
ಸಾಂದರ್ಭಿಕ ಚಿತ್ರ
ಚಿತ್ರ ಕೃಪೆ; ಎಐ
ಹಿಂದೆ ನಾವು ಶಾಲೆಯಲ್ಲಿ ಓದುತ್ತಿದ್ದ ದಿನಗಳಲ್ಲಿ, ಪ್ರತಿದಿನ ಶಿಕ್ಷಕರಿಗೆ ಏನನ್ನಾದರೂ ಅರ್ಪಿಸುವುದು ಸಂಪ್ರದಾಯವಾಗಿತ್ತು. ಮನೆಯಲ್ಲಿ ಸಿದ್ಧಪಡಿಸಿದ ಸಿಹಿತಿಂಡಿಗಳನ್ನು ನಾವು ಅವರೊಂದಿಗೆ ಹಂಚಿಕೊಳ್ಳುತ್ತಿದ್ದೆವು. ನಮ್ಮ ಶಿಕ್ಷಕಿ ಒಬ್ಬರೇ ವಾಸಿಸುತ್ತಿದ್ದುದರಿಂದ, ಅಷ್ಟನ್ನೂ ತಿನ್ನಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅವರು ತಾಜಾ ಸಿಹಿತಿಂಡಿಗಳನ್ನು ಒಂದು ಡಬ್ಬಿಯಲ್ಲಿ ಹಾಕಿಟ್ಟುಕೊಂಡು, ಹಿಂದಿನ ದಿನಗಳಿಂದ ಉಳಿದ ಹಳೆಯ ಸಿಹಿತಿಂಡಿಗಳನ್ನು ಮಕ್ಕಳಿಗೆ ಹಂಚುತ್ತಿದ್ದರು. ಆ ಸಿಹಿತಿಂಡಿಗಳು ನಿಧಾನವಾಗಿ ವಾಸನೆ ಬರತೊಡಗುತ್ತಿತ್ತು.
ಅದನ್ನು ನೋಡಿ ನಗುತ್ತಾ ಮಕ್ಕಳು, 'ಟೀಚರ್ ನಮಗೆ ಹಳಸಿದ ’ ಸಿಹಿತಿಂಡಿಗಳನ್ನು ಕೊಟ್ಟರು' ಎಂದು ಹಾಸ್ಯ ಮಾಡುತ್ತಿದ್ದರು. ನಾವು ಕೊಟ್ಟ ಸಿಹಿತಿಂಡಿಗಳು ನಮ್ಮ ಮನೆಯಿಂದಲೇ ಬಂದಿದ್ದರೂ, ಅವು ಮತ್ತೆ ನಮ್ಮ ಕೈಗೆ ಬಂದಾಗ ಒಂದಿಷ್ಟು ವಾಸನೆಯನ್ನು ಹೊತ್ತುಕೊಂಡು ಬರುತ್ತಿದ್ದವು. ನಾವು ಅವನ್ನು ಜೇಬಿನಲ್ಲಿ ಹಾಕಿಕೊಂಡು, ನಂತರ ಸದ್ದಿಲ್ಲದೆ ಎಸೆಯುತ್ತಿದ್ದೆವು.
ನಮ್ಮ ಭಾವನೆಗಳ ವಿಷಯದಲ್ಲೂ ನಾವು ಇದನ್ನೇ ಮಾಡುತ್ತೇವೆ.
ಹಳೆಯ ಭಾವನೆಗಳನ್ನು ಹೊತ್ತುಕೊಂಡೇ ತಿರುಗುತ್ತೇವೆ. ಇಂದು ಹುಟ್ಟುವ ಹೊಸ ಭಾವನೆಗಳು ಮತ್ತು ಆಲೋಚನೆಗಳಿಗೆ ಗಮನ ಕೊಡುವುದಿಲ್ಲ. ಅವುಗಳನ್ನು ಹಳೆಯ, ಹಳಸಿದ ಅನಿಸಿಕೆಗಳೊಂದಿಗೆ, ನಿನ್ನೆಯ ಕೋಪ, ವರ್ಷಗಳ ಹಿಂದಿನ ನೋವು, ಅನೇಕ ಕಾಲಗಳಿಂದ ಸಂಗ್ರಹವಾದ ನಿರೀಕ್ಷೆಗಳೊಂದಿಗೆ ಬೆರೆಸುತ್ತೇವೆ. ಮನಸ್ಸು ಹೊಸತನದಲ್ಲಿ ನೆಲೆಸುವುದಿಲ್ಲ. ಅದು ಹಳೆಯದಕ್ಕೇ ಅಂಟಿಕೊಂಡಿರುತ್ತದೆ.
ಇಂತಹ ಸಂದರ್ಭದಲ್ಲಿ, ಅಮೂಲ್ಯವಾದ ಶಿವಸೂತ್ರಗಳು ಮನಸ್ಸನ್ನು ಮುಕ್ತಗೊಳಿಸುವ ಗಹನವಾದ ಜ್ಞಾನವನ್ನು ನೀಡುತ್ತವೆ. ಗಾಳಿಪಟವನ್ನು ಆಕಾಶದಲ್ಲಿ ಹಾರಿಸಿ ನೆಲದಿಂದ ನಿಯಂತ್ರಿಸಲು ನಮಗೊಂದು ತೆಳ್ಳಗಿನ ದಾರದ ಅಗತ್ಯವಿದೆ. ಆ ದಾರ ನೆಲದಲ್ಲೇ ಇದ್ದರೂ, ಗಾಳಿಪಟ ಆಕಾಶದಲ್ಲಿ ಎತ್ತರಕ್ಕೆ ಹಾರುತ್ತದೆ. ಆ ದಾರವೇ ಸೂತ್ರ. ಹಾಗೆಯೇ, ನಮ್ಮ ಜೀವನವು ಎತ್ತರಕ್ಕೇರಿ, ಅನಂತ ವ್ಯಾಪ್ತಿಗೆ ವಿಸ್ತರಿಸಲು ಏನು ಬೇಕು? ಭೂಮಿ ಮತ್ತು ಆಕಾಶಗಳ ನಡುವೆ, ಮಾನವೀಯತೆ ಮತ್ತು ದೈವಿಕತೆಯ ನಡುವೆ ಕೊಂಡಿಯಾಗಿ ಕೆಲಸ ಮಾಡುವ ಒಂದು ಸೂತ್ರ ಅಗತ್ಯ. ನಾವು ಹಿಡಿದುಕೊಳ್ಳುವ ಸೂತ್ರದ ಸ್ವಭಾವವು ನಮ್ಮ ಜೀವನದ ದಿಕ್ಕು, ಗುಣಮಟ್ಟವನ್ನೂ ನಿರ್ಧರಿಸುತ್ತದೆ.
ಅಂತಹ ಸೂತ್ರಗಳಲ್ಲಿ ಒಂದು, ‘ನರ್ತಕ ಆತ್ಮಾ.’ ಆತ್ಮನೇ ನರ್ತಕ ಅಥವಾ ನಟ. ಇದರ ಅರ್ಥವೇನು?
ಆತ್ಮವು ಒಂದು ನಾಟಕದಲ್ಲಿನ ನಟ ಅಥವಾ ನರ್ತಕನಂತೆ. ನರ್ತಕನು ಅಥವಾ ನಾಟಕದಲ್ಲಿ ನಟಿಸುವವನು ತನ್ನ ಅಭಿನಯದಲ್ಲಿ ನವರಸಗಳನ್ನೆಲ್ಲ ವಿವಿಧ ಭಾವಭಂಗಿಗಳ ಮೂಲಕ ವ್ಯಕ್ತಪಡಿಸುತ್ತಾನೆ. ಒಬ್ಬ ನರ್ತಕ ಭಾವನೆಗಳನ್ನು ಹೇಗೆ ವ್ಯಕ್ತಪಡಿಸುತ್ತಾನೆ ಎಂದು ಗಮನಿಸಿದ್ದೀರಾ? ಅವನು ಅದನ್ನು ಸಂಪೂರ್ಣವಾಗಿ, ಕೌಶಲ್ಯ ಮತ್ತು ಕಲಾತ್ಮಕತೆಯೊಂದಿಗೆ ವ್ಯಕ್ತಪಡಿಸುತ್ತಾನೆ. ಕೋಪವನ್ನು ತೋರಿಸಬೇಕಾದರೆ ಕಣ್ಣುಗಳು ಕೆಂಪಾಗುತ್ತವೆ. ದುಃಖವನ್ನು ವ್ಯಕ್ತಪಡಿಸಬೇಕಾದರೆ ಇಡೀ ದೇಹವೇ ಅದರಲ್ಲಿ ಪಾಲ್ಗೊಳ್ಳುತ್ತದೆ. ಆದರೂ ನರ್ತಕನು ನಿನ್ನೆದಿನದ ಭಾವವನ್ನು ಇಂದಿನ ಅಭಿನಯಕ್ಕೆ ತಂದುಕೊಳ್ಳುವುದಿಲ್ಲ. ಕ್ಷಣಾರ್ಧದಲ್ಲಿ ಭಾವವೂ ಬದಲಾಗುತ್ತದೆ, ಪಾತ್ರಗಳೂ ಬದಲಾಗುತ್ತವೆ. ಆದರೆ ನರ್ತಕನನ್ನು ಅವುಗಳು ಸ್ಪರ್ಶಿಸುವುದಿಲ್ಲ.
ಒಬ್ಬ ಒಳ್ಳೆಯ ನರ್ತಕನು ಉತ್ತಮ ಭಾವಗಳನ್ನು ವ್ಯಕ್ತಪಡಿಸಬಲ್ಲನು. ಅವನು ಭಾವಾಂತರಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಒಂದು ಭಾವದಿಂದ ಮತ್ತೊಂದಕ್ಕೆ ಕ್ಷಣದಲ್ಲೇ ಸರಿಯಬಲ್ಲನು, ಅಲ್ಲವೇ? ಅದೇ ರೀತಿ, ನಿಮ್ಮ ಜೀವನದಲ್ಲಿ ನೀವು ಕೋಪಗೊಂಡಾಗ ಮತ್ತೆ ಸಹಜ ಸ್ಥಿತಿಗೆ ಮರಳಲು ಎಷ್ಟು ಸಮಯ ಬೇಕಾಗುತ್ತದೆ? ಮತ್ತೆ ನಗಲು ಎಷ್ಟು ಹೊತ್ತು ಹಿಡಿಯುತ್ತದೆ? ಒಳ್ಳೆಯ ನರ್ತಕನಿಗೆ ಹೆಚ್ಚು ಸಮಯ ಬೇಕಾಗುವುದಿಲ್ಲ. ಕ್ಷಣದಲ್ಲೇ ಅವನು ತನ್ನ ಭಾವನೆಗಳನ್ನೂ ಅಭಿವ್ಯಕ್ತಿಗಳನ್ನೂ ಬದಲಾಯಿಸುತ್ತಾನೆ. ಈ ಸೂತ್ರವು ಅತ್ಯಂತ ಸೂಕ್ಷ್ಮವಾದುದು. ಒಬ್ಬರು ಅದನ್ನು ತೆರೆದ ಮನಸ್ಸಿನಿಂದ ನೋಡಬೇಕಾಗಿದೆ.
‘ನರ್ತಕ ಆತ್ಮಾ’ ಅಂದರೆ ಆತ್ಮವೂ ನರ್ತಕನಂತೆಯೇ. ಒಳ್ಳೆಯ ನರ್ತಕನು ನಿನ್ನೆದಿನದ ಅಭಿವ್ಯಕ್ತಿಯನ್ನು ಇಂದು ಮತ್ತೆ ಪ್ರದರ್ಶಿಸುವುದಿಲ್ಲ. ನಿನ್ನೆದಿನದ ಭಾವವನ್ನು ನಿನ್ನೆ ವ್ಯಕ್ತಪಡಿಸಿದ. ಇಂದು ಹೊಸ ಭಾವವನ್ನು ವ್ಯಕ್ತಪಡಿಸುತ್ತಾನೆ.
ಹಾಗೆಯೇ, ಆತ್ಮವು ತನ್ನನ್ನು ಒಂದು ಲೀಲೆಯಂತೆ ವ್ಯಕ್ತಪಡಿಸುತ್ತದೆ. ಕೋಪ ಬರುತ್ತದೆ, ಹೋಗುತ್ತದೆ. ಪ್ರೀತಿ ಹೆಚ್ಚುತ್ತದೆ, ಕರಗುತ್ತದೆ. ಭಯ ಕಾಣಿಸಿಕೊಳ್ಳುತ್ತದೆ ಮತ್ತು ಕಣ್ಮರೆಯಾಗುತ್ತದೆ. ಗಮನಿಸಿದರೆ, ಯಾವುದೇ ಭಾವನೆ, ಆಸೆ, ಚಿಂತೆ ಶಾಶ್ವತವಲ್ಲ ಎಂಬುದು ನಿಮಗೆ ಗೋಚರಿಸುತ್ತದೆ. ಸಮಯ ಕಳೆದಂತೆ ಚಿಂತೆಗಳು ಬದಲಾಗುತ್ತವೆ ಮತ್ತು ಹೊಸ ಚಿಂತೆಗಳು ಅವುಗಳ ಸ್ಥಾನವನ್ನು ಪಡೆಯುತ್ತವೆ. ಸ್ವಲ್ಪ ಜಾಗೃತಿಯೊಂದಿಗೆ ನಿರ್ಲಿಪ್ತತೆಯು ಸಹಜವಾಗಿಯೇ ನಿಮ್ಮಲ್ಲಿ ಮೂಡುತ್ತದೆ.
ಇದನ್ನು ಅರಿತಾಗ, ಕಾಲದ ಮೇಲಿನ ನಮ್ಮ ನಿರೀಕ್ಷೆಗಳೂ ಮಾಯವಾಗುತ್ತವೆ. ಎಲ್ಲಾ ನೋವನ್ನು ಕಾಲವೇ ಗುಣಪಡಿಸಲಿ ಎಂದು ಕಾಯುವುದಿಲ್ಲ. ನಾವು ಕೇವಲ ಎಚ್ಚರಗೊಂಡು ಜೀವನವನ್ನು ಒಂದು ಲೀಲೆಯಾಗಿ ನೋಡುವೆವು. ಆಗ ಎಲ್ಲವೂ ಕ್ಷಣಾರ್ಧದಲ್ಲಿ ಕರಗುತ್ತದೆ. ಇದನ್ನೇ 'ಕಾಲಾತೀತ' ಎಂದು ಕರೆಯುವುದು. ಅಂದರೆ, ಕಾಲವನ್ನು ಮೀರಿ ಹೋಗುವುದು. ಅದಕ್ಕಾಗಿಯೇ ಪರಮಶಿವನನ್ನು 'ಮಹಾಕಾಲ' ಎಂದು ಕರೆಯುತ್ತಾರೆ. ಅವನು ಆತ್ಮಸ್ವರೂಪದ ಸಾರ.
ಈ ಸಾರವನ್ನು ವರ್ಷದ ಕೆಲವು ವಿಶೇಷ ದಿನಗಳಲ್ಲಿ, ಉದಾಹರಣೆಗೆ ಮಹಾಶಿವರಾತ್ರಿಯ ರಾತ್ರಿಯಲ್ಲಿ ಸುಲಭವಾಗಿ ಅನುಭವಿಸಬಹುದು. ಶಿವರಾತ್ರಿಯ ರಾತ್ರಿ ಧ್ಯಾನಿಸುವುದು ವರ್ಷದ ಬೇರೆ ಯಾವುದೇ ಸಮಯದಲ್ಲಿ ಧ್ಯಾನ ಮಾಡುವುದಕ್ಕಿಂತ ನೂರು ಪಟ್ಟು ಹೆಚ್ಚು ಶಕ್ತಿಶಾಲಿ ಎಂದು ಪರಿಗಣಿಸಲಾಗಿದೆ. ಈ ದಿನಗಳಲ್ಲಿ ಧ್ಯಾನಿಸಿದಾಗ ಆಳವಾದ ಅನುಭವ ದೊರೆಯುತ್ತದೆ. ಈ ಸಮಯದಲ್ಲಿ, ನೀವು ಅಸ್ತಿತ್ವದೊಂದಿಗೆ ಇನ್ನಷ್ಟು ಗಾಢವಾದ ಸಂಪರ್ಕವನ್ನು ಅನುಭವಿಸುತ್ತೀರಿ.
ಆತ್ಮಾನುಭವವನ್ನು ನೀಡುವ ಶಿವಸೂತ್ರಗಳು ಕಾಲಾತೀತವಾಗಿವೆ. ಇವು ಇಂದಿಗೂ ಪ್ರಸ್ತುತವೇ ಎಂದು ಕೇಳುವುದು, ತಂತ್ರಜ್ಞಾನದ ಯುಗದಲ್ಲಿ ಉಸಿರಾಟ ಪ್ರಸ್ತುತವೇ ಎಂದು ಕೇಳಿದಂತೆಯೇ. ಉಸಿರಿಲ್ಲದೆ ಜೀವನವೇ ಇಲ್ಲ. ಸಣ್ಣ ಪಮಾಣದ ನಕಾರಾತ್ಮಕತೆಯನ್ನು ಮನಸ್ಸಿನಲ್ಲಿ ದೊಡ್ಡದು ಮಾಡಿಕೊಂಡು, ಅದಕ್ಕೆ ಅಂಟಿಕೊಂಡಿರುವ ಬದಲು, ಸತ್ಯ, ಸೌಂದರ್ಯ ಮತ್ತು ಶುಭವಾದುದು ಎಲ್ಲಿ ಕಂಡರೂ ಅದನ್ನು ಹಿಡಿದಿಟ್ಟುಕೊಳ್ಳಲು ಇವು ನಮಗೆ ನೆನಪಿಸುತ್ತವೆ.
ಶಿವರಾತ್ರಿ ಎಂದರೆ ದಿವ್ಯ ಪ್ರಜ್ಞೆಗೆ ಶರಣಾಗುವುದು, ದಿವ್ಯ ಶಿವತತ್ತ್ವದಲ್ಲಿ ವಿಶ್ರಾಂತಿಯನ್ನು ಪಡೆಯುವುದು. 2026ರ ಫೆಬ್ರುವರಿ 15ರಂದು ‘ದಿ ಆರ್ಟ್ ಆಫ್ ಲಿವಿಂಗ್’, ಬೆಂಗಳೂರು ಆಶ್ರಮದಲ್ಲಿ ನಡೆಯುವ ಮಹಾಶಿವರಾತ್ರಿ ಉತ್ಸವದಲ್ಲಿ ಭಾಗಿಯಾಗಿ ಧ್ಯಾನ ಮತ್ತು ಭಕ್ತಿಯ ಅನುಭವವನ್ನು ಪಡೆಯಿರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.