ADVERTISEMENT

ಮತ್ತೊಂದು ದಸರೆಯ ಉಸ್ತುವಾರಿ ಬೇಡಪ್ಪಾ...ಬೇಡ: ಸಚಿವ ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2019, 15:57 IST
Last Updated 6 ಅಕ್ಟೋಬರ್ 2019, 15:57 IST
   

ಮೈಸೂರು: ‘ಮತ್ತೊಂದು ದಸರೆಯ ಉಸ್ತುವಾರಿ ಬೇಡಪ್ಪಾ...ಬೇಡ’ ಎಂದು ಸಚಿವ ವಿ.ಸೋಮಣ್ಣ ಭಾನುವಾರ ಕೈ ಮುಗಿದರು.

‘ಎಲ್ಲರನ್ನೂ ಜತೆಯಲ್ಲಿ ತೆಗೆದುಕೊಂಡು ಹೋಗುವಷ್ಟರಲ್ಲಿ ಸುಸ್ತಾಗಿದ್ದೇನೆ. ರಕ್ತದೊತ್ತಡ ಮತ್ತು ಮಧುಮೇಹ ಜೊತೆಯಾಗಿವೆ’ ಎಂದು ಸುದ್ದಿಗೋಷ್ಠಿಯಲ್ಲಿ ಚಟಾಕಿ ಹಾರಿಸಿದರು.

‘ಅರಮನೆಯಲ್ಲಿ 22ರಿಂದ 23 ಸಾವಿರ ಆಸನದ ವ್ಯವಸ್ಥೆ ಇದೆ. ಎಲ್ಲರೂ ಪಾಸ್ ಬೇಕು ಎಂದು ಒತ್ತಡ ಹಾಕಿದರೆ ಏನು ಮಾಡಲು ಸಾಧ್ಯ’ ಎಂದು ಪ್ರಶ್ನಿಸಿದ ಸಚಿವರು, ಒಂದು ವೇಳೆ ಮುಂದಿನ ದಸರಾ ಉಸ್ತುವಾರಿ ತಮಗೇ ಸಿಕ್ಕರೆ, ಪಾಸ್‌ ವ್ಯವಸ್ಥೆಯಲ್ಲಿ ಈಗ ಆಗಿರುವ ಎಲ್ಲ ಗೊಂದಲಗಳನ್ನೂ ಪರಿಹರಿಸುವುದಾಗಿ ಭರವಸೆ ನೀಡಿದರು.

ADVERTISEMENT

‘ಮೇಯರ್ ಹಾಗೂ ಪಾಲಿಕೆ ಸದಸ್ಯರ ಕಚೇರಿಗಳಿಗೆ ಸ್ವತಃ ಹೋಗಿ ಅವರ ಬೇಡಿಕೆ ಈಡೇರಿಸಲಾಗಿದೆ. ಕೊಟ್ಟಿರುವ ಪಾಸ್‌ಗಳು ಸಾಕಾಗುತ್ತಿಲ್ಲ ಎಂದು ರಾತ್ರೋರಾತ್ರಿ ಪ್ರತಿಭಟನೆಗೆ ಕುಳಿತರೆ, ನಾನೇನು ಎಳೆಮಗುವೇ ಹೋಗುವುದಕ್ಕೆ?’ ಎಂದು ಕಿಡಿಕಾರಿದರು.

ಸಾ.ರಾ ಮಹೇಶ್‌, ತನ್ವೀರ್‌ ಸೇಠ್‌ರಿಂದ ಸಹಕಾರ

‘ಅವರು ಹೇಳಿದ್ದನ್ನೆಲ್ಲ ಸರಿ ಎಂದು ಒಪ್ಪಿಕೊಂಡು ಬಂದ ನನ್ನ ಒಳ್ಳೆಯತನವನ್ನು ಅವರು ದುರುಪಯೋಗ ಮಾಡಿಕೊಂಡಿದ್ದಾರೆ. ಸದ್ಯ, ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಹಾಗೂ ಕಾಂಗ್ರೆಸ್ ಶಾಸಕ ತನ್ವೀರ್‌ಸೇಠ್ ಇವರು ಪ್ರತಿಭಟನೆಯನ್ನು ವಾಪಸ್ ತೆಗೆದುಕೊಳ್ಳಲು ಮಹತ್ವದ ಪಾತ್ರ ವಹಿಸಿದ್ದಾರೆ. ಇವರನ್ನು ಶ್ಲಾಘಿಸುತ್ತೇನೆ’ ಎಂದರು.

ಮಾಡೋದು ಮಾಡಿ ನನ್ನ ಸಿಕ್ಕಿಸಿದರು

‘ಚಂದನ್‌ ಶೆಟ್ಟಿ ನನ್ನದೇ ಕ್ಷೇತ್ರದ ಮತದಾರ. ಫೋನ್‌ ಮಾಡಿ ತಪ್ಪಾಯಿತು ಎನ್ನುತ್ತಾರೆ. ಇವರು ಮಾಡುವುದನ್ನು ಮಾಡಿ ನನ್ನನ್ನು ಸಿಕ್ಕಿಸಿ ಹಾಕಿದ್ದಾರೆ. ನಿಜವಾಗಿಯೂ ಈ ಪ್ರಕರಣದಿಂದ ನೋವಾಗಿದೆ. ಅವರಿಗೆ ನೋಟಿಸ್ ನೀಡಲಾಗಿದೆ. ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.