ಆಲಾರೆ... ಆಲಾ... ಗಣಪತಿ ಆಲಾ
ಏಕ್ ದೊ ತೀನ್ ಚಾರ್
ಗಣಪತಿ ಕಾ ಜೈಜೈಕಾರ್
ಹೀಗೆ ಜೋರು ಧ್ವನಿಯಲ್ಲಿ ಜಯಘೋಷ ಕೇಳುತ್ತಿದ್ದರೆ; ಜೊತೆಗೆ ಜಾಗಟೆ, ಗಂಟೆಯ ಸದ್ದೂನು ಕೇಳುತ್ತಿದ್ದರೆ ಬೀದರ್, ಕಲಬುರಗಿಯಲ್ಲಿ ಮನೆಮಂದಿಯೆಲ್ಲ ಬಾಗಿಲಿಗೆ ಬಂದು ನಿಲ್ಲುತ್ತಾರೆ. ಯಾರ ಮನೆಗೆ ಎಂಥ ಗಣಪತಿ ಹೊರಟಿದೆ ಎಂದು ನೋಡುವ ಉತ್ಸಾಹ. ತೆಗೆದುಕೊಂಡು ಹೋಗುವವರೂ ಅದೇ ಉತ್ಸಾಹದಲ್ಲಿ ಬಿಳಿ ಮತ್ತು ಕಾವಿ ಪಂಚೆ ತೊಟ್ಟು, ಶಲ್ಯ ಹೊದ್ದು, ಮಣೆ ಮೇಲೆ ಗಣಪನನ್ನು ಕೂರಿಸಿ, ಹೊತ್ತು ತರುತ್ತಾರೆ. ಮನೆ ಮಗಳು, ಕಳಸ ಹೊತ್ತಿದ್ದರೆ, ಗಂಡು ಮಕ್ಕಳು ಗಂಟೆ, ಜಾಗಟೆ, ಚಳ್ಳಂಗಳನ್ನು ಬಾರಿಸುತ್ತ, ಘೋಷಣೆ ಕೂಗುತ್ತಾರೆ. ಚುಲ್ಟಾರಿಗಳಿದ್ದರೆ ಹಾದಿಗುಂಟ ಹೂ ಹಾರಿಸುತ್ತ ಬರುತ್ತಾರೆ. ಗಣಪನನ್ನು ಮನೆಗೆ ಕರೆತರುವುದೇ ಸಂಭ್ರಮ. ಗುಲಾಲು ಎರಚುತ್ತ, ಆ ಬಣ್ಣದಲ್ಲಿ ಮಿಂದೇಳುತ್ತ ಬರುವುದೇ ದೊಡ್ಡ ಸಂಭ್ರಮ.
ಈಗ ಕಾರೊಳಗೆ ಗಣಪನ ಭಜನೆಗಳನ್ನು ಹಚ್ಚಿಟ್ಟುಕೊಂಡು, ಮುಂದಿನ ಸೀಟಿನ ಮೇಲೆ ಒಂದು ಅಂಗವಸ್ತ್ರ ಹಾಸಿ ಅದರ ಮೇಲೆ ಕುಳಿತು, ತಮ್ಮ ತೊಡೆಯ ಮೇಲೂ ಹೊಸದೊಂದು ವಸ್ತ್ರ ಹಾಕಿಕೊಂಡು, ಗಣಪನನ್ನು ಎತ್ತಿಕೊಂಡು ಬರುತ್ತಾರೆ.
ಮೊದಲಿನಂತೆ ಎಲ್ಲೋ ಒಂದೆರಡು ಕುಟುಂಬಗಳು, ಕೆಸರಿರುವ, ಮಣ್ಣಿನ ರಸ್ತೆಯಲ್ಲಿ ಗಿಜಿಬಿಜಿ ಗಿಜಿಬಿಜಿಲಿ ಬರಿಗಾಲಲ್ಲಿ ಹೆಜ್ಜೆ ಇಡ್ತಾ, ಕೆಸರು ಸಿಡಿಸಿಕೊಳ್ಳುತ್ತ ಗಣಪನನ್ನು ಕರೆತರುವ ರೂಢಿ ಬೀದರ್, ಕಲಬುರಗಿ ಜಿಲ್ಲೆಗಳಲ್ಲಿದೆ. ಕೆಲವರು ಹೈಬ್ರೀಡ್ ವ್ರತಾಚರಣೆಯಂತೆ, ಮನೆಯ ಓಣಿ ಬರುವವರೆಗೂ ಕಾರಲ್ಲಿಯೋ, ಗಾಡಿ ಮೇಲೆಯೋ ಬರುತ್ತಾರೆ. ನಂತರ ಬರಿಗಾಲಲ್ಲಿ ನಡೆದುಕೊಂಡು ಮನೆವರೆಗೂ ಮೆರವಣಿಗೆಯಲ್ಲಿ ತರುತ್ತಾರೆ. ಹೀಗೆ ತರುವಾಗ ‘ಆಲಾರೆ ಆಲಾ ಗಣಪತಿ ಆಲಾ.. ಗಣಪತಿ ಬಪ್ಪಾ ಮೋರಯಾ..’ ಅಂತ್ಹೇಳ್ತಾರೆ.
ಬೀದರಿನಲ್ಲಿ ಐದು ದಿನಗಳ ಆಚರಣೆ. ಕಲಬುರಗಿಯಲ್ಲಿ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ. ಹುಬ್ಬಳ್ಳಿಯಲ್ಲಿ ಒಂಬತ್ತು ದಿನ, ಬೆಳಗಾವಿಯಲ್ಲಿ ಹನ್ನೊಂದು ದಿನ. ಮುಂಬೈನಲ್ಲಿ 21 ದಿನ. ಒಂದೊಂದು ಕಡೆ ಹಬ್ಬ ಮುಗಿಸಿದವರೂ ಉಳಿದ ಕಡೆ ಗಣೇಶನನ್ನು ನೋಡಲು ಹೊರಡುತ್ತಾರೆ.
ಒಂದೈದಾದರೂ ಗಣೇಶ ಮಂಡಲಗಳ ಗಣಪತಿ ದರ್ಶನ ಮಾಡಬೇಕು. ಗಣಪನ ಮುಂದೆ ಐದೈದು ಬಸ್ಕಿಯಾದರೂ ಹಾಕಬೇಕು ಎಂಬುದು ನಿಯಮ. ಪ್ರತಿ ಗಣಪನ ಮುಂದೆ ಬಸ್ಕಿ ಹಾಕುವಾಗಲೂ ಕೆಲವರು ಸವಾಲು ಹಾಕಿ, 11ರಿಂದ 51ರವರೆಗೂ ಹೋಗುತ್ತಿತ್ತು. ಕೆಲ ಪಲ್ವಾನರು 111 ಬಸ್ಕಿ ಹಾಕಿ ಸೈ ಅನಿಸಿಕೊಳ್ಳುತ್ತಿದ್ದರು.
ಈ ಐದು ದಿನಗಳಲ್ಲಿ ಮೊದಲ ದಿನದ ಮಧ್ಯಾಹ್ನದವರೆಗೂ ಪ್ರತಿಷ್ಠಾಪನೆ, ಪೂಜೆಗಳದ್ದೇ ಮೇಲುಗೈ. ಅಂದು ಓಣಿಯ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಮಾತ್ರ ಮಾಡುವರು. ಬಪ್ಪಾ ಬರುವಾಗ ರಂಗೋಲಿಯ ಸ್ವಾಗತ ಇರಲಿ ಎಂಬ ಸ್ವಾರ್ಥವೂ ಇರುತ್ತಿತ್ತು. ಎರಡನೆಯ ದಿನ ಓಣಿಯ ಮಕ್ಕಳ ಪ್ರತಿಭಾ ಪ್ರದರ್ಶನ. ಹಾಡು, ಡಾನ್ಸು, ಸಣ್ಣ ಪ್ರಹಸನಗಳು, ಮಕ್ಕಳು ವಚನ, ಜೋಕು ಏನೇ ಹೇಳುವಂತಿದ್ದರೂ ಅವರಿಗೆ ವೇದಿಕೆ ಸಿಗುತ್ತಿತ್ತು. ಹಿರಿಯರೆಲ್ಲ ಕುರ್ಚಿ ಮೇಲೆ ಕುಳಿತರೆ ಮಕ್ಕಳೆಲ್ಲ ಚಾಪೆ ಹಾಸಿ, ಕೂರಬೇಕಿತ್ತು. ಒಂದೊಂದು ಮಗುವಿಗೂ ಪ್ರೋತ್ಸಾಹಕರ ಧನವಾಗಿ ಒಂದು ರೂಪಾಯಿಯಿಂದ ಹತ್ತು ರೂಪಾಯಿವರೆಗೂ ಆಯೇರಿ ಮಾಡುತ್ತಿದ್ದರು. ಹಣ ಪಡೆದ ಮಗುವಿನ ಮುಖ ಮೊರದಗಲವಾಗಿ, ಕಿವಿಯಿಂದ ಕಿವಿವರೆಗೂ ನಕ್ಕೊಂಡು ವೇದಿಕೆ ಇಳಿಯುತ್ತಿತ್ತು.
ಮೂರನೆಯ ದಿನ ಹೊರ ಊರುಗಳಿಂದ ಆರ್ಕೆಸ್ಟ್ರಾ ಕರೆಸುತ್ತಿದ್ದರು. ಇದರಲ್ಲಿಯೂ ಕೆಲವು ಗಣೇಶ ಮಂಡಳಿಗಳು ಒಪ್ಪಂದ ಮಾಡಿಕೊಂಡು, ಒಂದೇ ತಂಡವನ್ನು ಕರೆಯಿಸಿ, ಎರಡು ಮೂರನೆಯ ದಿನಗಳಿಗೆ ತಮ್ಮ ಕಾರ್ಯಕ್ರಮಗಳನ್ನು ಅದಲಿ ಬದಲಿ ಮಾಡಿಕೊಳ್ಳುತ್ತಿದ್ದರು. ಊರ ಜನರೂ ಒಂದೆಡೆ ಹೋಗಲಾಗದಿದ್ದಲ್ಲಿ ಇನ್ನೊಂದು ಕಡೆಯಾದರೂ ಹೋಗಿ ಆ ಹಾಡುಗಳನ್ನು, ರಸಮಂಜರಿಯನ್ನು ಆಸ್ವಾದಿಸುತ್ತಿದ್ದರು. ನಾಲ್ಕನೆಯ ದಿನ ನಾಟಕ, ನೃತ್ಯಗಳಿಗೆ ಮೀಸಲು. ಐದನೆಯ ದಿನ ವಿಸರ್ಜನೆಯ ಮೆರವಣಿಗೆ.
ಕೋಲಾಟ, ಲೇಜಿಂ, ತಲ್ವಾರ್‌ಬಾಜಿ (ಖಡ್ಗ ಝಳಪಿಸುತ್ತ ನರ್ತಿಸುವವರ ತಂಡ), ಡೊಳ್ಳು, ಡಂಬಲ್ಸ್, ಮುಂತಾದ ತಂಡಗಳೆಲ್ಲ ತಮ್ಮ ಪ್ರದರ್ಶನವನ್ನು ಒಂದೊಂದು ಗಣೇಶ ಮಂಡಳಿಯ ಮುಂದೆಯೂ ಮಾಡುತ್ತ ಹೋಗುತ್ತಿದ್ದವು.
ಬೀದರಿನ ನೇವಿ ಗಣೇಶ ಮಂಡಳಿ, ಶಿವಸೇನಾ ಮತ್ತು ಕ್ರಾಂತಿ ಗಣೇಶ ಮಂಡಳಿ ಜೊತೆಗೆ ಗ್ರಂಥಾಲಯದ್ದು ಬಲು ಖ್ಯಾತಿ ಪಡೆದಿದ್ದವು. ಪಾಠಕ್ ಗಲ್ಲಿಯ (ದರ್ಜಿ ಗಲ್ಲಿ) ಗಣೇಶನಂತೂ ಅಲಂಕಾರದಲ್ಲಿ ಸದಾ ದೊಡ್ಡ ದೊಡ್ಡ ಮಂಡಳಿಗಳೊಂದಿಗೆ ಸೆಡ್ಡು ಹೊಡೆಯುತಿತ್ತು. ಇದೀಗ ನೇವಿ ಮತ್ತು ಶಿವಸೇನಾ ಮಂಡಳಿಗಳು ನೇಪಥ್ಯಕ್ಕೆ ಸರಿದಿವೆ. ಬೀದರ್ ಕಾ ರಾಜಾ ಎನ್ನುವುದು ಖ್ಯಾತಿ ಪಡೆಯುತ್ತಿದೆ.
ಬಾಲಗಂಗಾಧರ ತಿಲಕರು ಸಾಮೂಹಿಕ ಗಣೇಶ ಪ್ರತಿಷ್ಠಾಪನೆಗೆ ಕರೆ ಕೊಟ್ಟ ಮೇಲೆ, ಇಲ್ಲಿಯ ಕೆಲವು ಗಣೇಶ ಮಂಡಳಿಗಳು ತಿಲಕರ ಚಿತ್ರವನ್ನೂ ಜೊತೆಗಿರಿಸಿ ಪೂಜೆ ಮಾಡುತ್ತವೆ. ರಾಷ್ಟ್ರೀಯತೆ ಮತ್ತು ಬಹುತ್ವಕ್ಕೆ ಹೇಳಿ ಮಾಡಿಸಿದ ಮಂಡಳಿಗಳಿವು ಎಂಬಂತೆ ಒಂದೆರಡು ದಶಕಗಳ ಮೊದಲು ಆಚರಣೆ ನಡೆಯುತ್ತಿತ್ತು. ಬೆಳಗ್ಗೆ ಕಬೀರರ ದೋಹೆ, ಮೀರಾ ದೋಹೆಗಳಿರುವ ಭಜನೆಗಳು, ಕನ್ನಡದ ಗಣಪತಿ ಸ್ತೋತ್ರಗಳು, ಹಾಡುಗಳು ಕೇಳಿಬರುತ್ತಿದ್ದರೆ ಮಧ್ಯಾಹ್ನ ಮತ್ತು ಸಂಜೆಗೆಲ್ಲ ದೇಶಭಕ್ತಿ ಮತ್ತು ದೇಶಪ್ರೀತಿಯ ಗೀತೆಗಳನ್ನು ಪ್ರಸಾರ ಮಾಡುತ್ತಿದ್ದರು. ಬೀದರಿನಲ್ಲಿ ‘ಮೇರೆ ದೇಶ್ ಕೆ ಧರ್ತಿ..’ ಹಾಡಿಗೆ ಹೆಜ್ಜೆ ಹಾಕದ ಯುವಕರಿಲ್ಲ. ‘ನನ್ಹಾ ಮುನ್ನಾ ರಾಹಿ ಹೂಂ’ ಹಾಡಿಗೆ ಕೈ ಕಾಲಾಡಿಸದ ಮಕ್ಕಳಿಲ್ಲ. ಆ ಜಮಾನಾ ಹಾಗಿತ್ತು. ಆಚರಣೆಗಳಲ್ಲಿ ಭಕ್ತಿ, ಪ್ರೀತಿ ಪರಸ್ಪರ ಗೌರವ ಎಲ್ಲವೂ ಗುಲಾಲಿನ ಬಣ್ಣದಲ್ಲಿ ಒಂದಾಗುತ್ತಿತ್ತು.
ಈಗ ಹಲವಾರು ಏನು ಬಂತು, ಓಣಿಗೊಂದು ಗಣೇಶ ಮಂಡಳಿ. ಪ್ರತಿ ಮಂಡಳಿಯ ಹಾಡೂ ಇನ್ನೊಂದು ಮಂಡಳಿಗೆ ಕೇಳುವಷ್ಟು ಜೋರು. ಕೊನೆಯ ದಿನ ಡಿಜೆ ಮುಂದೆ ನಾಗಿನ್ ಡಾನ್ಸ್ ಮೊದಲು ಮಾಡಿ ಎಲ್ಲ ಬಗೆಯ ಕುಣಿತಗಳು. ಉನ್ಮಾದ, ಉದ್ವೇಗ, ಪ್ರೀತಿ ಮತ್ತು ಭಕ್ತಿಯ ಬದಲಿಗೆ ವಿಜ್ರಂಭಿಸುತ್ತಿವೆ. ಮೊದಲಿನಂತೆ ಪ್ರತಿಭಾ ಪ್ರದರ್ಶನವೇನೂ ಇರುವುದಿಲ್ಲ. ಸಂಗ್ರಹಿಸಿದ ದುಡ್ಡಿನಲ್ಲಿ ಯಾರು ಎಷ್ಟು ದೊಡ್ಡ ಗಣೇಶ ತರುತ್ತಾರೆ ಎಂಬುದೇ ಸ್ಪರ್ಧೆ.
ಹಿಂದೆ ಗಣೇಶನನ್ನು ಕೂರಿಸಲು ಮಾಡುವ ಪೆಂಡಾಲುಗಳಲ್ಲಿಯೂ ಅಲಂಕಾರ ಸರಳವಾಗಿದ್ದು, ಪ್ರಸಾದ ಹೆಚ್ಚಿರುತ್ತಿತ್ತು. ಖಾಂಡದ ಅಂತ ಕರೆಯುತ್ತಿದ್ದರು. ಖಾಂಡ್ ಎಂಬುದು ಮರಾಠಿ ಮೂಲದ ಪದ. ದಾಸೋಹ ಎಂಬರ್ಥದಲ್ಲಿ. ಕುಟುಂಬದವರೆಲ್ಲ ಗಣಪನನ್ನು ನೋಡಲು ಹೊರಬಂದರೆ ಸಂಜೆಯಿಡೀ ಗಣೇಶನನ್ನು ನೋಡಿ, ಯಾವುದಾದರೂ ದಾಸೋಹದಲ್ಲಿ ಪ್ರಸಾದ ಮಾಡಿ ಮನೆಗೆ ತಲುಪುತ್ತಿದ್ದರು.
ಇದೀಗ ಪೆಂಡಾಲಿನ ಅಲಂಕಾರಕ್ಕೇ ಹೆಚ್ಚು ಹಣ ವಿನಿಯೋಗವಾಗುತ್ತಿದೆ. ಪ್ರಸಾದ ಹಂಚಲೇಬೇಕೆಂಬ ಅನಿವಾರ್ಯಕ್ಕೆ ಕಟ್ಟುಬಿದ್ದು ಚುರುಮುರಿ, ಉಂಡೆಗಳಿಗೆ ಸೀಮಿತವಾಗಿದೆ. ಈಗಲೂ ಒಂದೆರಡು ಮಂಡಳಿಗಳು ಪ್ರಸಾದರೂಪದಲ್ಲಿ ‘ಖಾಂಡ್’ ಮಾಡುತ್ತಿವೆ.
ಮೊದಲಿನಂತೆ ಅಲ್ಲಲ್ಲಿ ಆರ್ಕೆಸ್ಟ್ರಾ ತಂಡಗಳು ಬರುತ್ತಿವೆ. ಕರೋಕೆಯೊಂದಿಗೆ ಹಾಡುವ ಈ ತಂಡಗಳು ಮೊದಲಿನ ಉತ್ಸಾಹ ತುಂಬುತ್ತಿಲ್ಲ. ಮನೆಯಿಂದ ಚಾಪೆ ತಂದು ಹಾಸಿಕೊಂಡು ಕೂರುತ್ತಿದ್ದವರೀಗ ಇಲ್ಲಿಲ್ಲ. ಕಾರು, ಗಾಡಿಗಳ ಮೇಲೆ ಬಂದು, ಕುಳಿತಲ್ಲೇ ಎರಡೂ ಕೈ ಕತ್ತರಿ ಮಾಡಿ, ಕಿವಿ ಹಿಡಿದುಕೊಂಡು, ಕತ್ತು ಅಲುಗಾಡಿಸಿ ಬಸ್ಕಿ ಹಾಕಿ ಮುಂದೆ ಹೋಗುತ್ತಾರೆ. ಹಾಗೆ ಹೋಗುವ ಮುನ್ನ ಒಂದು ಫೋಟೊ ತೆಗೆಯುವುದು ಮರೆಯುವುದಿಲ್ಲ. ಕೆಳಗಿಳಿದರೆ ಸೆಲ್ಫಿ ತೊಗೊಳೋದು ಮರೆಯೋದಿಲ್ಲ. ತಂತ್ರಜ್ಞಾನ ಮತ್ತು ಮೊಬೈಲ್ ಫೋನುಗಳು ಮನರಂಜನೆಯ ಭಾಷ್ಯವನ್ನೇ ಬದಲಿಸಿವೆ. ಮೊದಲಿನಂತೆ ಬೆರೆಯುವುದು, ಕೂರುವುದು, ಪರಸ್ಪರ ಮೆಚ್ಚುವುದು, ಶ್ಲಾಘಿಸುವುದು ಇವೆಲ್ಲ ನೇಪಥ್ಯಕ್ಕೆ ಸರಿದಿವೆ. ಈಗ ಏನಿದ್ದರೂ ಇನ್‌ಫ್ಲುಯೆನ್ಸರ್‌ಗಳ ಕಾಲ. ಯಾರು ಎಲ್ಲಿ ರೀಲು ಮಾಡಿದರು ಎಂಬುದೇ ಸುದ್ದಿ.
ವಿಸರ್ಜನೆಯ ದಿವಸದ ಸಂಭ್ರಮವೇ ಬೇರೆ. ಚೌಬಾರಾದ ಹಿಂದಿನ ರಸ್ತೆಯಲ್ಲಿ ಎಲ್ಲ ಮಂಡಳಿಗಳೂ ಸಾಲುಗಟ್ಟುತ್ತವೆ. ಅವು ಮೆರವಣಿಗೆಯಲ್ಲಿ ಮುಖ್ಯ ರಸ್ತೆಗೆ ಬರುವ ಹೊತ್ತಿಗೆ ರಸ್ತೆಯ ಎರಡೂ ಬದಿಯಲ್ಲಿ ಪಾನಕ, ಮಜ್ಜಿಗೆ, ಸಿರಾ, ಪುಲಾವು, ಸಜ್ಜಿಗೆ, ಚುರುಮುರಿ ಮುಂತಾದವನ್ನೆಲ್ಲ ಹಂಚ್ತಾರೆ. ಬಂದವರಿಗೆಲ್ಲ ದೊನ್ನೆಯಲ್ಲಿ ಪ್ರಸಾದ ತುಂಬಿ ತುಂಬಿ ಕೊಡುವುದು ಇದ್ದೇ ಇರುತ್ತದೆ. ಮುಸ್ಲಿಮರು ಪಾನಕ ಹಂಚುವುದರಲ್ಲಿ ನಿಸ್ಸೀಮರು. ತ್ರಿವರ್ಣದಲ್ಲಿ ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಪಾನಕ ಮಾಡಿ ಅವನ್ನು ಹಾಗೆಯೇ ಜೋಡಿಸಿಡುತ್ತಾರೆ. ಚಾಚಾ, ಮಾಮು, ಭಯ್ಯಾ.. ಭಾಯ್.. ಎಲ್ಲ ಸಂಬಂಧ ಸೂಚಕಗಳಿಂದಲೇ ಕರೆಯುವುದಿಲ್ಲಿ. ಈ ವರೆಗೂ ’ಬ್ರೊ‘ ಪದ ಅಲ್ಲಿ ಹೊಕ್ಕಿಲ್ಲ. ನುಸುಳಲು ಬಿಟ್ಟಿಲ್ಲ. ಕಾಕಾ, ಮಾಮಾ, ಜೀಜಾಗಳೇ ಇಲ್ಲಿ ಕೇಳಿಸುವುದು. ಈ ಉತ್ಸಾಹದಲ್ಲೇನೂ ಕುಂದಾಗಿಲ್ಲ. ಬೀದರ್ ಜಿಲ್ಲೆಯಲ್ಲಿ ಕಳೆದ ವರ್ಷದಿಂದ ಡಿಜೆಗೆ ನಿರ್ಬಂಧ ಹೇರಿದ್ದಾರೆ. ಶಬ್ದ ಮಾಲಿನ್ಯಕ್ಕೆ ಕಡಿವಾಣ ಬಿದ್ದಿದೆ.
ನಾವು ಸಣ್ಣವರಿದ್ದಾಗ ಮಶಾಲ್ ಮೆರವಣಿಗೆ ಮಾಡುತ್ತಿದ್ದರು. ಪಂಜು ಹಿಡಿದ ತಂಡ ಮುಖ್ಯ ರಸ್ತೆಗೆ ಬಂದರೆ ಎಲ್ಲ ಲೈಟುಗಳನ್ನೂ ಆರಿಸುತ್ತಿದ್ದರು. ಪಂಜಿನ ಕವಾಯತು ಅದೆಷ್ಟು ಚಂದ ಕಾಣಿಸುತ್ತಿತ್ತು. ಅಂಥ ಕತ್ತಲೆಯಲ್ಲಿಯೂ ಅಹಿತಕರ ಘಟನೆ ನಡೆಯದೇ ಇರಲು ಅಲ್ಲಿಯ ಸೌಹಾರ್ದ ತುಂಬಿದ ವಾತಾವರಣವೇ ಕಾರಣವಾಗಿತ್ತು.
ಇದೀಗ ಎಲ್ಲವೂ ಬದಲಾಗಿದೆ. ದೊಡ್ಡ ದೊಡ್ಡ ಗಣಪತಿಯನ್ನು ತಂದು ಪ್ರತಿಷ್ಠಾಪಿಸುವುದರಲ್ಲಿ, ದೊಡ್ಡ ದೇವಸ್ಥಾನಗಳ ಪ್ರತಿಕೃತಿ ನಿರ್ಮಿಸುವುದರಲ್ಲಿ, ಫ್ಯಾನ್ಸಿ, ಥೀಮ್ಡ್ ಗಣಪತಿ ಪ್ರತಿಷ್ಠಾಪಿಸಿ ಎಲ್ಲ ಕಡೆಯೂ ತಮ್ಮ ತಮ್ಮ ಹೆಗ್ಗಳಿಕೆಯನ್ನು ತೋರಿಸುವುದರಲ್ಲಿ ಜನರು ನಿರತರಾಗಿದ್ದಾರೆ.
ಹಿಂದಿನಂತೆ ಎಲ್ಲರೂ ಒಂದೆಡೆ ನೆರೆಯುವ, ಕೂರುವ, ಬೆರೆಯುವ ಪರಸ್ಪರ ಮೆಚ್ಚುವ ಗುಣಗಳು ನೇಪಥ್ಯಕ್ಕೆ ಸರಿದಿವೆ. ಸೆಲ್ಫಿಯ ಜಮಾನಾದಲ್ಲಿ ತಾನು ಚಂದ, ತಾನೇ ಚಂದ, ತಾನು ಶ್ರೇಷ್ಠ, ತಾನೇ ಶ್ರೇಷ್ಠ ಎಂಬ ಚೌತಿಯ ಚಂದ್ರನ ಗುಣಗಳೇ ಹೆಚ್ಚಾಗಿವೆ. ಬಾಲಗಂಗಾಧರ ತಿಲಕರ ಚೌತಿ ಹೀಗೆ ಬದಲಾಗಿದೆ. ‘ಹ್ಯಾಪ್ಪಿ ಗಣೇಶ’ ಎಂಬಲ್ಲಿಗೆ ಹಬ್ಬದ ಶುಭಾಶಯಗಳು ಪೂರ್ಣವಿರಾಮ ಕಾಣುತ್ತಿವೆ.
ಗಣೇಶ ಮಂಡಳಿಗಳು
ಬೀದರ್ ಗಣೇಶ ಮಹಾಮಂಡಳ ನಾಲ್ಕು ದಶಕಗಳಿಗಿಂತಲೂ ಹೆಚ್ಚು ಚಾಲ್ತಿಯಲ್ಲಿದೆ. ಸಾರ್ವಜನಿಕ ಗಣೇಶ ಕೂರಿಸಲು ಆಸಕ್ತಿ ಇರುವವರು ತಮ್ಮ ತಮ್ಮ ಮಂಡಳಿಗಳ ಹೆಸರು, ಓಣಿಯನ್ನು ಈ ಮಹಾ ಗಣೇಶ ಮಂಡಳಿಯಲ್ಲಿ ಹೆಸರು ನೊಂದಾಯಿಸಬೇಕು. ಐದು ದಿನಗಳ ಕಾರ್ಯಕ್ರಮ ವಿವರವನ್ನೂ ನೀಡಬೇಕು.
ರಾಜಾ... ರಾಜಾ...
ಹುಬ್ಬಳ್ಳಿ ಕಾ ರಾಜಾ, ಬೆಳಗಾವಿ ಕಾ ರಾಜಾ, ಬೀದರ್ ಕಾ ರಾಜಾ..
ರಾಜಾ ಹೆಸರಿನ ಗಣೇಶ ಬರಲು ಕಾರಣ ಮುಂಬೈನ ನವಸಾಲ ಪವಣಾರ ವಿಶ್ವಾಚಾ ರಾಜಾ ಹೆಸರಿನ ಗಣೇಶ. ಜಿಎಸ್‌ಬಿ ಸಮಾಜದ ಈ ಗಣಪತಿಗೆ ನಿಜವಾದ ಚಿನ್ನ, ಬೆಳ್ಳಿ ಆಭರಣದಿಂದಲೇ ಅಲಂಕರಿಸುತ್ತಾರೆ. ಪ್ರತಿ ವರ್ಷವೂ ಒಂದೊಂದು ಕಾರಣಕ್ಕೆ ದಾಖಲೆ ಸೃಷ್ಟಿಸುವ ಖ್ಯಾತಿ ಈ ರಾಜಾ ಗಣೇಶನದ್ದು. ಈ ವರ್ಷ ₹ 474.46 ಕೋಟಿ ಮೌಲ್ಯದ ವಿಮೆ ಮಾಡಿಸಿ, ತನ್ನದೇ ಸುಮಾರು ₹ 400 ಕೋಟಿ ಮೌಲ್ಯದ ವಿಮೆಯ ದಾಖಲೆಯನ್ನು ಮುರಿದಿದೆ. ಆಭರಣ, ಪೆಂಡಾಲ್, ಪಾರ್ಕಿಂಗ್ ಮತ್ತು ಸುತ್ತಲಿನ ಮಳಿಗೆಗಳೂ ಸೇರಿದಂತೆ ಅಡುಗೆ ಮಾಡುವ, ಸ್ವಯಂ ಸೇವಕರಿಗೂ ವಿಮೆ ಮಾಡಿಸುತ್ತದೆ. ಹನ್ನೊಂದು ದಿನಗಳು 24 ಗಂಟೆ ನಿರಂತರವಾಗಿ ಋಗ್ವೇದದ ಪ್ರಕಾರ ಪೂಜೆ ನೆರವೇರಿಸಲಾಗುತ್ತದೆ. ಈ ರಾಜಾನ ಖ್ಯಾತಿಯಿಂದಾಗಿಯೇ ನಮ್ಮಲ್ಲಿಯೂ ರಾಜಾ ಗಣೇಶ ಮಂಡಳಿಗಳು ಜನಪ್ರಿಯವಾದವು.
ವಿಸರ್ಜನೆ ಮೆರವಣಿಗೆಯಲ್ಲಿ ಸೌಹಾರ್ದ
ಚೌಬಾರಾದಿಂದ ಸಾಗುವ ಮೆರವಣಿಗೆಗೆ ಚೌಬಾರಾ ಎಂಬ ಐತಿಹಾಸಿಕ ಸ್ಮಾರಕದ ಮೇಲೆ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು, ಎಲ್ಲ ಧಾರ್ಮಿಕ ಗುರುಗಳು ಎಲ್ಲ ಗಣೇಶ ವಿಗ್ರಹಗಳಿಗೆ ಪೂಜೆ ಸಲ್ಲಿಸುತ್ತಾರೆ. ಈ ಸಂಪ್ರದಾಯವೂ ನಾಲ್ಕೈದು ದಶಕಗಳಿಂದ ಸಾಗಿಕೊಂಡು ಬಂದಿದೆ. ಒಮ್ಮೆ ಮಾತ್ರ ಸಿಖ್ಖರ ಗಲಭೆಯಾಗಿದ್ದು ಇಷ್ಟೂ ವರ್ಷಗಳ ಆಚರಣೆಗೆ ದೃಷ್ಟಿಬೊಟ್ಟು ಇದ್ದಂತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.