ಬೆಂಗಳೂರು ನಗರದ ಆರ್.ವಿ. ರಸ್ತೆಯಲ್ಲಿ ಮಂಗಳವಾರ ಗೌರಿ–ಗಣೇಶ ಹಬ್ಬದ ಅಂಗವಾಗಿ ಜನ ಮೂರ್ತಿ ಖರೀದಿ ಮಾಡಿದರು ಪ್ರಜಾವಾಣಿ ಚಿತ್ರ /ಕಿಶೋರ್ ಕುಮಾರ್ ಬೋಳಾರ್
ಜೀವನದಲ್ಲಿ ಏನು ಮಾಡಲು ತೊಡಗಿದರೂ ಒಂದಲ್ಲ ಒಂದು ಅಡಚಣೆ ಎದುರಾಗುವುದು ಸಹಜ. ಹೀಗೆ ಎದುರಾಗುವ ವಿಘ್ನಗಳನ್ನು ಪರಿಹರಿಸಬಲ್ಲ ಶಕ್ತಿಯೊಂದು ನಮ್ಮ ಜೊತೆಗೆ ಇರಬಾರದಿತ್ತೆ – ಎಂದು ನಮಗೆ ಆ ಸಮಯದಲ್ಲಿ ಅನಿಸುವುದು ಸುಳ್ಳಲ್ಲ. ನಮ್ಮ ವಿಘ್ನಗಳ ಪರಂಪರೆಯನ್ನು ನಾಶಮಾಡಬಲ್ಲ ದೇವರೇ ಗಣೇಶ. ಅವನಿಗೆ ಒಂದು ಹೆಸರಿಲ್ಲ, ಸಾವಿರಾರು ಹೆಸರುಗಳು. ಅವನು ವಿಘ್ನನಾಯಕನೂ ಹೌದು, ವಿಘ್ನನಿವಾರಕನೂ ಹೌದು. ನಾವು ತಮಸ್ಸಿನಲ್ಲಿದ್ದಾಗ ಅವನು ನಮಗೆ ವಿಘ್ನನಾಯಕನೇ; ಆದರೆ ನಮ್ಮ ಸಾತ್ತ್ವಿಕತೆಯೇ ಅವನನ್ನು ನಮಗೆ ಸುಮುಖವಾಗಿಸುತ್ತದೆ, ವಿಘ್ನನಿವಾರಕನಾಗಿ ಒದಗಿಸುತ್ತದೆ. ಗಣಪತಿ, ವಿನಾಯಕ, ಲಂಬೋಧರ, ಪಾರ್ವತೀತನಯ, ಗಜಾನನ, ಈಶಪುತ್ರ, ಗೌರೀಸುತ, ಏಕದಂತ – ಹೀಗೆ ಅವನಿಗೆ ಹೆಸರುಗಳೂ ಹಲವು, ತತ್ತ್ವಗಳೂ ಹಲವು. ಅವನ ಹುಟ್ಟು, ಆಕಾರ, ಆಹಾರ, ಶಕ್ತಿ, ವಾಹನ, ವಿಹಾರ – ಪ್ರತಿಯೊಂದು ಕೂಡ ನಮ್ಮ ಜೀವನದ ಆಶಯ–ಆದರ್ಶಗಳೊಂದಿಗೆ ತಾದಾತ್ಮ್ಯವನ್ನು ಸಾಧಿಸಿರುವುದು ವಿಶೇಷ.
ಅವನು ಹುಟ್ಟು ಕಾಮಾತೀತ ತತ್ತ್ವದ ಆದರ್ಶ; ಅವನ ಆಕಾರ, ಅದು ವಿಶ್ವತೋಮುಖವೂ ವಿಶ್ವಾತ್ಮಕವೂ ಆದದ್ದು; ಅವನ ಇಷ್ಟದ ಮೋದಕ, ಅದು ನಾವು ಬಯಸುವ ಆನಂದದ ಬೋಧಕ; ಅವನ ಶಕ್ತಿ, ಅದು ಇಡಿಯ ಸೃಷ್ಟಿಯನ್ನೇ ಪೊರೆಯಬಲ್ಲ ಮಹಾಶಕ್ತಿ; ಅವನ ವಾಹನ, ಅದು ಅವನ ಔದಾರ್ಯದ ಕಾರಣ, ಅದರಿಂದ ಆಗುವುದು ನಮ್ಮ ಅಹಂಕಾರದ ದಮನ; ಅವನ ವಿಹಾರ, ಅದು ಸದಾ ಪ್ರಣವದಲ್ಲಿಯ ಸಂಚಾರ, ಸಿದ್ಧಿ–ಬುದ್ಧಿಗಳ ಸಾಮರಸ್ಯದ ವಿಚಾರ.
ಗಣಪತಿಯ ಒಂದೊಂದು ನಾಮದಲ್ಲಿಯೂ ಅಡಗಿರುವ ತತ್ತ್ವವನ್ನು ಸವಿಸ್ತಾರವಾಗಿ ವಿವರಿಸಲಾದೀತು. ಗಣಪತಿಯ ಕಲ್ಪನೆಯನ್ನು ವೇದಕಾಲದಿಂದಲೂ ನೋಡಬಹುದು. ಗಣಪತಿಯನ್ನು ಕುರಿತಾದ ಪುರಾಣಗಳೂ ಇವೆ; ಸ್ತೋತ್ರಸಾಹಿತ್ಯವೂ ಸಮೃದ್ಧವಾಗಿವೆ; ಅವನ ತತ್ತ್ವವನ್ನು ಎತ್ತಿಹಿಡಿರುವ ಉಪನಿಷತ್ತೂ ಇದೆ; ಅವನ ಶಿಲ್ಪ–ಚಿತ್ರಗಳಿಗೂ ಕೊರತೆಯಿಲ್ಲ; ಅವನ ಗುಡಿಗಳಿಗಂತೂ ಗಡಿಗಳೇ ಇಲ್ಲ; ಪ್ರಪಂಚದಾದ್ಯಂತ ಗಣಪತಿಯ ಆರಾಧನೆಯ ಕುರುಹುಗಳು ಸಿಗುತ್ತವೆ.
ಗಣೇಶನ ಹಬ್ಬ ನಮ್ಮ ದೇಶದ ದೊಡ್ಡ ಹಬ್ಬಗಳಲ್ಲಿ ಒಂದು. ಜಾತಿ, ಮತ, ಪ್ರಾಂತ, ಭಾಷೆಗಳ ಹಂಗಿಲ್ಲದೆ ಎಲ್ಲರನ್ನೂ ಬೆಸೆಯುತ್ತಿರುವ ಈ ಹಬ್ಬ ದಿಟವಾಗಿಯೂ ರಾಷ್ಟ್ರೀಯ ಹಬ್ಬವೇ ಸರಿ. ನಮ್ಮ ಕಾಲದ ಹಲವು ಸಮಸ್ಯೆಗಳಿಗೆ ಸುಲಭ ಪರಿಹಾರಗಳನ್ನು ಗಣಪತಿಯ ತತ್ತ್ವಗಳಲ್ಲಿ ಕಾಣಬಹುದು. ವಿದ್ಯಾರ್ಥಿಗಳಿಗೆ ಅವನು ವಿದ್ಯಾಗಣಪತಿಯಾಗಿ ವಿದ್ಯೆ–ಬುದ್ಧಿಗಳ ಒಡೆಯನಾಗಿ ಒದಗುತ್ತಾನೆ. ವಿನಯವನ್ನು ಮರೆತು ಅಹಂಕಾರದ ಪೀಠದಲ್ಲಿ ಕುಳಿತಿರುವ ಇಂದಿನ ಜನಾಂಗಕ್ಕೆ ಅವನು ಅರಿವಿನ ಅಂಕುಶವಾಗಬಲ್ಲ. ಅಪಹಾಸ್ಯವನ್ನೇ ಉದ್ಯಮವನ್ನಾಗಿಸಿಕೊಂಡಿರುವ ಮಾನಸಿಕತೆಗೆ ಅವನು ಆನಂದದ ಔಷಧವನ್ನು ಉಣಿಸುವ ಪೂರ್ಣಚಂದ್ರನಾಗಬಲ್ಲ. ಅವನು ಯೋಗಿಗಳಿಗೂ ಬೇಕಾದವನು, ಸಂಸಾರಿಗಳನ್ನೂ ಕಾಪಾಡುವವನು. ಸಾಧಕರ ಏಕಂತದಲ್ಲೂ ಅವನಿರುತ್ತಾನೆ, ಮಕ್ಕಳ ಆಟಪಾಠಗಳಲ್ಲೂ ನಲಿಯುತ್ತಿರುತ್ತಾನೆ; ಅವನು ಓಂಕಾರಕ್ಕೂ ಒಲಿಯುತ್ತಾನೆ, ಸಪ್ತಸ್ವರಗಳಿಗೂ ಕುಣಿಯುತ್ತಾನೆ. ಅವನನ್ನು ಯಜ್ಞದಿಂದಲೂ ಒಲಿಸಿಕೊಳ್ಳಬಹುದು, ಗರಿಕೆಯ ಹುಲ್ಲಿನಿಂದಲೂ ಪೂಜಿಸಬಹುದು. ಎಕ್ಕದ ಹೂವನ್ನು ಅಕ್ಕರೆಯಿಂದ ಸ್ವೀಕರಿಸುವ ಅವನು, ಸಕ್ಕರೆಯ ಕಡುಬನ್ನೂ ಚಪ್ಪರಿಸುವವನೇ.
ಗಣೇಶನಂಥ ಸರಳವೂ ಗಹನವೂ ಆದ ದೈವದ ಪರಿಕಲ್ಪನೆಯೇ ಸ್ವಾರಸ್ಯಕರ. ಭಾರತೀಯ ಸಂಸ್ಕೃತಿಯ ಸಂಭ್ರಮ, ಜೀವನೋತ್ಸಾಹ, ಆಧ್ಯಾತ್ಮಿಕತೆ, ಕಲಾಶ್ರೀಮಂತಿಕೆ, ಕೌಟುಂಬಿಕ ಸೌಹಾರ್ದ, ವಿದ್ಯೆಯ ಔದಾರ್ಯ, ಸಿದ್ಧಿಯ ನೆಲೆ, ಸೌಹಾರ್ದದ ಸೆಲೆ – ಇಂಥ ಹತ್ತುಹಲವು ಮಹಾತತ್ತ್ವಗಳ ಮಹಾದರ್ಶನವೇ ಗಣಪತಿಯ ಕಲ್ಪನೆಯಲ್ಲಿ ಸಾಕಾರಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.