ADVERTISEMENT

ವಿಜ್ಞಾನ ವಿಶೇಷ: ಹೊಗೆಬಣವೆಯಲ್ಲಿ ಸೂಜಿಗಳು

ಮಲಿನಗಾಳಿ ತುಂಬಿಕೊಳ್ಳಲು ನಮ್ಮಲ್ಲಿರುವಷ್ಟು ಶ್ವಾಸಕೋಶಗಳು ಬೇರಾವ ದೇಶದಲ್ಲೂ ಇಲ್ಲ

ನಾಗೇಶ ಹೆಗಡೆ
Published 8 ನವೆಂಬರ್ 2023, 23:30 IST
Last Updated 8 ನವೆಂಬರ್ 2023, 23:30 IST
   

ಮೊನ್ನೆ ಭಾನುವಾರ ಆಗ್ರಾದ ತಾಜಮಹಲ್‌ ಕಣ್ಮರೆಯಾಯಿತು. ಹಿಂದೆ 2000ದ ನವೆಂಬರ್‌ 8ರಂದು ಖ್ಯಾತ ಜಾದೂಗಾರ ಪಿ.ಸಿ. ಸೊರ್ಕಾರ್‌ (ಜ್ಯೂ) ಎರಡು ನಿಮಿಷಗಳ ಕಾಲ ಇದನ್ನು ಮಾಯ ಮಾಡಿದ್ದು ದಾಖಲೆಯಾಗಿತ್ತು. ಅದಕ್ಕಿಂತ ತುಸು ಮುಂಚೆ 1998ರಲ್ಲಿ ಅಮೆರಿಕದ ಜಾದೂಗಾರ ಫ್ರಾಂಝ್‌ ಹರಾರಿ ಆಗ್ರಾಕ್ಕೆ ಬಂದು ಒಂದು ನಿಮಿಷದ ಮಟ್ಟಿಗೆ ತಾಜಮಹಲನ್ನು ಮಾಯ ಮಾಡಿದ್ದ.

ಈ ಬಾರಿ ಅಂಥ ಕಣ್ಕಟ್ಟು, ಜಾದೂಗೀದೂ ಏನೂ ಇರಲಿಲ್ಲ. ಇಡೀ ಆಗ್ರಾಕ್ಕೆ ಕಂಬಳಿ ಹೊದೆಸಿದಂತೆ ಹೊಂಜು
(ಹೊಗೆ+ಮಂಜು) ಆವರಿಸಿತ್ತು. ಆಗ್ರಾ ಒಂದೇ ಅಲ್ಲ, ಉತ್ತರ ಭಾರತದ ಆರು ರಾಜ್ಯಗಳ 133 ನಗರಗಳಲ್ಲಿ ವಾಯುಮಾಲಿನ್ಯವು ಸುರಕ್ಷಾ ಮಟ್ಟಕ್ಕಿಂತ ಅದೆಷ್ಟೊ ಪಟ್ಟು ಮೇಲಕ್ಕೇರಿ ಕೂತಿದೆ. ಹಾಗೆಂದು ಇದು ಈಗಿನ ವಿದ್ಯಮಾನ ಏನಲ್ಲ; ಕಳೆದ ಹತ್ತು ವರ್ಷಗಳಿಂದ ದೀಪಾವಳಿಯ ಆಸುಪಾಸಿನ ದಿನಗಳಲ್ಲಿ ಇದೇ ಕತೆ. ಅದರಲ್ಲೂ ದಿಲ್ಲಿಯದು ಎಲ್ಲಕ್ಕಿಂತ ಲಜ್ಜಾಸ್ಪದ ಕತೆ. 2017ರಲ್ಲಿ ದಟ್ಟ ಹೊಂಜಿನಿಂದಾಗಿ ಶ್ರೀಲಂಕಾ ಕ್ರಿಕೆಟ್‌ ತಂಡ ದಿಲ್ಲಿಯಲ್ಲಿ ಮುಖವಾಡ ಧರಿಸಿ ಆಟಕ್ಕೆ ಇಳಿದಿತ್ತು. ಎರಡನೆಯ ದಿನ ವಿರಾಟ್‌ ಕೊಹ್ಲಿ 230-35–40 ರನ್‌ ಪೇರಿಸುತ್ತಿದ್ದಾಗ ಶ್ರೀಲಂಕಾ ಫೀಲ್ಡರ್‌ಗಳು ವಾಂತಿಗೀಂತಿ ಮಾಡಿಕೊಂಡು, ವೈದ್ಯರನ್ನು ಕರೆಸುವಂತಾಗಿ ಆಟವನ್ನು ಅರ್ಧಕ್ಕೇ ನಿಲ್ಲಿಸಲು ಒತ್ತಾಯ ಬಂದಾಗ ಕೊಹ್ಲಿ ಅದನ್ನು ವಿರೋಧಿಸಿ ಪ್ಯಾಡ್‌ ಸಮೇತ ಧರಣಿ ಕೂತು ಏನೆಲ್ಲ ರಂಪಾಟ ಅಗಿತ್ತು (ಮೊನ್ನೆ ಶನಿವಾರವೂ ಶ್ರೀಲಂಕಾ ತಂಡ ವಾಯುಮಾಲಿನ್ಯಕ್ಕೆ ಬೆದರಿ ಅಭ್ಯಾಸ ಮಾಡಲು ಕಣಕ್ಕಿಳಿಯಲಿಲ್ಲ).

ದಿಲ್ಲಿಯಲ್ಲಿ ಮಾಲಿನ್ಯ ನಿಯಂತ್ರಣದ ಕೊನೆಯ ಅಸ್ತ್ರವಾಗಿ ಈ ಬಾರಿ ಮತ್ತೆ ಸಮ–ಬೆಸ ಸಂಖ್ಯೆಯ ವಾಹನಗಳ ನಿಯಮವನ್ನು ಜಾರಿಗೆ ತರಲಾಗುತ್ತಿದೆ. ಶಾಲೆ–ಕಾಲೇಜುಗಳು ಬಂದ್‌; ಕಾರ್ಖಾನೆಗಳು ಬಂದ್‌; ಕಟ್ಟಡ ನಿರ್ಮಾಣ, ರಸ್ತೆ ರಿಪೇರಿ ಬಂದ್‌. ಗಡಿಯಾಚೆಯಿಂದ ಭಾರಿ ವಾಹನಗಳ ಪ್ರವೇಶಕ್ಕೆ ತಡೆ; ಕ್ರೀಡಾಂಗಣದಲ್ಲಿ ಪಟಾಕಿ ಸಿಡಿತಕ್ಕೆ ತಡೆ. ಆದರೂ ವಾಯುವಿನ ಗುಣಮಟ್ಟದ ಸೂಚ್ಯಂಕ (ಎಕ್ಯುಐ) ತಗ್ಗುವ ಲಕ್ಷಣ ಕಾಣುತ್ತಿಲ್ಲ.

ADVERTISEMENT

ಅಂದಹಾಗೆ, ಗಾಳಿಯ ಗುಣಮಟ್ಟವನ್ನು ಆರು ಹಂತಗಳಲ್ಲಿ ವಿಂಗಡಿಸುತ್ತಾರೆ: 0-50 ಅತ್ಯುತ್ತಮ (ದಟ್ಟ ಹಸಿರು); 51-100 ಉತ್ತಮ (ಹಳದಿ), 101-150 ಕೆಲವರಿಗೆ ಅಪಾಯ (ಕೇಸರಿ), 151-200 ಅಪಾಯ (ಕೆಂಪು), 201-300 ಜಾಸ್ತಿ ಅಪಾಯ (ನೇರಳೆ), 301ಕ್ಕಿಂತ ಹೆಚ್ಚಿನದು ತೀವ್ರ ಅಪಾಯ (ಕಾಫಿಬಣ್ಣ), ಹೀಗೆ. ನಿನ್ನೆ ದಿಲ್ಲಿಯ ಆನಂದ ವಿಹಾರ್‌ ಎಂಬಲ್ಲಿ ಎಕ್ಯುಐ 990ಕ್ಕೇರಿತ್ತು. ಭಾರತ ತನ್ನದೇ ಪ್ರತ್ಯೇಕ (ತುಸು ಸಡಿಲದ) ಗುಣಮಟ್ಟ ಸೂಚ್ಯಂಕವನ್ನು ಸಿದ್ಧಪಡಿಸಿದ್ದು, ಅದರ ಪ್ರಕಾರ 400ರ ನಂತರದ್ದು ಮಾತ್ರ ಅಪಾಯಕಾರಿ ಎಂದು ಗುರುತಿಸಲಾಗುತ್ತಿದೆ. ಯಾವ ಸೂಚ್ಯಂಕದ ಪ್ರಕಾರ ನೋಡಿದರೂ ಉತ್ತರ ಭಾರತದ ಎಲ್ಲ 133 ನಗರಗಳಲ್ಲೂ ಕೆಂಪು, ನೇರಳೆ, ಕಾಫಿಬಣ್ಣದ ಚೌಕಳಿಗಳೇ ಕಾಣಿಸುತ್ತಿವೆ. ಎಲ್ಲಿ ನೋಡಿದರೂ ಕೋವಿಡ್‌ ಕಾಲದ ಮುಖವಾಡಗಳೇ ಕಾಣುತ್ತಿವೆ.

ಉತ್ತರ ಭಾರತದ ಗಾಳಿ ಅಷ್ಟು ಕೊಳೆಯಾಗಿರಲು ಮುಖ್ಯ ಕಾರಣ ಏನೆಂದರೆ, ಅಲ್ಲೆಲ್ಲ ಜನಸಾಗರ ದಟ್ಟವಾಗಿ ಇದೆಯೇ ಹೊರತೂ ಸಾಗರದ ತಟ ಇಲ್ಲ. ಗೋಡೆಯಂತೆ ಆಚೆ ಹಿಮಾಲಯ ನಿಂತಿದೆ. ಹಾಗಾಗಿ ಚಳಿಗಾಲ ಬಂತೆಂದರೆ ಗಾಳಿಯ ಸಂಚಾರ ತೀರ ಕಡಿಮೆಯಾಗುತ್ತದೆ. ಸಾಲದ್ದಕ್ಕೆ ಕಲ್ಲಿದ್ದಲಿನ ಬಳಕೆ ಜಾಸ್ತಿ ಇರುವುದರಿಂದ ಹೊಗೆ ಎಲ್ಲ ಊರುಗಳಲ್ಲೂ ಕಾಣುತ್ತದೆ. ಎಲ್ಲಕ್ಕಿಂತ ಮುಖ್ಯ ಕಾರಣ ಏನೆಂದರೆ, ಮುಂಗಾರಿನ ಭತ್ತದ ಕೊಯ್ಲು ಮುಗಿಸಿದ ತಕ್ಷಣವೇ ಹಿಂಗಾರಿಗೆ ಗೋಧಿಯ ಬಿತ್ತನೆಗೆಂದು ಭತ್ತದ ಕೂಳೆಗಳಿಗೆ ಬೆಂಕಿ ಕೊಡುತ್ತಾರೆ. ಹೊಗೆ ಮತ್ತು ಮಂಜು ಎರಡೂ ಸೇರಿ ತಾಜಮಹಲ್‌ ಅಷ್ಟೇಕೆ, ಎಲ್ಲ ಐತಿಹಾಸಿಕ ಕೋಟೆ–ಕಟ್ಟಡಗಳಿಗೂ ಹೊಂಜಿನ ಚಾದರ ಹೊದೆಸಿದಂತಾಗುತ್ತದೆ. ವಿಡಿಯೊ
ಗ್ರಾಫರ್‌ಗಳೂ ಪರದಾಡುವಂತಾಗಿದೆ. ರಾಷ್ಟ್ರಪತಿ ಭವನವನ್ನೊ, ಕೆಂಪುಕೋಟೆಯನ್ನೊ ದೂರದಿಂದ ಚಿತ್ರಿಸಹೋದರೆ ಏನೂ ಕಾಣುವುದಿಲ್ಲ. ತೀರ ಸಮೀಪಕ್ಕೆ ಹೋದರೆ ಇಡೀ ಚಿತ್ರಣ ಸಿಗುವುದಿಲ್ಲ.

ದಿಲ್ಲಿಯ ಕೊಳೆಗಾಳಿಯನ್ನು ನಿಭಾಯಿಸಲು ವಿಜ್ಞಾನಿಗಳು, ತಂತ್ರಜ್ಞರು ಸೂಚಿಸಿದ ಉಪಾಯಗಳನ್ನೆಲ್ಲ
ಜಾರಿಗೆ ತರಲು ಸರ್ಕಾರಗಳೇನೋ ಯತ್ನಿಸುತ್ತಿವೆ. ಕಲ್ಲಿದ್ದಲನ್ನು ಉರಿಸುವ ಕಾರ್ಖಾನೆಗಳನ್ನು, ಉಷ್ಣ ವಿದ್ಯುತ್‌ ಸ್ಥಾವರಗಳನ್ನು ದೂರ ಸಾಗಿಸಲಾಗಿದೆ. ರಸ್ತೆಗೆ ತುಂತುರು ಸಿಂಚನ ನಡೆಯುತ್ತಿದೆ. ಬೇಹುಲ್ಲನ್ನು ಸುಟ್ಟ ಹೊಗೆಯೇ ಮಾಲಿನ್ಯಕ್ಕೆ ಮುಖ್ಯ (ಶೇ 47ರಷ್ಟು) ಕಾರಣ ಎಂಬುದು ಹೊಗೆಕಣಗಳ ಪರೀಕ್ಷೆಯ ನಂತರ ಗೊತ್ತಾಗಿದೆ. ಅದನ್ನು ನಿಲ್ಲಿಸುವುದು ಹೇಗೆ? ಭತ್ತದ ಬಿತ್ತನೆಯನ್ನು ಹಿಂದಕ್ಕೆ ಹಾಕಲು ಸಾಧ್ಯವಿಲ್ಲ ಅಥವಾ ಗೋಧಿಯ ಬಿತ್ತನೆಯನ್ನು ಮುಂದಕ್ಕೆ ಹಾಕಲು ಸಾಧ್ಯವಿಲ್ಲ. ನೀರಿರಬೇಕಲ್ಲ? ಕೊಳವೆಬಾವಿಗಳಿಂದ ನೀರೆತ್ತಲು ಹೋದರೆ ಡೀಸೆಲ್‌ ಹೊಗೆಯ ಹಾವಳಿ (ಜಾಸ್ತಿ ನೀರನ್ನು ಬೇಡುವ ‘ಪೂಸಾ44’ ತಳಿಯ ಭತ್ತಕ್ಕೆ ನಿಷೇಧ ಹಾಕಲಾಗಿದೆ). ಭತ್ತದ ಕೂಳೆಯನ್ನು ಪ್ರತ್ಯೇಕ ಕಟಾವು ಮಾಡಿ ಹುಲ್ಲನ್ನು ಪ್ಯಾಕ್‌ ಮಾಡಬಲ್ಲ ಸಾವಿರಾರು ‘ಬೇಲರ್‌’ ಯಂತ್ರಗಳನ್ನು ವಿತರಿಸಲಾಗಿದೆ, ಆದರೆ ಅವು ಕೂಳೆಯನ್ನು ಅರೆಬರೆ ಕತ್ತರಿಸುತ್ತವೆ. ಅರ್ಧಕ್ಕರ್ಧ ಕೆಟ್ಟು ಕೂತಿವೆ (ಹಾಗಾಗಿ ಸದ್ಯ ಅವು ಡೀಸೆಲ್‌ ಹೊಗೆಯನ್ನು ಉಗುಳುತ್ತಿಲ್ಲ!). ಕೂಳೆಯನ್ನು ಕೊಳೆಯಿಸಿ ಇಥೆನಾಲ್‌ ತಯಾರಿಸುವ ಘಟಕಗಳಿವೆ. ಆದರೆ ಅವು ಊರೂರಲ್ಲಿಲ್ಲ, ದೂರದಲ್ಲಿವೆ.

ಹೊಂಜಿನ ಜೊತೆಜೊತೆಗೆ ಮಾಲಿನ್ಯ ನಿಯಂತ್ರಣ ಕುರಿತ ರಾಜಕೀಯ ವಿವಾದಗಳ ಹೊಗೆಯೂ ದಿಲ್ಲಿಯನ್ನು ದಟ್ಟ ಆವರಿಸಿದೆ. ಹರಿಯಾಣ ಮತ್ತು ಉತ್ತರಪ್ರದೇಶದ ಸರ್ಕಾರಗಳನ್ನು ಆಮ್‌ ಆದ್ಮಿ ಪಕ್ಷ ದೂಷಿಸುತ್ತಿದೆ. ಅಲ್ಲಿನ ಡೀಸೆಲ್‌ ವಾಹನಗಳ ಹೊಗೆ ದಿಲ್ಲಿಗೆ ಬರುತ್ತಿದೆಯಂತೆ. ದಿಲ್ಲಿ ಮತ್ತು ಪಂಜಾಬ್‌ನ ಸರ್ಕಾರಗಳನ್ನು ಬಿಜೆಪಿ ದೂಷಿಸುತ್ತಿದೆ. ಈ ನಡುವೆ ರಾಜಸ್ಥಾನದ (ಕಾಂಗ್ರೆಸ್‌ ಆಡಳಿತದ) ಹೊಗೆಯೂ ದಿಲ್ಲಿಗೆ ತಲುಪುತ್ತಿದೆ. ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್‌ ದಿಲ್ಲಿಯನ್ನು ಅದರ ಪಾಡಿಗೆ ಬಿಟ್ಟು ಚುನಾವಣಾ ಪ್ರಚಾರಕ್ಕೆ ಹೋಗಿದ್ದೇಕೆಂದು ಕಾಂಗ್ರೆಸ್‌ ದೂರುತ್ತಿದೆ. ವಿವಾದಗಳ ಬಣವೆಯಲ್ಲಿ ಪ್ರತಿಪಕ್ಷಗಳ ವೈಫಲ್ಯದ ಸೂಜಿಗಳನ್ನು ಹುಡುಕುವ ಪೈಪೋಟಿ ಎಲ್ಲ ಪಕ್ಷಗಳಲ್ಲೂ ಕಾಣುತ್ತಿದೆ. ಪರಿಸರ ರಕ್ಷಣೆಗೆ ಹಣ ಬಿತ್ತನೆ ಆಗುತ್ತಿದೆ ವಿನಾ ಜನರ ಪಾಲುದಾರಿಕೆ ಕಾಣುತ್ತಿಲ್ಲ.

‘ಜಗತ್ತಿನ ಅತ್ಯಂತ ದಟ್ಟ ಕೊಳಕು ಗಾಳಿಯ 14 ನಗರಗಳೆಲ್ಲ ಒಂದೇ ದೇಶದಲ್ಲಿವೆ’ ಎಂದು ಭಾರತವನ್ನು ಹೆಸರಿಸಿ 2018ರ ಮೇ ತಿಂಗಳಲ್ಲಿ ವಿಶ್ವ ಸ್ವಾಸ್ಥ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿತ್ತು. ಅಂಥ ಸಮೀಕ್ಷೆಯನ್ನು ಈಗ ನಡೆಸಿದರೆ ಇನ್ನಷ್ಟು ನಗರಗಳು ಸೇರ್ಪಡೆ ಆಗುತ್ತಿದ್ದವು. ಯಾವ ಯಾವ ನಗರಗಳಲ್ಲಿ ಶ್ವಾಸಕೋಶದ ಕಾಯಿಲೆಗಳಿಗೆ ಸಂಬಂಧಿಸಿದ ಔಷಧಗಳು ಮತ್ತು ಉಪಕರಣಗಳ ಮಾರಾಟ ಯಾವ ತಿಂಗಳುಗಳಲ್ಲಿ, ಎಷ್ಟು ವೇಗದಲ್ಲಿ ಹೆಚ್ಚುತ್ತಿದೆ ಎಂಬ ಸಂಖ್ಯಾಲೇಖವನ್ನು ಯಾವ ಸಂಸ್ಥೆಯೂ ಸಿದ್ಧಪಡಿಸಿದಂತಿಲ್ಲ. ಇದ್ದುದರಲ್ಲಿ ಈ ಬಾರಿ ದೀಪಾವಳಿಯಲ್ಲಿ ಪಟಾಕಿ ಸುಡುವ ಪ್ರಮಾಣ ತುಸು ಕಡಿಮೆ ಆಗುವಂತಿದೆ. ನಿರ್ಬಂಧ ಸಾಕಷ್ಟು ಕಟ್ಟುನಿಟ್ಟಾಗುವಂತೆ ದಿಲ್ಲಿಯೊಂದರಲ್ಲೇ 400ಕ್ಕೂ ಹೆಚ್ಚು ವೀಕ್ಷಣಾ ತಂಡಗಳನ್ನು ನೇಮಿಸಲಾಗುತ್ತಿದೆ. ‘ಮಕ್ಕಳಿಗೆ ಪಟಾಕಿ ಬೇಕಾಗಿಲ್ಲ; ದೊಡ್ಡವರೇ ಸುಡುತ್ತಾರೆ’ ಎಂದು ಸುಪ್ರೀಂ ಕೋರ್ಟ್‌ನ ಜಸ್ಟಿಸ್‌ ಬೋಪಣ್ಣ ಹೇಳಿದ್ದಾರೆ. ಹಾಗಿದ್ದರೆ ನಮ್ಮ ದೇಶದ ಪ್ರತಿ ಮನೆಯಲ್ಲೂ ಇರಬಹುದಾದ ವೀಕ್ಷಕರ ಸಬಲೀಕರಣ ಆಗಬೇಕಿದೆ. ಶಾಲೆಗಳಲ್ಲೇ ಆ ಕೆಲಸ ನಡೆಯಬೇಕಿದೆ.

ಜಾದೂಗಾರರಿಂದ ಆರಂಭಿಸಿದ ಈ ಅಂಕಣವನ್ನು ಜಾದೂಗಾರನಿಂದಲೇ ಮುಗಿಸಬೇಕಲ್ಲವೆ? ‘ಶ್ವಾಸಕೋಶ
ಎಂಬ ಈ ಜೋಡಿಚೀಲ ಇಲ್ಲದಿದ್ದಿದ್ದರೆ ಇಷ್ಟೊಂದು ಮಲಿನಗಾಳಿಯನ್ನು ಇಡೋಕೆ ಜಾಗವೇ ಇರುತ್ತಿರಲಿಲ್ಲ’ ಎಂದು ಅಮೆರಿಕದ ಜಾದೂಗಾರ ಮತ್ತು ಹಾಸ್ಯಸಾಹಿತಿ ರಾಬರ್ಟ್‌ ಆರ್ಬೆನ್‌ ಹೇಳಿದ್ದ.

ನಮ್ಮಲ್ಲಿರುವಷ್ಟು ‘ಚೀಲ’ಗಳು ಬೇರೆ ಯಾವ ದೇಶದಲ್ಲಿವೆ ಹೇಳಿ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.