ADVERTISEMENT

ಸಂಸ್ಕೃತಿ ಸಂಭ್ರಮ | ಗಾದೆ ಸಮುದಾಯದ ಅರಿವು

ವತ್ಸಲಾ ಮೋಹನ್
Published 10 ಜೂನ್ 2020, 19:30 IST
Last Updated 10 ಜೂನ್ 2020, 19:30 IST
   
""

ನಾಡಿನ ಸಂಸ್ಕೃತಿಗೆ ಗಾದೆಗಳು ‘ಕೈಮರ’ವಿದ್ದಂತೆ. ಒಂದು ಮಾತಿದೆ: ‘ವೇದ ಕೆಲವರ ಸ್ವತ್ತಾದರೆ, ಗಾದೆ ಸಕಲರ ಸಂಪತ್ತು.’ ಗಾದೆಗಳು ಬಳಸಿದಷ್ಟೂ ಹೊಳಪಾಗುವ, ಹಳೆಯದಾದಷ್ಟು ಬಹುಮಾನ್ಯತೆಯನ್ನು ಪಡೆಯುವ ಅಪ್ಪಟ ಹೊನ್ನು. ಒಂದು ನಾಡಿನ ಜೀವಂತ ಸಂಸ್ಕೃತಿಯನ್ನು ಮೈವೆತ್ತಿ ನಿಲ್ಲಿಸಿರುವುದು ಆ ನಾಡಿನ ಜಾನಪದ ಅಂಶಗಳು. ಜನರ ಮೂಲಕವೇ ಸಂಸ್ಕೃತಿಯ ಈ ಅಂಶಗಳು ಹರಿದು ಬರುತ್ತವೆ. ಭಾಷೆಯ ನೆರಳಲ್ಲೇ ಸಂಸ್ಕೃತಿಯ–ಆಚಾರ–ವಿಚಾರ, ರೀತಿ-ರಿವಾಜುಗಳು ಸದಾ ನಡೆದು ಬರುತ್ತಿರುತ್ತವೆ. ಹೀಗಾಗಿ ಗಾದೆಗಳು ನಮ್ಮ ಸಮಾಜಕ್ಕೆ, ಸಂಸ್ಕೃತಿಗೆ ಹಿಡಿದ ಕೈಗನ್ನಡಿ.

ಯಾವುದೇ ತಾರತಮ್ಯವಿಲ್ಲದೇ, ಎಲ್ಲ ವರ್ಗದ ಜನರ ಬಾಳನ್ನೂ ಇವು ಪ್ರವೇಶಿಸಿವೆ. ಗ್ರಾಮೀಣ ಜನರ ನೆನಪಲ್ಲಿ ಸಾವಿರಾರು ಗಾದೆಗಳು ಹುದುಗಿರುತ್ತವೆ. ಅದೇ ಅವರ ಸಾರಸ್ವತ ಸಂಪತ್ತು.ಲೋಕಾರೂಢಿಯಾಗಿ ಮಾತಾಡುತ್ತಿರುವಾಗ ಗಾದೆಗಳು ಸಮಯಕ್ಕೆ ಸರಿಯಾಗಿ ನೆನಪಿಗೆ ಬಾರದೆ ಹೋದರೆ, ‘ಅದೇನೋ ಗಾದೆ ಹೇಳ್ತಾರಲ್ಲ ಹಾಗಾಯ್ತು’ ಎನ್ನುವುದರ ಮೂಲಕ ಗಾದೆಯಿಲ್ಲದೇ ಸಮರ್ಥವಾಗಿ ಹೇಳಲೂ ಸಾಧ್ಯವಿಲ್ಲ ಎಂಬುದನ್ನು ಸೊಗಸಾಗಿ ತೂಗಿಸಿಬಿಡುತ್ತಾರೆ!

ವರಕವಿ ಬೇಂದ್ರೆ ಹೇಳುವ ಹಾಗೆ ‘ಗಾದೆ ಮಾತುಗಳೆಂದರೆ ಅಚ್ಚುಕಟ್ಟಾದ ನಿರ್ಣಯಗಳಲ್ಲ, ವಿವೇಕ ಜಾಗೃತಿ ಮಾಡುವ ಸುಭಾಷಿತಗಳು’.ಗಾದೆಗಳನ್ನು ‘ಹಲವರ ಜ್ಞಾನ, ಒಬ್ಬನ ವಿವೇಕ’ ಎನ್ನಬಹುದು. ಹಲವರ ಜ್ಞಾನ ಒಬ್ಬನ ವಿವೇಕದಲ್ಲಿ ಮೂಡಿ ಗಾದೆಗಳಾಗುತ್ತವೆ.

ADVERTISEMENT

ಈಗ ಉದಾಹರಣೆಗೆ ಕೆಲವು ಗಾದೆಗಳನ್ನು ನೋಡೋಣ. ‘ಮಾಡಿದ್ದುಣ್ಣೋ ಮಹರಾಯ’. ತಾನು ಮಾಡುವ ಕುಕೃತ್ಯದ ಫಲವನ್ನು ಅನುಭವಿಸಲೇ ಬೇಕು ಎಂದು ಈ ಗಾದೆ ಹೇಳುತ್ತಿದೆ. ‘ಉಪ್ಪು ತಿಂದವನು ನೀರು ಕುಡಿಯಲೇ ಬೇಕು’ಎಂಬ ಗಾದೆಯೂ ಇಲ್ಲಿ ನೆನಪಾಗುತ್ತದೆ.

‘ಹಾಕ್ಮಣೆ, ನೂಕ್ಮಣೆ, ಯಾಕ್ಮಣೆ’, ‘ಕುಂತು ಮಲಗಬೇಕು’, ‘ತನ್ನ ಬಲವೇ ಬಲ, ಭೂಮಿಯ ಜಲವೇ ಜಲ’, ‘ನಡೀತಾ ಇದ್ರೆ ನಂಟು, ಬೆಳಗ್ತಾ ಇದ್ರೆ ಕಂಚು’, ‘ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ‘ – ಇಂತಹ ಗಾದೆಗಳಲ್ಲಿ ಆಳವಾದ ಅನುಭವದ ಜೊತೆಗೆ ವಿವೇಕವನ್ನೂ ಕಾಣಬಹುದು.ಹಲವು ಗಾದೆಗಳ ಹಿಂದೆ ಒಂದೊಂದು ಕಥೆಯೇ ಅಡಗಿರುವುದನ್ನು ಗುರುತಿಸಬಹುದು.

ಒಬ್ಬ ವ್ಯಕ್ತಿ ಸಮಾಜದಲ್ಲಿ ಅಥವಾ ನೆಂಟಸ್ತಿಕೆಯಲ್ಲಿ ತನ್ನ ಯೋಗ್ಯತೆಯನ್ನು ಕಳೆದುಕೊಂಡ ಮೇಲೆ, ಸ್ಥಾನಮಾನವನ್ನು ಬದಲು ಮಾಡಿಕೊಂಡ ಮೇಲೆ ಹಂತ ಹಂತವಾಗಿ ಹೇಗೆ ಆತ ಅವರ ದೃಷ್ಟಿಯಲ್ಲಿ ಕೆಳಗಿಳಿಯುತ್ತಾನೆ ಎಂಬುದನ್ನು ‘ಹಾಕ್ಮಣೆ, ನೂಕ್ಮಣೆ, ಯಾಕ್ಮಣೆ’ ಸೂಚಿಸುತ್ತದೆ. ‘ಕುಂತು ಮಲಗಬೇಕು’– ಇದು ಯಾವುದೇ ಕೆಲಸವನ್ನು ಮಾಡುವಾಗ ನಿಧಾನಿಸಿ, ತನ್ನ ಶಕ್ತಿಯನ್ನು ಅರ್ಥ ಮಾಡಿಕೊಂಡು ಕೈ ಹಾಕಬೇಕು; ಕುಳಿತು ಮಲಗುವುದು ಎಲ್ಲ ರೀತಿಯಿಂದಲೂ ಕ್ಷೇಮ. ಅದನ್ನು ಬಿಟ್ಟು ನಿಂತತೆಯೇ ಮಲಗಲು ಹೋದರೆ ತಲೆ ಗಟ್ಟಿಯಾಗಿದೆಯೆಂದು ಗೋಡೆ ಗುದ್ದಲು ಹೋದಂತಾಗುತ್ತದೆ. ಅನುಭವಿ ಕುಳಿತು ಮಲಗುತ್ತಾನೆ. ಅನನುಭವಿ ನಿಂತಂತೆಯೇ ಮಲಗಲು ಹೋಗಿ ಪೆಟ್ಟು ತಿನ್ನುತ್ತಾನೆ – ಎನ್ನುವುದನ್ನು ಹೇಳುತ್ತದೆ. ಒಂದು ಸಮರ್ಥವಾದ ಗಾದೆ ಅನುಭವ ಮತ್ತು ವಿವೇಕ ಎರಡನ್ನೂ ಒಂದೇ ನಾಣ್ಯದ ಎರಡು ಮುಖಗಳಂತೆ ಒಳಗೊಂಡಿರುತ್ತದೆ.

‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ಎನ್ನುವ ಗಾದೆಯೇ ಗಾದೆಗಳ ಮಹತ್ವಕ್ಕೆ ಸಾಕ್ಷಿಯಾಗಿದೆ.

ಒಂದಿಷ್ಟು ಗಾದೆಗಳು
ಹತ್ತು ಕಟ್ಟೋ ಕಡೆ ಒಂದು ಮುತ್ತು ಕಟ್ಟು; ಮಾತು ಬೆಳ್ಳಿ ಮೌನ ಬಂಗಾರ; ಬಗ್ಗಿದೋನಿಗೆ ಇನ್ನೊಂದು ಗುದ್ದು; ಚಿನ್ನದ ಕೊಡಲಿಯಾದರೂ ಕಾವು ಬೇಕೇ ಬೇಕು; ಅರಮನೆಯಿದ್ದರೂ ನೆರೆಮನೆ ಬೇಕು, ಅರಮನೆ ಇಲ್ಲದಿದ್ದರೂ ನೆರೆಮನೆಯಿರಬೇಕು; ಉತ್ತು ಬಾಳುವವನ ಬದುಕು ಎತ್ತಲೂ ಲೇಸು; ಗುಡ್ಡ ಹತ್ತಿದವನೇ ಬಯಲು ಕಾಣಬಲ್ಲ, ಕೈ ಕೆಸರಾದರೆ ಬಾಯಿ ಮೊಸರು; ಉಪ್ಪು ತಿಂದವನು ನೀರು ಕುಡಿಯಲೇ ಬೇಕು; ಅಪ್ಪನಂಥ ನೆಂಟ ಇಲ್ಲ, ಸೊಪ್ಪಿಗಿಂತ ಊಟ ಇಲ್ಲ; ಮನೆದೀಪವೆಂದು ಮುದ್ದಿಟ್ಟರೆ ಗಡ್ಡ, ಮೀಸೆ ಸುಡದೇ?; ಜರಡಿ ಸೂಜಿಗೆ ಹೇಳಿತಂತೆ - ನಿನ್ನ ಬಾಲದಲ್ಲಿ ತೂತು ಅಂತ; ದುಡ್ಡಿನ ಆಸೆಗೆ ಬೆಲ್ಲ ಮಾರಿ ಗೋಣಿ ನೆಕ್ಕಿದ; ಮನೆಗೆ ಮಾರಿ ಊರಿಗೆ ಉಪಕಾರಿ; ಎಲ್ಲರ ಮನೆಯ ದೋಸೆಯೂ ತೂತು; ಗೆದ್ದಲು ಹುತ್ತ ಕಟ್ಟಿ ಹಾವಿಗೆ ಮನೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.