ಈಶ್ವರ
ಚಿಕ್ಕವರಿದ್ದಾಗ ನಾವು ರಾತ್ರಿಯೆಲ್ಲಾ ನಿದ್ದೆಗೆಡುತ್ತಿದ್ದೆವು. ಬಿಸಿ ಮಂಡಾಳು ಒಗ್ಗರಣೆ, ಇಲ್ಲವೇ ಹಳ್ಳಿಯ ಹೊಲದಲ್ಲೇ ಬೆಳೆದಿರುತ್ತಿದ್ದ ರುಚಿಯಾದ ಕಲ್ಲಂಗಡಿಹಣ್ಣನ್ನು ಸವಿದು ರಾತ್ರಿಯೆಲ್ಲಾ ಎಚ್ಚರವಾಗಿರುತ್ತಿದ್ದೆವು. ಈ ಎಚ್ಚರವೇ ಬದುಕಿನ ಜಾಗರಣೆ. ಅಂದರೆ ದೇಹ ಮನಸ್ಸನ್ನು ಜಾಗೃತಿಯಲ್ಲಿರಿಸಿಕೊಂಡು ಶಿವನ ಧ್ಯಾನಮಾಡುವುದು. ಊರಿನ ಹಿರಿಯರು ಹೇಳಿಕೊಟ್ಟ, ಅಪ್ಪ ಅವ್ವರು ಕಲಿಸಿದ ಜೀವನಪಾಠವನ್ನೇ ಮರಳಿ ಅವರಿಗೆ ಒಪ್ಪಿಸುವುದು. ಈ ಕಲೆ ನಮಗೆ ಕರಗತವಾಗಿತ್ತು. ನಮ್ಮೂರಿನ ರಾಮದೇವರ ಗುಡಿಯ ಪೌಳಿಯಲ್ಲಿ ಪ್ರತಿ ಸೋಮವಾರ ಜನರೆಲ್ಲ ಸೇರಿ ಭಜನೆ ಮಾಡುತ್ತಿದ್ದರು. ಆ ಇಡೀ ಭಜನೆ ಊರಿಗೇ ಕೇಳಿಸುತ್ತಿತ್ತು. ರಾತ್ರಿ ಉಂಡು ಮನೆಯಲ್ಲಿ ಹೇಳಿ ಕಾಲ್ಕಿತ್ತೆವೆಂದರೆ ಮರಳಿ ಮನೆಯನ್ನು ಸೇರುವುದೋ ಮುಂಜಾನೆ ಒಂದೋ ಎರಡೋ! ಶಿವನ ಸ್ಮರಣೆಯ ಹಾಡು, ಬಸವೇಶ್ವರರ ಹಾಡು. ಅದು ಈಗಲೂ ನೆನಪಿದೆ:
‘ಬಾರೊ... ಬಾರೋ ಬಾರೋ ಬಸವೇಶ
ನಮ್ಮ ಕಲ್ಯಾಣ ಶಿವಜ್ಯೋತಿಯೇ’
‘ಕಲ್ಯಾಣದಣ್ಣ ಬಾರೋ ಬಸವಣ್ಣ
ನೀ ಬರದಿರಲು ಜಗವೆಲ್ಲಾ ಅಳಿಗಾಲವಣ್ಣಾ’
– ಎಂದು ಏರುದನಿಯಲ್ಲಿ ಭಜನೆ, ತಬಲಾ, ಕೈಪೆಟ್ಟಿಗೆ(ಹಾರ್ಮೋನಿಯಂ)ಯಲ್ಲಿ ಹಾಡುತ್ತಿದ್ದರೆ ಎಂತಹ ನಾಸ್ತಿಕನೂ ಭಕ್ತಿಪರವಶನಾಗಲೇಬೇಕು. ಅಲ್ಲಿರುವುದು ಅಪ್ಪಟ ಭಕ್ತಿ ಮತ್ತು ಬಾಳಿನ ನಂಬಿಕೆ. ಅದರಲ್ಲೇ ತಪ್ಪಿ ಕಣ್ಣು ನಿದ್ರೆಗೆ ಜಾರಿದರೆ ನೀರು ಚಿಮಿಕಿಸುವುದಲ್ಲ, ಬೇಂದ್ರೆಯವರ ‘ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ’ ಹಾಡಿದರೆ ನಿದ್ರಾದೇವತೆ ಮರೆಯಾಗಿ ಕೊಬ್ಬರಿ, ಮಂಡಕ್ಕಿ ತಿನ್ನುತ್ತಾ ತಾಳ ಹಾಕುವುದು ನಮ್ಮ ಕಾಯಕ. ಮಹಾಶಿವರಾತ್ರಿ ದಿನವಂತೂ ಮಹಾಜಾಗರಣೆ. ನಮ್ಮ ಸೋಮಾರಿತನಗಳಿಗೆ ಅಲ್ಲಿ ಎಳ್ಳಷ್ಟೂ ಜಾಗವೇ ಇರಲ್ಲ. ವಿಭೂತಿ ಪಡೆದ ಶಿವನ ಫೋಟೋ, ತಟ್ಟೆಯಲ್ಲಿ ಐದು ಹತ್ತು ಪೈಸೆ. ಶಿವನಿಗೆ ಅಭಿಮುಖವಾಗಿ ಕುಳಿತು ಹಿರಿಕಿರಿಯರೆನ್ನದೆ ಬರೀ ಗಂಡಸರೇ ಮಾಡುವ ಭಜನೆ ಒಂದಾದರೆ, ಹೆಣ್ಣುಮಕ್ಕಳು ಶಿವನಿಗೆ ಊದಿನ ಕಡ್ಡಿ ಬೆಳಗಿ ಕೈಮುಗಿದು ಹೋಗುವುದು. ಅಂದು ಮತ್ತು ಪ್ರತಿ ಸೋಮುವಾರ ಬಸವಣ್ಣನ ವಾರವೆಂದು ಸಂಜೆ ಭಜನೆ ಊರಲ್ಲಿ ಬಂದರೆ ಇಡೀ ಊರಿಗೆ ಊರೇ ಮಡಿ! ಅಂಗಳಕೆ ನೀರು ಹಾಕಿ ಸ್ವಾಮಿಯನ್ನು ಬರಮಾಡಿಕೊಂಡು ದಕ್ಷಿಣೆ–ಊದಿನಕಡ್ಡಿಗಳನ್ನು ಕೊಟ್ಟು ಕಾಲಿಗೆ ಬೀಳುವ ಸಂಪ್ರದಾಯ. ಜಾತ್ಯತೀತವಾಗಿ ಇದು ಬಹುತ್ವ ಪ್ರೇಮವುಳ್ಳ ಧರ್ಮಗಳ ಸಂಗಮ. ಇಡೀ ಊರೇ ನಮ್ಮ ಕಲ್ಯಾಣ. ರಾತ್ರಿಯೆಲ್ಲಾ ಗುಡಿಯಲ್ಲಿ ಕಥೆ, ಪುರಾಣದ ಶಿವಶಾಸ್ತ್ರದ ಉಪವಾಸ. ಹೆಂಗುರುಳಿಗೆ ಒಂದು ರೀತಿ ವನವಾಸ. ಕೆಲವರು ಒಂದು ಗುಟುಕು ನೀರೂ ಸೇವಿಸುವುದಿಲ್ಲ. ಅಷ್ಟೊಂದು ಕಟ್ಟುನಿಟ್ಟು.
ಮಹಾಶಿವರಾತ್ರಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದು. ಈ ಹಬ್ಬವನ್ನು ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಇಡೀ ದಿನ ಉಪವಾಸ–ಜಾಗರಣೆಗಳನ್ನು ಶಿವಪೂಜೆಯ ಮೂಲಕ ನೆರವೇರಿಸಲಾಗುತ್ತದೆ. ಇಂದು ವಿವಿಧ ರೀತಿಯ ಸಿಹಿತಿನಿಸುಗಳನ್ನು ತಯಾರಿಸುವರು. ಕೆಲವೆಡೆ ತಂಬಿಟ್ಟು ಈ ಹಬ್ಬದ ಪ್ರಮುಖ ವಿಶೇಷ. ಇಡೀ ಭಾರತದಾದ್ಯಂತ ಆಚರಿಸುವ ಹಬ್ಬ ಇದು. ಈ ಹಬ್ಬದಂದು ದಿನವಿಡೀ ಶಿವನನ್ನು ಆರಾಧಿಸಲಾಗುತ್ತದೆ.
ಸಾಮಾನ್ಯವಾಗಿ ಹಬ್ಬಗಳಲ್ಲಿ ದೇವರಿಗೆ ಹಗಲು ಪೂಜೆ ನಡೆದರೆ ಶಿವರಾತ್ರಿ ಮಾತ್ರ ರಾತ್ರಿಯ ಹೊತ್ತು ಪೂಜೆ. ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ಅರಿವಿನ ಬಾಳ ಪಯಣ. ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸುವ ಕಲಾತ್ಮಕ ಶುಭದ ಹಬ್ಬ, ಈ ಶಿವರಾತ್ರಿ. ಅಜ್ಞಾನ ಇರುವೆಡೆ ಶಿವ ಸಂಚರಿಸಿ ಜ್ಞಾನದ ದೀವಿಗೆಯನ್ನು ಬೆಳಗುತ್ತಾನೆ ಎಂಬ ನಂಬಿಕೆ. ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸಿ, ಪುಷ್ಪ, ತುಳಸಿಯಿಂದ ಶಿವಲಿಂಗವನ್ನು ಅಲಂಕಾರ ಮಾಡಿ ಶಿವನ್ನು ಭಜಿಸಿದರೆ, ಪಾಪಗಳು ಪರಿಹಾರವಾಗುತ್ತವಂತೆ. ಶಿವರಾತ್ರಿಯ ದಿನವಿಡೀ ಉಪವಾಸ ಮಾಡಿ, ಜಾಗರಣೆ ಮಾಡಿದರೆ ಮನುಷ್ಯನ ಸಕಲ ಪಾಪಗಳೂ ಕಳೆಯುತ್ತವೆ ಎಂಬುದು ಜನರ ನಂಬಿಕೆ. ಎಲ್ಲಾ ಜೀವರಾಶಿಗಳನ್ನು ಪೊರೆಯುವ ಶಿವ, ಎಲ್ಲಾ ಆಡಂಬರಗಳಿಂದ ಮುಕ್ತ. ಮದುವೆಯಾಗದ ಹೆಣ್ಣುಮಕ್ಕಳು ಶಿವಸ್ವರೂಪಿ ಪತಿಗಾಗಿ ಪ್ರಾರ್ಥಿಸಿದರೆ, ಮದುವೆಯಾದ ಹೆಣ್ಣು ಪತಿಯ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸುವ ಸಂಪ್ರದಾಯ. ಶಿವರಾತ್ರಿಯಂದು ಶಿವಧ್ಯಾನವನ್ನು ಮಾಡಿದರೆ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ ದೊರೆಯುವುದೆಂಬ ನಂಬಿಕೆ. ಶಿವಪುರಾಣ, ಲಿಂಗಪುರಾಣ, ಸ್ಕಾಂದಪುರಾಣ, ಗರುಡ–ಅಗ್ನಿಪುರಾಣಗಳಲ್ಲಿ ಶಿವನ ವಿಷಯ ಇದೆ.
ಗೋಕರ್ಣದ ಮಹಾಬಲೇಶ್ವರ, ರಾಮೇಶ್ವರದ ರಾಮೇಶ್ವರ, ಕಾಶಿ ವಿಶ್ವನಾಥ ಸೇರಿದಂತೆ ಶಿವದೇಗುಲಗಳಲ್ಲಿ ಇಂದು ವಿಶೇಷ ಪೂಜೆಯೂ ನಡೆಯುತ್ತಿರುತ್ತದೆ. ಬಿಲ್ವಾರ್ಚನೆ, ರುದ್ರಾಭಿಷೇಕ – ಇವು ವಿಶಿಷ್ಟ ಆಚರಣೆಗಳು. ಭಕ್ತರು ಗಂಗಾ, ಬ್ರಹ್ಮಪುತ್ರ, ಕೃಷ್ಣ, ತುಂಗಭದ್ರಾ, ಭೀಮೆ, ಕಾವೇರಿ,ಸೇರಿದಂತೆ ಹಲವು ನದಿಗಳಲ್ಲಿ ಸ್ನಾನ ಮಾಡುತ್ತಾರೆ. ಹಾಲು, ಹಣ್ಣು ಸೇವಿಸುವವರು ಹಲವರಾದರೆ, ದಿನವಿಡೀ ಏನನ್ನೂ ತಿನ್ನದೆ, ನೀರನ್ನೂ ಕುಡಿಯದೆ ಉಪವಾಸವನ್ನು ಮಾಡುವವರೂ ಇದ್ದಾರೆ. ಶಿವನಿಗೆ ಬಿಲ್ವಪತ್ರೆ, ತುಳಸಿ, ಶ್ರೀಗಂಧ, ನೀರು, ಹಾಲು, ಜೇನುತುಪ್ಪದ ಅಭಿಷೇಕ ನಡೆಯುತ್ತದೆ. ಶಿವದೇಗುಲಗಳಲ್ಲಿ ರಾತ್ರಿಯಿಡೀ ಜಾಗರಣೆ ನಡೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.