ದೇಶವು ವಿದೇಶಿ ಹೂಡಿಕೆಯಿಂದ ವಂಚಿತವಾಯಿತು. ಹಳೆಯ ಸಾಲವನ್ನು ತೀರಿಸಲು ಹೊಸ ಸಾಲ ಮಾಡುತ್ತಾ, ಆ ಸಾಲವನ್ನು ತೀರಿಸಲು ಮತ್ತೊಂದು ಸಾಲದ ಮೂಲ ಹುಡುಕುತ್ತಾ ಸಾಲದ ಸುಳಿಗೆ ಸಿಲುಕಿತು.

ವ್ಯಾಪಾರದ ಕೊರತೆ ಮತ್ತು ಹೂಡಿಕೆಯ ಕುಸಿತದಿಂದ ವಿದೇಶಿ ವಿನಿಮಯ ಸಂಗ್ರಹ ಕರಗುತ್ತಾ ಬಂದಿತು. ವಿವಿಧ ದೇಶಗಳಿಂದ ಆಮದಾಗಿ ಬಂದರುಗಳಿಗೆ ಬಂದಿಳಿದ ಸಾಮಗ್ರಿಗಳಿಗೆ ಹಣ ಪಾವತಿಸುವುದು ಕಷ್ಟವಾಗತೊಡ ಗಿತು. ಆಹಾರದ ಅಭಾವ ಮತ್ತು ಜೀವರಕ್ಷಕ ಔಷಧಿಗಳ ಕೊರತೆ ಜನಜೀವನವನ್ನು ಕಷ್ಟಕ್ಕೆ ನೂಕಿತು. ವಿದ್ಯುತ್ ಅಭಾವ ನೀಗಿಸಲು ವ್ಯಾಪಾರ ಕೇಂದ್ರ, ಮದುವೆ ಛತ್ರ ಮತ್ತು ಹೋಟೆಲ್‌ಗಳು ರಾತ್ರಿ 10ಕ್ಕೆ ಚಟುವಟಿಕೆ ಸ್ಥಗಿತಗೊಳಿಸಬೇಕು ಎಂಬ ಆದೇಶವನ್ನು ಸರ್ಕಾರ ಹೊರಡಿಸಿತು.

ಇದೀಗ ಪ್ರಧಾನಿ ಶಹಬಾಜ್‌ ಷರೀಫ್ ಮತ್ತು ಸೇನಾ ಮುಖ್ಯಸ್ಥ ಸೈಯದ್ ಮುನೀರ್ ವಿವಿಧ ದೇಶಗಳಿಗೆ ಭೇಟಿಯಿತ್ತು, ಆರ್ಥಿಕ ಸಹಾಯ ಕೇಳುತ್ತಿದ್ದಾರೆ. ಜನವರಿ 9ರಂದು ಜಿನಿವಾದಲ್ಲಿ ವಿಶ್ವಸಂಸ್ಥೆಯ ಸಹಭಾಗಿತ್ವದಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ ಶಹಬಾಜ್ ಮತ್ತೊಮ್ಮೆ ಸಹಾಯಕ್ಕಾಗಿ ಮೊರೆಯಿಟ್ಟಿದ್ದಾರೆ. ಜರ್ಮನಿ, ಫ್ರಾನ್ಸ್, ಕೆನಡಾ, ಡೆನ್ಮಾರ್ಕ್, ಐರೋಪ್ಯ ಒಕ್ಕೂಟ, ಚೀನಾ ಸೇರಿದಂತೆ ಹಲವು ದೇಶಗಳು ಸಹಾಯ ಮಾಡುವ ಭರವಸೆ ನೀಡಿವೆ. ಆದರೆ ಪರಿಸ್ಥಿತಿ ಸುಲಭವಿಲ್ಲ. ಮಾರ್ಚ್ ಮುಗಿಯುವುದರೊಳಗೆ ಪಾಕಿಸ್ತಾನ 8.3 ಶತ ಕೋಟಿ ಡಾಲರ್ ಸಾಲವನ್ನು ಮರುಪಾವತಿಸಬೇಕಿದೆ. ಇಲ್ಲವಾದರೆ ಶ್ರೀಲಂಕಾದ ಸ್ಥಿತಿಗೆ ಪಾಕಿಸ್ತಾನ ತಲುಪಲಿದೆ.

ಹಾಗಾದರೆ ಮುಂದೇನು? ಪಾಕಿಸ್ತಾನ ಬದಲಾಗಲೇ ಬೇಕಾದ ಅನಿವಾರ್ಯಕ್ಕೆ ಸಿಲುಕಿದೆ. ಭಾರತ ದ್ವೇಷವನ್ನು ಇನ್ನಾದರೂ ತ್ಯಜಿಸಿ, ವಾಣಿಜ್ಯಿಕ ಸಂಬಂಧವನ್ನು ಭಾರತ ದೊಂದಿಗೆ ಗಟ್ಟಿ ಮಾಡಿಕೊಳ್ಳಬೇಕಿದೆ. ಮಿಲಿಟರಿ ಮತ್ತು ಭಯೋತ್ಪಾದನಾ ಚಟುವಟಿಕೆಗೆ ಹಣ ಸುರಿಯುವುದನ್ನು ನಿಲ್ಲಿಸಬೇಕಿದೆ. ಅಗತ್ಯ ವಸ್ತುಗಳನ್ನು ರಫ್ತು ಮಾಡಬಲ್ಲ ಸಾಮರ್ಥ್ಯ ಬೆಳೆಸಿಕೊಳ್ಳಬೇಕಿದೆ. ಆರ್ಥಿಕ ಶಿಸ್ತು ರೂಪಿಸಿಕೊಳ್ಳಬೇಕಿದೆ. ವಿಶ್ವಾಸಾರ್ಹತೆಯನ್ನು ಹೆಚ್ಚಿಸಿ ಕೊಂಡರಷ್ಟೇ ವಿದೇಶಿ ಬಂಡವಾಳ ಬರುತ್ತದೆ. ಆದರೆ ಚುನಾವಣೆ ಎದುರಿರುವಾಗ ಭಾರತದೊಂದಿಗೆ ಸ್ನೇಹ ಮತ್ತು ಆರ್ಥಿಕ ಶಿಸ್ತುಕ್ರಮಗಳನ್ನು ಪಾಕಿಸ್ತಾನದಿಂದ ನಿರೀಕ್ಷಿಸಲು ಸಾಧ್ಯವೇ?

ಅದಿರಲಿ, ನಮ್ಮ ನೆರೆಯ ಶ್ರೀಲಂಕಾ ಮತ್ತು ಪಾಕಿಸ್ತಾನದ ಸದ್ಯದ ಪರಿಸ್ಥಿತಿಯಲ್ಲಿ ನಮಗೂ ಪಾಠವಿದೆ. ಚುನಾವಣೆಯ ಹೊಸ್ತಿಲಿನಲ್ಲಿ ಹೊರಡುವ ಸಬ್ಸಿಡಿ ಹೆಚ್ಚಳದ, ಉಚಿತ ಕೊಡುಗೆಗಳ ಆಶ್ವಾಸನೆಗಳನ್ನು, ಅಭಿವೃದ್ಧಿಯ ವ್ಯಾಖ್ಯಾನವನ್ನು ನಾವು ಎಚ್ಚರಿಕೆಯಿಂದಲೇ ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.