
ಹಬ್ಬಗಳ ಸಾಲಿನಲ್ಲಿ ಸಂಕ್ರಾಂತಿ ಹಬ್ಬಕ್ಕೆ ವಿಶೇಷ ಸ್ಥಾನವಿದೆ. ಇದು ಕೇವಲ ಹಬ್ಬವಷ್ಟೇ ಅಲ್ಲ, ರೈತನ ಶ್ರಮಕ್ಕೆ ದೊರಕುವ ಪ್ರತಿಫಲವೂ ಹೌದು. ಈ ಹಬ್ಬದಲ್ಲಿ ರೈತರು ಬೆಳೆದ ಬೆಳೆಗಳನ್ನು ಕಟಾವು (ಕೊಯ್ಲು) ಮಾಡಿ ವಿಶೇಷ ಪೂಜೆ ಸಲ್ಲಿಸಿ ಹಬ್ಬವನ್ನು ಆಚರಿಸುತ್ತಾರೆ.
ಜಾನಪದವಾಗಿಯೂ ಸುಗ್ಗಿ ಒಂದಷ್ಟು ಮಹತ್ವ ಪಡೆದುಕೊಂಡಿದೆ. ಹಿಂದಿನ ಕಾಲದಲ್ಲಿ ಸುಗ್ಗಿ (ಬೆಳೆ ಕಟಾವು) ಒಕ್ಕಲಾಟ ಸಂದರ್ಭದಲ್ಲಿ ದಿನಪೂರ್ತಿ ಕೆಲಸ ಮಾಡಬೇಕಾಗಿದ್ದರಿಂದ ಆಯಾಸ ಆಗಬಾರದು ಎಂದು ಜಾನಪದ ಗೀತೆಗಳನ್ನು ಕಟ್ಟಿ ಹಾಡುವುದನ್ನು ಅಭ್ಯಸಿಸಿಕೊಂಡಿದ್ದರು.
ಹೀಗೆ ರಚನೆಯಾದ ಗೀತೆಗಳೇ ಸುಗ್ಗಿ ಗೀತೆಗಳೆಂದು ಪ್ರಸಿದ್ಧಿ ಪಡೆದಿವೆ. ಉದಾಹರಣೆಗೆ
‘ಸುಗ್ಗಿ ಬಂದಿದೆ, ಸಂಭ್ರಮ ತಂದಿದೆ..’
‘ಸುಗ್ಗಿ ಮಾಡೋಣ ಬಾರವ್ವ ಗೆಳತಿ..’
‘ಸುಗ್ಗಿ ಬಂದಿದೆ.. ಹೊಲಗದ್ದೆ ನಗು ಚೆಲ್ಲಿದೆ’
ಇವಲ್ಲದೆ, ಶಿಶುನಾಳ ಶರೀಫರ ಸುಗ್ಗಿ ಹಾಡುಗಳು ಸುಗ್ಗಿಯ ಸಂಭ್ರಮವನ್ನು ಸಾರುತ್ತವೆ. ಜತೆಗೆ ಜೀವನ ಪಾಠವನ್ನೂ ಹೇಳಿಕೊಡುತ್ತವೆ ಉದಾಹರಣೆಗೆ
ಸುಗ್ಗಿ ಮಾಡೋಣು ಬಾರವ್ವಾ, ಗೆಳತಿ
ಸುಮ್ಮನ್ಯಾಕ ಕುಳತಿ
ಅಗ್ಗದ ಫಲಗಳ ಕೊಯ್ಯಲಿಕ್ಕೆ ಹೊಲದೊಳು
ಒಗ್ಗಿಲಿ ಕರೆದರೆ ಹಿಗ್ಗಿಲಿ ಹೋಗಿ ||
ಹೊಲದವರ ಕರೆದರೆ ಹೊಗಲಿಬೇಕು
ನೆಲೆಯನು ತಿಳಿಯಬೇಕು
ಕುಲದವರೊಂದು ಸಲಗಿಯು ಸಾಕು
ಬಲು ಜೋಕಿರಬೇಕು
ಹೊಲದೊಳು ಬೆಳೆದಿಹ ಹುಳ್ಳಿ ಮಿಕ್ಕಿ ಕಸ
ತಳದ ಕೋಲಿಯ ದಾಟಿ ಕೊಯ್ಯೋಣ ಗೆಳತಿ ||
ಸುಗ್ಗಿ ಹಬ್ಬದಲ್ಲಿ ಪೂಜೆ ಮಾಡುವಾಗ ಮೊದಲು ಸೆಗಣಿಯಿಂದ ಅಂಗಳವನ್ನು ಸಾರಿಸಿ, ಅದರ ಮೇಲೆ ಬೆಳೆಗಳ ರಾಶಿಯನ್ನು ಸುರಿಯುತ್ತಾರೆ. ರೈತನ ಬದುಕಿನ ಅವಿಭಾಜ್ಯ ಅಂಗವಾಗಿರುವ ಗೋವುಗಳಿಗೆ ಅಲಂಕರಿಸಿ, ಗೋವುಗಳಿಂದ ಬೆಳೆಗಳ ರಾಶಿಗೆ ಪ್ರದಕ್ಷಿಣೆ ಹಾಕಿಸುತ್ತಾರೆ. ಬಳಿಕ ಗ್ರಾಮಸ್ಥರು, ಕುಟುಂಬಸ್ಥರು ಸೇರಿ ಪೂಜೆ ಸಲ್ಲಿಸಿ ಒಟ್ಟಾಗಿ ಕುಳಿತು ಊಟ ಮಾಡುತ್ತಾರೆ. ಸುಗ್ಗಿ ಹಬ್ಬ ಸಂಭ್ರಮದ ಜತೆಗೆ ಬಾಂದವ್ಯವನ್ನೂ ಬೆಸೆಯುವ ಕೊಂಡಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.