ಪ್ರಜಾವಾಣಿ ಚಿತ್ರ
ದೀಪಾವಳಿ ಎಂದರೆ ಬರಿ ಪಟಾಕಿಗಳ ಸದ್ದೇ. ಅಜ್ಜಿಯಿಂದಲೋ, ಅಮ್ಮನಿಂದಲೋ ಎಣ್ಣೆ ತಿಕ್ಕಿಸಿಕೊಂಡು ಸುಡು ನೀರಿನಲ್ಲಿ ಮಿಂದು, ಸಂಜೆ ವೇಳೆಗೆ ಮನೆಯ ಮುಂದೆ ದೀಪ ಹಚ್ಚುವ ಸಂಭ್ರಮವದು. ದೀಪ ಹೊತ್ತಿಸಿದ ಮೇಲೆಯೇ ಪಟಾಕಿಗಳು ಪೊಟ್ಟಣದಿಂದ ಹೊರಬರುವುದು. ಅಂತಹ ದೀಪಗಳ ನೆನಪಿನ ಜಾಡು ಹಿಡಿದು ನೋಡೋಣ ಬನ್ನಿ.
ಬೆಳಕಿನಲೆ ದೀಪಾವಳಿ
ಹಣತೆ ಹೊಳೆ ದೀಪಾವಳಿ
ಇರುಳಿನೆದೆಯನು ಸೀಳಿ ಹಬ್ಬುವ ಹಬ್ಬ ಈ ದೀಪಾವಳಿ
ಕವಿ ಲಕ್ಷ್ಮಿನಾರಾಯಣ ಭಟ್ಟರ ಈ ಸಾಲುಗಳು ಎಷ್ಟು ನಿಜವಲ್ಲವೆ? ಹಣತೆ ಇಲ್ಲದ ದೀಪಾವಳಿ ಇದ್ದೀತೆ? ಮನೆ ಮುಂದೆ ಸಾಲು ಸಾಲು ದೀಪಗಳನ್ನು ಹಚ್ಚುವುದೇ ಸಂಭ್ರಮ. ದೀಪಾವಳಿ ಹಬ್ಬದ ಆಚರಣೆಗಳು ಆರಂಭವಾದಾಗಿನಿಂದ ಹಿಡಿದು, ಬಳಿಕ ಸುಮಾರು ಒಂದು ತಿಂಗಳು ಮನೆ ಮುಂದೆ ದೀಪ ಹಚ್ಚಿಡುತ್ತೇವೆ. ಹಚ್ಚಿದ ದೀಪ ನಂದದಂತೆ ಕಾಯ್ದುಕೊಳ್ಳುವುದೂ ದೀಪ ಹಚ್ಚುವ ಸಂಭ್ರಮದ ಭಾಗವೇ ಅನ್ನಿ.
ಪ್ರಜಾವಾಣಿ ಚಿತ್ರ
ಮನೆಯ ವಿದ್ಯುತ್ ದೀಪ ಆರಿಸಿ, ಹಣತೆಯಲ್ಲಿ ಹಚ್ಚಿದ ಸಾಲು ಸಾಲು ದೀಪಗಳನ್ನು ನೋಡುವುದೇ ಅಂದ. ಈಗಂತೂ ಸಾಮಾಜಿಕ ಜಾಲತಾಣಗಳ ಕಾಲ. ಈಗ ಫೋಟೊ ತೆಗೆದುಕೊಳ್ಳುವುದೇ ಅಂದ ಎನ್ನುವ ಕಾಲ ಬಂದಿದೆ. ಆದರೂ ಹಣತೆ ಹಚ್ಚುವ ಸಂಭ್ರಮಕ್ಕಂತೂ ಮುಕ್ಕು ಬಂದಿಲ್ಲ. ತುಳಸಿಕಟ್ಟೆ ಸುತ್ತಲೂ, ಬಾವಿ ಸುತ್ತಲು, ಮನೆಯ ಕಾಂಪೌಂಡ್ ಉದ್ದಕ್ಕೂ ದೀಪ ಇಟ್ಟು ಆನಂದಿಸುವುದು ನಮ್ಮ ಬಾಲ್ಯದ ದಿನಗಳ ಸವಿ ನೆನಪುಗಳಲ್ಲಿ ಅಚ್ಚಳಿಯದೇ ಉಳಿದಿರುವ ಭಾಗವೇ ಆಗಿದೆ.
ಈಗಂತೂ ಹಣತೆಗಳಲ್ಲಿ ಭಾರಿ ವೈವಿಧ್ಯ ಬಂದಿದೆ. ಬೆಳ್ಳಿಯದ್ದೊ ತಾಮ್ರದ್ದೊ ಸಾಂಪ್ರದಾಯಿಕವಾಗಿರುವ ಈ ಹಣತೆಗಳನ್ನು ಉಜ್ಜಿ ತೊಳೆಯುವ ಪ್ರಕ್ರಿಯೆಯು ದೀಪಾವಳಿ ಆರಂಭವಾಗುವುದಕ್ಕಿಂತ ಒಂದು ತಿಂಗಳ ಮುಂಚೆಯೇ ಶುರುವಾಗುತ್ತದೆ. ಮನೆಯ ಸ್ವಚ್ಛತೆಯ ಜೊತೆ ಜೊತೆಗೆ ಇವುಗಳೂ ಸ್ವಚ್ಛವಾಗುತ್ತವೆ. ಕಳೆದ ವರ್ಷದ ಮಣ್ಣಿನ ಹಣತೆಗಳದ್ದೂ ಇದೇ ಸಂಭ್ರಮ. ಒರೆಸುವಾಗ ಒಂದೊ ಎರಡೊ ಬಿದ್ದು ಒಡೆದು ಹೋಗುವುದು ಕೂಡ ಇದ್ದೇ ಇರುವ ಸಂಪ್ರದಾಯ. ಬಳಿಕ, ಹೊಸದಾದ ಆರು ಸೆಟ್ಟಿನ ಹಣತೆಗಳ ಆಗಮನ.
ಪ್ರಜಾವಾಣಿ ಚಿತ್ರ
ಅಜ್ಜಿಯಂದಿರ ತಯಾರಿ ಬೇರೆ ಎಲ್ಲರಿಗಿಂತ ಬೇಗವೇ ಆರಂಭವಾಗುತ್ತಿತ್ತು. ಸಂಜೆ ವೇಳೆ ಸುಮ್ಮನೆ ಕೂರುವುದಕ್ಕಿಂತ ದೀಪದ ಬತ್ತಿಗಳನ್ನು ಹೊಸೆಯುತ್ತಾ ಮಾತನಾಡುತ್ತಾ ಹಾಡು ಹೇಳುತ್ತಾ ಇರುತ್ತಿದ್ದರು. ಹತ್ತಿ, ಒಂದು ಸಣ್ಣ ಬಟ್ಟಲಿನಲ್ಲಿ ವಿಭೂತಿ, ಸ್ವಲ್ಪ ನೀರು ಇಟ್ಟಕೊಂಡು ಬತ್ತಿ ಹೊಸೆಯುತ್ತಿದ್ದರು. ಅದೂ ವಿವಿಧ ಆಕಾರದ್ದು. ಮನೆಯಲ್ಲಿರುವ ಹಣತೆಯ ಆಕಾರಗಳಿಗೆ ತಕ್ಕುದಾದ ಹೊಸೆತವದು.
ಹಿಂದೆ ತುಪ್ಪದಲ್ಲಿಯೊ ಒಳ್ಳೆಣ್ಣೆಯಲ್ಲಿಯೊ ದೀಪ ಹಚ್ಚಲಾಗುತ್ತಿತ್ತು. ಈಗ ಮೇಣದ ದೀಪದ ಹಣತೆಗಳೂ ಇವೆ. ಆಧುನಿಕತೆ ಬಂದ ಹಾಗೆ ಹಣತೆಗಳ ಆಕಾರ, ಬಳಕೆಯ ವಿಧಾನ. ಹೀಗೆ ಎಲ್ಲವೂ ಬದಲಾಗಿದೆ. ಮನೆಯ ಮುಂದೆ ನೇತು ಹಾಕುವ ಆಕಾಶ ಬುಟ್ಟಿಯೂ ಹಾಗೆ ವಿವಿಧ ಆಕಾರ, ಸ್ವರೂಪ ಪಡೆದುಕೊಂಡಿದೆ. ಮಣ್ಣಿನ ದೀಪಗಳು, ಪಿಂಗಾಣಿ ದೀಪಗಳು, ತಾಮ್ರದ ದೀಪಗಳು, ಕಂಚಿನ ದೀಪಗಳು, ದೀಪಾಳೆ ಕಂಬಗಳು, ತೂಗು ದೀಪಗಳು, ದೀಪದ ಮಲ್ಲಿ ದೀಪಗಳು ಹೀಗೆ ಇವುಗಳು ಸಾಂಪ್ರದಾಯಿಕವಾಗಿ ಬಳಸುವ ಹಣತೆಗಳ ಪ್ರಕಾರಗಳು. ಈಗ ಅಲಂಕಾರಿಕ ಮೇಣದ ಬತ್ತಿ ದೀಪಗಳು, ದೀಪದ ವಿನ್ಯಾಸದಲ್ಲಿರುವ ಮೇಣದ ಬತ್ತಿಗಳು, ಬಣ್ಣ ಮತ್ತು ಸುವಾಸನೆ ಬೀರುವ ಮೇಣದ ಬತ್ತಿ, ನೀರಿನಲ್ಲಿ ತೇಲುವ ಮೇಣದ ಬತ್ತಿ ಇವುಗಳು ಇನ್ನೊಂದು ವಿಧದ ಹಣತೆಗಳು.
ಪ್ರಜಾವಾಣಿ ಚಿತ್ರ
ಈಗ ಆಧುನಿಕ ಯುಗದಲ್ಲಿ ವಿದ್ಯುತ್ ದೀಪಗಳೂ ಬಂದಿವೆ. ಒಂದು ಬಟನ್ ಒತ್ತಿದರೆ ದೀಪ ರಾತ್ರಿಇಡೀ ಬೆಳಗಿಯೇ ಇರುತ್ತದೆ. ದೀಪ ಆರಿ ಹೋಗುತ್ತದೆ. ಅದನ್ನು ಕಾಯುತ್ತಿರಬೇಕು ಎನ್ನುವ ಸಂಭ್ರಮವಿಲ್ಲ. ದೀಪಾವಳಿಯಂದು ಮನೆಯನ್ನು ಅಲಂಕರಿಸಲು ಇವುಗಳು ಬಹಳ ಬಳಕೆಗೆ ಬರುತ್ತವೆ. ಮದುವೆ, ಗೃಹ ಪ್ರವೇಶದಂಥ ಸಂಭ್ರಮದಲ್ಲಿಯೂ ಇಂಥಹ ವಿದ್ಯುತ್ ದೀಪಗಳ ಅಲಂಕಾರಗಳನ್ನು ಮಾಡಲಾಗುತ್ತದೆ. ಎಲ್‌ಇಡಿ ದೀಪಗಳ ಸರಮಾಲೆ, ಎಲ್‌ಇಡಿ ಮಿಣಕು ದೀಪಗಳು, ಹಣತೆಯ ವಿನ್ಯಾಸದಲ್ಲಿರುವ ಎಲ್‌ಇಡಿ ದೀಪಗಳು, ನೀರಿನಲ್ಲಿ ತೇಲಿ ಬಿಡಬಹುದಾದ ಎಲ್‌ಇಡಿ ದೀಪಗಳು, ಮರ್ಕ್ಯುರಿ ಬಲ್ಬಿನ ವಿನ್ಯಾಸ, ಎಲ್‌ಇಡಿ ದೀಪಗಳು, ಎಲ್‌ಇಡಿ ಲಾಂಟೀನುಗಳು, ಎಲ್‌ಇಡಿ ದೀಪಗುಚ್ಛಗಳು ಇವು ಆಧುನಿಕ ಯುಗದ ಹಣತೆಗಳು. ಒಟ್ಟಿನಲ್ಲಿ ದೀಪಾವಳಿ ದೀಪಗಳ ಹಬ್ಬ. ಪರಂಪರಾಗತ ದೀಪಗಳ ಜತೆಗೆ ಈ ಬಾರಿ ಯಾವೆಲ್ಲಾ ಹೊಸ ದೀಪಗಳು ಬೆಳಕು ಚೆಲ್ಲಲಿವೆ ಎಂಬುದನ್ನು ಹಬ್ಬದಲ್ಲಿಯೇ ನೋಡೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.