ADVERTISEMENT

ಸೂರ್ಯ-ನಮಸ್ಕಾರ: ಮೆಕಾಲೆ ಅಪ್ರಸ್ತುತ, ಏಕೆಂದರೆ...

ಎ.ಸೂರ್ಯ ಪ್ರಕಾಶ್
Published 20 ಡಿಸೆಂಬರ್ 2025, 0:30 IST
Last Updated 20 ಡಿಸೆಂಬರ್ 2025, 0:30 IST
   
ಮೆಕಾಲೆ ಶಿಕ್ಷಣ ಪದ್ಧತಿಯು ಭಾರತದ ಸಾಂಸ್ಕೃತಿಕ ಮಹತ್ವವನ್ನು ಮಾತ್ರವಲ್ಲ, ವೈಚಾರಿಕ ಹಾಗೂ ವೈಜ್ಞಾನಿಕ ಸಾಧನೆಗಳನ್ನೂ ಅಲ್ಲಗಳೆಯುವಂತಹದ್ದು. ಭಾರತದ ಬೌದ್ಧಿಕ ಅನನ್ಯತೆಯ ಬಗ್ಗೆ ತಿರಸ್ಕಾರವನ್ನು ಹೊಂದಿರುವ ಮೆಕಾಲೆ ಶಿಕ್ಷಣ ಪದ್ಧತಿಯಿಂದ ಹೊರಬರುವ ಕಾಲ ಈಗ ಸನ್ನಿಹಿತವಾಗಿದೆ.

ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದ, ಜೀವನದ ಎಲ್ಲ ಆಯಾಮಗಳಲ್ಲಿಯೂ ಆತ್ಮವಿಶ್ವಾಸದಿಂದ ಕೂಡಿದ ‘ವಿಕಸಿತ ಭಾರತ’ವನ್ನು ನಿರ್ಮಿಸಲು ಪ್ರಧಾನಿ ನರೇಂದ್ರ ಮೋದಿ ಅವರು, 2047ರ ಗಡುವನ್ನು ನಿಗದಿ ಮಾಡಿದ್ದಾರೆ. ಈಗ ಅವರು ಭಾರತದ ಜನರಿಗೆ ಹೊಸದೊಂದು ಗುರಿ ನೀಡಿದ್ದಾರೆ. ಮುಂದಿನ ಹತ್ತು ವರ್ಷಗಳಲ್ಲಿ, ಅಂದರೆ 2035ಕ್ಕೆ ಮೊದಲು, ಥಾಮಸ್ ಬಾಬಿಂಗ್ಟನ್ ಮೆಕಾಲೆಯ ಹೆಜ್ಜೆಗುರುತುಗಳನ್ನು ಅಳಿಸಿಹಾಕಬೇಕು ಎಂದು ಕರೆ ನೀಡಿದ್ದಾರೆ.

ನವದೆಹಲಿಯಲ್ಲಿ ಕಳೆದ ತಿಂಗಳು ಕಾರ್ಯಕ್ರಮವೊಂದರಲ್ಲಿ ಮಾತನಾಡುವ ಸಂದರ್ಭದಲ್ಲಿ ಪ್ರಧಾನಿಯವರು, ಮೆಕಾಲೆಯಿಂದಾಗಿ ಆಗಿರುವ ಹಾನಿಗಳ ಬಗ್ಗೆ ಹೇಳಿದ್ದಾರೆ. ಅಲ್ಲದೆ, ನವೆಂಬರ್‌ 25ರಂದು ಅಯೋಧ್ಯೆಯಲ್ಲಿ ಧರ್ಮಧ್ವಜದ ಆರೋಹಣದ ಸಂದರ್ಭದಲ್ಲಿ ಈ ಮಾತುಗಳನ್ನು ಇನ್ನಷ್ಟು ಒತ್ತು ನೀಡಿ ಪುನರುಚ್ಚರಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಪದ್ಧತಿಯ ರೂವಾರಿಯಾದ ಮೆಕಾಲೆ 1835ರಲ್ಲಿ ಇಂಗ್ಲಿಷ್‌ ಶಿಕ್ಷಣವನ್ನು ಪಸರಿಸಲು ಹಾಗೂ ಭಾರತದ ಭಾಷೆಗಳನ್ನು ನಾಶಮಾಡಲು, ಭಾರತದ ಸಂಸ್ಕೃತಿ ಮತ್ತು ನಾಗರಿಕತೆಯ ಶಕ್ತಿ ನಾಶಮಾಡಲು ವಿಸ್ತೃತವಾದ ಯೋಜನೆಯೊಂದನ್ನು ರೂಪಿಸಿಕೊಟ್ಟ. ಅದನ್ನು ಅಂದಿನ ಬ್ರಿಟಿಷ್ ಸರ್ಕಾರವು ಒಪ್ಪಿಕೊಂಡಿತು. ಪರಿಣಾಮವಾಗಿ ‘ಕಾನ್ವೆಂಟ್ ಶಾಲೆಗಳು’ ದೇಶದ ಎಲ್ಲೆಡೆ ನಾಯಿಕೊಡೆಗಳಂತೆ ಹುಟ್ಟಿಕೊಂಡವು, ಪ್ರಾದೇಶಿಕ ಭಾಷೆಗಳಲ್ಲಿ ಬೋಧಿಸುವ ಶಾಲೆಗಳ ನಿರ್ಲಕ್ಷ್ಯಕ್ಕೆ ಇದು ದಾರಿ ಮಾಡಿಕೊಟ್ಟಿತು.

ADVERTISEMENT

ಮೆಕಾಲೆ ಪ್ರತಿಪಾದಿಸಿದ ವಿಚಾರಗಳು ಈ ಕೆಳಗಿನ ಅಂಶಗಳನ್ನು ಒಳಗೊಂಡಿದ್ದವು:

ಸಂಸ್ಕೃತವು ‘ನಿಷ್ಪ್ರಯೋಜಕ’ ಭಾಷೆ, ಅದನ್ನು ಕೈಬಿಡಬೇಕು. ಅದರ ಬದಲಿಗೆ ಭಾರತೀಯರಿಗೆ ಇಂಗ್ಲಿಷ್ ಕಲಿಸಬೇಕು. ಏಕೆಂದರೆ, ಇಂಗ್ಲಿಷ್ ಭಾಷೆಯು ಹೆಚ್ಚು ಉತ್ತಮವಾದ ನಾಗರಿಕತೆಯ ಭಾಷೆ, ಅದು ವಿಜ್ಞಾನ, ಇತಿಹಾಸ, ತತ್ತ್ವಶಾಸ್ತ್ರದಂತಹ ವಿಷಯಗಳಲ್ಲಿನ ಆಧುನಿಕ ಜ್ಞಾನಕ್ಕೆ ಕೀಲಿಕೈ ಇದ್ದಂತೆ.

ಭಾರತದ ಭಾಷೆಗಳಲ್ಲಿ ಸಾಹಿತ್ಯಿಕ ಮಾಹಿತಿಯೂ ಇಲ್ಲ, ವೈಜ್ಞಾನಿಕ ಮಾಹಿತಿಯೂ ಇಲ್ಲ ಮತ್ತು ಆ ಭಾಷೆಗಳು ಬಹಳ ಬಡವಾಗಿಯೂ, ಒರಟಾಗಿಯೂ ಇವೆ ಎಂದು ಮೆಕಾಲೆ ಹೇಳಿದ್ದ. ಸಂಸ್ಕೃತ, ಅರೇಬಿಕ್ ಮತ್ತು ಭಾರತದ ಇತರ ಭಾಷೆಗಳಲ್ಲಿನ ಸಾಹಿತ್ಯವನ್ನು ಅಧ್ಯಯನ ಮಾಡಿದ ನಂತರ ಆತ, ‘ಯುರೋಪಿನ ಒಳ್ಳೆಯ ಗ್ರಂಥಾಲಯವೊಂದರ ಕಪಾಟಿನ ಒಂದು ಹಲಗೆಯ ಮೇಲಿರುವ ಪುಸ್ತಕಗಳು ಭಾರತ ಮತ್ತು ಅರೇಬಿಯಾದ ಮೂಲ ಸಾಹಿತ್ಯಕ್ಕೆ ಸಮ’ ಎಂದು ಕೂಡ ಹೇಳಿದ್ದ.

ಸಂಸ್ಕೃತದಲ್ಲಿ ಬರೆಯಲಾದ ಎಲ್ಲ ಪುಸ್ತಕಗಳಿಂದ ಸಂಗ್ರಹಿಸಲಾದ ಐತಿಹಾಸಿಕ ಮಾಹಿತಿಗಳು ಇಂಗ್ಲೆಂಡಿನ ಪ್ರಾಥಮಿಕ ಶಾಲೆಗಳಲ್ಲಿ ಬಳಕೆಯಲ್ಲಿ ಇರಬಹುದಾದ ಬಹುತೇಕ ಕಿರುಪುಸ್ತಕಗಳಲ್ಲಿ ಸಿಗುವುದಕ್ಕಿಂತ ಕಡಿಮೆ ಮೌಲ್ಯದವು ಎಂದು ಮೆಕಾಲೆ ಹೇಳಿದ್ದುದು ಸಂಸ್ಕೃತದ ಬಗ್ಗೆ ಆತ ಹೊಂದಿದ್ದ ತಿರಸ್ಕಾರವನ್ನು ತೋರಿಸುತ್ತದೆ. ಆತನ ಈ ಹೇಳಿಕೆಯು ಪೂರ್ವಗ್ರಹದಿಂದ ಕೂಡಿತ್ತು. ಎಲ್ಲ ಜ್ಞಾನಶಾಖೆಗಳಲ್ಲಿಯೂ ಪರಿಸ್ಥಿತಿ ಇದೇ ಆಗಿದೆ ಎಂದು ಆತ ಹೇಳಿದ್ದ.

ಭಾರತದ ಖಗೋಳಶಾಸ್ತ್ರದ ಬಗ್ಗೆ ಕೇಳಿದರೆ ಇಂಗ್ಲೆಂಡಿನ ಶಾಲೆಗಳಲ್ಲಿನ ಹೆಣ್ಣುಮಕ್ಕಳು ಜೋರಾಗಿ ನಗುತ್ತಾರೆ ಎಂದು ಹೇಳುವ ಮೂಲಕ ಮೆಕಾಲೆ ಭಾರತದ ಗಣಿತಶಾಸ್ತ್ರ, ಸಾಹಿತ್ಯ, ಖಗೋಳಶಾಸ್ತ್ರ, ವೈದ್ಯವಿಜ್ಞಾನ, ಇತಿಹಾಸ ಮತ್ತು ಭೂಗೋಳಶಾಸ್ತ್ರ ಬಗ್ಗೆ ತನಗಿರುವ ಅಜ್ಞಾನವನ್ನು ತೋರಿಸಿದ್ದ. ಬ್ರಿಟಿಷರು ಇನ್ನೂ ಗುಹೆಗಳಲ್ಲಿ ಜೀವನ ಸಾಗಿಸುತ್ತಿದ್ದಾಗ, ಕಾಡುಪ್ರಾಣಿಗಳನ್ನು ಬೇಟೆಯಾಡಿಕೊಂಡು ಇದ್ದಾಗ ‘ಶೂನ್ಯ’ವನ್ನು ಆವಿಷ್ಕರಿಸಿದ್ದು ಭಾರತ ಎಂಬುದಾಗಲಿ, ಭಾರತದಲ್ಲಿ ಆರ್ಯಭಟ, ಭಾಸ್ಕರಾಚಾರ್ಯ ಅವರಂತಹ ಗಣಿತಶಾಸ್ತ್ರಜ್ಞರು, ಖಗೋಳಶಾಸ್ತ್ರಜ್ಞರು ಇದ್ದರು ಎಂಬುದಾಗಲಿ ಮೆಕಾಲೆಗೆ ಗೊತ್ತಿರಲಿಲ್ಲ.

ರೇಖಾಗಣಿತ, ತ್ರಿಕೋನಮಿತಿಗೆ ಆರ್ಯಭಟ ನೀಡಿರುವ ಕೊಡುಗೆ ಬಹಳ ದೊಡ್ಡದು. 1,500 ವರ್ಷಗಳಿಗೂ ಮೊದಲೇ ಆತ ಭೂಮಿಯ ವ್ಯಾಸವನ್ನು, ಚಂದ್ರನ ವ್ಯಾಸವನ್ನು ಮತ್ತು ಗ್ರಹಗಳು ಹಾಗೂ ಅವುಗಳ ನಡುವಿನ ಅಂತರವನ್ನು ನಿಖರವಾಗಿ ಲೆಕ್ಕಹಾಕಿದ್ದ. ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ ಏಕಾಗುತ್ತದೆ ಎಂಬುದನ್ನು ಆತ ವಿವರಿಸಿದ್ದ. ಒಂದು ವರ್ಷದಲ್ಲಿ ಇರುವ ದಿನಗಳ ನಿಖರ ಸಂಖ್ಯೆ 365 ಎಂಬುದನ್ನೂ ಆತ ಹೇಳಿದ್ದ. ಭಾಸ್ಕರಾಚಾರ್ಯ ಬಹಳ ಮೇಧಾವಿ ಗಣಿತ ತಜ್ಞನಾಗಿದ್ದ. ಕಲನವಿಜ್ಞಾನ (ಕ್ಯಾಲ್ಕ್ಯುಲಸ್) ಆತನ ಸಂಶೋಧನೆ, ಗ್ರಹಗಳು ಅಂಡಾಕೃತಿಯ ಕಕ್ಷೆಯನ್ನು ಹೊಂದಿವೆ ಎಂಬುದನ್ನು ಆತ 900ಕ್ಕೂ ಹೆಚ್ಚು ವರ್ಷಗಳ ಹಿಂದೆ ಕಂಡುಕೊಂಡಿದ್ದ.

ಆದರೆ, ಪೂರ್ವಗ್ರಹದಿಂದ ಕೂಡಿದ್ದ ಮೆಕಾಲೆ ಮಾತ್ರ ಇವೆಲ್ಲವನ್ನೂ ಅಲ್ಲಗಳೆಯಬಲ್ಲ. ಹೀಗಾಗಿ ಆತ ‘ಈಗಿನ ಸಂದರ್ಭದಲ್ಲಿ ತಮ್ಮ ಮಾತೃಭಾಷೆಯ ಮೂಲಕ ಶಿಕ್ಷಿತರನ್ನಾಗಿ ಮಾಡಲು ಆಗದಿರುವ ಜನರನ್ನು ನಾವು ಶಿಕ್ಷಿತರನ್ನಾಗಿ ಮಾಡಬೇಕಾಗಿದೆ’ ಎಂದು ಪ್ರತಿಪಾದಿಸಿದ್ದ. ಇದನ್ನು ಸಾಧ್ಯವಾಗಿಸಲು ಆತ ಯಾವ ‍ಪ್ರಸ್ತಾವ ಮುಂದಿಟ್ಟ? ‘ಇಂಗ್ಲಿಷ್‌ ಭಾಷೆಯು ಅತ್ಯಂತ ಹೆಚ್ಚು ಉಪಯುಕ್ತವಾಗುತ್ತದೆ’ ಎಂಬ ತೀರ್ಮಾನಕ್ಕೆ ಆತ ಬಂದ.

ಭಾರತೀಯರ ನಡುವೆ ಇಂಗ್ಲಿಷ್‌ ಭಾಷೆಯನ್ನು ಬೆಳೆಸುವುದು ಭಾರತದಲ್ಲಿ ಬ್ರಿಟಿಷ್‌ ಸಾಮ್ರಾಜ್ಯದ ಬೇರುಗಳನ್ನು ಇನ್ನಷ್ಟು ಆಳವಾಗಿಸಲು ಅಗತ್ಯ ಎಂದು ಕೂಡ ಆತ ಹೇಳಿದ್ದ. ಹೀಗಾಗಿ ಆತ ತನ್ನ ಕೊನೆಯ ಶಿಫಾರಸಿನಲ್ಲಿ ‘ರಕ್ತ ಮತ್ತು ಮೈಬಣ್ಣದಲ್ಲಿ ಭಾರತೀಯರಾಗಿರುವ; ಆದರೆ, ಅಭಿರುಚಿಯಲ್ಲಿ, ಅಭಿಪ್ರಾಯಗಳಲ್ಲಿ, ನೈತಿಕತೆಯಲ್ಲಿ ಮತ್ತು ಪ್ರಜ್ಞೆಯಲ್ಲಿ ಇಂಗ್ಲಿಷರಂತೆ ಇರುವ ಜನರ ವರ್ಗವೊಂದನ್ನು ನಾವು ರೂಪಿಸಬೇಕು’ ಎಂದು ಹೇಳಿದ್ದ. ಅಂದರೆ, ಇಂಗ್ಲಿಷ್‌ ಭಾಷೆಯನ್ನು ಮಾತ್ರವೇ ಅಲ್ಲದೆ, ಭಾರತೀಯರು ಇಂಗ್ಲಿಷರ ಅಭಿರುಚಿಗಳನ್ನು ಹಾಗೂ ಅವರ ನೈತಿಕತೆಯನ್ನು ಹೊಂದುವಂತೆ ಮಾಡುವುದು ಆತನ ಗುರಿಯಾಗಿತ್ತು.

ಆಗಿನ ಗವರ್ನರ್ ಜನರಲ್ ಲಾರ್ಡ್‌ ವಿಲಿಯಂ ಬೆಂಟಿಂಕ್‌, ಮೆಕಾಲೆಯ ಯೋಜನೆಯನ್ನು ಪೂರ್ತಿಯಾಗಿ ಬೆಂಬಲಿಸಿದ. 1835ರಲ್ಲಿ ಒಂದು ಆದೇಶ  ಹೊರಡಿಸಿ ಸರ್ಕಾರದ ಹಣವನ್ನು ಇಂಗ್ಲಿಷ್ ಭಾಷೆಯ ಮೂಲಕ ಪಾಶ್ಚಿಮಾತ್ಯ ಶಿಕ್ಷಣವನ್ನು ಪಸರಿಸಲು ಮಾತ್ರ ಬಳಸಲಾಗುವುದು ಎಂದು ಹೇಳಿದ. ಇಂತಹ ಶಾಲೆಗಳಲ್ಲಿ ಓದಿದ ಲಕ್ಷಾಂತರ ವಿದ್ಯಾರ್ಥಿಗಳಿಗೆ ತಮ್ಮ ಮನಸ್ಸಿನ ಮೇಲೆ ಅಲ್ಲಿನ ಪಠ್ಯಕ್ರಮವು ಹೇಗೆ ನಾಜೂಕಾಗಿ ಪರಿಣಾಮ ಬೀರಿತು ಎಂಬುದು ಅರಿವಾಗಲೇ ಇಲ್ಲ. ಕರ್ನಾಟಕದ ‘ಕಾನ್ವೆಂಟ್‌ ಶಾಲೆ’ಯೊಂದರಲ್ಲಿ ಕಲಿತ ಕಾರಣದಿಂದಾಗಿ ಈ ಲೇಖಕ ತನ್ನ ಶಾಲಾ ದಿನಗಳಲ್ಲಿ ಮೆಕಾಲೆಯ ಯೋಜನೆಯ ಸಂತ್ರಸ್ತ
ಆಗಿದ್ದ.

ಉದಾಹರಣೆಗೆ ಹೇಳುವುದಾದರೆ, ಶಾಲೆಯ ಇಡೀ ಪಠ್ಯಕ್ರಮವು ಇಂಗ್ಲಿಷ್‌ ಕಡೆ ವಾಲಿಕೊಂಡಿತ್ತು. ಶಾಲೆಯಲ್ಲಿನ ವಾತಾವರಣವು ಇಂಗ್ಲೆಂಡಿನ ಶಾಲೆಯೊಂದರ ವಾತಾವರಣಕ್ಕೆ ಹೋಲುತ್ತಿತ್ತು. ವಾರ್ಷಿಕ ಪರೀಕ್ಷೆಗಳನ್ನು ಡಿಸೆಂಬರ್‌ನಲ್ಲಿ ನಡೆಸಲಾಗುತ್ತಿತ್ತು, ಅದಾದ ನಂತರ ತಿಂಗಳ ಕಾಲ ಕ್ರಿಸ್‌ಮಸ್‌ ಆಚರಣೆ ಮತ್ತು ಹೊಸ ವರ್ಷದ ರಜೆ ಇರುತ್ತಿತ್ತು.

ಮಾತೃಭಾಷೆ ಕನ್ನಡವಾಗಿದ್ದರೂ ಯಾರೂ ಶಾಲೆಯಲ್ಲಿ ಕನ್ನಡ ಮಾತನಾಡುತ್ತಿರಲಿಲ್ಲ. ನಮ್ಮ ಇತಿಹಾಸ ಮತ್ತು ಸಮಾಜ ವಿಜ್ಞಾನದ ತರಗತಿಗಳಲ್ಲಿ ರಾಮಾಯಣ ಅಥವಾ ಮಹಾಭಾರತದ ಬಗ್ಗೆ ಉಲ್ಲೇಖ ಇರುತ್ತಿರಲಿಲ್ಲ. ಭಾರತದ ಯಾವುದೇ ಮಹಾಕಾವ್ಯದ ಬಗ್ಗೆ ಉಲ್ಲೇಖವಿರುತ್ತಿರಲಿಲ್ಲ. ಕೃಷ್ಣದೇವರಾಯನ ಬಗ್ಗೆ, ವಿಜಯನಗರ ಸಾಮ್ರಾಜ್ಯದ ಬಗ್ಗೆ, ರಾಣಿ ಚನ್ನಮ್ಮಳ ಬಗ್ಗೆ, ರಾಣಿ ಅಬ್ಬಕ್ಕಳ ಬಗ್ಗೆ, ಒನಕೆ ಓಬವ್ವಳ ಬಗ್ಗೆ ಕೂಡ ಪಾಠಗಳು ಇರುತ್ತಿರಲಿಲ್ಲ. ಅದರ ಬದಲಿಗೆ, ನಮಗೆ ರೋಮ್‌ ಸಾಮ್ರಾಜ್ಯವನ್ನು ಹೇಗೆ ಕಟ್ಟಲಾಯಿತು ಎಂಬ ಬಗ್ಗೆ, ರೊಮುಲಸ್ ಮತ್ತು ರೆಮುಸ್ ಅವಳಿ ಸಹೋದರರ ಬಗ್ಗೆ ಕಲಿಸಲಾಗುತ್ತಿತ್ತು. ಅರ್ಜುನನ ಬಗ್ಗೆ ಮತ್ತು ಅವನ ಗಾಂಡೀವದ ಬಗ್ಗೆ ಅಥವಾ ಭೀಮನ ಕೌಶಲಗಳ ಬಗ್ಗೆ ಪಾಠವನ್ನಾಗಲಿ, ಕಥೆಯನ್ನಾಗಲಿ ಹೇಳುತ್ತಿರಲಿಲ್ಲ. ನಮಗೆ ಕಿಂಗ್ ಆರ್ಥರ್ ಬಗ್ಗೆ, ಆತನ ಬಳಿಯಿದ್ದ ಮಾಯಾ ಖಡ್ಗ ‘ಎಕ್ಸ್‌ಕ್ಯಾಲಿಬರ್‌’ ಬಗ್ಗೆ ಪಾಠ ಮಾಡಲಾಗುತ್ತಿತ್ತು.

ಇಂತಹ ಶಾಲೆಗಳಿಂದ ಹೊರಬರುವ ಲಕ್ಷಾಂತರ ಮಂದಿ ವಿದ್ಯಾರ್ಥಿಗಳು ಭಾರತದ ಪರಿಸ್ಥಿತಿಗೆ ಹೇಗೆ ಹೊಂದಿಕೆ ಆಗಬಹುದು ಎಂಬುದನ್ನು ಊಹಿಸಿಕೊಳ್ಳಿ. ಅವರಲ್ಲಿ ಬಹುತೇಕರು ಇಲ್ಲಿಗೆ ಹೊಂದಿಕೆ ಆಗುವುದಿಲ್ಲ. ಆದರೆ, ಮೆಕಾಲೆಯ ಯೋಜನೆಯ ಪ್ರಕಾರ ಅವರು– ಮೆಕಾಲೆಯ ಮಕ್ಕಳು– ಭಾರತವನ್ನು ಆಳುವವರಾಗುತ್ತಾರೆ. ಈ ಲೇಖಕ ನಂತರದ ದಿನಗಳಲ್ಲಿ ‘ಭಾರತೀಯ’ ಶಾಲೆಯೊಂದಕ್ಕೆ ಸೇರಿಕೊಳ್ಳುವ ಅದೃಷ್ಟ ಪಡೆದಿದ್ದ. ಅಲ್ಲಿ ಈ ಲೇಖಕನಿಗೆ ಸ್ವಾಮಿ ವಿವೇಕಾನಂದ, ಅರವಿಂದರು, ಮಹಾಭಾರತ, ರಾಮಾಯಣ ಮತ್ತು ಕರ್ನಾಟಕದ ಇತಿಹಾಸದ ಬಗ್ಗೆ ಮೊದಲ ಬಾರಿಗೆ ತಿಳಿಯಿತು. ಆದರೆ ಕೆಲವು ಅದೃಷ್ಟವಂತರಿಗೆ ಮಾತ್ರ ಮೆಕಾಲೆಯ ಬಲೆಯಿಂದ ಬಿಡಿಸಿಕೊಳ್ಳುವ ಇಂತಹ ಅವಕಾಶ ಸಿಗುತ್ತದೆ. ಇನ್ನುಳಿದವರಿಗೆ ಸಿಗುವುದಿಲ್ಲ.

ಭಾರತದ ಪುರಾತನ ಸಂಸ್ಕೃತಿ ಮತ್ತು ನಾಗರಿಕತೆಯ ಮರುಸ್ಥಾಪನೆಯ ಕೆಲಸ ಆರಂಭವಾಗಲು ಭಾರತೀಯರು ನರೇಂದ್ರ ಮೋದಿ ಅವರು 2014ರಲ್ಲಿ ಅಧಿಕಾರ ಹಿಡಿಯುವವರೆಗೆ ಕಾಯಬೇಕಾಗಿತ್ತು. ಭಾರತವನ್ನು ಪ್ರೀತಿಸುವ ಎಲ್ಲರೂ, ಇಲ್ಲಿನ ಅಸಾಮಾನ್ಯ ನಾಗರಿಕತೆಯನ್ನು ಗೌರವಿಸುವ ಎಲ್ಲರೂ ಪ್ರಧಾನಿಯವರು ಸಲಹೆಯ ರೂಪದಲ್ಲಿ ನೀಡಿರುವ ಸಂಕಲ್ಪ ಕೈಗೊಳ್ಳಬೇಕು. ಮೆಕಾಲೆಯ ಭೂತವನ್ನು 2035ರೊಳಗೆ ಹೊರದಬ್ಬಬೇಕು.  ಭಾರತದ ಭಾಷೆಗಳು, ಇಲ್ಲಿನ ಸಂಸ್ಕೃತಿ ಮತ್ತು ಇತಿಹಾಸದ ವೈಭವ ಮರಳುವಂತೆ ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.