ADVERTISEMENT

ದಿನದ ಸೂಕ್ತಿ| ದಯೆ ಇರಲಿ

ಎಸ್.ಸೂರ್ಯಪ್ರಕಾಶ ಪಂಡಿತ್
Published 16 ಜನವರಿ 2021, 1:23 IST
Last Updated 16 ಜನವರಿ 2021, 1:23 IST
help
help   

ದೀನಗೋಚರದಯಾಪರಿಹೀನಂ

ಯಸ್ಯ ಮಾನಸಮತೀವ ಕಠೋರಮ್‌ ।

ತೇನ ಭೂಮಿರತಿಭಾರವತೀಯಂ

ADVERTISEMENT

ನ ದ್ರುಮೈರ್ನ ಗಿರಿಭಿರ್ನ ಸಮುದ್ರೈಃ ।।

ಇದರ ತಾತ್ಪರ್ಯ ಹೀಗೆ:

‘ದೀನರ ವಿಷಯದಲ್ಲಿ ದಯೆಯಿಲ್ಲದೆ ಯಾರ ಮನಸ್ಸು ಕಠೋರವಾಗಿರುತ್ತದೆಯೋ, ಅವನಿಂದ ಭೂಮಿಗೆ ಭಾರವಾಗಿದೆಯೆ ಹೊರತು ಮರಗಳು, ಬೆಟ್ಟಗಳು ಮತ್ತು ಸಮುದ್ರಗಳಿಂದ ಖಂಡಿತ ಅಲ್ಲ.’

ಕಷ್ಟದಲ್ಲಿರುವವರ, ಎಂದರೆ ದೀನರ ಸಹಾಯಕ್ಕೆ ಯಾರು ಮುಂದಾಗುವುದಿಲ್ಲವೋ ಅವರ ಜೀವನ ವ್ಯರ್ಥ ಎಂದು ಸುಭಾಷಿತ ಹೇಳುತ್ತಿದೆ. ಅಂಥವರು ಭೂಮಿಗೇ ಭಾರ ಎಂದು ಹೇಳುವ ಮೂಲಕ ಅವರ ಜೀವನ ಅತ್ಯಂತ ಹೇಯವಾದುದು ಎಂದೇ ಸಾರುತ್ತಿದೆ, ಸುಭಾಷಿತ.

ಸುಭಾಷಿತದ ಈ ಮಾತನ್ನು ಲಂಚವಿಲ್ಲದೆ ಕೆಲಸವನ್ನೇ ಮಾಡದ ಸರ್ಕಾರಿ ಅಧಿಕಾರಿಗಳು, ನೌಕರರು; ಪದವಿ, ಆಸ್ತಿಸಂಪಾದನೆಗಾಗಿ ಮಾತ್ರವೇ ರಾಜಕಾರಣಕ್ಕೆ ಬರುತ್ತಿರುವ ಪುಢಾರಿಗಳು ಗಮನಿಸಬೇಕು.

ಪ್ರಕೃತಿ ನಮ್ಮ ಮೇಲೆ ದಯೆಯನ್ನು ತೋರಿಸಿದರೆ ಮಾತ್ರ ನಮ್ಮ ಜೀವನ ಚೆನ್ನಾಗಿ ನಡೆಯುತ್ತದೆ; ಇಲ್ಲವಾದಲ್ಲಿ ನಮಗೆ ಜೀವನವೇ ಇರುವುದಿಲ್ಲ. ಕಾಲಕಾಲಕ್ಕೆ ಮಳೆ ಆಗಬೇಕು; ಸೂರ್ಯ ಉದಯಿಸಬೇಕು; ಗಾಳಿ ಬೀಸಬೇಕು; ಬೀಜದಿಂದ ಮೊಳಕೆ ಒಡೆಯಬೇಕು; ಭೂಮಿ ತನ್ನ ಸಾರವನ್ನು ಮೊಳಕೆಗೆ ನೀಡಬೇಕು. ಹೀಗೆ ಪ್ರತಿಕ್ಷಣವೂ ನಮಗಾಗಿ ಪ್ರಕೃತಿ ದಯೆಯಿಂದ ನಡೆದುಕೊಳ್ಳುತ್ತಿರುತ್ತದೆ. ಹೀಗೆಯೇ ಹಲವರು ನಮ್ಮ ಜೀವನಕ್ಕಾಗಿ ತಮ್ಮ ಜೀವನವನ್ನು ಸವೆಸುತ್ತಿರುತ್ತಾರೆ. ಇದರ ಅರ್ಥ, ‘ನಾವು ಯಾರ ಮುಂದೆಯೂ ಕೈ ಒಡ್ಡುತ್ತಿಲ್ಲ, ಯಾರ ದಯೆಯೂ ನಮಗೆ ಬೇಡ; ನಾವೇನೂ ದೀನರಲ್ಲ‘ – ಹೀಗೆಂದು ತಿಳಿದುಕೊಂಡು ಅಹಂಕಾರದಿಂದ ವರ್ತಿಸುತ್ತಿರುತ್ತೇವೆ. ಆದರೆ ನಾವು ಕೇಳದಿದ್ದರೂ ಹಲವರು ನಮಗಾಗಿ ತ್ಯಾಗಮಾಡುತ್ತಲೇ ಇರುತ್ತಾರೆ; ಇದನ್ನು ನಾವು ಅರಿತುಕೊಳ್ಳಬೇಕು.

ಇನ್ನೊಬ್ಬರ ಕಷ್ಟಗಳನ್ನು ಪರಿಹರಿಸಬಲ್ಲ ಸ್ಥಿತಿಯಲ್ಲಿದ್ದಾಗ ನಾವು ದಯೆಯಿಂದ ನಡೆದುಕೊಳ್ಳಬೇಕು. ನಮ್ಮ ಜೀವನ ಹಲವರಿಗೆ ಋಣಿಯಾಗಿದೆ; ಹೀಗಾಗಿ ನಾವು ಹಲವರಿಗೆ ಕೃತಜ್ಞರಾಗಿರಬೇಕು. ಈ ಋಣವನ್ನು ತೀರಿಸುವ ವಿಧಾನವೇ ಕಷ್ಟದಲ್ಲಿರುವ ದೀನರಿಗೆ ನಾವು ಸಹಾಯ ಮಾಡುವುದು. ಇದನ್ನು ನಾವು ತಿಳಿದುಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.