ADVERTISEMENT

ಸಂಸ್ಕೃತಿ ಸಂಭ್ರಮ | ಅಕ್ಷಯ ತೃತೀಯಾ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2020, 19:45 IST
Last Updated 22 ಏಪ್ರಿಲ್ 2020, 19:45 IST
   

ಅಕ್ಷಯ ತೃತೀಯಾ ಶುಭದ ಸಂಕೇತವಾಗಿದೆ. ವೈಶಾಖ ಶುದ್ಧ ತೃತೀಯದಂದು ಈ ವ್ರತವನ್ನು ಆಚರಿಸಲಾಗುತ್ತದೆ. ಎಂದಿಗೂ ಕೊನೆಯಾಗದ ಶುಭ ನಿರೀಕ್ಷೆಗಳೇ ಅಕ್ಷಯ ತೃತೀಯಾ.

ಈ ದಿನದಂದು ನೀವು ಮಾಡುವ ಒಳ್ಳೆಯ ಕೆಲಸಗಳ ಫಲಗಳು ದುಪ್ಪಟ್ಟಾಗಿ ದೊರೆಯುತ್ತದೆ ಎಂಬ ವಿಶ್ವಾಸವಿದೆ. ಹೀಗಾಗಿ ಈ ದಿನದಂದು ದಾನ ಧರ್ಮಗಳನ್ನು ಮಾಡಬೇಕು; ಅಕ್ಷರಾಭ್ಯಾಸವನ್ನು ಮಾಡಬೇಕು; ಒಳ್ಳೆಯ ಕೆಲಸಗಳ ಆರಂಭವನ್ನು ಮಾಡಬೇಕು – ಎನ್ನುತ್ತಾರೆ.

ಗಂಗೆಯನ್ನು ಭಗೀರಥನು ಭೂಮಿಗೆ ಬರುವಂತೆ ಮಾಡಿದ್ದು ಈ ಶುಭದಿನದಂದು ಎಂಬುದು ಪ್ರತೀತಿ. ಗಂಗಾಸ್ನಾನವನ್ನು ಈ ದಿನ ಮಾಡಿದರೆ ಪಾಪನಿವಾರಣೆಗೆಯಾಗುತ್ತದೆ ಎಂಬ ನಂಬಿಕೆ ಇದೆ.

ADVERTISEMENT

ಅನ್ನಪೂರ್ಣೆಯು ಸಮೃದ್ದಿಯ ಸಂಕೇತ. ಅಕ್ಷಯ ತೃತೀಯದಂದು ಅವಳು ಜನಿಸಿದ್ದು ಎಂಬ ನಂಬಕೆಯಿದೆ. ಆದ್ದರಿಂದಲೇ ಅಕ್ಷಯ ತೃತೀಯದಂದು ದೇವಿಗೆ ವಿಶೇಷ ಪೂಜೆಯನ್ನು ನಡೆಸಲಾಗುತ್ತದೆ. ಮನೆಯಲ್ಲಿ ಎಂದಿಗೂ ಬರಿದಾಗದ ಅಕ್ಷಯಪಾತ್ರೆಯನ್ನು ಕರುಣಿಸು ಎಂಬುದಾಗಿ ಭಕ್ತರು ಆಕೆಯನ್ನು ಬೇಡಿಕೊಳ್ಳುತ್ತಾರೆ. ಸಂಪತ್ತನ್ನು ಕರುಣಿಸುವಂತೆ ಶ್ರೀಲಕ್ಷ್ಮಿಯನ್ನೂ ಕುಬೇರನನ್ನೂ ಪೂಜಿಸುವುದುಂಟು.

ಅಕ್ಷಯ ತೃತೀಯದಂದೇ ಮಹರ್ಷಿ ವೇದವ್ಯಾಸರು ಮಹಾಭಾರತವನ್ನು ಬರೆಯುವುದನ್ನು ಆರಂಭಿಸಿದರು ಎಂದು ಹೇಳಲಾಗುತ್ತದೆ.

ಯುಧಿಷ್ಠಿರನಿಗೆ ಅಕ್ಷಯಪಾತ್ರೆ ದೊರೆತಿದ್ದು ಈ ದಿನದಂದೇ. ದ್ರೌಪದಿಯ ವಸ್ತ್ರಾಪಹರಣದ ಸಂದರ್ಭದಲ್ಲಿ, ಅವಳು ಆರ್ತಳಾಗಿ ಕೃಷ್ಣನನ್ನು ಬೇಡಿದಳಷ್ಟೆ. ಆಗ ಎಷ್ಟು ಸೆಳೆದರೂ ಮುಗಿಯದ ವಸ್ತ್ರವನ್ನು ಕೃಷ್ಣ ಅವಳಿಗೆ ಪ್ರಸಾದಿಸಿದ ದಿನ ಕೂಡ ಅಕ್ಷಯ ತೃತೀಯವೇ.

ಕೃಷ್ಣನ ಗೆಳೆಯನಾದ ಸುಧಾಮನ ಕಥೆ ಕೂಡ ಅಕ್ಷಯ ತೃತೀಯದೊಂದಿಗೆ ಸಂಬಂಧವಿದೆ. ಅವನಿಗೆ ಶ್ರೀಕೃಷ್ನನಿಂದ ಅಪರಿಮಿತವಾದ ಸಂಪತ್ತು ಪ್ರಾಪ್ತವಾದುದು ಈ ದಿನವೇ.

ಇಂದು ಅಕ್ಷಯ ತೃತೀಯಾ ಎಂದರೆ ಬಂಗಾರವನ್ನು ಕೊಳ್ಳುವ ದಿನ ಎಂದಾಗಿದೆ. ಬಂಗಾರಕ್ಕೂ ಈ ವ್ರತಕ್ಕೂ ನಂಟು ಹೇಗೆ ಬಂದಿತೋ ತಿಳಿಯದು! ಜೀವನಸಮೃದ್ಧಿಗೆ ಬೇಕಾದ ಎಲ್ಲ ಒಳಿತೂ ಸದಾ ನಮಗೆ ಒದಗುತ್ತಿರಲಿ ಎಂಬ ಸಂಕಲ್ಪವೇ ಈ ವ್ರತದ ನಿಜವಾದ ಆಚರಣೆ.

ಈ ವರ್ಷ ಲೌಕ್‌ಡೌನ್‌ ಕಾರಣ ಅಂಗಡಿಗಳೂ ಇಲ್ಲ. ಹೀಗಾಗಿ ಮನೆಯಲ್ಲಿಯೇ ಶ್ರದ್ಧೆಯಿಂದ ದೇವಿಯನ್ನು ಆರಾಧಿಸಿ ಆರೋಗ್ಯ, ವಿದ್ಯೆ, ಬುದ್ಧಿಗಳು ನಮಗೆ ಅಕ್ಷಯವಾಗಿರಲಿ ಎಂದು ಬೇಡಿಕೊಳ್ಳೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.