
ಅಯೋಧ್ಯೆ ರಾಮ ಮಂದಿರದ ಮೇಲೆ ನಿನ್ನೆ (ಮಂಗಳವಾರ) ಪ್ರಧಾನಿ ನರೇಂದ್ರ ಮೋದಿಯವರು ಧರ್ಮ ಧ್ವಜವನ್ನು ಹಾರಿಸಿದ್ದಾರೆ. ಧರ್ಮ ಧ್ವಜದಲ್ಲಿರುವ ಪ್ರತಿಯೊಂದು ಚಿಹ್ನೆಗೂ ರಾಮನಿಗೂ ಸಂಬಂಧವಿದೆ. ಕೋವಿದಾರ ಮರದ ಚಿಹ್ನೆಗೂ ರಾಮನಿಗೂ ಏನು ಸಂಭಂಧ, ಈ ಚಿಹ್ನೆ ಬಿಡಿಸಲು ಕಾರಣ ತಿಳಿಯೋಣ.
ಅಯೋಧ್ಯೆಯ ರಾಮ ಮಂದಿರದ ಶಿಖರದ ಮೇಲೆ ಹಾರುತ್ತಿರುವ ಧರ್ಮ ಧ್ವಜ 22 ಅಡಿ ಉದ್ದ ಹಾಗೂ 11 ಅಡಿ ಅಗಲವಿದೆ. ಈ ಧರ್ಮ ಧ್ವಜದ ಮೇಲೆ ಓಂ, ಕೋವಿದಾರ ಮರದ ಚಿಹ್ನೆ ಹಾಗೂ ಸೂರ್ಯನ ಚಿಹ್ನೆಗಳಿವೆ.
ಕೋವಿದಾರ ಮರ:
ಭಾರತದ ಪ್ರಾಚೀನ ಮರಗಳಲ್ಲಿ ‘ಕೋವಿದಾರ’ ಮರ ಒಂದಾಗಿದೆ. ಈ ಮರಕ್ಕೆ ಕನ್ನಡದಲ್ಲಿ’ಕೆಂಪು ಮಂದಾರ’ ಎಂದು ಕರೆಯಲಾಗುತ್ತದೆ. ಈ ಮರದ ಚಿಹ್ನೆಯನ್ನು ರಾಮಮಂದಿರದ ಧರ್ಮ ಧ್ವಜದಲ್ಲಿ ಬಿಡಿಸಲಾಗಿದೆ. ರಾಮಾಯಾಣ ಹಾಗೂ ಭಾರತೀಯ ಪುರಾಣಗಳಲ್ಲಿ ಈ ಮರದ ಉಲ್ಲೇಖವಿದೆ. ಈ ಮರದ ಶಾಸ್ತ್ರೀಯ ಹೆಸರು ‘ಬೌಹಿನಿಯಾ ವೆರಿಗಾಟಾ ಲಿನ್’.
ಕೋವಿದಾರ ಮರವು ತ್ರೇತಾಯುಗದಲ್ಲಿ ಶ್ರೀರಾಮನ ರಾಜ್ಯವೃಕ್ಷವಾಗಿತ್ತು. ಋಷಿಯಾದ ಕಶ್ಯಪರು ಈ ಮರವನ್ನು ಸೃಷ್ಟಿಸಿದರು ಎಂದು ಪುರಾಣ ಕಥೆಗಳು ಹೇಳುತ್ತವೆ. ಅಂದಿನಿಂದ ಈ ಮರವು ದೈವಿಕ ಮರವಾಗಿ ಸ್ಥಾನ ಪಡೆಯಿತು. ಇಂದಿಗೂ ಈ ಮರಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ.
ಕೆಲವು ಗ್ರಂಥಗಳ ಪ್ರಕಾರ ರಾಮ ಮತ್ತು ಸೀತಾದೇವಿಯು ವನವಾಸದಲ್ಲಿ ಇದ್ದಾಗ, ಅವರು ವಾಸವಿದ್ದ ಕಾಡಿನಲ್ಲಿ ಈ ಮರಗಳು ಅಧಿಕವಾಗಿದ್ದವು. ವನವಾಸದ ವೇಳೆ ರಾಮನನ್ನು ಭೇಟಿ ಮಾಡಲು ಬರುವ ಭರತನನ್ನು ಲಕ್ಷ್ಮಣನು ಕೋವಿದಾರ ಮರದ ಮೇಲೆ ನಿಂತು ನೋಡುತ್ತಾನೆ ಎಂಬ ಉಲ್ಲೇಖಗಳು ಸಿಗುತ್ತವೆ.
ಮಂದಾರ ಮತ್ತು ಪಾರಿಜಾತ ಮರಗಳಿಂದ ರೂಪುಗೊಂಡ ಮರವೇ ಕೋವಿದಾರ ಮರ. ಈ ಮರ ಅಯೋಧ್ಯೆಯ ಪವಿತ್ರ ಮರವಾಗಿದೆ. ರಾಮನ ಸಾಮ್ರಾಜ್ಯ ಧ್ವಜದ ಮೇಲೆ ಈ ಮರದ ಚಿಹ್ನೆ ಇತ್ತು. ಈ ಕಾರಣದಿಂದಾಗಿ ರಾಮ ಮಂದಿರದ ಧ್ವಜದ ಮೇಲೂ ಕೋವಿದಾರ ಮರದ ಚಿಹ್ನೆ ಬಿಡಿಸಲಾಗಿದೆ ಎಂದು ಹೇಳಲಾಗುತ್ತದೆ.
ಕೋವಿದಾರ ಮರಕ್ಕೆ ಆಯುರ್ವೇದದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ಮರದ ಪ್ರತಿ ಭಾಗವೂ ಔಷಧೀಯ ಗುಣಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಈ ಮರವು ಮಾರ್ಚ್‌ನಲ್ಲಿ ಹೂವುಗಳನ್ನು ಬಿಟ್ಟು, ಮಳೆಗಾಲದಲ್ಲಿ ಹಣ್ಣುಗಳನ್ನು ಬೀಡುತ್ತದೆ.
ಈ ಮರದ ತೊಗಟೆಯನ್ನು ಅಜೀರ್ಣದಂತಹ ಸಮಸ್ಯೆಗಳನ್ನು ಗುಣ ಪಡಿಸಲು ಬಳಸಲಾಗುತ್ತದೆ. ಚರ್ಮರೋಗ ಮಧುಮೇಹ ಹಾಗೂ ಸಂತಾನೋತ್ಪತ್ತಿಯ ಸಮಸ್ಯೆಗಳಿಗೆ ಈ ಮರದ ವಿವಿಧ ಭಾಗಗಳನ್ನು ಔಷಧಿಯಾಗಿ ಬಳಕೆ ಮಾಡುತ್ತಾರೆ. ಜೊತೆಗೆ ಶೀತ ಹಾಗೂ ಕಫವನ್ನು ಗುಣ ಪಡಿಸಲು ಬಳಕೆ ಮಾಡಲಾಗುತ್ತದೆ. ಅಲ್ಲದೇ ವಾಲ್ಮೀಕಿ ರಾಮಾಯಣದ ಅಯೋಧ್ಯಾ ಕಾಂಡದಲ್ಲಿ ಇದರ ಬಗ್ಗೆ ಪ್ರತ್ಯೇಕ ವರ್ಣನೆ ಇದೆ. ಹಾಗಾಗಿ ರಾಮ ಮಂದಿರದ ಮೇಲಿರುವ ಧರ್ಮ ಧ್ವಜ ವಿಶೇಷವೇನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.