ADVERTISEMENT

ದಿನದ ಸೂಕ್ತಿ: ಗೃಹಿಣಿಯೇ ಗೃಹ

ಎಸ್.ಸೂರ್ಯಪ್ರಕಾಶ ಪಂಡಿತ್
Published 28 ನವೆಂಬರ್ 2020, 19:31 IST
Last Updated 28 ನವೆಂಬರ್ 2020, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನ ಗೃಹಂ ಗೃಹಮಿತ್ಯಾಹುರ್ಗೃಹಿಣೀ ಗೃಹಮುಚ್ಯತೇ ।
ಗೃಹಂ ತು ಗೃಹಿಣೀಹೀನಮರಣ್ಯಸದೃಶಂ ಭವೇತ್‌ ।।

ಇದರ ತಾತ್ಪರ್ಯ ಹೀಗೆ:

‘ಕೇವಲ ಒಂದು ಕಟ್ಟಡವನ್ನು ಗೃಹ, ಎಂದರೆ ಮನೆ, ಎಂದು ಬಲ್ಲವರು ಹೇಳುವುದಿಲ್ಲ. ಗೃಹಿಣಿಯೇ ಗೃಹ ಎನಿಸಿಕೊಳ್ಳುತ್ತಾಳೆ. ಗೃಹಿಣಿಯಿಲ್ಲದ ಮನೆ ಕಾಡಿಗೆ ಸದೃಶವಾದದ್ದು, ಅಷ್ಟೆ!’

ADVERTISEMENT

ನಮ್ಮ ಕಾಲದಲ್ಲಿ ಮತ್ತೆ ಮತ್ತೆ ಮನನ ಮಾಡಿಕೊಳ್ಳಬೇಕಾದ ಶ್ಲೋಕ ಇದು; ಮಹಾಭಾರತದ್ದು.

ನಾವು ಮನುಷ್ಯರು ವಾಸ ಮಾಡುವುದು ಎಲ್ಲಿ? ಮನೆಯಲ್ಲಿ ತಾನೆ? ಮನೆಗೆ ಇನ್ನೊಂದು ಹೆಸರು ಗೃಹ. ನಮಗೆಲ್ಲರಿಗೂ ಇರಲು ಮನೆ ಬೇಕೇ ಬೇಕು. ಹೀಗಾಗಿ ಮನೆಯನ್ನು ಕಟ್ಟಿಕೊಳ್ಳುವುದೇ ನಮ್ಮ ಜೀವನದ ಮುಖ್ಯೋದ್ದೇಶವನ್ನಾಗಿಯೂ ಮಾಡಿಕೊಂಡಿರುತ್ತೇವೆ. ಇದರಲ್ಲಿ ತಪ್ಪೇನಿಲ್ಲ. ಆದರೆ ಮನೆಯನ್ನು ಕಟ್ಟಿಕೊಳ್ಳಲು ನಾವು ಮಾಡಿಕೊಳ್ಳುವ ಸಿದ್ಧತೆಯಾದರೂ ಹೇಗಿರುತ್ತದೆ? ದೊಡ್ಡ ಸೈಟು, ವಿಶಾಲವಾದ ಮನೆ, ಮನೆಯೊಳಗಡೆ ಐಶಾರಾಮೀ ಪೀಠೋಪಕರಣಗಳು, ಕಾರು–ಆಳು–ಕಾಳು – ಇವಿಷ್ಟೆ ಅಲ್ಲವೆ ನಮ್ಮ ಗೃಹದ ಕಲ್ಪನೆ? ಆದರೆ ಸುಭಾಷಿತ ಬೇರೆಯೇ ರೀತಿಯಲ್ಲಿ ಗೃಹದ ಲಕ್ಷಣವನ್ನು ಹೇಳುತ್ತಿದೆ: ಗೃಹಿಣಿ ಇದ್ದರೆ ಮಾತ್ರ ಗೃಹ; ಅಷ್ಟೇಕೆ, ಗೃಹಿಣಿಯೇ ಗೃಹ. ಇದು ಸುಭಾಷಿತದ ಸ್ಪಷ್ಟ ನಿಲವು.

ಗೃಹಿಣಿ ಎಂದರೆ ಯಾರು? ಅವಳು ಮನೆಯ ಒಡತಿ. ಅವಳ ಪ್ರೀತಿ–ಕಾಳಜಿಗಳಲ್ಲಿಯೇ ಇಡಿಯ ಮನೆ ರೂಪುಗೊಳ್ಳುವಂಥದ್ದು. ಮನೆಯಲ್ಲಿ ಅವಳ ವ್ಯಾಪ್ತಿಗೆ ಬರದ ವಿದ್ಯಮಾನ ಇರದು, ಅವಳ ಭಾವ–ಬುದ್ಧಿಗಳ ಸ್ಪರ್ಶಕ್ಕೆ ಸಿಗದ ವಿವರವೇ ಇರದು. ಇಂಥವಳು ಗೃಹಿಣಿ; ಆದರ್ಶ ಸತಿ, ತಾಯಿ, ಮಗಳು, ಸೊಸೆ, ಅತ್ತೆ, ಅಜ್ಜಿ, ಒಡತಿ, ಸೇವಕಿ, ಮಂತ್ರಿ, ವೈದ್ಯೆ, ಗುರು – ಹೀಗೆ ಅವಳು ಹಲವು ಭಾವರೂಪಗಳಲ್ಲಿ ಮನೆಯನ್ನು ಬೆಳಗುವವಳು. ಇಂಥ ಗೃಹಿಣಿ ಎಲ್ಲಿರುತ್ತಾಳೋ ಅದೇ ದಿಟವಾದ ಗೃಹ. ಇಂಥವಳು ಇಲ್ಲದ ಮನೆ ಅದು ಕಲ್ಲು–ಮಣ್ಣು–ಇಟ್ಟಿಗೆಗಳಲ್ಲಿ ನಿರ್ಮಾಣವಾದ ಬರಿಯ ಕಾಡು ಅಷ್ಟೆ – ಎಂದು ಸುಭಾಷಿತ ಹೇಳುತ್ತಿದೆ.

ಮನೆ ಎಂದರೆ ಅದು ಪ್ರೀತಿ–ವಿಶ್ವಾಸ–ಕಾಳಜಿ–ಜೀವಂತಿಕೆಗಳ ಸಂಗಮಸ್ಥಾನವೇ ಹೊರತು ಬಂಗಾರ–ಬೆಳ್ಳಿ–ವಜ್ರಗಳ ಪ್ರದರ್ಶನವಲ್ಲ. ಇದು ಇಲ್ಲಿರುವ ಧ್ವನಿ. ಗೃಹಿಣೀ ಗೃಹಮುಚ್ಯತೇ – ಎಂದರೆ ಗೃಹಿಣಿಯೇ ಗೃಹ ಎಂದು ಕರೆಯಲ್ಪಡುತ್ತದೆ, ಅಲ್ಲವೆ? ಹೀಗೆಯೇ ಗೃಹಿಣಿ ಇಲ್ಲದಿದ್ದರೆ ಗೃಹ ಮುಚ್ಚುತ್ತೆ – ಎಂದೂ ಹೇಳಬಹುದೆನ್ನಿ!

ಇಲ್ಲಿ ಇನ್ನೊಂದು ಸುಭಾಷಿತವನ್ನೂ ನೋಡಬಹುದು:

ನ ಕಿಂಚಿದಪಿ ಕುರ್ವಾಣಃ ಸೌಖ್ಯೈರ್ದುಃಖಾನ್ಯಪೋಹತಿ ।
ತತ್ತಸ್ಯ ಕಿಮಪಿ ದ್ರವ್ಯಂ ಯೋ ಹಿ ಯಸ್ಯ ಪ್ರಿಯೋ ಜನಃ ।।

‘ಯಾರು ಯಾರ ಪ್ರೀತಿಗೆ ಪಾತ್ರರೋ ಅವರು ಏನನ್ನು ಮಾಡದೇ ಇದ್ದರೂ ಕೇವಲ ಸಾಮೀಪ್ಯದಿಂದಲೇ ದುಃಖವನ್ನು ಹೋಗಲಾಡಿಸುತ್ತಾರೆ. ಅದೇ ಪ್ರೀತಿಯಲ್ಲಿರುವ ಮಹತ್ತರವಾದ ಗುಣ’ – ಇದು ಈ ಶ್ಲೋಕದ ತಾತ್ಪರ್ಯ.

ಪ್ರೀತಿಯ ಶಕ್ತಿಯನ್ನು ಇದು ಹೇಳುತ್ತಿದೆ. ಪ್ರೀತಿಯ ಜೊತೆಗೆ ಕ್ರಿಯಾಶಕ್ತಿಯೂ ಸೇರಿಕೊಂಡ ಗೃಹಿಣಿ ಇರುವ ಮನೆ ಅದು ಗೃಹವಷ್ಟೇ ಅಲ್ಲ, ಸ್ವರ್ಗವೇ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.