
ನಾಳೆ (ಫೆಬ್ರುವರಿ 15) ಮಹಾ ಶಿವರಾತ್ರಿ ಹಬ್ಬ. ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುವ ಶಿವರಾತ್ರಿಯು ಪಾಪಗಳನ್ನು ಕಳೆದು ಪುಣ್ಯ ನೀಡುವ ಹಬ್ಬವಾಗಿದೆ. ಶಿವ ಪುರಾಣದ ಪ್ರಕಾರ, ಈ ದಿನ ಭಕ್ತರು ಭಕ್ತಿಯಿಂದ ಪೂಜೆ ಮಾಡಿದರೆ ಅದೃಷ್ಟ ಪ್ರಾಪ್ತಿಯಾಗುತ್ತದೆ.
ಈ ಬಾರಿ ಮಹಾ ಶಿವರಾತ್ರಿ ಭಾನುವಾರ ಬಂದಿದ್ದು, ಅಂದು ಚಂದ್ರ ಸೌರ ಮಹಾಶಿವರಾತ್ರಿ. ರಾತ್ರಿ 8 ಗಂಟೆ 37 ನಿಮಿಷಕ್ಕೆ ಪ್ರಾರಂಭವಾಗಿ, ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯ ನಿರ್ದಿಷ್ಟ ಅವಧಿಯಲ್ಲಿ ಶಿವರಾತ್ರಿ ಆಚರಣೆ ಮಾಡಬಹುದು. ಆ ದಿನ ಈಶ್ವರನ ಪೂಜೆ ಮಾಡಿ, ಉಪವಾಸ ಇದ್ದು ಜಾಗರಣೆ ಮಾಡಬೇಕು.
ಮನೆಯಲ್ಲೇ ಶಿವನ ಪೂಜೆ ಹೇಗೆ ಮಾಡುವುದು?
ಶಿವರಾತ್ರಿಯ ದಿನ ಸೂರ್ಯೋದಕ್ಕೂ ಮುನ್ನವೇ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಬೇಕು.
ಇಡೀ ದಿನ ಉಪವಾಸವಿದ್ದು ಮರುದಿನ ಬೆಳಗ್ಗೆ ಉಪವಾಸ ಮುರಿಯಬೇಕು.
ಆ ದಿನ ಉಪವಾಸ ಇರುವವರು ಹಣ್ಣುಗಳನ್ನು ಮಾತ್ರ ಸೇವಿಸಬೇಕು.
ರಾತ್ರಿ ಇಡೀ ನಿದ್ದೆ ಮಾಡದೇ ಶಿವಧ್ಯಾನ ಮಾಡುತ್ತಾ ಜಾಗರಣೆ ಮಾಡಬೇಕು.
ರಾತ್ರಿ 9:35ರಿಂದ ಬೆಳಗಿನ ಸೂರ್ಯ ಉದಯ ಆಗುವವರೆಗೂ ಜಾಗರಣೆ ಮಾಡಿದರೆ ಶಿವನ ಸಂಪೂರ್ಣ ಆಶೀರ್ವಾದ ಲಭಿಸುತ್ತದೆ ಎನ್ನುವುದು ನಂಬಿಕೆ.
ವಿಶೇಷವಾಗಿ ಅಂದು ಸ್ನಾನದ ವೇಳೆ ತಲೆಗೆ ಎಳ್ಳೆಣ್ಣೆಯನ್ನು ಹಚ್ಚಿಕೊಳ್ಳುವುದು ಹಾಗೂ ನೀರಿಗೆ ಉತ್ತರಾಣಿ ಕಡ್ಡಿಯನ್ನು ಹಾಕುವುದು ರೂಢಿ.
ಶಿವರಾತ್ರಿಯ ದಿನ ಈ ಕೆಲಸಗಳನ್ನು ಮಾಡಲೇಬೇಡಿ
ಈ ದಿನದಂದು ಬದನೆಕಾಯಿ ಮತ್ತು ಪಡವಲ ಕಾಯಿಯನ್ನು ಉಪಯೋಗಿಸಬಾರದು,
ಯಾವುದೇ ಕಾರಣಕ್ಕೂ ಮದ್ಯ, ಮಾಂಸಾಹಾರವನ್ನು ಸೇವಿಸಬಾರದು
ಶಿವರಾತ್ರಿಯ ಜಾಗರಣೆ ಸಮಯದಲ್ಲಿ ಪಾನ್, ಗುಟ್ಕಾ, ಹೊಗೆ ಸೊಪ್ಪು, ಸಿಗರೇಟ್ ಇಂತಹವುಗಳಿಂದ ದೂರವಿರಿ.
ಪೂಜಾ ವಿಧಾನ ಹೀಗಿರಲಿ
ಶಿವಲಿಂಗ ಅಥವಾ ಶಿವನ ಫೋಟೊಗೆ ಶ್ರೀಗಂಧ, ಕುಂಕುಮ, ಹೂಗಳಿಂದ ಅಲಂಕರಿಸಿ. ದೀಪ ಹಚ್ಚಿ ಮಹಾ ಶಿವರಾತ್ರಿಯಂದು ‘ವ್ರತಂಕರಿಶೆ’ ಎಂದು ಸಂಕಲ್ಪ ಮಾಡಿ.
ಶಿವಲಿಂಗಕ್ಕೆ ಪಂಚಾಮೃತ ಮತ್ತು ನೀರಿನಿಂದ ಅಭಿಷೇಕ ಮಾಡಿ, ಈ ವೇಳೆ ‘ಓಂ ನಮಃ ಶಿವಾಯ’ ಎಂದು ಜಪಿಸಿ.
ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಿ. ‘ತ್ರಿಜನ್ಮ ಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಂ’ ಎಂದು ಮಂತ್ರ ಪಠಿಸಿ.
ಹಣ್ಣು ಮತ್ತು ತಾಂಬೂಲವನ್ನು ಶಿವನಿಗೆ ನೈವೇದ್ಯ ಮಾಡಿ ಮಹಾಮಂಗಳಾರತಿ ಬೆಳಗಿರಿ.
ಶಿವರಾತ್ರಿಯಂದು ಶಿವಪಂಚಾಕ್ಷರಿ ಮಂತ್ರಗಳನ್ನು ಪಠಿಸಿ
‘ಓಂ ನಮಃ ಶಿವಾಯ’ (108 ಬಾರಿ) ಜಪಿಸಿ.
ಮಹಾಮೃತ್ಯುಂಜಯ ಮಂತ್ರ ಪಠಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.