ADVERTISEMENT

ದಿನದ ಸೂಕ್ತಿ: ಜೀವನಪಾಠ

ಎಸ್.ಸೂರ್ಯಪ್ರಕಾಶ ಪಂಡಿತ್
Published 23 ಸೆಪ್ಟೆಂಬರ್ 2020, 0:45 IST
Last Updated 23 ಸೆಪ್ಟೆಂಬರ್ 2020, 0:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕ್ಷಣಶಃ ಕಣಶಶ್ಚೈವ ವಿದ್ಯಾಮರ್ಥಂ ಚ ಸಾಧಯೇತ್‌ ।

ಕ್ಷಣತ್ಯಾಗೇ ಕುತೋ ವಿದ್ಯಾ ಕಣತ್ಯಾಗೇ ಕುತೋ ಧನಮ್‌ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ಒಂದು ಕ್ಷಣವನ್ನೂ ವ್ಯರ್ಥಮಾಡದೇ ವಿದ್ಯೆಯನ್ನು ಸಂಪಾದಿಸಬೇಕು. ಒಂದು ಚೂರು ಕೂಡ ಪೋಲಾಗದಂತೆ ಧನವನ್ನು ಸಂಗ್ರಹಿಸಬೇಕು. ಒಂದೇ ಒಂದು ಕ್ಷಣ ವ್ಯರ್ಥವಾದರೂ ವಿದ್ಯೆ ಬಾರದು; ಹೀಗೆಯೇ ಸ್ವಲ್ಪ ಸ್ವಲ್ಪವೇ ದುಡ್ಡು ಪೋಲಾಗುತ್ತಹೋದರೆ ಧನವೇ ಉಳಿಯುವುದಿಲ್ಲ.‘

ವಿದ್ಯೆಯನ್ನು ಸಂಪಾದಿಸುವುದು ಸುಲಭವಲ್ಲ. ಹೀಗೆಯೇ ಹಣವನ್ನು ಸಂಪಾದಿಸುವುದೂ ಸುಲಭವಲ್ಲ. ಈ ಸಂಗತಿಯನ್ನೇ ಸುಭಾಷಿತ ಹೇಳುತ್ತಿರುವುದು.

ಒಂದೇ ದಿನದಲ್ಲಿ ಯಾರೂ ವಿದ್ಯಾವಂತರೂ ಆಗುವುದಿಲ್ಲ; ಧನವಂತರೂ ಆಗುವುದಿಲ್ಲ. ಸ್ವಲ್ಪ ಸ್ವಲ್ಪವೇ ವಿದ್ಯೆಯನ್ನಾಗಲೀ ಹಣವನ್ನಾಗಲೀ ಸಂಪಾದಿಸಬೇಕಾಗುತ್ತದೆ. ಈ ಸಂಪಾದನೆಯಲ್ಲೂ ಒಂದು ಜಾಣ್ಮೆಯನ್ನು ಮೈಗೂಡಿಸಿಕೊಳ್ಳಬೇಕು ಎಂಬುದನ್ನು ಸುಭಾಷಿತ ಇಲ್ಲಿ ಹೇಳುತ್ತಿದೆ.

ಸಂಗ್ರಹಕ್ಕಿಂತಲೂ, ಈಗಾಗಲೇ ಸಂಗ್ರಹವಾಗಿರುವುದು ಪೋಲಾಗಬಾರದು ಎಂಬುದೇ ವಿದ್ಯೆಯನ್ನಾಗಲೀ ಹಣವನ್ನಾಗಲೀ ನಾವು ಸಂಗ್ರಹಿಸುವಾಗ ಎಚ್ಚರ ವಹಿಸಬೇಕಾದ ಸಂಗತಿ. ವಿದ್ಯೆಯ ಸಂಪಾದನೆಯ ಸಂದರ್ಭದಲ್ಲಿ ನಾವು ಎಚ್ಚರ ವಹಿಸಬೇಕಾದ್ದು ಕಾಲನಿರ್ವಹಣೆಯ ಬಗ್ಗೆ. ಸಮಯ ತುಂಬ ಅಮೂಲ್ಯವಾದುದು. ಕಳೆದು ಹೋದ ಒಂದೇ ಒಂದು ಕ್ಷಣವನ್ನೂ ನಾವು ಮತ್ತೆ ಎಷ್ಟೆಲ್ಲ ಸಾಹಸ ಪಟ್ಟರೂ, ಎಷ್ಟೆಲ್ಲ ಖರ್ಚು ಮಾಡಿದರೂ ಮರಳಿ ಪಡೆಯಲು ಸಾಧ್ಯವಿಲ್ಲ. ಆದುದರಿಂದ ಒಂದೊಂದು ಕ್ಷಣವನ್ನೂ ನಾವು ಜಾಣತನದಿಂದ ಬಳಸಿಕೊಳ್ಳಬೇಕು; ಸಮಯ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು. ಒಂದೊಂದು ಕ್ಷಣವೂ ನಾವು ಏನನ್ನಾದರೂ ಕಲಿಯುತ್ತಿರಲು ಸಾಧ್ಯ. ಹೀಗಾಗಿ ನಮ್ಮ ಒಂದೊಂದು ಕ್ಷಣವನ್ನು ಕೂಡ ವಿದ್ಯೆಯ ಸಂಪಾದನೆಗಾಗಿಯೇ ಮೀಸಲಾಗಿಡಬೇಕು.

ಹಣವನ್ನು ಕೂಡಿಡುವಾಗ ನಾವು ಗಮನಿಸಬೇಕಾದ್ದು ಅದು ಎಲ್ಲೂ ಪೋಲಾಗದ ಹಾಗೆ ಅದರ ರಕ್ಷಣೆ. ಒಂದೊಂದು ಪೈಸೆಯಾದರೂ ಅದು ವ್ಯರ್ಥವಾಗಿ ಸೋರಿಹೋಗುತ್ತಿದ್ದರೆ ಕಾಲಕ್ರಮೇಣ ಎಂಥ ದೊಡ್ಡ ಧನಸಂಗ್ರಹವಾದರೂ ಕರಗಿಹೋಗುವುದು ನಿಶ್ಚಯ. ಹೀಗಾಗಿ ಹಣವನ್ನು ಸಂಪಾದಿಸುವುದೇ ಮುಖ್ಯವಲ್ಲ; ಅದರ ಸರಿಯಾದ ಬಳಕೆ ಅದಕ್ಕಿಂತಲೂ ಮುಖ್ಯ.

ಸದ್ಯದ ಸಂದರ್ಭದಲ್ಲಂತೂ ಸುಭಾಷಿತದ ಹಿತವಚನವನ್ನು ನಾವು ತಪ್ಪದೆ ಪಾಲಿಸದಿದ್ದರೆ ನಮಗೆ ತೊಂದರೆ ಎದುರಾಗುವುದು ಖಂಡಿತ. ಈಗ ಹಲವು ರೀತಿಯ ಸಮಸ್ಯೆಗಳನ್ನು ನಾವೆಲ್ಲರೂ ಎದುರಿಸುತ್ತಿದ್ದೇವೆ. ಇದರಲ್ಲಿ ಆರ್ಥಿಕ ಬಿಕ್ಕಟ್ಟೂ ಸೇರಿದೆ; ವಿದ್ಯೆಯ ಸಂಪಾದನೆಯೂ ಸೇರಿದೆ. ನಮ್ಮಲ್ಲಿ ಈಗ ಇರುವ ಹಣವನ್ನು ತುಂಬ ಎಚ್ಚರಿಕೆಯಿಂದ ಬಳಸಬೇಕು. ಹೀಗೆಯೇ ಒಂದೊಂದು ನಿಮಿಷವನ್ನೂ ಎಚ್ಚರಿಕೆಯಿಂದ ಸದುಪಯೋಗಮಾಡಿಕೊಂಡು ನಮ್ಮ ತಿಳಿವಳಿಕೆಯ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು.

ಹೇಗೆ ಮನೆಯಲ್ಲಿಯ ನಲ್ಲಿಯ ನೀರನ್ನು ವ್ಯರ್ಥವಾಗಿ ಸೋರಿಹೋಗಲು ನಾವು ಬಿಡುವುದಿಲ್ಲವೋ, ಹಾಗೆಯೇ ನಮ್ಮ ಜೇಬಿನಲ್ಲಿರುವ ದುಡ್ಡನ್ನೂ ಅನಗತ್ಯವಾಗಿ ಸೋರಿಹೋಗದಂತೆ ನೋಡಿಕೊಳ್ಳಬೇಕು. ನಮಗೆ ಉಚಿತವಾಗಿ ದೊರೆತಿರುವ ಕಾಲವನ್ನು ಉಚಿತವಾದ ರೀತಿಯಲ್ಲಿ ವಿನಿಯೋಗಿಸಿಕೊಳ್ಳಬೇಕು. ಇದೇ ಜೀವನಪಾಠ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.