ಎಐ ಚಿತ್ರ
ನವರಾತ್ರಿಯ ಮೂರನೇ ದಿನದಂದು ಚಂದ್ರಘಂಟಾ ದೇವಿಯನ್ನು ಆರಾಧನೆ ಮಾಡಲಾಗುತ್ತದೆ. ದುರ್ಗಾಮಾತೆಯ ವೈವಾಹಿಕ ಅವತಾರವಾಗಿರುವ ಚಂದ್ರಘಂಟಾ ದೇವಿಯನ್ನು ದುರ್ಗಾ ಮಾತೆಯ ರೌದ್ರ ರೂಪವೆಂದು ಕರೆಯಲಾಗುತ್ತದೆ.
ಚಂದ್ರಘಂಟಾ ದೇವಿಯ ಆರಾಧನೆ ಹೇಗೆ?
ಪುರಾಣದ ಪ್ರಕಾರ:
ಚಂದ್ರಘಂಟಾ ಅವತಾರವು ಹೊಸದಾಗಿ ವಿವಾಹವಾದ ದುರ್ಗಾಮಾತೆಯ ರೂಪವಾಗಿದೆ. ಪಾರ್ವತಿಯು ಕಠಿಣವಾದ ತಪಸ್ಸನ್ನು ಮಾಡಿ ಶಿವನನ್ನು ಮದುವೆಯಾಗುತ್ತಾಳೆ. ವಿವಾಹ ಸಂದರ್ಭದಲ್ಲಿ ಕೈಲಾಸದ ಸಹಚರರೊಂದಿಗೆ ಶಿವ ಪಾರ್ವತಿಯರು ಅರಮನೆ ಪ್ರವೇಶಿಸುತ್ತಾರೆ. ಅತಿ ಭಯಂಕರನಾಗಿ ಕಾಣುತ್ತಿದ್ದ ಶಿವನನ್ನು ನೋಡಿ ಪಾರ್ವತಿಯು ಮೂರ್ಛೆ ಹೋಗುತ್ತಾಳೆ. ಆಗ ಪಾರ್ವತಿ ಚಂದ್ರಘಂಟಾ ರೂಪದಲ್ಲಿ ಶಿವನ ಮುಂದೆ ಪ್ರತ್ಯಕ್ಷಳಾಗಿ ಶಿವನು ರಾಜಕುಮಾರನ ರೂಪವನ್ನು ತಾಳಬೇಕು ಎಂದು ವಿನಂತಿಸಿಕೊಳ್ಳುತ್ತಾಳೆ. ಹೀಗೆ ಶಿವನು ಸುಂದರ ವರನ ರೂಪವನ್ನು ತಾಳಿದ ನಂತರ ಶಿವ ಪಾರ್ವತಿಯ ಮದುವೆ ನೆರವೇರುತ್ತದೆ.
ದೇವಿಯ ರೂಪ ಯಾವುದು?
ನವರಾತ್ರಿಯ ಮೂರನೇಯ ದಿನದ ಅವತಾರ ಚಂದ್ರಘಂಟಾ. ಈ ರೂಪದಲ್ಲಿ ದೇವಿಯು 10 ಕೈಗಳಲ್ಲಿ ಹತ್ತು ಶಸ್ತ್ರಗಳನ್ನು ಹಿಡಿದಿರುತ್ತಾಳೆ. ಸಿಂಹ ಈಕೆಯ ವಾಹನ. ಶುಕ್ರ ಗ್ರಹಕ್ಕೆ ಅಧಿಪತಿಯಾಗಿರುತ್ತಾಳೆ. ಹಣೆಯ ಮೇಲೆ ಚಂದ್ರ ಇರುವುದರಿಂದ ಈ ಅವತಾರಕ್ಕೆ ಚಂದ್ರಘಂಟಾ ಎಂಬ ಹೆಸರು ಬಂದಿದೆ.
ದೀಪಾರಾಧನೆ :
ದೇವಿಗೆ ದೀಪಾರಾಧನೆ ಮಾಡುವ ಮೂಲಕ ವಿಶೇಷವಾದ ಪೂಜೆಯನ್ನು ಸಲ್ಲಿಸಬಹುದಾಗಿದೆ. ಪೂಜೆಯ ವೇಳೆ ದೀಪವನ್ನು ಶಾಂತವಾಗಿ ಉರಿಯುವಂತೆ ನೋಡಿಕೊಳ್ಳಬೇಕು. ಇದರಿಂದ ಸರ್ವಾರ್ಥ ಸಿದ್ದಿಯ ಯೋಗ ಲಭಿಸುತ್ತದೆ.
ಪೂಜೆ ಸಲ್ಲಿಸಲು ಸೂಕ್ತ ಸಮಯ ಯಾವುದು?
ದೇವಿಯ ಪೂಜೆಯನ್ನು ಬ್ರಾಹ್ಮಿ ಮುಹೂರ್ತದಿಂದ ಶುರು ಮಾಡಬಹುದು. ಬೆಳಗಿನ ಜಾವ 4:30 ರಿಂದ 5:25 ರವರೆಗೆ ಬ್ರಾಹ್ಮಿ ಮುಹೂರ್ತವಿರುತ್ತದೆ. ಈ ಸಮಯದಲ್ಲಿ ದೇವಿಯ ಆರಾಧನೆ ಮಾಡಿದರೆ ಒಳ್ಳೆಯದು.
ಸರ್ವಾರ್ಥ ಸಿದ್ಧಿ ಯೋಗವು ಬೆಳಿಗ್ಗೆ 6:15 ರಿಂದ 9:30ರವರೆಗೆ ಇರುತ್ತದೆ. ಈ ವೇಳೆ ಪೂಜೆ ಮಾಡಬಹುದು.
11:45 ರಿಂದ 12:35 ರವರೆಗೆ ಪೂಜೆ ಸಲ್ಲಿಸಲು ಉತ್ತಮ ಸಮಯವಾಗಿರುತ್ತದೆ.
ಅಮೃತ ಮುಹೂರ್ತವು 11:40 ರಿಂದ 1:25 ವರೆಗೆ ಇರುತ್ತದೆ. ಈ ಮುಹೂರ್ತದಲ್ಲಿ ಪೂಜೆಯನ್ನು ಮಾಡಬಹುದು.
ಗೋಧೂಳಿ ಸಮಯವಾದ ಸಂಜೆ 6 ರಿಂದ 7ರವರೆಗೆ ಪೂಜೆಯನ್ನು ಸಲ್ಲಿಸಬಹುದು.
ಬೂದು ಬಣ್ಣದ ಸೀರೆಯನ್ನು ತೊಟ್ಟು ದೇಶಿ ಗೋವಿನ ಹಾಲಿನಿಂದ ತಯಾರಿಸಿದ ನೈವೇದ್ಯವನ್ನು ದೇವಿಗೆ ಅರ್ಪಣೆ ಮಾಡಿದರೆ ಒಳಿತಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.