ADVERTISEMENT

ಮಹಾ ಶಿವರಾತ್ರಿ | ಶಿವ: ಎಲ್ಲೆಲ್ಲೂ ಇರುವ ಒಳಿತು

ಎಸ್.ಸೂರ್ಯಪ್ರಕಾಶ ಪಂಡಿತ್
Published 15 ಫೆಬ್ರುವರಿ 2026, 0:30 IST
Last Updated 15 ಫೆಬ್ರುವರಿ 2026, 0:30 IST
   

ಇಡಿಯ ಸೃಷ್ಟಿ ಶಿವನ ದೇಹವೇ ಆಗಿದೆ ಎಂಬುದು ನಮ್ಮ ಸಂಸ್ಕೃತಿಯ ಒಕ್ಕಣೆ. ಈ ಭಾವವನ್ನು ಮಹಾಕವಿ ಕಾಳಿದಾಸ ತುಂಬ ಸೊಗಸಾಗಿ ಎತ್ತಿಹಿಡಿದಿದ್ದಾನೆ; ‘ಸೃಷ್ಟಿಕರ್ತನ ಪ್ರಥಮ ಸೃಷ್ಟಿಯಾದ ನೀರು, ಹವಿಸ್ಸನ್ನು ದೇವತೆಗಳಿಗೆ ಮುಟ್ಟಿಸುವ ಅಗ್ನಿ, ಯಜಮಾನ, ಕಾಲವಿಭಜನೆಗೆ ಕಾರಣರಾದ ಸೂರ್ಯ–ಚಂದ್ರರು, ಎಲ್ಲ ಕಡೆಗೂ ವ್ಯಾಪಿಸಿರುವ ಆಕಾಶ, ಎಲ್ಲ ವಿಧದ ಬೀಜಶಕ್ತಿಗೂ ಆಧಾರವಾಗಿರುವ ಭೂಮಿ, ಎಲ್ಲ ಪ್ರಾಣಿಗಳಿಗೂ ಪ್ರಾಣವನ್ನು ಒದಗಿಸುವ ವಾಯು – ಈ ಎಂಟು ವಿವರಗಳು ಶಿವನ ಪ್ರತ್ಯಕ್ಷ ಶರೀರಗಳು’ ಎಂದು ಅವನು ಒಕ್ಕಣಿಸಿದ್ದಾನೆ. ವಿಶ್ವದ ಒಂದೊಂದು ಕಣದ ಚಲನೆಯೂ, ಅದು ದಿಟದಲ್ಲಿ ಶಿವನ ಕುಣಿತ ಎಂಬುದು ಇಲ್ಲಿಯ ಭಾವ. ತ್ರಿಮೂರ್ತಿಗಳಲ್ಲಿ ಒಬ್ಬನಾಗಿರುವವನು ಶಿವ. ಆದರೆ ಶಿವನ ಈ ವರ್ಣನೆಯ ಸ್ವಾರಸ್ಯವನ್ನು ಆರ್ಥಮಾಡಿಕೊಡಾಗ ಆಗ ಸ್ಪಷ್ಟವಾಗುತ್ತದೆ, ತ್ರಿಮೂರ್ತಿಗಳು ಮೂವರು ಪ್ರತ್ಯೇಕ ದೇವತೆಗಳಲ್ಲ, ಒಂದೇ ತತ್ತ್ವದ ಮೂರು ಆಯಾಮಗಳ ಸಂಕೇತಗಳಷ್ಟೆ.

ಇಂಥ ಶಿವನನ್ನು ಆರಾಧಿಸಲು, ಅರ್ಚಿಸಲು ಇರುವ ಪರ್ವದಿನವೇ ಮಹಾಶಿವರಾತ್ರಿ. ನಮ್ಮ ಪರಂಪರೆಯಲ್ಲಿ ಅತ್ಯಂತ ಮುಖ್ಯವಾಗಿ ಕಾಣಿಸಿರುವ ಮಹಾದಿನಗಳಲ್ಲಿ ಶಿವರಾತ್ರಿ ಕೂಡ ಒಂದು; ಸಾವಿರಾರು ವರ್ಷಗಳಿಂದಲೂ ದೇಶದ ಉದ್ದಗಲಕ್ಕೂ ಆಸ್ತಿಕರು ಅತ್ಯಂತ ಶ್ರದ್ಧಾಭಕ್ತಿಗಳಿಂದ ಈ ವ್ರತವನ್ನು ಆಚರಿಸುತ್ತಬಂದಿದ್ದಾರೆ.

ಶಿವನಿಗಿರುವ ಹೆಸರುಗಳು ಹಲವು; ಒಂದೊಂದು ಹೆಸರು ಶಿವತತ್ತ್ವದ ಒಂದೊಂದು ಆಯಾಮವನ್ನು ಎತ್ತಿಹಿಡಿಯುತ್ತದೆ. ‘ನಮೋ ಭವಾಯ ಚ ನಮಃ ಶರ್ವಾಯ ಚ ಪಶುಪತಯೇ ಚ ನಮೋ ನೀಲಗ್ರೀವಾಯ ಚ ಶಿತಿಕಂಠಾಯ ಚ ನಮಃ ಕಪರ್ದಿನೇ ಚ ವ್ಯುಪ್ತಕೇಶಾಯ ಚ ನಮಃ ಸಹಸ್ರಾಕ್ಷಾಯ ಚ ಶತಧನ್ವನೇ ಚ’ – ವೇದದಲ್ಲಿರುವ ರುದ್ರಾಧ್ಯಾಯದ ಈ ಒಂದು ಸೊಲ್ಲನ್ನು ಮನನ ಮಾಡಿದರೂ ಸಾಕು, ಶಿವತತ್ತ್ವದ ಮಹತ್ವ ಸ್ಪಷ್ಟವಾಗುತ್ತದೆ. ಅವನು ‘ಭವ’, ಎಂದರೆ ಇಡಿಯ ಸೃಷ್ಟಿಗೆ ಕಾರಣನು. ಅವನು ‘ಸಹಸ್ರಾಕ್ಷ’, ಸಾವಿರ ಸಾವಿರ ಕಣ್ಣುಗಳುಳ್ಳವನು; ಎಂದರೆ ಎಲ್ಲವನ್ನೂ ನೋಡುವವನು, ಅರ್ಥಾತ್‌, ಎಲ್ಲವನ್ನೂ ತಿಳಿದವನು. ಸೃಷ್ಟಿಯ ಪ್ರತಿ ವಿವರವೂ ಅವನೇ; ಪ್ರತಿ ವಿವರವೂ ಅವನ ತಿಳಿವಳಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಿದ್ದರೂ ಅವನು ‘ವ್ಯುಪ್ತಕೇಶ’, ಎಂದರೆ ಬೋಳಾದ ತಲೆಯನ್ನುಳ್ಳವನು; ಅರ್ಥಾತ್‌, ಅವನು ಸಂನ್ಯಾಸಿ, ಪರಮವೈರಾಗ್ಯಮೂರ್ತಿ. ಇಡಿಯ ಸೃಷ್ಟಿ; ಭೂತ, ವರ್ತಮಾನ, ಭವಿಷ್ಯಗಳು ಅವನ ಅಧೀನದಲ್ಲಿದ್ದರೂ ಶಿವನು ಮಾತ್ರ ತ್ಯಾಗಮೂರ್ತಿಯಾಗಿದ್ದಾನೆ, ಎಲ್ಲವನ್ನೂ ತೊರೆದು ತಪಸ್ಸಿನಲ್ಲಿ ನೆಲೆನಿಂತಿದ್ದಾನೆ. ತ್ಯಾಗ–ಭೋಗಗಳ ಸಾಮರಸ್ಯಕ್ಕೆ ಸುಂದರ ನಿರೂಪಣೆಯೇ ಶಿವತತ್ತ್ವ.

ADVERTISEMENT

ಶಿವನನ್ನು ಆರಾಧಿಸಲು ಪರಂಪರೆ ಆರಿಸಿಕೊಂಡಿರುವುದು ರಾತ್ರಿಯ ಸಮಯವನ್ನು; ಇದಕ್ಕೂ ಹಲವು ತಾತ್ತ್ವಿಕ ಆಯಾಮಗಳೇ ಮೂಲ. ರಾತ್ರಿ ಎಂದರೆ ಕತ್ತಲು; ಕತ್ತಲು ಎಂದರೆ ಭಯ, ಎಲ್ಲ ರೀತಿಯ ಭಯ. ಎಲ್ಲ ಭಯಗಳಿಂದಲೂ ನಮ್ಮನ್ನು ಕಾಪಾಡುವವನೇ ಶಿವ. ಅವನನ್ನು ಪ್ರಳಯಕಾರಕ ಎಂದೂ ಹೇಳಲಾಗುತ್ತದೆ. ಪ್ರಳಯ ಎಂಬುದು ವಿಶ್ರಾಂತಸ್ಥಾನವೂ ಹೌದು, ಸೃಷ್ಟಿಯ ಆರಂಭಬಿಂದುವೂ ಹೌದು. ಎಂದರೆ ನಮ್ಮ ಅಂತ್ಯದಲ್ಲೂ ಆರಂಭದಲ್ಲೂ ನಮ್ಮ ರಕ್ಷಿಸಿ, ಉದ್ಧರಿಸುವವನು ಅವನು. ಇಂಥ ಮಹಾಕಾಲನನ್ನು, ಮಹಾದೇವನನ್ನು ಪೂಜಿಸುವಾಗ ನಮ್ಮ ಭಾವ–ಬುದ್ಧಿಗಳ ಎಚ್ಚರ ಅತ್ಯಂತ ಆವಶ್ಯಕ. ಇದರ ಸೂಚಕವೇ ಶಿವರಾತ್ರಿಯ ಜಾಗರಣೆ.

ಶಿವನ ಅರ್ಚನೆಯೂ ಸುಲಭವಾದುದೇ ಹೌದು. ಬಿಲ್ವಪತ್ರೆಯಷ್ಟೆ ಸಾಕು; ಅಥವಾ ತುಂಬೆಹೂವಷ್ಟೆ ಸಾಕು. ಅವನು ಅಭಿಷೇಕಪ್ರಿಯ. ಒಂದು ವೇಳೆ ಇವನ್ನು ಕೂಡ ಅರ್ಪಿಸಲು ಸಾಧ್ಯವಾಗದಿದ್ದಾಗ ಭಕ್ತಿ–ಶ್ರದ್ಧೆಗಳಿಂದ ಅವನನ್ನು ಸ್ಮರಿಸಿದರೂ ಸಾಕು. ಅವನು ಒಲಿಯುವ. ನಾವು ಆಡುವ ಮಾತು, ಮಾಡುವ ಕೆಲಸಗಳೆಲ್ಲದರಲ್ಲೂ ಅವನೇ ಇದ್ದಾನೆ; ಅದನ್ನು ನಾವು ಕಾಣಬೇಕಷ್ಟೆ. ‘ಶಿವ’ ಎಂದರೆ ಮಂಗಳಕಾರಕ; ಎಲ್ಲೆಲ್ಲಿ ಒಳ್ಳೆಯದು ಇದೆಯೋ, ಅಲ್ಲೆಲ್ಲ ಶಿವನಿದ್ದಾನೆ ಎಂದೇ ಹೌದು.