
ಬಸವಣ್ಣನವರು ಹಾಗೂ ಅಕ್ಕಮಹಾದೇವಿ
'ಓ ನನ್ನ ನಾಡಿನ ಪ್ರಜೆಗಳೇ, ತುಂಬಿ ಹರಿಯುವುದಿಲ್ಲವೇನು ನಿಮ್ಮ ಕಣ್ಣುಗಳು ನಮಗಾಗಿ ಮಡಿದ ಬಸವಾದಿ ಪ್ರಮಥರ ನೆನೆದು’. ಧರ್ಮ ಕೀಳಾಗಿ, ಮಾನವೀಯತೆ ಮರೆತ ದಿನವದು. 12ನೇ ಶತಮಾನದಲ್ಲಿ ಘೋರ ಅನ್ಯಾಯಕ್ಕೆ ತುತ್ತಾಗಿ ಮಾನವೀಯತೆಯೇ ಇಲ್ಲವಾಗಿತ್ತು. ಅಂದು ಕೇವಲ ಅಜ್ಞಾನದ ಅಂಧಕಾರದಲ್ಲಿ ಮೇಲು ಕೀಳೆಂಬ ಭಾವ, ಅಜ್ಞಾನ ಸಾಗರದ ಮೇಲೆ ಜ್ಞಾನ ಜ್ಯೋತಿಯ ಬಟ್ಟಲಾಗಿ ತೇಲುತ್ತಿತ್ತು. ಅಂದು ಜಗತ್ತು ಕಂಡ ಬೆಳಕು, ಜ್ಞಾನ ಪ್ರಕಾಶದ ಭಕ್ತಿ ಭಂಡಾರಿ ಬಸವಣ್ಣನವರು. ಭಕ್ತಿ, ಜ್ಞಾನದ ಮಹಾ ಸಾಗರವಾಗಿ ಧೀನ ದಲಿತರ ಅಂತರಂಗದ ಜ್ಯೋತಿಯಾದರು.
‘ಶಿವಚಿಂತೆ ಶಿವಜ್ಞಾನವಿಲ್ಲದ ಮನುಜರು–ಸಗಣಕ್ಕೆ ಸಾಸಿರ ಹುಳು
ಹುಟ್ಟವೆ ದೇವಾ ಕಾಡ ಮೃಗವೊಂದಾಗಿರಲಾಗದೆ
ದೇವಾ ಊರ ಮೃಗವೊಂದಾಗಿರಲಾಗದೆ
ಹರನೆ ನಮ್ಮ ಕೂಡಲಸಂಗನ ಶರಣರಿಲ್ಲದ ಊರು
ದೇಶ ವನವಾಸ ನರವಿಂಧ್ಯ ಕಾಣಿರಣ್ಣಾ’
ಎಂಬ ವಚನವು ಸಾಮಾನ್ಯರಲ್ಲಿ ಅಡಗಿದ್ದ ಭಕ್ತಿಯನ್ನು ಶಿವನ ನೆಡೆಗೆ ಸಾಗಲು ಪ್ರೇರೇಪಿಸಿತು. ಸಾಮಾನ್ಯರು ಅಸಾಮಾನ್ಯ ಶಿವಯೋಗ ಸಾಧನೆಯ ಮೂಲಕ ಕಲ್ಯಾಣದಲ್ಲಿ ಶಿವ ಸದನವನ್ನೆ ಸೃಷ್ಠಿಸಿದರು.
‘ಅಯ್ಯಾ ಭಕ್ತಿಗೆ ಬೀಡಾದುದು ಕಲ್ಯಾಣ
ಮೂವತ್ತಾರು ವರ್ಷ.
ಅಯ್ಯಾ ಅನುಭವಕ್ಕೆ ಶಿವಸದನವಾದುದು
ಇಪ್ಪತ್ತೇಳು ವರ್ಷ.
ಅಯ್ಯಾ ಹಿಂದಿನಂತನುಭವ, ಹಿಂದಿನಂತೆ ಭಕ್ತಿ ಇಲ್ಲಾ.
ಮೂರು ಮಾಸದೊಳಗಾಗಿ ಇಲ್ಲಿ ಆಡಲು
ಭಯವಿಲ್ಲಾ ಕೇಳಯ್ಯಾ ಕೂಡಲಸಂಗಮದೇವ’.
ಸ್ಥಾವರದ ದೇವಾಲಯದ ಪ್ರವೇಶ ನಿಷೇಧವಿದ್ದರು ಅನೇಕ ಹಿಂದುಳಿದವರೆಲ್ಲರನ್ನು ಎದೆಗಪ್ಪಿ, ತನ್ನ ವಿಶಾಲ ವಕ್ಷ ಸ್ಥಳದಲ್ಲಿ ತಮ್ಮೆಲ್ಲರಿಗೂ ಅಂತರ್ ಪ್ರಜ್ಞೆಯ ಅರಿವನ್ನು, ಸರ್ವರಿಗೂ ಮಾತಾನಾಡುವ ಹಕ್ಕು, ವಿಮರ್ಶೆ ಹಾಗೂ ಪ್ರಶ್ನಿಸುವ ಹಕ್ಕನ್ನು ನೀಡಿದ್ದಲ್ಲದೆ, ನಿತ್ಯ ಲಕ್ಷದ ಮೇಲೆ ತೊಂಬತ್ತಾರು ಸಾವಿರ ವಚನಗಳನ್ನು ನೀಡಿದ ಜ್ಞಾನ ಭಂಡಾರದ ಕೀರ್ತಿ ಬಸವಣ್ಣನವರಿಗೆ ಸಲ್ಲಬೇಕು.
ಶೂನ್ಯ ಸಿಂಹಾಸನದ ಅಧ್ಯಕ್ಷರಾದ ಅಲ್ಲಮ ಪ್ರಭುಗಳು ಸೊನ್ನಲಿಗೆಯ ಸಿದ್ಧರಾಮೇಶ್ವರ ಜೊತೆಗೂಡಿ ಕಲ್ಯಾಣಕ್ಕೆ ಬಂದಾಗ, ಮರ್ತ್ಯಲೋಕದ ಮಹಾಮನೆ ಹಾಳಾಗಿ ಹೋಗಬಾರದೆಂದು ಕರ್ತನಟ್ಟಿದನಯ್ಯಾ ಒಬ್ಬ ಶರಣನ.
ಆ ಶರಣ ಬಂದು ಕಲ್ಯಾಣವೆಂಬ ಶಿವಪುರವ ಕೈಲಾಸವ ಮಾಡಿ ರುದ್ರಗಣ ಪ್ರಮಥಗಣಂಗಳೆಲ್ಲರ ಹಿಡಿತಂದು ಅಮರಗಣಂಗಳೆಂದು ಹೆಸರಿಟ್ಟು ಕರೆದು ಅಗಣಿತಗಣಂಗಳೆಲ್ಲರ ಹಿಡಿತಂದು ಅಸಂಖ್ಯಾತರೆಂದು ಹೆಸರಿಟ್ಟು ಕರೆದು
ಭಕ್ತಿಯ ಕುಳಸ್ಥಲವ ಶ್ರುತದೃಷ್ಟ ಪವಾಡದಿಂದ ಮರೆದು ತೋರಿ ಜಗವರಿಯಲು ಶಿವಾಚಾರವ ಧ್ವಜವನೆತ್ತಿಸಿ ಮರ್ತ್ಯಲೋಕ ಶಿವಲೋಕವೆರಡಕ್ಕೆ ನಿಚ್ಚಿಣಿಗೆಯಾದನು. ಆ ಶಿವಶರಣನ ಮನೆಯೊಳಗಿಪ್ಪ ಶಿವಗಣಂಗಳ ತಿಂಥಿಣಿಯ ಕಂಡು ಎನ್ನಮನ ಉಬ್ಬಿಕೊಬ್ಬಿ ಓಲಾಡುತ್ತಿದ್ದೆನಯ್ಯಾ. ನಮ್ಮ ಗುಹೇಶ್ವರನ ಶರಣ ಸಂಗನಬಸವಣ್ಣನ ದಾಸೋಹದ ಘನವನೆಂದೆನ್ನಬಹುದು ನೋಡಾ ಸಿದ್ಧರಾಮಯ್ಯಾ ಎಂದು ಬಣ್ಣಿಸಿದ್ದಾರೆ. ಕಿರಿಯ ವಯಸ್ಸಿನ ಹಿರಿಯ ಸಾಧಕಿ ವೈರಾಗ್ಯ ನಿಧಿ ಜಗದಕ್ಕ ಜಗನ್ಮಾತೆ ಅಕ್ಕಮಹಾದೇವಿಯವರು.
ಕಲ್ಯಾಣವೆಂಬುದಿನ್ನಾರಿಗೆ ಹೊಗಬಹುದು?
ಹೊಗಬಾರದು, ಅಸಾಧ್ಯವಯ್ಯಾ.
ಆಸೆ ಆಮಿಷ ಅಳಿದಂಗಲ್ಲದೆ ಕಲ್ಯಾಣದತ್ತಲಡಿಯಿಡಬಾರದು.
ಒಳಹೊರಗು ಶುದ್ಧನಾದಂಗಲ್ಲದೆ ಕಲ್ಯಾಣವ ಹೊಗಬಾರದು.
ನೀನಾನೆಂಬುದ ಹರಿದಂಗಲ್ಲದೆ ಕಲ್ಯಾಣದ ಒಳಗು ತಿಳಿಯಬಾರದು.
ಚೆನ್ನಮಲ್ಲಿಕಾರ್ಜುನಂಗೊಲಿದು ಉಭಯ ಲಜ್ಜೆ ಅಳಿದೆನಾಗಿ
ಕಲ್ಯಾಣವಂ ಕಂಡು ನಮೋ ನಮೋ ಎನುತಿದ್ದೆನು.
ಅಂತರಂಗದ ಅನುಭವ ಮಂಟಪದಲ್ಲಿ ನಿರಂಜನ ಅನುಭಾವವನ್ನು
ಲಿಂಗೈಕ್ಯ(ಅರಿವನ್ನು ಅನುಭಾವಕ್ಕೆ ಪಡೆದ) ಶಿವ ಶರಣರಿಗಲ್ಲದೆ,
ಭವಿಗಳು ಭವಭಾರಿಗಳು ಕಲ್ಯಾಣವನ್ನು ಹೊಕ್ಕರು.
ಬಸವಣ್ಣನವರ ಹಿರಿಮೆಯೇ ಅಂಥದು ಕಿಂಕರ ಭಾವದ, ನಿಜೈಕ್ಯ ಮಹಾ ಮೇರು ಪರ್ವತ ಬಸವಣ್ಣನವರದ್ದು ‘ಕಾಯಕ’, ‘ದಾಸೋಹ’ ಮುಖ್ಯವಾಗಿ, ಕೇವಲ ಶಿವಶರಣರ ಸಾಂಗತ್ಯವನ್ನು ಅನುಭವಿಸಿ ಅನಂಧಿಸಿದವರು.
ಕಲ್ಯಾಣ ನಿಜಕ್ಕೂ ನಾವು ನೀವೆಲ್ಲರೂ ಊಹಿಸದ ಉತ್ತುಂಗದಲ್ಲಿ ಭಕ್ತಿ, ವೈರಾಗ್ಯ ಹಾಗೂ ಜ್ಞಾನದ ಅಲೆಯಾಗಿ ಅಜ್ಞಾನದ ಕಾರ್ತಿಕದ ಕತ್ತಲನ್ನು ನಿಮಿಷಾರ್ಧದಲ್ಲಿ ಅಖಂಡ ಶಿವ ಹೋಗಲಾಡಿಸುತ್ತಾನೆ.
ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿ, ತನ್ನ ದೇಹವನ್ನೇ ದೇವಾಲಯವಾಗಿಸಿ, ನಿಶ್ಚಿಂತ ನಿರ್ಜಾತ ನಿರ್ವಯ ಸಮಾಧಿಯಲ್ಲಿ ನಿತ್ಯ ಲಿಂಗೈಕ್ಯರಾದ ಶಿವಶರಣರ ನಿರಂಜನ ಬೆಳಕೇ ನಮ್ಮೆಲ್ಲರ ದಾರಿ ದೀವಿಗೆಯಾಗಿದೆ.
(ಲೇಖಕರು: ಬಸವಾಕ್ಷ ಸ್ವಾಮೀಜಿಗಳು, ವಿರಕ್ತ ಮಠ, ದಾವಣಗೆರೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.