ಎಐ ಚಿತ್ರ
ದೀಪಾವಳಿಗೆ ಕ್ಷಣಗಣನೆ ಆರಂಭವಾಗಿದ್ದು ಎಲ್ಲರೂ ದೀಪಾವಳಿಯನ್ನು ಸಡಗರ ಸಂಭ್ರಮದಿಂದ ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ದೀಪಾವಳಿಯು 5 ದಿನಗಳವರೆಗೂ ಆಚರಣೆ ಮಾಡಬಹುದು ಎಂದು ಜ್ಯೋತಿಷಿ ಎಲ್.ವಿವೇಕಾನಂದ ಆಚಾರ್ಯ ಹೇಳುತ್ತಾರೆ.
ಹಾಗಾದರೇ ನಾಳೆಯಿಂದ ಆರಂಭವಾಗಲಿರುವ ದೀಪಾವಳಿಯ 5 ದಿನಗಳ ಕಾಲ ಯಾವ ದೇವರುಗಳನ್ನು ಯಾವ ಸಮಯದಲ್ಲಿ ಪೂಜಿಸಬೇಕು ಎಂಬುದನ್ನು ಈ ಕೆಳಗಿನಂತೆ ತಿಳಿಯೋಣ.
2025ರ ಅಕ್ಟೋಬರ್ 19ರಂದು ಧನತ್ರಯೋದಶಿ ಆಚರಣೆ ಇರಲಿದೆ. ಈ ದಿನವನ್ನು ನೀರು ತುಂಬುವ ದಿನ ಅಥವಾ ನೀರು ತುಂಬುವ ಹಬ್ಬವೆಂದು ಕರೆಯಲಾಗುತ್ತದೆ. ಈ ದಿನ ಸಂಜೆ ಪಾತ್ರೆಗಳಿಗೆ ಶುದ್ದ ನೀರು ತುಂಬಿಸಬೇಕು. ಬಳಿಕ ಗಂಗಾಪೂಜೆ ಮಾಡಿ ಮರುದಿನ ಬೆಳಿಗ್ಗೆ 5.15ಕ್ಕೆ ಆ ನೀರನ್ನು ಸ್ನಾನಕ್ಕೆ ಬಳಸುವುದರಿಂದ ಒಳಿತಾಗಲಿದೆ ಎನ್ನುತ್ತೆ ಜ್ಯೋತಿಷ.
2025ರ ಅಕ್ಟೋಬರ್ 20ರಂದು ನರಕ ಚತುರ್ದಶಿಯಾಗಿದೆ. ಈ ದಿನ ಸೂರ್ಯೋದಯಕ್ಕಿಂತ ಮುನ್ನ ಮಂಗಳ ಸ್ನಾನ ಮಾಡಬೇಕು. ಇಂದು ಸಂಜೆ 5:55ಕ್ಕೆ ದೀಪಾವಳಿ ಅಮಾವಾಸ್ಯೆ ಕೂಡುತ್ತದೆ. ಮನೆಯಲ್ಲಿ ಧನಲಕ್ಷ್ಮಿ ಪೂಜೆಯನ್ನು ರಾತ್ರಿ 8:28 ರಿಂದ 11:40 ರವರೆಗೆ ಮಾಡುವುದರಿಂದ ಶುಭವಾಗುತ್ತದೆ ಎಂದು ಹೇಳಲಾಗುತ್ತದೆ.
2025ರ ಅಕ್ಟೋಬರ್ 21ರಂದು ಅಂಗಡಿ, ವ್ಯಾಪಾರ ಸ್ಥಳಗಳಲ್ಲಿ ಪೂಜೆ ಮಾಡುವುದಕ್ಕೆ ಒಳ್ಳೆಯ ದಿನವಾಗಿದೆ. ಈ ದಿನ ಮಹಾಲಕ್ಷ್ಮಿ ಅಥವಾ ಕುಬೇರನ ಪೂಜೆಯನ್ನು ಬೆಳಗ್ಗೆ 6:20 ರಿಂದ 7:20ರೊಳಗೆ ಮಾಡಬಹುದು. ಬೆಳಗ್ಗೆ 7:56 ರಿಂದ 11:56 ರವರೆಗೆ ಅಮಾವಾಸ್ಯೆ ಪೂಜೆ ಮಾಡಬಹುದಾಗಿದೆ.
2025ರ ಅಕ್ಟೋಬರ್ 22ರಂದು ದೀಪಾವಳಿ ಪಾಡ್ಯ ಪೂಜೆ, ಸರಸ್ವತಿ ಪೂಜೆ ಮತ್ತು ಗೋಪೂಜೆ ಮಾಡಲಾಗುತ್ತದೆ. ಈ ದಿನ ಬೆಳಿಗ್ಗೆ 6:21 ರಿಂದ 7:09 ರವರೆಗೆ ಹಾಗೂ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೆ ಪೂಜೆ ಸಲ್ಲಿಸಲು ಸೂಕ್ತ ಸಮಯವಾಗಿದೆ.
2025ರ ಅಕ್ಟೋಬರ್ 23ರಂದು ಬಿದಿಗೆ ತಿಥಿಯಾಗಿದೆ. ಈ ದಿನವನ್ನು ಭಾತೃತ್ವ ದಿನವಾಗಿ ಆಚರಣೆ ಮಾಡಬಹುದು ಎಂದು ಜ್ಯೋತಿಷ ಹೇಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.