ADVERTISEMENT

ಶುಕ್ರವಾರ ಹೊರಡಲಿದೆ ಜಂಬೂಸವಾರಿ

ವಿಶ್ವ ವಿಖ್ಯಾತ ದಸರಾ ಮೆರವಣಿಗೆಗೆ ಅರಮನೆ ನಗರಿ ಮೈಸೂರು ಸಜ್ಜು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2018, 19:54 IST
Last Updated 17 ಅಕ್ಟೋಬರ್ 2018, 19:54 IST
ಅರ್ಜುನ ಸಿದ್ಧ... ಜಂಬೂಸವಾರಿಗೆ ಪೂರ್ವಭಾವಿಯಾಗಿ ಬುಧವಾರ ಮೈಸೂರು ಅರಮನೆ ಆವರಣದಲ್ಲಿ ಗಜಪಡೆ ತಾಲೀಮು ನಡೆಯಿತು –ಪ್ರಜಾವಾಣಿ ಚಿತ್ರ
ಅರ್ಜುನ ಸಿದ್ಧ... ಜಂಬೂಸವಾರಿಗೆ ಪೂರ್ವಭಾವಿಯಾಗಿ ಬುಧವಾರ ಮೈಸೂರು ಅರಮನೆ ಆವರಣದಲ್ಲಿ ಗಜಪಡೆ ತಾಲೀಮು ನಡೆಯಿತು –ಪ್ರಜಾವಾಣಿ ಚಿತ್ರ   

ಮೈಸೂರು: ಜನಮನ ಸೆಳೆಯುವ, ಕಣ್ಮನ ತಣಿಸುವ, ಸಾಂಸ್ಕೃತಿಕ ಶ್ರೀಮಂತಿಕೆಯ ದಸರಾ ಜಂಬೂಸವಾರಿಗೆ ಅರಮನೆಗಳ ನಗರಿಯ ರಾಜಪಥ ಸಿಂಗಾರಗೊಂಡಿದೆ. ಬೆಳಕಿನ ವೈಭವ ಅದಕ್ಕೆ ಮತ್ತಷ್ಟು ಮೆರುಗು ತುಂಬಿದೆ.

750 ಕೆ.ಜಿ. ಚಿನ್ನದ ಅಂಬಾರಿ ಹೊತ್ತು ಸಾಗುವ ಕ್ಯಾಪ್ಟನ್‌ ಅರ್ಜುನ ಸಾರಥ್ಯದ ಗಜಪಡೆಯ ವಯ್ಯಾರ ಕಣ್ತುಂಬಿಕೊಳ್ಳುವ ಕಾತರ ಎಲ್ಲರ ಮನದಲ್ಲಿ ಈಗ ಜೋರಾಗಿದೆ.

ನಾಡಹಬ್ಬದ ಪ್ರಧಾನ ಆಕರ್ಷಣೆ ವಿಶ್ವಪ್ರಸಿದ್ಧ ಜಂಬೂಸವಾರಿ ಅ.19ರಂದು ನಡೆಯಲಿದೆ. ಈ ವೈಭವಕ್ಕಾಗಿ ಮಳೆ ನಡುವೆಯೇ ಸಾಂಸ್ಕೃತಿಕ ನಗರಿಯಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ.

ADVERTISEMENT

ಶುಕ್ರವಾರ ಮಧ್ಯಾಹ್ನ 2.30ರಿಂದ 3.16ರೊಳಗೆ ಸಲ್ಲುವ ಕುಂಭ ಲಗ್ನದಲ್ಲಿ ಕೋಟೆ ಆಂಜನೇಯ ಸ್ವಾಮಿ ದೇಗುಲದ ಆವರಣದಲ್ಲಿ ನಂದಿಧ್ವಜ ಪೂಜೆ ನೆರವೇರಲಿದೆ. ಮಧ್ಯಾಹ್ನ 3.40ರಿಂದ 4.10ರೊಳಗೆ ಅರಮನೆ ಆವರಣದಲ್ಲಿ ಮೆರವಣಿಗೆಗೆ ಚಾಲನೆ ಸಿಗಲಿದೆ. ಕೆ.ಆರ್‌.ವೃತ್ತದ ಮೂಲಕ ಸಯ್ಯಾಜಿರಾವ್‌ ರಸ್ತೆಯಲ್ಲಿ ಸಾಗಿ 5 ಕಿ.ಮೀ ದೂರವಿರುವ ಬನ್ನಿಮಂಟಪ ತಲುಪಲಿದೆ.

ಧನಂಜಯ ಆನೆ ಇದೇ ಮೊದಲ ಬಾರಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿದೆ. 12 ಆನೆಗಳ ಜೊತೆಗೆ ಅಶ್ವದಳ, ಪೊಲೀಸ್ ವಾದ್ಯವೃಂದ, ಕಲಾ
ತಂಡಗಳು, 43 ಸ್ತಬ್ಧಚಿತ್ರಗಳು ಸಾಗಲಿವೆ. 30 ಜಿಲ್ಲೆಗಳಿಂದ ವೈವಿಧ್ಯಮಯ ಪರಿಕಲ್ಪನೆಗಳಲ್ಲಿ ಸ್ತಬ್ಧಚಿತ್ರ ಮೂಡಿಬಂದಿವೆ.

ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿಗೆ ಬರುತ್ತಿದ್ದು, ನಗರದಲ್ಲಿನ ಬಹುತೇಕ ಹೋಟೆಲ್‌ ಕೊಠಡಿಗಳು ಭರ್ತಿಯಾಗಿವೆ. ರಾಜಪಥದ ಪ್ರಮುಖ ಸ್ಥಳಗಳಲ್ಲಿ ಎಲ್‌ಇಡಿ ಪರದೆ ಅಳವಡಿಸಿ ಮೆರವಣಿಗೆ ನೇರ ಪ್ರಸಾರ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಬಿಗಿ ಬಂದೋಬಸ್ತ್‌ ಮಾಡಿದ್ದು, ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ‘ಮೊಬೈಲ್‌ ಕಮಾಂಡ್‌ ಸೆಂಟರ್‌’ ವಾಹನವು ಕಣ್ಣಿಡಲಿದೆ.

ಪಂಜಿನ ಕವಾಯತು: ಬನ್ನಿಮಂಟಪದಲ್ಲಿ ಶುಕ್ರವಾರ ರಾತ್ರಿ 8 ಗಂಟೆಗೆ ಪಂಜಿನ ಕವಾಯತು ನಡೆಯಲಿದೆ. ರಾಜ್ಯಪಾಲ ವಜುಭಾಯಿ ವಾಲಾ ಕವಾಯತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸುವರು.

ಕಾಳಗಕ್ಕೆ ಜಟ್ಟಿಗಳು ಸಿದ್ಧ

ಐತಿಹಾಸಿಕ ವಜ್ರಮುಷ್ಟಿ ಕಾಳಗಕ್ಕೆ ನಾಲ್ವರು ಜಟ್ಟಿಗಳು ಸಿದ್ಧರಾಗುತ್ತಿದ್ದಾರೆ. ವಿಜಯದಶಮಿ ದಿನ ಶುಕ್ರವಾರ ಅರಮನೆಯ ಕರಿಕಲ್ಲುತೊಟ್ಟಿ ಅಂಗಳದಲ್ಲಿ ನಡೆಯುವ ಕಾಳಗದಲ್ಲಿ ಬೆಂಗಳೂರಿನ ರಾಘವೇಂದ್ರ ಜಟ್ಟಿ– ಚಾಮರಾಜನಗರ ಪುರುಷೋತ್ತಮ್‌ ಜಟ್ಟಿ ಹಾಗೂ ಮೈಸೂರಿನ ಮಂಜುನಾಥ ಜಟ್ಟಿ– ಚನ್ನಪಟ್ಟಣದ ವಿದ್ಯಾಧರ ಜಟ್ಟಿ ಸೆಣಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.