ADVERTISEMENT

ದುರ್ಗಾ ಮಾತೆ ಮಹಿಷನನ್ನು ಸಂಹರಿಸಿದ್ದು ಹೇಗೆ? ಇಲ್ಲಿದೆ ಕುತೂಹಲಕಾರಿ ಮಾಹಿತಿ

ಎಲ್.ವಿವೇಕಾನಂದ ಆಚಾರ್ಯ
Published 29 ಸೆಪ್ಟೆಂಬರ್ 2025, 11:30 IST
Last Updated 29 ಸೆಪ್ಟೆಂಬರ್ 2025, 11:30 IST
<div class="paragraphs"><p>ಎಐ ಚಿತ್ರ</p></div>

ಎಐ ಚಿತ್ರ

   

ದುರ್ಗೆಯನ್ನು ಪಾರ್ವತಿಯ ಅವತಾರವೆಂದು ಹೇಳಲಾಗುತ್ತದೆ. ಹಿಂದೂ ಧರ್ಮದಲ್ಲಿ ಪ್ರಮುಖವಾಗಿ ಆರಾಧಿಸುವ ದೇವತೆಗಳಲ್ಲಿ ದುರ್ಗಾ ಮಾತೆಗೆ ಅಗ್ರಸ್ಥಾನವಿದೆ. ದುರ್ಗೆಯ ಆರಾಧನೆ ಹಾಗೂ ಶಕ್ತಿಯ ಕುರಿತು ವೇದ ಪುರಾಣಗಳಲ್ಲಿ ಹಲವು ಕಥೆಗಳು ಪ್ರಚಲಿತದಲ್ಲಿವೆ. ಅದರಲ್ಲಿ ಪ್ರಮುಖವಾದದ್ದು ದುರ್ಗಾ ಮಾತೆ ಮಹಿಷನನ್ನು ಸಂಹಾರ ಮಾಡಿದಳು ಎಂಬುದಾಗಿದೆ.

ಮಹಿಷ ಒಬ್ಬ ರಾಕ್ಷಸ. ಅವನು ಅರ್ಧ ಮನುಷ್ಯ ಹಾಗೂ ಅರ್ಧ ಎಮ್ಮೆಯ ರೂಪದಲ್ಲಿ ಜನಿಸಿದ್ದನು. ಆದ್ದರಿಂದ ಅವನನ್ನು ಮಹಿಷಾಸುರ ಎಂದು ಕರೆಯಲಾಗುತ್ತದೆ. ಮಹಿಷಾಸುರನು ಅಗಾಧ ಶಕ್ತಿಯನ್ನು ಪಡೆಯಲು ಬಯಸಿ ಬ್ರಹ್ಮನ ಕುರಿತು ಕಠಿಣ ತಪಸ್ಸು ಮಾಡಿದನು. ಅವನ ತಪಸ್ಸಿಗೆ ಮೆಚ್ಚಿದ ಬ್ರಹ್ಮನು ಪ್ರತ್ಯಕ್ಷನಾಗಿ ಏನು ವರ ಬೇಕು ಎಂದು ಕೇಳಿದಾಗ, ಮಹಿಷಾಸುರನು ‘ಯಾವ ಪುರುಷನಿಗೂ ನನ್ನನ್ನು ಕೊಲ್ಲಲು ಸಾಧ್ಯವಾಗಬಾರದು’ ಎಂಬ ವರವನ್ನು ದಯಪಾಲಿಸುವಂತೆ ಬ್ರಹ್ಮ ದೇವನನ್ನು ಕೇಳಿದನು. ಬ್ರಹ್ಮನು ಅವನ ಕೋರಿಕೆಯಂತೆ ವರವನ್ನು ನೀಡಿದನು ಎಂದು ಹೇಳಲಾಗುತ್ತದೆ. 

ADVERTISEMENT

ವರ ಪಡೆದ ಮಹಿಷ ತನ್ನನ್ನು ಯಾವ ಪುರುಷನೂ ಸೋಲಿಸಲು ಸಾಧ್ಯವಿಲ್ಲ ಎಂದು ಅಹಂಕಾರದಿಂದ ಬೀಗಿದನು. ಅವನು ತನ್ನ ಸೈನ್ಯದೊಂದಿಗೆ ದೇವಲೋಕದ ಮೇಲೆ ದಾಳಿ ಮಾಡಿ, ಇಂದ್ರನ ಸಿಂಹಾಸನವನ್ನು ವಶಪಡಿಸಿಕೊಂಡು ಇಂದ್ರನನ್ನು ಹೊರಹಾಕಿದನು. ಬಳಿಕ ಅವನು ಸ್ವರ್ಗದ ರಾಜನಾಗಿ ದೇವತೆಗಳನ್ನು ಹಿಂಸಿಸಲು ಪ್ರಾರಂಭಿಸಿದನು. ದೇವತೆಗಳು ಅವನ ಅಟ್ಟಹಾಸಕ್ಕೆ ಬೇಸತ್ತು ಸ್ವರ್ಗದಿಂದ ಓಡಿಹೋಗಿ ತ್ರಿಮೂರ್ತಿಗಳ ಮುಂದೆ ಮೊರೆ ಇಟ್ಟರು ಎಂದು ಕಥೆಗಳು ಹೇಳುತ್ತವೆ.

ದುರ್ಗೆಗೆ ಯಾರು ಯಾವ ಶಸ್ತ್ರಗಳನ್ನು ನೀಡಿದರು?

  • ಶಿವ – ತ್ರಿಶೂಲ

  • ‌ವಿಷ್ಣ – ಸುದರ್ಶನ ಚಕ್ರ

  • ಇಂದ್ರ – ವಜ್ರಾಯುಧ

  • ಬ್ರಹ್ಮ – ಕಮಂಡಲ ಮತ್ತು ಜಪಮಾಲೆ

  • ಹಿಮಾಲಯ – ಸಿಂಹ

ಹೀಗೆ ದೇವತೆಗಳು ತಮ್ಮ ಶಕ್ತಿ ಮತ್ತು ಆಯುಧಗಳನ್ನು ದುರ್ಗೆಗೆ ನೀಡಿದರು ಎಂದು ಪುರಾಣ ಕಥೆಗಳು ಹೇಳುತ್ತವೆ. ‌

‌ಮಹಿಷಾಸುರ ಮತ್ತು ದುರ್ಗೆಯ ಯುದ್ಧ

ದುರ್ಗಾ ಮಾತೆ ಹಾಗೂ ಮಹಿಷನ ನಡುವೆ ಯುದ್ದ ನಡೆಯುತ್ತದೆ. ಮಹಿಷಾಸುರನು ದುರ್ಗೆಯನ್ನು ಸಾಮಾನ್ಯ ಸ್ತ್ರೀ ಎಂದು ಭಾವಿಸಿ ಅವಳನ್ನು ಯುದ್ಧದಲ್ಲಿ ಎದುರಿಸಲು ತನ್ನ ಸೇನಾಪತಿಗಳನ್ನು ಕಳುಹಿಸಿದನು. ಆದರೆ, ದೇವಿಯು ಮಹಿಷಾಸುರನ ಎಲ್ಲಾ ಸೇನಾಪತಿಗಳು ಮತ್ತು ಸೈನಿಕರನ್ನು ಸುಲಭವಾಗಿ ನಾಶಪಡಿಸಿದಳು. ಆಗ ಮಹಿಷ ಸ್ವತಃ ತಾನೇ ಯುದ್ಧಕ್ಕೆ ಬಂದನು. ಅವನು ತನ್ನ ರೂಪವನ್ನು ಬದಲಾಯಿಸುತ್ತ ದುರ್ಗೆಯನ್ನು  ಗೊಂದಲಗೊಳಿಸಲು ಪ್ರಯತ್ನಿಸಿದನು.

ಎಮ್ಮೆ, ಸಿಂಹ, ಮನುಷ್ಯ ಹೀಗೆ ಹಲವು ರೂಪವನ್ನು ಧರಿಸುತ್ತ ಯುದ್ಧ ಮಾಡಿದನು. ದೇವಿಯು ಅವನ ರೂಪಗಳೊಂದಿಗೆ ಹೋರಾಡಿ, ತ್ರಿಶೂಲದಿಂದ ಅವನ ಎದೆಗೆ ತಿವಿದು ಮಹಿಷಾಸುರನನ್ನು ವಧಿಸುತ್ತಾಳೆ. ಈ ವಿಜಯದಿಂದ ದುರ್ಗಾ ದೇವಿಗೆ ಮಹಿಷಾಸುರ ಮರ್ದಿನಿ ಎಂಬ ಹೆಸರು ಬಂದಿತು ಎಂದು ‍ಪುರಾಣಗಳಲ್ಲಿ ಉಲ್ಲೇಖವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.