ADVERTISEMENT

ವಿಜ್ಞಾನ ವಿಶೇಷ: ಹಿಮಗಜಗಳ ಮರುಸೃಷ್ಟಿಯ ಹೊಸಜಗಳ

ನಶಿಸಿ, ನಿರ್ವಂಶವಾದ ಜೀವಿಗಳ ಮರುಸೃಷ್ಟಿ ಸರಿಯೇ, ಸಾಧುವೇ?

ನಾಗೇಶ ಹೆಗಡೆ
Published 12 ಮಾರ್ಚ್ 2025, 23:30 IST
Last Updated 12 ಮಾರ್ಚ್ 2025, 23:30 IST
   

ಚಿನ್ನದ ಬಣ್ಣದ ಉದ್ದುದ್ದ ಕೂದಲಿನ ಮುದ್ದಾದ ಮೂರು ಇಲಿಮರಿಗಳು ಕಳೆದ ವಾರ ಜಗತ್ತಿನಾದ್ಯಂತ ವಿಜ್ಞಾನ ರಂಗದಲ್ಲಿ ಭಾರೀ ಸುದ್ದಿ ಮಾಡಿದವು. ಹಿಂದೆಂದೋ ನಿರ್ವಂಶವಾದ ಜೀವಿಗಳು ಮತ್ತೆ ಅವತಾರ ಎತ್ತುವಂತೆ ಮಾಡುವ ದಿಸೆಯಲ್ಲಿ ಇದು ಯಶಸ್ವಿ ಹೆಜ್ಜೆ ಎಂದು ಅಮೆರಿಕದ ವಿಜ್ಞಾನಿಗಳು ಘೋಷಿಸಿದರು. ಅದೊಂದು ‘ಅನಪೇಕ್ಷಿತ, ಎಡವಟ್ಟು ಹೆಜ್ಜೆ’ ಎಂದು ಇನ್ನು ಕೆಲವು ವಿಜ್ಞಾನಿಗಳು ಬೈದರು.

ಹದಿನೈದು ಸಾವಿರ ವರ್ಷಗಳ ಹಿಂದೆ ಜಗತ್ತಿಗೆಲ್ಲ ದಟ್ಟ ಹಿಮ ಆವರಿಸಿದ್ದಾಗ ಉತ್ತರ ಭೂಭಾಗದಲ್ಲಿ ಉದ್ದುದ್ದ ಕೂದಲಿನ ಭಾರೀ ಉದ್ದ ಕೊಂಬುಗಳ ದಪ್ಪನ್ನ ಆನೆಗಳು ಓಡಾಡುತ್ತಿದ್ದವು. ಚಳಿಬಾಧೆ ತಗುಲದಂತೆ ಅವುಗಳ ಮೈತುಂಬ ಉಣ್ಣೆಯ ರಗ್ಗಿನಂಥ ಚರ್ಮದ ಮೇಲೆ ಮೀಟರ್‌ ಉದ್ದದ ದಟ್ಟ ಕೂದಲುಗಳಿದ್ದವು. ತ್ವಚೆಯ ಕೆಳಗೆ ಹತ್ತು ಸೆಂಟಿಮೀಟರ್‌ ದಪ್ಪದ ಕೊಬ್ಬಿನ ಪದರವಿತ್ತು. ಭೂಮಿಯ ಮೇಲೆ ಕ್ರಮೇಣ ಸೆಕೆ ಹೆಚ್ಚುತ್ತ, ಹಿಮ ಕರುಗತ್ತ ಹೋದ ಹಾಗೆ ಇಂಥ ‘ಹಿಮಗಜ’ಗಳ ಬದುಕು ಕಷ್ಟದ್ದಾಯಿತು. ಸಾಲದ್ದಕ್ಕೆ ಆದಿಮಾನವರು ಗುಂಪು ಕಟ್ಟಿಕೊಂಡು ಈ ‘ವೂಲೀ ಮ್ಯಾಮತ್‌’ಗಳನ್ನು ಬೇಟೆಯಾಡಿದರು. ನಾಲ್ಕು ಸಾವಿರ ವರ್ಷಗಳ ಹಿಂದೆ ಅವೆಲ್ಲ ಗತಿಸಿದವು. ಒಂದರ್ಥದಲ್ಲಿ ಅವು ಆಗಿನ ಆ ತಾಪಮಾನ ಏರಿಕೆಗೆ ಹೊಂದಿಕೊಳ್ಳಲಾಗದೇ ಗತಿಸಿದವು.

ಹಿಮದ ರಾಶಿಯಲ್ಲಿ ಈಗಲೂ ಅಲ್ಲಲ್ಲಿ ಅವುಗಳ ಗಜಗಾತ್ರದ ಅಸ್ಥಿಪಂಜರ ಬಹಳಷ್ಟು ಸುಸ್ಥಿತಿಯಲ್ಲೇ ಪತ್ತೆಯಾಗುತ್ತಿದೆ. ಅಮೆರಿಕ ಮತ್ತು ಯುರೋಪ್‌ನ ಅನೇಕ ಮ್ಯೂಸಿಯಂಗಳಲ್ಲಿ ಅಂಥವನ್ನು ಇಡಿಯಾಗಿ ಪ್ರದರ್ಶನಕ್ಕೆ ಇಡಲಾಗಿದೆ. ಅವುಗಳ ಡಿಎನ್‌ಎಯನ್ನು ಈಗಿರುವ ಆನೆಗಳ ಭ್ರೂಣ ಕೋಶಗಳಿಗೆ ಸೇರಿಸಿ ಹೊಸ ರೋಮದೈತ್ಯರನ್ನು ಮತ್ತೆ ಸೃಷ್ಟಿ ಮಾಡಲು ಸಾಧ್ಯವಿದೆ. ಅಂಥ ಮರುಸೃಷ್ಟಿಯ ಮೊದಲ ಯಶಸ್ವಿ ಹೆಜ್ಜೆಯೇ ಈಗಿನ ಈ ಬಂಗಾರದ ಇಲಿಮರಿಗಳು.

ADVERTISEMENT

ಇಂಥದ್ದೊಂದು ರೋಮಾಂಚಕ ಸಾಧ್ಯತೆಯನ್ನು ‘ಜುರಾಸಿಕ್‌ ಪಾರ್ಕ್‌’ ಹೆಸರಿನ ಸಿನಿಮಾದಲ್ಲಿ ನಾವೆಲ್ಲ ನೋಡಿದ್ದೇವೆ. ಅದು ಬರೀ ಕಪೋಲಕಲ್ಪಿತ ಕತೆ. ಆರು ಕೋಟಿ ವರ್ಷಗಳ ಹಿಂದಿನ ಡೈನೊಸಾರ್‌ ಪ್ರಾಣಿಯ ಎಲ್ಲ ಮೂಳೆಗಳೂ ಶಿಲೆಯಾಗಿ ಬದಲಾಗಿದ್ದು ಅವುಗಳ ಡಿಎನ್‌ಎ ಸಿಗುವ ಸಾಧ್ಯತೆಯೇ ಇಲ್ಲ. ಆದರೂ ವಿಜ್ಞಾನ ಕತೆಗಾರ ಮೈಕೆಲ್‌ ಕ್ರಿಕ್ಟನ್‌ ಒಂದು ಚಾಣಾಕ್ಷ ಉಪಾಯವನ್ನು ಕಲ್ಪಿಸಿದ್ದ. ಆಗಿನ ಕಾಲದ ಸೊಳ್ಳೆಯೊಂದು ಡೈನೊಸಾರ್‌ ಪ್ರಾಣಿಯ ರಕ್ತವನ್ನು ಹೀರುತ್ತದೆ. ಹೀರಿ, ದೂರ ಹಾರಲಾರದೆ ಮರದ ಬೊಡ್ಡೆಯ ಮೇಲೆ ಕೂರುತ್ತದೆ. ಆ ಮರದಿಂದ ಸ್ರವಿಸುತ್ತಿದ್ದ ಅಂಟಿನ ಮುದ್ದೆಯಲ್ಲಿ ಸೊಳ್ಳೆ ಸಿಲುಕುತ್ತದೆ. ಅಂಟು ಒಣಗಿ ಶಿಲಾರಾಳವಾಗಿ ಬದಲಾಗಿ ಕೋಟಿಗಟ್ಟಲೆ ವರ್ಷ ಕಳೆದರೂ ಗಾಜಿನಂತೆ ರಾಳ ಹಾಳಾಗದೇ ಉಳಿದಿರುತ್ತದೆ. ಅದರೊಳಗಿನ ಸೊಳ್ಳೆಯ ರಕ್ತದ ಒಣಕಣಗಳಿಂದ ಡೈನೊಸಾರ್‌ ಡಿಎನ್‌ಎಯನ್ನು ವಿಜ್ಞಾನಿಗಳು ಎತ್ತಿ ತಂದು ಈಗಿನ ಉಡದಂಥ ಪ್ರಾಣಿಗಳ ಭ್ರೂಣಕ್ಕೆ ಸೇರಿಸಿ ಹೊಸ ದೈತ್ಯಜೀವಿಗಳನ್ನು ಸೃಷ್ಟಿಸುತ್ತಾರೆ.

ನಶಿಸಿಹೋದ ಜೀವಿಗಳನ್ನು ಮತ್ತೆ ಸೃಷ್ಟಿ ಮಾಡಲೆಂದು ಈಗಂತೂ ಅನೇಕ ಸಂಶೋಧನಾ ಸಂಸ್ಥೆಗಳು ಪೈಪೋಟಿ ನಡೆಸುತ್ತಿವೆ. ಮರುಸೃಷ್ಟಿ ಮಾಡಬೇಕಾದ ಜೀವಿಗಳ ಪಟ್ಟಿಯೂ ಸಾಕಷ್ಟು ಉದ್ದವಿದೆ. ಮಾರಿಷಸ್‌ ದ್ವೀಪದ ಡೋಡೋ ಪಕ್ಷಿ, ಅಮೆರಿಕದ ಪ್ಯಾಸೆಂಜರ್‌ ಪಿಜನ್‌, ಆಸ್ಟ್ರೇಲಿಯಾದ ತಾಸ್ಮಾನಿಯನ್‌ ಟೈಗರ್‌... ಹೀಗೆ. ಇವುಗಳಲ್ಲಿ ಹಿಮಗಜಗಳಿಗೇ ಮೊದಲ ಪ್ರಾಶಸ್ತ್ಯ. ಏಕೆಂದರೆ, ಇವು ಮತ್ತೆ ಜೀವಿಸಿ ಬಂದು ಉತ್ತರ ಧ್ರುವದ ಬಳಿ ಹಿಂಡು ಹಿಂಡಾಗಿ ಓಡಾಡತೊಡಗಿದರೆ ಹಿಮದ ಹಾಸುಗಳು ಮತ್ತಷ್ಟು ಕರಗದಂತೆ ತಡೆಯಬಹುದು ಎಂಬುದು ವಿಜ್ಞಾನಿಗಳ ಕನಸು.

ಹಿಮಗಜಗಳ ಅಸ್ಥಿಗಳಿಂದ ಡಿಎನ್‌ಎಯನ್ನು ಕಷ್ಟಪಟ್ಟು ಸಂಗ್ರಹಿಸಿದ ವಿಜ್ಞಾನಿಗಳು ಅವನ್ನು ಏಷ್ಯಾದ ಆನೆಗಳ ಡಿಎನ್‌ಎ ಜೊತೆ ಹೋಲಿಸಿ ನೋಡಿದರು. ಹಿಮಗಜದ ವಿಶೇಷ ಲಕ್ಷಣಗಳನ್ನು (ಉದ್ದ ಕೂದಲು, ಕೊಬ್ಬಿನ ದಪ್ಪ ತುಪ್ಪಳ, ಉಣ್ಣೆಯ ಚರ್ಮ ಇವನ್ನೆಲ್ಲ) ಪ್ರತಿನಿಧಿಸುವ ಜೀನ್‌ಗಳು ನಮ್ಮ ಈಗಿನ ಆನೆಗಳಲ್ಲಿ ಎಲ್ಲಿ ಮಾಯವಾಗಿವೆ ಎಂಬುದನ್ನು ಕಂಡುಕೊಂಡರು. ಹಿಮಗಜದ ಡಿಎನ್‌ಎಯಲ್ಲಿ ಆ ಜೀನ್‌ಗಳು ಎಲ್ಲಿವೆ ಎಂಬುದು ಗೊತ್ತಾಯಿತು. ಇನ್ನೇನು, ಏಷ್ಯಾದ ಆನೆಗಳ ಭ್ರೂಣದಲ್ಲಿನ ಜೀವಕೋಶವನ್ನು ಹೊರಕ್ಕೆಳೆದು ಅದರಲ್ಲಿನ ವರ್ಣತಂತುವಿನಲ್ಲಿ ಹಿಮಗಜದ ವಿಶೇಷ ಜೀನ್‌ಗಳನ್ನು ಸೇರಿಸಬೇಕು. ನಂತರ (ಈ ಹಿಂದೆ ಡಾಲಿ ಕುರಿಮರಿಯನ್ನು ಸೃಷ್ಟಿಸಿದ ಹಾಗೆ) ಬೇರೊಂದು ಆನೆಯ ಗರ್ಭಕೋಶದಲ್ಲಿ ಹೀಗೆ ತಿದ್ದುಪಡಿ ಮಾಡಿದ ವರ್ಣತಂತುವನ್ನು ಸೇರಿಸಬೇಕು. ಆದರೆ ಹೇಳಿಕೇಳಿ ಅದು ಗಜಪ್ರಸವವಾಗುತ್ತದೆ! ಹೊಸ ಸಂತಾನ ಪಡೆಯಲು ಕನಿಷ್ಠ 18 ತಿಂಗಳು ಬೇಕು.

2028ರೊಳಗೆ ಹಿಮಗಜವನ್ನು ಸೃಷ್ಟಿ ಮಾಡಿಯೇ ತೀರುತ್ತೇನೆಂದು ಅಮೆರಿಕದ ಡಾಲ್ಲಸ್‌ ನಗರದ ‘ಕೊಲೊಸಸ್‌’ ಹೆಸರಿನ ಕಂಪನಿ ಸಾರ್ವಜನಿಕರಿಂದ ಬಂಡವಾಳ ಸಂಗ್ರಹಿಸಿತ್ತು. ಆನೆಯ ಗರ್ಭದಲ್ಲೇ ಹಿಮಗಜಕ್ಕೆ ಜನ್ಮ ಕೊಡುವಷ್ಟು ವ್ಯವಧಾನ ಇಲ್ಲವಲ್ಲ? ಹಾಗಾಗಿ ತುಸು ತುರ್ತಾಗಿ ಇಲಿಯ ಭ್ರೂಣದಲ್ಲಿರುವ ಜೀವಕೋಶಗಳ ಡಿಎನ್‌ಎಗೇ ಹಿಮಗಜದ ವಿಶೇಷ ಜೀನ್‌ಗಳನ್ನು ಜೋಡಿಸಿ ಹೊಲಿಗೆ ಹಾಕಿತು (ಇದಕ್ಕೆ ‘ಜೀನ್‌ ಎಡಿಟಿಂಗ್‌’ ಎನ್ನುತ್ತಾರೆ. ಪಠ್ಯಗಳ ಎಡಿಟ್‌ ಮಾಡುವವರು ಒಂದು ವಾಕ್ಯದ ಕೆಲವು ಪದಗಳನ್ನು ತೆಗೆದು ಬೇರೆ ಪದಗಳನ್ನು ಜೋಡಿಸಿದ ಹಾಗೆ; ಇದು ಕುಲಾಂತರಿ ತಂತ್ರಜ್ಞಾನಕ್ಕಿಂತ ಭಿನ್ನ ಹೇಗೆಂದರೆ- ಕುಲಾಂತರಿಯಲ್ಲಿ ಎರಡು ವಿಭಿನ್ನ ಜೀವಿಗಳ ವರ್ಣತಂತುವಿನ ಮೇಲೆ ಕತ್ತಲಲ್ಲಿ ಕತ್ತರಿ ಆಡಿಸಿದಂತೆ ಅಂದಾಜಿನ ಹೊಲಿಗೆ ಹಾಕುವುದು. ಜೀನ್‌ ಎಡಿಟಿಂಗ್‌ ಅಂದರೆ ಹಾಗಲ್ಲ; ಕೆಲವು ಗುಣಗಳನ್ನು ನಿಖರವಾಗಿ ಬದಲಿಸುವುದು; ಒಂದೇ ಜೀವಿಯದ್ದಾದರೂ ಅತ್ತ ಇತ್ತ ಮಾಡುವುದು). ಹಿಮಗಜದ ಉದ್ದ ಕೂದಲನ್ನು ‘ಮಾತ್ರ’ ಪ್ರತಿನಿಧಿಸುವ ಜೀನ್‌ಗಳು ಇಲಿ ಮರಿಗಳಲ್ಲಿ ವ್ಯಕ್ತವಾಗುವಂತೆ ಮಾಡಿ ತಾನು ಅಂತಿಮ ಗುರಿಯತ್ತ ಯಶಸ್ಸಿನ ಹಾದಿಯಲ್ಲಿದ್ದೇನೆ ಎಂದು ಕೊಲೊಸಸ್‌ ಕಂಪನಿ ಷೇರುದಾರರಿಗೆ ತುರ್ತಾಗಿ ತೋರಿಸಬೇಕಿತ್ತು. ಹೊಸ ಇಲಿಮರಿಗಳು ಜನಿಸಿದಾಗ ಕಂಪನಿಯ ಖುಷಿಗೆ ಪಾರವೇ ಇರಲಿಲ್ಲ. ತಾನು ನಿರೀಕ್ಷಿಸಿರದಿದ್ದ ಬಂಗಾರದ ಬಣ್ಣದ ಉದ್ದ ಕೂದಲುಗಳುಳ್ಳ ಇಲಿಮರಿಗಳೇ ಜನಿಸಿದವು.

ತಳಿಗುಣಗಳ ತಿದ್ದುಪಡಿ ಮಾಡುವ ತಂತ್ರಜ್ಞಾನ ಈಗಾಗಲೇ ಅನೇಕ ಬಗೆಯ ಸಸ್ಯಗಳಲ್ಲಿ, ಪ್ರಾಣಿಗಳಲ್ಲಿ ಅಷ್ಟೇಕೆ ಮನುಷ್ಯರಲ್ಲೂ ಯಶಸ್ವಿಯಾಗಿ ಬಳಕೆಗೆ ಬರುತ್ತಿದೆ. ರೋಗನಿರೋಧಕ, ಬರ ನಿರೋಧಕ, ಕಳೆನಿರೋಧಕ ಸಸ್ಯಗಳು ಸೃಷ್ಟಿಯಾಗಿವೆ. ಕೋಡುಗಳೇ ಮೂಡದ ದನಗಳ ತಳಿಯನ್ನು ಸೃಷ್ಟಿಸಲಾಗಿದೆ. ಮನುಷ್ಯರಿಗೆ ಜೋಡಿಸಬಲ್ಲ ಅಂಗಾಂಗ ದಾನಕ್ಕೆಂದೇ ವಿಶೇಷ ತಳಿಯ ಹಂದಿಗಳನ್ನು ರೂಪಿಸಲಾಗಿದೆ. ಹಾಗಿರುವಾಗ ನಿರ್ವಂಶವಾದ ಜೀವಿಗಳ ಮರುಸೃಷ್ಟಿಗೆ ಯಾರಾದರೂ ಯಾಕೆ ತಕರಾರು ಎತ್ತಬೇಕು?

ಎತ್ತಲು ನೂರೊಂದು ಕಾರಣಗಳಿವೆ: ನಿಸರ್ಗದಲ್ಲಿ ಇಲ್ಲದ ಅದೆಷ್ಟೊ ಬಗೆಯ ವಿಷದ್ರವ್ಯಗಳನ್ನು ವಿಜ್ಞಾನಿಗಳು ಸೃಷ್ಟಿಸಿದ್ದಾರೆ. ಅದರಲ್ಲಿ ಲಾಭಕ್ಕಿಂತ ಹೆಚ್ಚು ಅಪಾಯಗಳೇ ಇವೆ ಎಂದು ಗೊತ್ತಾದಾಗ, ಹೇಗೋ ನಿಯಂತ್ರಣ, ನಿಷೇಧ ಹಾಕಿ ಅಂಥ ಅಸ್ತ್ರಗಳನ್ನು ಹಿಂದಕ್ಕೆ ಪಡೆಯಬಹುದು. ಆದರೆ ಅಪಾಯಕಾರಿ ಜೀವಿಯನ್ನು ಸೃಷ್ಟಿಸಿದರೆ ಅದರ ನಿಯಂತ್ರಣ ನಮ್ಮ ಕೈಮೀರಬಹುದು. ಸಂಕೀರ್ಣ ಜೀವಜಾಲದಲ್ಲಿ ಏನೆಲ್ಲ ಏರುಪೇರು ಆಗಬಹುದು. ಅದೂ ಅಲ್ಲದೆ, ಹಿಮಗಜದಂಥ ದೈತ್ಯಜೀವಿಗಳ ಸೃಷ್ಟಿಕ್ರಿಯೆಯಲ್ಲಿ ಅನೇಕ ತೊಡಕುಗಳಿವೆ. ಈಗಿನ ಚಿನ್ನದ ಇಲಿಗಳನ್ನು ಸೃಷ್ಟಿಸುವ ಮೊದಲು ಅನೇಕ ವಿಕಾರ ಭ್ರೂಣಗಳನ್ನು ಹೊಸಕಿ ಹಾಕಲಾಗಿದೆ. ಅದೆಷ್ಟೊ ವಿಕಲಾಂಗ ಇಲಿಮರಿಗಳನ್ನು ಕೊಲ್ಲಲಾಗಿದೆ. ಈಗ ಉಳಿದಿರುವ ಈ ಚಂದದ ಜೀವಿಗಳು ಮುಂದೆ ಏನೇನು ಸಂಕಟ ಅನುಭವಿಸುತ್ತವೊ ಗೊತ್ತಿಲ್ಲ. ಆನೆಗಳ ಮೇಲಿನ ಪ್ರಯೋಗ ಎಡವಟ್ಟಾದರೆ ಅವುಗಳ ಗರ್ಭದಿಂದ ಹೊರಬರುವ ಹಿಮಗಜಗಳ ಮರಿಗಳ ಗತಿ ಏನು, ತಾಯಿಯ ಗತಿ ಏನು? ಇಂಥ ನೈತಿಕ ಪ್ರಶ್ನೆ ಹೇಗೂ ಇರಲಿ; ಹಿಂದಿನ ಪರಿಸರಕ್ಕೆ ಹೊಂದಿಕೊಳ್ಳದೇ ಗತಿಸಿದ್ದ ಜೀವಿಗಳು ಇಂದಿನ ಪರಿಸರಕ್ಕೆ ಹೊಸ ಸಮಸ್ಯೆ ಒಡ್ಡಿದರೆ ಏನಾದೀತು?

ಎಲ್ಲಕ್ಕಿಂತ ಮುಖ್ಯವಾದ ಪ್ರಶ್ನೆ ಏನೆಂದರೆ, ಮನುಷ್ಯನ ಕೃತ್ಯಗಳಿಂದಾಗಿಯೇ ಅನೇಕ ಜೀವಿಗಳು ನಿರ್ವಂಶವಾಗುವ ಹಂತಕ್ಕೆ ಬಂದಿವೆ. ಅವುಗಳನ್ನು ರಕ್ಷಿಸುವ ಕಡೆ ವಿಜ್ಞಾನದ ಆದ್ಯತೆ ಇರಬೇಕೆ ವಿನಾ, ರೋಚಕತೆಯೇ ಪ್ರಧಾನವಾದರೆ ಹೇಗೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.