ADVERTISEMENT

ದಿನದ ಸೂಕ್ತಿ: ದಿಟವಾದ ಸಾಧನೆ

ಎಸ್.ಸೂರ್ಯಪ್ರಕಾಶ ಪಂಡಿತ್
Published 16 ಆಗಸ್ಟ್ 2020, 0:47 IST
Last Updated 16 ಆಗಸ್ಟ್ 2020, 0:47 IST
ಧ್ಯಾನ
ಧ್ಯಾನ   

ಕಾಮಕ್ರೋಧಾವನಿರ್ಜಿತ್ಯ ಕಿಮರಣ್ಯೇ ಕರಿಷ್ಯತಿ ।

ಅಥವಾ ನಿರ್ಜಿತಾವೇತೌ ಕಿಮರಣ್ಯೇ ಕರಿಷ್ಯತಿ ।।

ಇದರ ತಾತ್ಪರ್ಯ ಹೀಗೆ:

ADVERTISEMENT

’ಕಾಮಕ್ರೋಧಗಳನ್ನು ಜಯಿಸದೆ ಕಾಡಿನಲ್ಲಿ ಏನನ್ನು ತಾನೇ ಮಾಡುತ್ತಾನೆ? ಅಥವಾ ಇವೆರಡನ್ನೂ ಗೆದ್ದಮೇಲೆ ಕಾಡಿನಲ್ಲಿ ಏನನ್ನು ತಾನೆ ಮಾಡುತ್ತಾನೆ?‘

ಸಾಧನೆಯ ದಿಟವಾದ ನೆಲೆ ಎಲ್ಲಿರುತ್ತದೆ – ಎನ್ನುವುದನ್ನು ಈ ಸುಭಾಷಿತ ಹೇಳುತ್ತಿದೆ.

ಅಧ್ಯಾತ್ಮಸಾಧನೆಗೆ ಏಕಾಂತ ಬೇಕು – ಎನ್ನುವುದು ರೂಢಿ. ಈ ಏಕಾಂತವನ್ನು ಅಪೇಕ್ಷಿಸುವುದಾದರೂ ಏಕೆ? ಜನರ ನಡುವೆಯೇ ಇದ್ದರೆ ನಮ್ಮ ರಾಗ–ದ್ವೇಷಗಳಿಂದ ಬಿಡುಗಡೆ ಸಿಗುವುದಿಲ್ಲ ಎಂದು. ಹೀಗೆ ನಮ್ಮ ಸಾಧನೆಗೆ ಜನರು ಅಡ್ಡಬಾರದಿರಲಿ ಎಂದು ಏಕಾಂತಸ್ಥಳಕ್ಕೆ ಧಾವಿಸುತ್ತೇವೆ. ಈ ಏಕಾಂತಸ್ಥಳ ಕಾಡು ಆಗಬಹುದು, ಹಿಮಾಲಯ ಆಗಬಹುದು, ಆಶ್ರಮ ಆಗಬಹುದು. ಆದರೆ ಅಲ್ಲಿಗೆ ಹೋದರೂ ನಮ್ಮ ಇದೇ ಮನಸ್ಸನ್ನೇ ತೆಗೆದುಕೊಂಡುಹೋಗಬೇಕಷ್ಟೆ! ಈ ಮನಸ್ಸು ಅಲ್ಲಿ ಬದಲಾವಣೆಯಾಗದೆ ನಮ್ಮ ಕಲ್ಮಶಗಳು ಹಾಗೇ ಉಳಿದರೆ ನಾವು ಕಾಡಿಗೆ ಹೋಗಿ ಧ್ಯಾನಮಾಡಿದ್ದರ ಫಲವಾದರೂ ಏನು ಎಂಬ ಪ್ರಶ್ನೆ ಮೂಡುತ್ತದೆ.

ಹೀಗೆಯೇ ನಮ್ಮ ಮನಸ್ಸಿನ ಮೇಲೆ ನಮಗೆ ನಿಯಂತ್ರಣವಿದ್ದರೆ ನಾವು ಕಾಡಿಗೋ ಹಿಮಾಲಯಕ್ಕೋ ಏಕಾದರೂ ಹೋಗಬೇಕು? ಈಗಾಗಲೇ ನಮಗೆ ಏಕಾಂತದ ಫಲ, ಧ್ಯಾನದ ಫಲ ಸಿಕ್ಕಿರುವುದರಿಂದ ನಮಗೆ ಅಂಥ ಅನಿವಾರ್ಯತೆಯೇ ಬರುವುದಿಲ್ಲವಷ್ಟೆ!

ಇದರ ತಾತ್ಪರ್ಯ: ನಮ್ಮ ಸಾಧನೆಗೆ ಬೇಕಾಗಿರುವುದು ನಮ್ಮ ಮನಸ್ಸಿನ ಪಕ್ಚತೆಯೇ ಹೊರತು ಸ್ಥಳದ ಮಹಿಮೆಯಲ್ಲ. ಅಂತರಂಗ ಶುದ್ಧಿಯೇ ನಮ್ಮ ಸಾಧನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವಂಥದ್ದು. ಇದು ಹೇಗೆಂದರೆ:

ಕೇಶಾವಧಿ ನಖರಾಗ್ರಾದಿದಮಂತಃ ಪೂತಿಗಂಧಸಂಪೂರ್ಣಮ್‌ ।

ಬಹಿರಪಿ ಜಾನನ್‌ ಚಂದನಕರ್ಪೂರಾದ್ಯೈರ್ವಿಲೇಪಯತಿ ।।

ಇದರ ತಾತ್ಪರ್ಯ:

’ತಲೆಕೂದಲಿನಿಂದ ಉಗುರಿನವರೆಗೂ ದೇಹವು ಒಳಗಡೆ ದುರ್ಗಂಧದಿಂದ ತುಂಬಿದೆ. ಹೊರಗಡೆಯೂ ಅಷ್ಟೆ. ಇದು ಗೊತ್ತಿದ್ದರೂ ಶ್ರೀಗಂಧ–ಕರ್ಪೂರ ಮೊದಲಾದ ಸುಗಂಧಗಳಿಂದ ಹೊರಗಡೆ ಲೇಪನವನ್ನು ಮಾಡಿಕೊಳ್ಳುತ್ತೇವೆ.‘

ವಾಸ್ತವವನ್ನು ಮುಚ್ಚಿಡಲು ಏನೆಲ್ಲ ವೇಷಗಳನ್ನು ಧರಿಸಿದರೂ ಪ್ರಯೋಜವಿರದು; ಸತ್ಯ ಎನ್ನುವುದು ಹೊರಗೆ ಪ್ರಕಟವಾಗುವುದು ನಿಶ್ಚಯ.

ನಮ್ಮ ದೇಹದ ಒಳಗೂ ಹೊರಗೂ ದುರ್ಗಂಧ ಇರುವುದು ದೇಹವನ್ನೂ ಆ ದೇಹದಲ್ಲಿ ಸರಿಯಾಗಿ ಕೆಲಸ ಮಾಡುವ ಮೂಗು, ಎಂದರೆ ವಾಸನೆಯನ್ನು ಗ್ರಹಿಸಬಲ್ಲ ಮೂಗು ಇದ್ದವರ ಪ್ರತ್ಯಾಕ್ಷಾನುಭವಕ್ಕೆ ಬರುತ್ತಲೇ ಇರುತ್ತದೆಯಲ್ಲವೆ? ಈದುರ್ಗಂಧವನ್ನು ಹೋಗಲಾಡಿಸಿಕೊಳ್ಳಲು ಎಂಥ ಕೃತಕ ಸುಗಂಧದ್ರವ್ಯಗಳನ್ನು ಸುರಿದುಕೊಂಡರೂ ಪ್ರಯೋಜವಿರದು. ಈ ಕೃತಕ ಸುವಾಸನೆ ಒಣಗಿದ ಕೂಡಲೇ ದುರ್ಗಂಧ ಮೂಗಿಗೆ ಬಡಿಯಲು ಆರಂಭವಾಗುತ್ತದೆ. ಅಂತೆಯೇ ಮನಸ್ಸಿನಲ್ಲಿ ಕಾಮ–ಕ್ರೋಧ–ದ್ವೇಷಾದಿಗಳನ್ನು ತುಂಬಿಕೊಂಡು ಕಾಡಿಗೆ ಹೋದರೂ ಪ್ರಯೋಜನವಿರದು, ಹಿಮಾಲಯಕ್ಕೆ ಹೋದರೂ ಪ್ರಯೋಜನವಿರದು.

ಭ್ರಷ್ಟಾಚಾರವನ್ನೇ ಸ್ವಭಾವಮಾಡಿಕೊಂಡವರು ಪ್ರಾಮಾಣಿಕತೆಯ ಬಗ್ಗೆ ಉದ್ದುದ್ದ ಭಾಷಣ ಮಾಡಿದರೆ ಅದರಿಂದ ಪ್ರಯೋಜನವೇನು? ಅನಾರೋಗ್ಯದಲ್ಲಿ ನರಳುತ್ತಿರುವವನು ’ನಾನು ಆರೋಗ್ಯವಾಗಿದ್ದೇನೆ‘ ಎಂದು ಘೋಷಿಸಿಕೊಂಡರೆ ಅದರಿಂದ ಪ್ರಯೋಜನವೇನು?

ಹೀಗಾಗಿ ಇತರರಿಗೆ ಉಪದೇಶ ಕೋಡುವ ಮೊದಲು ಆ ತತ್ತ್ವಗಳನ್ನು ನಾವು ಎಷ್ಟು ಜೀರ್ಣಿಸಿಕೊಂಡಿದ್ದೇವೆ ಎನ್ನುವುದನ್ನು ಅವಲೋಕನ ಮಾಡಿಕೊಳ್ಳಬೇಕು. ನಾವು ಬಿಳಿಯ ಬಟ್ಟೆಗಳನ್ನು ಧರಿಸಿದ ಮಾತ್ರಕ್ಕೆ ಶಾಂತಿದೂತರು ಆಗುವುದಿಲ್ಲ; ಸಮಾನತೆಯ ಬಗ್ಗೆ ಭಾಷಣ ಮಾಡಿದ ಮಾತ್ರಕ್ಕೆ ಸಂತರೂ ಆಗುವುದಿಲ್ಲ. ದೇವಸ್ಥಾನಕ್ಕೆ ಹೋದಮಾತ್ರಕ್ಕೆ ಭಕ್ತರೂ ಆಗುವುದಿಲ್ಲ. ನಮ್ಮ ಅಂತರಂಗವೇ ನಮ್ಮ ನಡೆ–ನುಡಿಗಳಿಗೆ ಮಾನದಂಡ ಆಗಬೇಕು. ಈಜಲು ಬರುತ್ತದೆ – ಎಂಬ ಪ್ರಮಾಣಪತ್ರ ನೀರಿನಲ್ಲಿ ಮುಳುಗುತ್ತಿರುವವನ್ನು ರಕ್ಷಿಸದು; ಅವನನ್ನು ರಕ್ಷಿಸಬಲ್ಲದು ಅವನು ಕಲಿತಿರುವ ಈಜು ಮಾತ್ರವೇ. ಅವನು ಈಜನ್ನು ಕಲಿತಿದ್ದರೆ ಬದುಕುತ್ತಾನೆ; ಕಲಿಯದೆಯೇ ಖೋಟಾ ಸರ್ಟಿಫಿಕೇಟ್‌ ಮಾತ್ರವೇ ಇದ್ದವನು ಮುಳುಗುತ್ತಾನೆ, ಅಷ್ಟೇ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.