ADVERTISEMENT

ಸಚ್ಚಿದಾನಂದ ಸತ್ಯಸಂದೇಶ | ಆತ್ಮಸಾಕ್ಷಾತ್ಕಾರವೇ ದೈವಸಾಕ್ಷಾತ್ಕಾರ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 7 ಆಗಸ್ಟ್ 2020, 19:32 IST
Last Updated 7 ಆಗಸ್ಟ್ 2020, 19:32 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ದೇವರು ಮನುಷ್ಯನ ಒಳಿತಿಗಾಗಿ ರೂಪಿಸಿದ ಜೀವನನಿಯಮವೇ ಧರ್ಮ. ಧರ್ಮವನ್ನು ಯಾರೂ ಬಚ್ಚಿಡಲಾಗಲಿ, ಮುಚ್ಚಿಡಲಾಗಲಿ ಸಾಧ್ಯವಿಲ್ಲ. ಸ್ವಾರ್ಥಿಗಳು ಮುಚ್ಚಿದ ಬಿರಟೆಯನ್ನೆ ಸೀಳಿ, ಮನುಷ್ಯರ ಎದೆಗೂ ಡಲ್ಲಿ ಕೂತು ಧರ್ಮ-ಕರ್ಮಗಳನ್ನು ಕಲಿಸುತ್ತದೆ. ನೈತಿಕ ಶಕ್ತಿಯಾದ ಧರ್ಮವನ್ನು ಯಾರಿಂದಲೂ ಬಂಧಿಸಿಡಲು ಸಾಧ್ಯವಿಲ್ಲ. ಅದನ್ನು ಹಿಡಿದಿಡಲು ಪ್ರಯತ್ನಿಸಿ ದರೆ, ಜ್ವಾಲಾಮುಖಿಯಂತೆ ಗಗನದೆತ್ತರ ಸಿಡಿದು, ಉಲ್ಕಾಪಾತ ದಂತೆ ಅಧರ್ಮೀಯರೆದೆಗೆ ಎರಗುತ್ತದೆ. ಅವರ ಎದೆಯಲ್ಲೆ ಕೂತು ಮನಃಪರಿವರ್ತನೆ ಮಾಡಿ, ಧರ್ಮ ತನ್ನ ತಾನು ರಕ್ಷಿಸಿಕೊಳ್ಳುತ್ತದೆ.

ಮನುಷ್ಯ ಎಷ್ಟೇ ಪ್ರಯತ್ನಿಸಿದರೂ, ಧರ್ಮದ ಚೌಕಟ್ಟಿನಿಂದಾಚೆ ಬದುಕಲು ಸಾಧ್ಯವಿಲ್ಲ. ಧರ್ಮನಿಷ್ಠೆಯಿಂದ ಕೆಲಸ ಮಾಡಿ, ಮುಕ್ತಿ ಎಡೆಗೆ ನಡೆಯುವುದೇ ಮನುಷ್ಯನ ಜೀವನಕ್ರಮ. ಉತ್ತಮವಾದ ಧರ್ಮಕರ್ಮಗಳಿಂದ ಒಳ್ಳೆಯ ಫಲ ಪಡೆದು, ಆತ್ಮಸಾಕ್ಷಾತ್ಕಾರ ಮಾಡಿಕೊಂಡ ಮಾನವರ ಜೀವನ ಪರಿಪೂರ್ಣವಾಗುತ್ತದೆ. ಅದೇ ಜೀವಸರಪಣಿಯಿಂದ ಸಿಗುವ ಮುಕ್ತಿ. ಇದನ್ನರಸಿಯೇ ಹಿಂದಿನ ಕಾಲದ ಜನ ಗೃಹಸ್ಥಾಶ್ರಮದ ನಂತರ, ಮುಪ್ಪಿನಲ್ಲಿ ವಾನಪ್ರಸ್ಥಾಶ್ರಮದೆಡೆಗೆ ಸಾಗುತ್ತಿದ್ದರು.

ಈಗ ಕಾಲ ಬದಲಾಗಿದೆ, ಆತ್ಮಸಾಕ್ಷಾತ್ಕಾರಕ್ಕಾಗಿ ಕಾಡಿಗೆ ಹೋಗಬೇಕಿಲ್ಲ. ನಾಡಿನಲ್ಲೆ ಇದ್ದು ಮಾಡಿದ ಕರ್ಮಗಳ ಮೌಲ್ಯಮಾಪನ ಮಾಡುತ್ತಾ, ಆತ್ಮಸಾಕ್ಷಾತ್ಕಾರದಿಂದ ಪರಮಾತ್ಮನೆಡೆಗೆ ಸಾಗಬಹುದು. ನಾವು ಮಾಡಿದ ಕರ್ಮಗಳ ಫಲಾಫಲದ ನಿಷ್ಕರ್ಷೆ ಪರಲೋಕದಲ್ಲಾಗುವುದಿಲ್ಲ; ಇಹದಲ್ಲೇ ಕರ್ಮಫಲಗಳನ್ನು ಅನುಭವಿಸಬೇಕು. ಆದ್ದರಿಂದ ನಾವು ಮಾಡುವ ಕರ್ಮಗಳಲ್ಲಿ ಅನ್ಯರಿಗೆ ನೋವು ತಾರದಂತಿರಬೇಕು. ಇದೇ ನಾವು ಭಗವಂತ ಒಡ್ಡುವ ಜೀವನವೆಂಬ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದುಕೊಳ್ಳುವ ಸುಲಭೋಪಾಯ.

ADVERTISEMENT

ಬಹಳಷ್ಟು ಜನರು ದೇವರ ಸಾಕ್ಷಾತ್ಕಾರವಾಗಬೇಕೆಂದು ಬಯಸುತ್ತಾರೆ. ಆದರೆ, ಅವರಿಗಾಗಲೇ, ದೇವರ ಸಾಕ್ಷಾತ್ಕಾರವಾಗಿರುತ್ತದೆ. ಅದನ್ನ ಅವರು ಗಮನಿಸಿರುವುದಿಲ್ಲ. ಒಂದೊಳ್ಳೆ ಕಾರ್ಯ ಮಾಡಿದಾಗ ಸಿಗುವ ಸಮಾಧಾನ–ತೃಪ್ತಿಗಳೇ ಆತ್ಮಸಾಕ್ಷಾತ್ಕಾರ. ಆ ಆತ್ಮಸಾಕ್ಷಾತ್ಕಾರವೇ ದೈವ ಸಾಕ್ಷಾತ್ಕಾರ. ದೇವರು ಎಲ್ಲೆಲ್ಲೂ ಇದ್ದಾನೆ ಅನ್ನೋದನ್ನ ಒಪ್ಪಿಕೊಂಡ ಮೇಲೆ, ನಮ್ಮ ಆತ್ಮದೊಳಗೂ ದೇವರಿರುತ್ತಾನೆನ್ನುವುದನ್ನು ಮರೆಯಬಾರದು. ಹಾಗೆಯೇ, ದೇವರು ಸರ್ವಾಂತರ್ಯಾಮಿ ಅಂದಮೇಲೆ ನಾವು ಮಾಡುವ ಒಳ್ಳೆಯ ಕೆಲಸದಲ್ಲೂ ದೇವರಿರುತ್ತಾನೆ. ಯಾರಿಗೂ ಕೇಡು ಬಗೆಯದ ಮತ್ತು ಜಗತ್ತಿಗೆ ಒಳಿತಾಗುವ ಯಾವುದೇ ಕೆಲಸದಲ್ಲಿ ಅವನಿರುತ್ತಾನೆ. ಆ ಒಳ್ಳೆಯ ಕೆಲಸದಲ್ಲಿ ಮೇಲೂ-ಕೀಳೂ ಎಂಬ ತಾರತಮ್ಯ ಇರುವುದಿಲ್ಲ. ಜಗತ್ತಿನಲ್ಲಿರುವ ಎಲ್ಲ ಕೆಲಸಗಳು ಸರ್ವಸಮಾನವೇ.

ನಾವು ಪ್ರಾಮಾಣಿಕವಾಗಿ ದುಡಿದು ತಿನ್ನುವ ಪ್ರತಿ ಅನ್ನದ ಅಗುಳಿನಲ್ಲೂ ಪರಮಾತ್ಮನಿರುತ್ತಾನೆ. ಅಪ್ರಾಮಾಣಿಕವಾಗಿ ದುಡಿದು ತಿನ್ನುವ ಅನ್ನದಲ್ಲಿ ಪರಮಾತ್ಮನಿರುವುದಿಲ್ಲ. ಅಕ್ರಮವಾಗಿ ಅನ್ನ ತಿಂದವರ ಅಂತರಂಗದಲ್ಲಿ ಪರಮಾತ್ಮ ಅಸಂತೃಪ್ತನಾಗುತ್ತಾನೆ. ಪರಮಾತ್ಮ ಅಸಂತೃಪ್ತಿಯಿಂದ ಚಡಪಡಿಸಿದಷ್ಟೂ ದುರ್ಮಾರ್ಗಿಯ ಜೀವನ ಅನಿಶ್ಚತೆಯಿಂದ ತೊಳಲುತ್ತದೆ. ಆದ್ದರಿಂದಲೇ ಪ್ರಾಮಾಣಿಕವಾಗಿ ದುಡಿದು ತಿನ್ನುವಾಗಿನ ಆತ್ಮತೃಪ್ತಿ, ಅಪ್ರಾಮಾಣಿಕವಾದ ಸಂಪಾದನೆಯಲ್ಲಿ ಸಿಗುವುದಿಲ್ಲ.

ಜೀವ ಮತ್ತು ಜೀವನದ ಮಧ್ಯೆ ಬೆಸೆಯುವ ಕೊಂಡಿಯೇ ನೈತಿಕತೆ. ಈ ನೈತಿಕ ಕೊಂಡಿ ಗಟ್ಟಿಯಾಗಿರಬೇಕಾದರೆ, ಧರ್ಮ-ಕರ್ಮಗಳು ಸರಿಯಾಗಿರಬೇಕು. ಧರ್ಮಮಾರ್ಗದಲ್ಲಿ ನಡೆಯುವ ಕರ್ಮ ಬದುಕನ್ನು ಉತ್ತಮವಾಗಿಸುತ್ತದೆ. ಉತ್ತಮವಾದ ಬದುಕು ಮನಸ್ಸಿಗೆ ನೆಮ್ಮದಿ ಕೊಡುತ್ತದೆ. ನೆಮ್ಮದಿಯುತ ಬದುಕು ಸಮಾಜದಲ್ಲಿ ಸೌಹಾರ್ದಸೌಧವನ್ನು ಕಟ್ಟುತ್ತದೆ. ಮನುಷ್ಯ ಭೂಮಿಗೆ ಬಂದಿರುವುದೇ ಸೌಹಾರ್ದ ಸ್ವರ್ಗ ನಿರ್ಮಿಸಲು, ಮತ್ತೊಬ್ಬರನ್ನು ಹಿಂಸಿಸಿ ಸ್ವಾರ್ಥಸೌಧವನ್ನು ಕಟ್ಟಲಲ್ಲ. ತನ್ನ ಇರವನ್ನು ಸ್ವರ್ಗವಾಗಿಟ್ಟುಕೊಳ್ಳುವವನು ಮನುಷ್ಯ; ನರಕವಾಗಿಸುವವನು ರಾಕ್ಷಸ. ಭೂ ಸ್ವರ್ಗವಾಗಿಸಲು ದುಡಿವ ನಿಃಸ್ವಾರ್ಥರ ಜಗತ್ತು ಸದಾ ‘ಸಚ್ಚಿದಾನಂದಮಯ’ವಾಗಿರುತ್ತದೆ. ಇಂಥ ಜಗತ್ತನ್ನೇ ಭಗವಂತ ಬಯಸುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.