ADVERTISEMENT

ದಿನದ ಸೂಕ್ತಿ: ಆದರ್ಶ ದಾಂಪತ್ಯ

ಎಸ್.ಸೂರ್ಯಪ್ರಕಾಶ ಪಂಡಿತ್
Published 1 ಜುಲೈ 2021, 3:36 IST
Last Updated 1 ಜುಲೈ 2021, 3:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಸ್ತ್ರೀಣಾಂ ಹಿ ಸಾಹಚರ್ಯಾದ್ಭವಂತಿ ಚೇತಾಂಸಿ ಭರ್ತೃಸದೃಶಾನಿ ।

ಮಧುರಾಪಿ ಹಿ ಮೂರ್ಚ್ಛಯತೇ ವಿಷವಿಟಪಿಸಮಾಶ್ರಿತಾ ವಲ್ಲೀ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ಸ್ತ್ರೀಯರ ಮನಸ್ಸು ಜೊತೆಗಿರುವ ಕಾರಣದಿಂದಾಗಿ ತಮ್ಮ ಗಂಡಂದಿರ ಮನಸ್ಸಿಗೆ ಅನುಸಾರವಾಗಿ ಬದಲಾಗುತ್ತದೆ. ವಿಷವೃಕ್ಷವನ್ನು ಆಶ್ರಯಿಸಿದ ಒಳ್ಳೆಯ ಬಳ್ಳಿಯೂ ಸಹ ಮೂರ್ಛೆಯನ್ನು ಉಂಟುಮಾಡುತ್ತದೆ.’

ಸಹವಾಸದಿಂದ ಸನ್ಯಾಸಿಯೂ ಕೆಟ್ಟ – ಎಂಬ ಮಾತೊಂದಿದೆಯಷ್ಟೆ. ಈ ಸುಭಾಷಿತವೂ ಅಂಥದೇ ಸಂಗತಿಯನ್ನು ಇಲ್ಲಿ ಹೇಳುತ್ತಿರುವುದು. ಪರಸ್ಪರಪ್ರಭಾವ, ಅದೂ ಹತ್ತಿರದಲ್ಲಿರುವವರ ಪ್ರಭಾವ, ನಮ್ಮನ್ನು ಬದಲಾಯಿಸುತ್ತದೆ. ಇದನ್ನು ನಿರೂಪಿಸಲು ಅದು ದಾಂಪತ್ಯದ ಉದಾಹರಣೆಯನ್ನು ತೆಗೆದುಕೊಂಡಿದೆ.

ಹೆಣ್ಣೊಬ್ಬಳು ತಂದೆಯ ಮನೆಯಲ್ಲಿದ್ದಾಗ ಸರಿಯಾಗಿಯೇ ಇರುತ್ತಾಳೆ; ಎಲ್ಲರಿಂದಲೂ ಒಳ್ಳೆಯವಳು ಎಂಬ ಹೆಸರನ್ನೂ ಸಂಪಾದಿಸಿರುತ್ತಾಳೆ. ಅವಳಿಗೆ ಮದುವೆಯಾಗುತ್ತದೆ. ಪಾಪ! ಅವಳ ದುರದೃಷ್ಟ, ಅವಳನ್ನು ಮದುವೆಯಾದವ ಒಬ್ಬ ಖದೀಮ ಎಂದು ಇಟ್ಟುಕೊಳ್ಳಿ. ಮದುವೆಯಾದ ಮೇಲೆ ಅವಳ ಸ್ಥಿತಿ ಹೇಗಿರುತ್ತದೆ? ಆರಂಭದ ದಿನಗಳು ಅವಳು ತನ್ನತನವನ್ನು ಉಳಿಸಿಕೊಳ್ಳಬಹುದು; ಆದರೆ ಆ ದಾಂಪತ್ಯದ ಬಾಂಧವ್ಯ ಗಟ್ಟಿಯಾಗುತ್ತಿದ್ದಂತೆಯೇ ಅವಳ ಮೊದಲಿನ ಸ್ವಭಾವವೂ ಕರಗುತ್ತಬರುತ್ತದೆ. ಕೊನೆಗೆ ಅವಳು ಅವಳ ಗಂಡನ ಪ್ರತಿರೂಪವೇ ಆಗಿಬಿಡುತ್ತಾಳೆ! ಸುಭಾಷಿತ ಇದನ್ನೇ ಹೇಳುತ್ತಿರುವುದು.

ನಾವು ನಮ್ಮ ಹತ್ತಿರದವರ ಗುಣಗಳನ್ನು ಅನುಸರಿಸಲು, ಅನುಕರಿಸಲು ತೊಡಗುತ್ತೇವೆ. ಇದು ನಮ್ಮ ಗಮನಕ್ಕೂ ಬಾರದೆಯೇ ನಡೆಯುತ್ತಿರುತ್ತದೆ. ಅದರಲ್ಲೂ ನಮ್ಮ ಹತ್ತಿರದವರು ನಮ್ಮ ಪ್ರೀತಿಪಾತ್ರರೋ ನಮ್ಮ ಮೇಲೆ ಅಧಿಕಾರವನ್ನು ಚಲಾಯಿಸುವವರೋ ಆಗಿದ್ದರೆ ಈ ಬದಲಾವಣೆ ಇನ್ನೂ ಬೇಗ ಆಗುತ್ತದೆ. ನಾವು ಯಾರನ್ನು ಆರಾಧಿಸುತ್ತೇವೆಯೋ ಅವರಂತೆ ನಾವೂ ಆಗಬೇಕೆಂದು ಹಂಬಲಿಸುತ್ತೇವೆ.

ಹೀಗೆಂದು ಎಲ್ಲ ಸಮಯದಲ್ಲೂ ಈ ಬದಲಾವಣೆಯೇನೂ ತಪ್ಪೂ ಆಗಿರುವುದಿಲ್ಲ. ಆದರೆ ನಾವು ಯಾವ ಗುಣಗಳನ್ನು ನಮ್ಮ ಆತ್ಮೀಯರಿಂದ ಅಳವಡಿಸಿಕೊಳ್ಳುತ್ತೇವೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಸುಭಾಷಿತವೇನೋ ಇಲ್ಲಿ ಹೇಳಿರುವುದು ಕೆಟ್ಟ ಗುಣವನ್ನೇ. ಗಂಡನ ಕೆಟ್ಟ ಗುಣಗಳನ್ನು ಕ್ರಮೇಣ ಹೆಂಡತಿಯೂ ಅಳವಡಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ ಅದು ಕೊಟ್ಟಿರುವ ಉದಾಹರಣೆ ಚೆನ್ನಾಗಿದೆ. ವಿಷವೃಕ್ಷವನ್ನು ಆಶ್ರಯಿಸಿರುವ ಒಳ್ಳೆಯ ಬಳ್ಳಿಯಲ್ಲೂ ನಾವು ವಿಷದ ಪ್ರಭಾವವನ್ನೇ ಅನುಭವಿಸುತ್ತೇವೆ. ಹೀಗಾಗಿ ನಾವು ನಮ್ಮ ಬಾಂಧವ್ಯಗಳನ್ನು ಗಟ್ಟಿಮಾಡಿಕೊಳ್ಳುವ ಮೊದಲು ನಮ್ಮ ಮತ್ತು ಅವರ ಗುಣಾವಗುಣಗಳ ಪಾರಾಮರ್ಶೆ ಮಾಡಿಕೊಂಡು ಮುಂದುವರೆದರೆ ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.