ADVERTISEMENT

ಸೀಮೋಲ್ಲಂಘನ ಅಂಕಣ: ಬಿಕ್ಕಟ್ಟಿನಲ್ಲಿ ಬಯಲಾಗುವ ಮಿತ್ರ ಮತ್ತು ಶತ್ರು

ಸುಧೀಂದ್ರ ಬುಧ್ಯ ಅವರ ಲೇಖನ

ಸುಧೀಂದ್ರ ಬುಧ್ಯ
Published 5 ಮೇ 2025, 0:50 IST
Last Updated 5 ಮೇ 2025, 0:50 IST
<div class="paragraphs"><p>ಸೀಮೋಲ್ಲಂಘನ: ಬಿಕ್ಕಟ್ಟಿನಲ್ಲಿ ಬಯಲಾಗುವ ಮಿತ್ರ ಮತ್ತು ಶತ್ರು</p></div>

ಸೀಮೋಲ್ಲಂಘನ: ಬಿಕ್ಕಟ್ಟಿನಲ್ಲಿ ಬಯಲಾಗುವ ಮಿತ್ರ ಮತ್ತು ಶತ್ರು

   

ಏಪ್ರಿಲ್‌ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದನಾ ದಾಳಿಯು ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಸಹಜವಾಗಿಯೇ ಜಗತ್ತಿನ ಹಲವು ರಾಷ್ಟ್ರಗಳು ಘಟನೆಯ ಕುರಿತು ಪ್ರತಿಕ್ರಿಯಿಸಿವೆ. ಇಂತಹ ಬಿಕ್ಕಟ್ಟು ಸೃಷ್ಟಿಯಾದಾಗಲೇ ವಾಣಿಜ್ಯಿಕ ಸಂಬಂಧಗಳ ಆಚೆಗೆ, ರಾಜಕೀಯವಾಗಿ ಹಾಗೂ ವ್ಯೂಹಾತ್ಮಕವಾಗಿ ಯಾವ ದೇಶ ಯಾರ ಪರ ನಿಲ್ಲುತ್ತದೆ ಎನ್ನುವುದು ಸ್ಪಷ್ಠವಾಗುತ್ತದೆ. ಅರ್ಥಾತ್‌ ಮಿತ್ರ ರಾಷ್ಟ್ರ ಯಾವುದು, ಶತ್ರುವಿನ ಪರ ನಿಂತದ್ದು ಯಾರು, ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ವರ್ತಿಸುವ ದೇಶ ಯಾವುದು ಎನ್ನುವುದು ತಿಳಿಯುತ್ತದೆ.

ಭಯೋತ್ಪಾದನೆಯಿಂದ ಹೆಚ್ಚು ಬಾಧಿತವಾದ ಇಸ್ರೇಲ್‌ ಮರುಯೋಚನೆಗೆ ಅವಕಾಶ ನೀಡದೇ ಭಾರತವನ್ನು ಬೆಂಬಲಿಸಿ ಮಾತನಾಡಿತು. ಅಮೆರಿಕ, ಇರಾನ್‌, ರಷ್ಯಾ ಮತ್ತಿತರ ದೇಶಗಳು ಘಟನೆಯನ್ನು ಖಂಡಿಸಿ, ತಾಳ್ಮೆ ಕಳೆದುಕೊಳ್ಳಬೇಡಿ ಎಂಬ ಸಲಹೆ ಇತ್ತವು. ಯುದ್ಧದ ಕಾರ್ಮೋಡ ಕವಿಯುತ್ತಲೇ ಟರ್ಕಿಯ ವಿಮಾನಗಳು ಪಾಕಿಸ್ತಾನಕ್ಕೆ ಬಂದಿಳಿದದ್ದು ವರದಿಯಾಯಿತು. ಟರ್ಕಿಯ ಸಿ-130 ಹರ್ಕ್ಯುಲಸ್ ವಿಮಾನ ಇಂಧನ ತುಂಬಿಸಿಕೊಳ್ಳಲು ಪಾಕಿಸ್ತಾನದಲ್ಲಿ ಇಳಿಯಿತೇ ಹೊರತು ಶಸ್ತ್ರಾಸ್ತ್ರಗಳನ್ನು ಹೊತ್ತುತಂದಿದ್ದಲ್ಲ ಎಂದು ಟರ್ಕಿ ಹೇಳಿತು. ಅಜೆರ್ಬೈಜಾನ್ ಬಹಿರಂಗವಾಗಿ ಪಾಕ್‌ ಪರ ಮಾತನಾಡಿದರೆ, ಚೀನಾ ಸುತ್ತಿಬಳಸಿ ಪರಿಸ್ಥಿತಿ ತಿಳಿಗೊಳಿಸಿ ಎಂದಿತು. ಅಲ್ಲಿಗೆ ಒಂದು ಸ್ಪಷ್ಟ ಚಿತ್ರಣ ಗೋಚರಿಸಿತು.

ADVERTISEMENT

ಅಷ್ಟಕ್ಕೂ ಟರ್ಕಿ ಕಾಶ್ಮೀರದ ಕುರಿತು ಮಾತನಾಡಿದ್ದು, ಪಾಕಿಸ್ತಾನದ ಬೆಂಬಲಕ್ಕೆ ನಿಂತದ್ದು ಇದೇ ಮೊದಲೇನಲ್ಲ. ವಿಶ್ವಸಂಸ್ಥೆಯ /ಸಾಮಾನ್ಯ ಅಧಿವೇಶನಗಳಲ್ಲಿ// ಟರ್ಕಿಯ ಅಧ್ಯಕ್ಷ ಎರ್ಡೊಗನ್‌ ಮಾತಿಗೆ ನಿಂತಾಗಲೆಲ್ಲಾ ಕಾಶ್ಮೀರದ ಬಿಕ್ಕಟ್ಟಿನ ಕುರಿತು, ವಿಶ್ವಸಂಸ್ಥೆ ಆ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳದ ಕುರಿತು ಮಾತನಾಡಿದ್ದಾರೆ. ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ದೂರಿದ್ದಾರೆ.

ಸಂವಿಧಾನದ 370ನೇ ವಿಧಿಯಡಿ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು 2019ರಲ್ಲಿ ರದ್ದುಮಾಡಿದಾಗ, ಸೌದಿ ಅರೇಬಿಯಾ ಸೇರಿದಂತೆ ಅನೇಕ ಮುಸ್ಲಿಂ ರಾಷ್ಟ್ರಗಳು, ಇದು ಭಾರತದ ಆಂತರಿಕ ವಿಚಾರ ಎಂದು ಪ್ರತಿಕ್ರಿಯಿಸಿದರೂ, ಟರ್ಕಿ ಮಾತ್ರ ಭಾರತದ ನಿಲುವನ್ನು ಖಂಡಿಸಿ ಪಾಕಿಸ್ತಾನದ ಪರ ಮಾತನಾಡಿತ್ತು. ಅದಕ್ಕೆ ಪ್ರತಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನಿಗದಿಯಾಗಿದ್ದ ತಮ್ಮ ಟರ್ಕಿ ಭೇಟಿಯನ್ನು ರದ್ದು ಮಾಡಿದರು. ಟರ್ಕಿ ಜೊತೆಗಿನ ಹಡಗು ನಿರ್ಮಾಣ ಯೋಜನೆಯನ್ನು ಕೈಬಿಡಲಾಯಿತು.

ಇದೇ ವರ್ಷ ಫೆಬ್ರವರಿ 12-13ರಂದು ಟರ್ಕಿಯ ಅಧ್ಯಕ್ಷ ಎರ್ಡೊಗನ್‌ ಪಾಕಿಸ್ತಾನಕ್ಕೆ ಭೇಟಿಯಿತ್ತಿದ್ದರು. ಆ ಸಮಯದಲ್ಲಿ ‘ಕಾಶ್ಮೀರದ ಸಮಸ್ಯೆಯನ್ನು ವಿಶ್ವಸಂಸ್ಥೆಯ ಮೂಲಕ ಮತ್ತು ಕಾಶ್ಮೀರದ ಜನರ ಇಚ್ಛೆಯನ್ನು ಪರಿಗಣಿಸಿ ಬಗೆಹರಿಸಬೇಕು. ಕಾಶ್ಮೀರದ ಸಹೋದರರ ಪರವಾಗಿ ಟರ್ಕಿ ಎಂದಿಗೂ ನಿಲ್ಲುತ್ತದೆ’ ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಭಾರತ ‘ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಬೇರೆ ಯಾವುದೇ ದೇಶಕ್ಕೆ ಇದರ ಬಗ್ಗೆ ಹೇಳಿಕೆ ನೀಡಲು ಯಾವುದೇ ಅರ್ಹತೆ ಇಲ್ಲ’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿತ್ತು.

ಅಷ್ಟಕ್ಕೂ, ಪಾಕಿಸ್ತಾನವನ್ನು ಟರ್ಕಿ ಬೆಂಬಲಿಸಲು ಕಾರಣಗಳಿವೆಯೇ? ಟರ್ಕಿಯ ಇಸ್ತಾಂಬುಲ್‌ ನಗರವೊಂದರ ಜಿಡಿಪಿ, ಪಾಕಿಸ್ತಾನದ ಜಿಡಿಪಿಗಿಂತ ಹೆಚ್ಚಿದೆ. ಹಾಗಾಗಿ ಟರ್ಕಿಗೆ ಪಾಕಿಸ್ತಾನದಿಂದ ಆಗಬೇಕಾದ್ದು ಏನಿಲ್ಲ. ಆದರೆ ಅವೆರಡರ ನಡುವಿನ ಸಾಮಾನ್ಯ ತಂತುವೆಂದರೆ ಎರಡೂ ಇಸ್ಲಾಮಿಕ್‌ ರಾಷ್ಟ್ರ ಎನ್ನುವುದು. 2020ರ ಫೆಬ್ರುವರಿ 14ರಂದು ಪಾಕಿಸ್ತಾನದ ಸಂಸತ್ತಿನ ಜಂಟಿ ಅಧಿವೇಶನದಲ್ಲಿ, ಟರ್ಕಿ ಅಧ್ಯಕ್ಷರು ಮಾತನಾಡುತ್ತಾ ‘ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಪಾಕಿಸ್ತಾನಿ ಜನರು ತಮ್ಮ ಆಹಾರವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದರು ಎನ್ನುವುದನ್ನು ಮರೆಯುವುದಿಲ್ಲ’ ಎಂದಿದ್ದರು.

ಟರ್ಕಿಯ ಅಧ್ಯಕ್ಷರು ಖಿಲಾಫತ್‌ ಚಳವಳಿಯ ಕುರಿತು ಪ್ರಾಸ್ತಾಪಿಸಿದ್ದರು. ಆ ಸಂದರ್ಭದಲ್ಲಿ ಭಾರತದ ಖಿಲಾಫತ್‌ ನಾಯಕರು ಇಲ್ಲಿಂದ ದೇಣಿಗೆ ಸಂಗ್ರಹಿಸಿ ಟರ್ಕಿಗೆ ಕಳುಹಿಸಿದ್ದರು. ವಿದೇಶಿ ಬಟ್ಟೆಗಳನ್ನು ಸುಡಲು ಗಾಂಧೀಜಿ ಕರೆ ಕೊಟ್ಟಾಗ, ‘ನಾವು ನಮ್ಮ ಬಟ್ಟೆಗಳನ್ನು ಟರ್ಕಿಗೆ ಕಳುಹಿಸುತ್ತೇವೆ’ ಎಂದಿದ್ದರು! ಅಸಲಿಗೆ ಖಿಲಾಫತ್‌ ಚಳವಳಿಗೆ ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧವೇ ಇರಲಿಲ್ಲ. ಆದರೂ ಚಳವಳಿಯ ನೇತೃತ್ವವನ್ನು ಗಾಂಧೀಜಿ ವಹಿಸಿಕೊಂಡರು. ಮೋಪ್ಲಾ ನರಮೇಧಕ್ಕೆ ಕಾರಣವಾದ ಖಿಲಾಫತ್‌ ಆಂದೋಲನವು ಪ್ರತ್ಯೇಕತೆಯ ಭಾವನೆಯನ್ನು ಪೋಷಿಸಿತು, ಬಳಿಕ ಅದೇ ಹೆಮ್ಮರವಾಗಿ ಪಾಕಿಸ್ತಾನದ ರಚನೆಯಾಯಿತು. ಹಾಗಾಗಿ ಟರ್ಕಿಗೆ ಈಗಲೂ ಪಾಕಿಸ್ತಾನದ ಮೇಲೆ ಪ್ರೀತಿ!

ಅಷ್ಟೇ ಅಲ್ಲ, ಒಂದು ಕಾಲದಲ್ಲಿ ಒಟ್ಟೊಮನ್‌ ಸಾಮ್ರಾಜ್ಯ ಮುಸ್ಲಿಂ ಜಗತ್ತಿನ ನಾಯಕನ ಸ್ಥಾನದಲ್ಲಿ ಇತ್ತು. ಅದರ ವಿಸ್ತೀರ್ಣವೂ ದೊಡ್ಡದಿತ್ತು. ಆದರೆ ಮೊದಲನೇ ಮಹಾಯುದ್ಧದ ಬಳಿಕ ವಿಘಟನೆಗೊಂಡು ಟರ್ಕಿಯಷ್ಟೇ ಉಳಿಯಿತು. ಆದ್ದರಿಂದ ಟರ್ಕಿಗೆ ತಾನು ಮುಸ್ಲಿಂ ಜಗತ್ತಿನ ನಾಯಕನಾಗಬೇಕೆಂಬ ಹಂಬಲ ಈಗಲೂ ಇದೆ. ಆ ಕಾರಣದಿಂದಲೇ ಅದು ಪಾಕಿಸ್ತಾನ, ಬಾಂಗ್ಲಾದೇಶ, ಕತಾರ್‌, ಮಲೇಷ್ಯಾ ಪರ ಆಗಾಗ ಮಾತನಾಡುತ್ತದೆ. ಪ್ಯಾಲೆಸ್ಟೀನ್‌ ವಿಷಯದಲ್ಲಿ ಇಸ್ರೇಲನ್ನು ದೂಷಿಸುತ್ತದೆ. ಇಸ್ಲಾಮಿಕ್‌ ರಾಷ್ಟ್ರಗಳ ನಡುವೆ ಭ್ರಾತೃತ್ವ ಇರಬೇಕು ಎಂದು ಆಸಿಸುತ್ತದೆ.

ಪಾಕಿಸ್ತಾನದ ಜೊತೆಗಿನ ಟರ್ಕಿ ಬಾಂಧವ್ಯ ಕೇವಲ ಕಾಶ್ಮೀರದ ವಿಷಯಕ್ಕೆ ಸೀಮಿತವಾಗಿಲ್ಲ. ಕರಾಚಿಯಲ್ಲಿ ನಿರ್ಮಿಸಲಾದ ಪಾಕಿಸ್ತಾನದ ನೌಕೆ ಪಿಎನ್‌ಎಸ್ ಮೊವಿನ್‌ ಅನ್ನು ವಿನ್ಯಾಸಪಡಿಸುವಲ್ಲಿ ಪಾಕಿಸ್ತಾನದೊಂದಿಗೆ ಟರ್ಕಿ ಕೆಲಸ ಮಾಡಿತ್ತು. ಜೊತೆಗೆ ಭಾರತ ಮತ್ತು ಅಮೆರಿಕದ ಮೇಲೆ ಸೈಬರ್ ದಾಳಿ ನಡೆಸುವ ಹಾಗೂ ಪಾಕಿಸ್ತಾನಿ ನಾಯಕರನ್ನು ಅಂತರರಾಷ್ಟ್ರೀಯ ಟೀಕೆಗಳಿಂದ ರಕ್ಷಿಸಲು ನರೇಟಿವ್‌ ಕಟ್ಟುವ ಹೊಣೆಹೊತ್ತ ಸೈಬರ್ ಸೇನೆಯ ರಚನೆಗೆ ಪಾಕಿಸ್ತಾನಕ್ಕೆ ಟರ್ಕಿ ಸಹಾಯ ಮಾಡಿತ್ತು. ಟರ್ಕಿ ತಾನು ಉತ್ಪಾದಿಸುವ ರಕ್ಷಣಾ ಸಾಮಗ್ರಿಗಳ ಶೇಕಡ 10ರಷ್ಟನ್ನು ಪಾಕಿಸ್ತಾನಕ್ಕೆ ರಫ್ತು ಮಾಡುತ್ತಿದೆ.

ಹಾಗಂತ ಈ ಬೆಳವಣಿಗೆಗಳನ್ನು ಗಮನಿಸಿ ಭಾರತ ಸುಮ್ಮನೆ ಕೂರಲಿಲ್ಲ. ಸೈಪ್ರೆಸ್‌ ಮತ್ತು ಗ್ರೀಸ್‌ ದೇಶಗಳು ಟರ್ಕಿಯ ದೀರ್ಘಕಾಲದ ಶತ್ರುಗಳು. 1974ರಲ್ಲಿ ಸಾರ್ವಭೌಮ ರಾಷ್ಟ್ರವಾದ ಸೈಪ್ರಸ್‌ನ ಒಂದು ಭಾಗವನ್ನು ಟರ್ಕಿ ಆಕ್ರಮಿಸಿಕೊಂಡಿತು. ಟರ್ಕಿ ಮತ್ತು ಗ್ರೀಸ್‌ ನಡುವಿನ ಎಜಿಯನ್‌ ಸಮುದ್ರ ಕುರಿತಾದ ವೈಮನಸ್ಯಕ್ಕೆ ಇತಿಹಾಸವಿದೆ. ಹಾಗಾಗಿ 2023ರಲ್ಲಿ ಪ್ರಧಾನಿ ಮೋದಿ, ಗ್ರೀಸ್‌ಗೆ ಭೇಟಿ ಕೊಟ್ಟರು. 40 ವರ್ಷಗಳ ನಂತರ ಗ್ರೀಸ್‌ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಎನಿಸಿಕೊಂಡರು. ಭಾರತ-ಗ್ರೀಸ್‌ ನಡುವೆ ಒಪ್ಪಂದಗಳು ಏರ್ಪಟ್ಟವು. ಸೈಪ್ರಸ್ ವಿಷಯದಲ್ಲಿ ಭಾರತ ಬಹಳ ಹಿಂದಿನಿಂದಲೂ ಗ್ರೀಸ್ ಅನ್ನು ಬೆಂಬಲಿಸುತ್ತಿದೆ ಮತ್ತು ಕಾಶ್ಮೀರದ ವಿಷಯದಲ್ಲಿ ಗ್ರೀಸ್ ಭಾರತವನ್ನು ಬೆಂಬಲಿಸುತ್ತಿದೆ. ಸೈಪ್ರಸ್‌ನೊಂದಿಗೆ ರಕ್ಷಣಾ ಮತ್ತು ಮಿಲಿಟರಿ ಸಹಕಾರ ಒಪ್ಪಂದಗಳಿಗೂ ಭಾರತ ಸಹಿ ಹಾಕಿತು.

ಟರ್ಕಿಗೆ ತಗಲಿಕೊಂಡೇ ಇರುವ ಅರ್ಮೇನಿಯಾ, ಟರ್ಕಿಯ ಸಾಂಪ್ರದಾಯಿಕ ಪ್ರತಿಸ್ಪರ್ಧಿ ರಾಷ್ಟ್ರ. ಟರ್ಕಿಯಿಂದ ರಕ್ಷಣಾ ಸಾಮಗ್ರಿಗಳ ಆಮದು ಕಡಿಮೆ ಮಾಡಿಕೊಂಡ ಭಾರತ, ಅರ್ಮೇನಿಯಾದೊಂದಿಗೆ ರಕ್ಷಣಾ ಒಪ್ಪಂದವನ್ನು ಮಾಡಿಕೊಂಡಿತು. ಕಳೆದ //ಉ-20/ ಶೃಂಗಸಭೆಯ ವೇಳೆ ಭಾರತ-ಮಧ್ಯಪ್ರಾಚ್ಯ-ಯುರೋಪ್‌ ಆರ್ಥಿಕ ಕಾರಿಡಾರ್‌ ಯೋಜನೆ ಘೋಷಣೆಯಾಯಿತು. ಈ ಕಾರಿಡಾರ್‌ನಿಂದ ಟರ್ಕಿಯನ್ನು ಹೊರಗಿಡಲಾಯಿತು.

ವಿಪರ್ಯಾಸ ಏನು ಗೊತ್ತೆ, ಒಟ್ಟೊಮನ್‌ ಸಾಮ್ರಾಜ್ಯದ ಪತನದ ಬಳಿಕ, ಟರ್ಕಿಯ ರಾಷ್ಟ್ರಪಿತ ಅಟಾಟರ್ಕ್‌ ಕೆಮಲ್‌ ಪಾಶ, ಟರ್ಕಿಯನ್ನು ಕರ್ಮಠ ಮನಃಸ್ಥಿತಿಯಿಂದ ಹೊರತರುವ ಪ್ರಯತ್ನ ಮಾಡಿದರು. ಷರಿಯಾ ಕಾನೂನು, ಮತೀಯ ಶಾಲೆಗಳನ್ನು ಬದಿಗೆ ಸರಿಸಿ, ಭಾಷೆ, ಕಾನೂನು, ವಸ್ತ್ರ ಸಂಹಿತೆ, ಮಹಿಳೆಯರ ಸ್ಥಿತಿಗತಿಗಳಲ್ಲಿ ಸುಧಾರಣೆ ತಂದರು. ಯುರೋಪಿನ ‘ರೋಗಗ್ರಸ್ತ ಮನುಷ್ಯ’ ಎನ್ನಿಸಿಕೊಂಡಿದ್ದ ನಾಡನ್ನು ಆಧುನಿಕತೆಯೆಡೆಗೆ ಮುನ್ನಡೆಸಿದರು.

ಯಾವ ಸಂಗತಿಗಳನ್ನು ಕೆಮಲ್‌ ಪಾಶ ತಿರಸ್ಕರಿಸಿದ್ದರೋ, ಆ ಸಂಗತಿಗಳನ್ನೇ ಮೈಮನ ತುಂಬಿಕೊಂಡಿರುವ ಪಾಕಿಸ್ತಾನದ ಜೊತೆ ಇಂದಿನ ಟರ್ಕಿ ಆಪ್ತವಾಗಿ ಬೆಸೆದುಕೊಂಡಿದೆ. ಅಟಾಟರ್ಕ್‌-ಜಿನ್ನಾ ಹೆಸರಿನಲ್ಲಿ ಪಾಕಿಸ್ತಾನ ಮತ್ತು ಟರ್ಕಿಯ ಸೇನೆ ಜಂಟೀಯಾಗಿ ಪ್ರತಿವರ್ಷ ತಾಲೀಮು ನಡೆಸುತ್ತವೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.