ADVERTISEMENT

ವಿಜಯದಶಮಿಯಂದು ಬನ್ನಿ ಮರಕ್ಕೆ ಪೂಜೆ: ಪುರಾಣ ಹೇಳುವುದೇನು?

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2025, 7:38 IST
Last Updated 2 ಅಕ್ಟೋಬರ್ 2025, 7:38 IST
<div class="paragraphs"><p>ಸಾಂದರ್ಭಿಕ ಚಿತ್ರ–ಕೃಪೆ ಎಐ</p></div>

ಸಾಂದರ್ಭಿಕ ಚಿತ್ರ–ಕೃಪೆ ಎಐ

   

ದೇಶದಾದ್ಯಂತ ವಿಜಯದಶಮಿಯನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತಿದೆ. ಈ ಹಬ್ಬದ ದಿನದಂದು ಬನ್ನಿ ಮರಕ್ಕೆ (ಶಮೀ ವೃಕ್ಷ) ಪೂಜಿಸಿ, ಬಳಿಕ ‘ಬನ್ನಿ ಬಂಗಾರವಾಗಲಿ ಬಾಳು ಸಿಹಿಯಾಗಲಿ‘ ಎಂದು ಪರಸ್ಪರ ಬನ್ನಿ ಕೊಟ್ಟು ಶುಭ ಹಾರೈಸುತ್ತಾರೆ. ಹಾಗಿದ್ದರೆ, ಈ ವಿಜಯದಶಮಿಯಂದು ಬನ್ನಿ ಮರಕ್ಕೆ ಪೂಜಿಸುವುದು ಯಾಕೆ? ಅದರ ಹಿಂದಿನ ಮಹತ್ವ ಏನು ಎಂಬುದನ್ನು ನೋಡೋಣ ಬನ್ನಿ.

ಮಹಾಭಾರತ ಕಥೆಯ ಪ್ರಕಾರ, ವನವಾಸ ಮುಗಿಸಿದ ಬಳಿಕ ಪಾಂಡವರು ಅಜ್ಞಾತ ವಾಸಕ್ಕೆ ಹೋಗುವ ಮೊದಲು ಬನ್ನಿ ಮರಕ್ಕೆ ತಮ್ಮ ಆಯುಧಗಳನ್ನು ಕಟ್ಟಿ ಇಟ್ಟಿರುತ್ತಾರೆ. ಅಜ್ಞಾತವಾಸ ಮುಗಿಸಿಕೊಂಡ ಬರುವವರೆಗೂ ಯಾರೊಬ್ಬರೂ ಅವುಗಳನ್ನು ತೆಗೆದುಕೊಂಡು ಹೋಗಿರುವುದಿಲ್ಲ. ಹೀಗಾಗಿ ತಮ್ಮ ಆಯುಧಗಳನ್ನು ಕಾಪಾಡಿಕೊಂಡು ಬಂದ ಬನ್ನಿ ಮರಕ್ಕೆ ಪಾಂಡವರು ನಮಸ್ಕರಿಸುತ್ತಾರೆ.

ADVERTISEMENT

ಅಲ್ಲಿಂದ ತಮ್ಮ ಆಯುಧಗಳನ್ನು ಮರಳಿ ಪಡೆದ ಪಾಂಡವರು, ಅವುಗಳನ್ನು ತೊಳೆದು ಪೂಜಿಸಿ ಕುರುಕ್ಷೇತ್ರ ಯುದ್ಧಕ್ಕೆ ಸನ್ನದ್ಧರಾಗುತ್ತಾರೆ. ಆದ್ದರಿಂದ ವಿಜಯ ದಶಮಿ ತಿಥಿಯಂದು ಬನ್ನಿ ಮರವನ್ನು ಪೂಜಿಸುವ ಸಂಪ್ರದಾಯವಿದೆ. ಮಾತ್ರವಲ್ಲ, ಜನರು ಕೂಡ ಬನ್ನಿ ಮರದ ಎಲೆಯನ್ನು ಕೊಟ್ಟು ಬನ್ನಿ ಬಂಗಾರವಾಗಲಿ ಬಾಳು ಸಿಹಿಯಾಗಲಿ ಎಂದು ಪರಸ್ಪರ ಶುಭಾಶಯ ಕೋರುವುದು ಪದ್ಧತಿ.

ಬನ್ನಿಯನ್ನು ಬಂಗಾರ ಎನ್ನುವುದೇಕೆ?

ಬನ್ನಿಯನ್ನು ಬಂಗಾರ ಎಂದು ಕರೆಯಲು ತ್ರೇತಾಯುಗದ ಕಥೆಯೊಂದಿದೆ. ಕೌಸ್ತ ಎಂಬ ವಿದ್ಯಾರ್ಥಿಯು ವಿದ್ಯಾಭ್ಯಾಸದ ಬಳಿಕ ತನ್ನ ಗುರುವಿಗೆ ಗುರುದಕ್ಷಿಣೆ ಕೊಡಲು ಇಚ್ಛಿಸುತ್ತಾನೆ. ಇದನ್ನು ಗುರುಗಳ ಜೊತೆ ಹಂಚಿಕೊಂಡಾಗ, ಗುರುಗಳು ಸಹಸ್ರ ಕೋಟಿ ಚಿನ್ನದ ನಾಣ್ಯಗಳನ್ನು ಕೇಳುತ್ತಾರೆ.

ಗುರುಗಳು ಕೇಳಿದಷ್ಟು ಚಿನ್ನದ ನಾಣ್ಯಗಳನ್ನು ಎಲ್ಲಿಂದ ತರುವುದು ಎಂದು ಯೋಚಿಸಿದ ವಿದ್ಯಾರ್ಥಿ ರಘು ರಾಜನ ಬಳಿಗೆ ಹೋಗಿ ಗುರುಗಳಿಗೆ ನೀಡಲು ಸಹಸ್ರ ಕೋಟಿ ಚಿನ್ನದ ನಾಣ್ಯಗಳು ಬೇಕು ದಯವಿಟ್ಟು ಕೊಡಿ ಎಂದು ಕೌಸ್ತ ಮನವಿ ಮಾಡಿಕೊಳ್ಳುತ್ತಾನೆ.

ಬಳಿಕ ರಾಜನು ಕುಬೇರನನ್ನು ಪ್ರಾರ್ಥಿಸಿಕೊಳ್ಳುತ್ತಾನೆ. ಆಗ ಅಲ್ಲಿಯೇ ಇದ್ದ ಶಮೀ ಮರದ ಒಂದೊಂದು ಎಲೆಯೂ ಚಿನ್ನದ ನಾಣ್ಯವಾಗುತ್ತವೆ. ಇದರಿಂದ ಸಂತಸಗೊಂಡ ಕೌಸ್ತನು ನಾಣ್ಯಗಳನ್ನು ಗುರುಗಳಿಗೆ ಅರ್ಪಿಸುತ್ತಾನೆ. ಗುರುದಕ್ಷಿಣೆ ನೀಡಿ, ಉಳಿದ ನಾಣ್ಯಗಳನ್ನು ದಾನ ಮಾಡುತ್ತಾನೆ. ಆದ್ದರಿಂದ ಶಮೀ (ಬನ್ನಿ) ಮರವೆಂದರೇ ಬಂಗಾರ ಎನ್ನುವ ಪ್ರತೀತಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.