ADVERTISEMENT

ವೇದವ್ಯಾಸರ ಶಿವಪುರಾಣಸಾರ | ಪಿತೃಪುತ್ರಿಯರಿಗೆ ಶಾಪವಿತ್ತ ಮುನಿ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂಕಣ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 20:19 IST
Last Updated 10 ಆಗಸ್ಟ್ 2022, 20:19 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ದಕ್ಷನಿಗೆ ಅರವತ್ತು ಜನ ಪುತ್ರಿಯರು ಜನಿಸಿದ್ದರು. ಅವರನ್ನು ಕಶ್ಯಪ ಮತ್ತಿತರರಿಗೆ ಮದುವೆಮಾಡಿಕೊಟ್ಟಿದ್ದ. ಆ ಪುತ್ರಿಯರಲ್ಲಿ ಸ್ವಧಾದೇವಿಯನ್ನು ಪಿತೃಗಳಿಗೆ ಮದುವೆ ಮಾಡಿಕೊಟ್ಟಿದ್ದ. ಆ ಸ್ವಧಾದೇವಿಗೆ ಮೇನಾದೇವಿ, ಧನ್ಯಾ ಮತ್ತು ಕಲಾವತಿ ಎಂಬ ಮೂವರು ಕನ್ಯೆಯರು ಜನಿಸಿದರು. ಇವರು ಪಿತೃದೇವತೆಗಳ ಮಾನಸಪುತ್ರಿಯರಾಗಿದ್ದರು. ಅವರು ಸ್ವಧಾದೇವಿಯ ಗರ್ಭದಿಂದ ಜನಿಸಿದವರಾಗಿರಲಿಲ್ಲ. ಆದರೂ ಲೋಕದಲ್ಲಿ ಸ್ವಧಾದೇವಿಯ ಪುತ್ರಿಯರು ಎಂದು ಪ್ರಸಿದ್ಧರಾಗಿದ್ದರು. ಆ ಕನ್ಯೆಯರ ಪವಿತ್ರ ಹೆಸರುಗಳನ್ನು ಉಚ್ಚರಿಸಿದವರ ಇಷ್ಟಾರ್ಥಗಳು ಸಿಗುತ್ತವೆ. ಅವರು ಲೋಕಮಾತೆಯರು, ಮಹಾಯೋಗಿನಿಯರು, ಜ್ಞಾನಿಗಳು, ಮೂರು ಲೋಕಗಳಲ್ಲೂ ಸಂಚರಿಸಬಲ್ಲವರು.

ಇಂಥ ಪಿತೃಕನ್ಯೆಯರು ಒಮ್ಮೆ ವಿಷ್ಣುವಿನ ದರ್ಶನಕ್ಕಾಗಿ ಶ್ವೇತದ್ವೀಪದಲ್ಲಿರುವ ವಿಷ್ಣುಲೋಕಕ್ಕೆ ತೆರಳಿದರು. ಅಲ್ಲಿಗೆ ಆಗ ಸನಕಾದಿ ಮುನಿಗಳು ಬಂದರು. ಅವರಿಗೆ ದೇವತೆಗಳು ಎದ್ದು ಗೌರವಿಸಿದರು. ಆದರೆ ಆ ಮೂವರು ಪಿತೃಕನ್ಯೆಯರು ಅಜ್ಞಾನದಿಂದ ಏಳಲೇ ಇಲ್ಲ. ಶಂಕರನ ಮಾಯೆಯಿಂದ ಮೋಹಿತರಾಗಿ ಆ ಕನ್ಯೆಯರು ಸನಕಾದಿಗಳನ್ನು ಗೌರವಿಸಲಿಲ್ಲ. ಆ ಮಾಯೆಗೇ ಪ್ರಾರಬ್ಧ ಸೇರಿದಂತೆ ಅನೇಕ ಹೆಸರುಗಳಿವೆ. ಸನಕಾದಿಗಳು ಆಗ ತುಂಬಾ ಕೋಪಗೊಂಡರು. ಶಿವಮಾಯಾಮೋಹಿತನಾಗಿ ಸನತ್ಕುಮಾರನು ‘ಎಲೈ ಪಿತೃಕನ್ಯೆಯರೇ, ನೀವು ಪಿತೃದೇವತೆಗಳ ಕುಮಾರಿಯರಾದರೂ ವೇದತತ್ವವು ತಿಳಿಯದುದರಿಂದ ಮೂಢರಾಗಿರುವಿರಿ. ನೀವು ನಮಗೆ ನಮಸ್ಕಾರ ಮಾಡಲಿಲ್ಲ. ಆಸನವನ್ನು ಬಿಟ್ಟು ಏಳಲೂ ಇಲ್ಲ. ಆದಕಾರಣ ನೀವು ಸ್ವರ್ಗದಿಂದ ಚ್ಯುತರಾಗಿ ಮನುಷ್ಯಸ್ತ್ರೀಯರಾಗಿ ಜನಿಸಿರಿ’ ಎಂದು ಶಾಪವನ್ನಿತ್ತ.

ಸನತ್ಕುಮಾರನ ಶಾಪವನ್ನು ಕೇಳಿ ಆ ಪಿತೃಕನ್ಯೆಯರು ತುಂಬಾ ಭಯಗೊಂಡು, ಅವನ ಕಾಲುಗಳಿಗೆ ಬಿದ್ದು ‘ಓ ಮುನಿಶ್ರೇಷ್ಠನೆ, ಪ್ರಸನ್ನನಾಗು. ತಿಳಿವಳಿಕೆಯಿಲ್ಲದ ನಾವು ನಿಮ್ಮನ್ನು ಗೌರವಿಸಲಿಲ್ಲ. ನಮ್ಮ ತಪ್ಪನ್ನು ಕ್ಷಮಿಸಿ, ಮತ್ತೆ ನಾವು ಸ್ವರ್ಗವನ್ನು ಪಡೆಯುವಂತೆ ಅನುಗ್ರಹಮಾಡು’ ಎಂದು ಬೇಡಿಕೊಂಡರು. ಸನತ್ಕುಮಾರ ಪ್ರಸನ್ನನಾದ. ‘ಎಲೈ ಪಿತೃಕನ್ಯೆಯರೇ, ನಿಮ್ಮಲ್ಲಿ ಹಿರಿಯವಳಾದ ಮೇನಾದೇವಿಯು ವಿಷ್ಣುವಿನ ಅಂಶವಾದ ಹಿಮವಂತನ ಪ್ರಿಯೆಯಾಗುವಳು. ಅವಳಲ್ಲಿ ಜಗನ್ಮಾತೆಯಾದ ಪಾರ್ವತಿಯು ಜನಿಸುವಳು. ಎರಡನೆಯವಳಾದ ಧನ್ಯಾದೇವಿಯು ಯೋಗಿಯಾದ ಜನಕರಾಜನ ಪತ್ನಿಯಾಗುವಳು. ಅವಳಿಗೆ ಮಹಾಲಕ್ಷ್ಮಿಯ ಅವತಾರದವಳಾದ ಸೀತಾ ಎಂಬ ಕುವರಿಯು ಜನಿಸುವಳು. ಕೊನೆಯವಳಾದ ಕಲಾವತಿಯು ದ್ವಾಪರಯುಗದ ಕೊನೆಯಲ್ಲಿ, ವೃಷಭಾನನ ಮಡದಿಯಾಗುವಳು. ಅವಳಿಗೆ ರಾಧಾ ಎಂಬ ಮಗಳು ಜನಿಸುವಳು.

ADVERTISEMENT

‘ಮೇನಾದೇವಿಯು ಜಗನ್ಮಾತೆಯಾದ ಪಾರ್ವತಿಯನ್ನು ಹಡೆದು, ಅವಳ ಅನುಗ್ರಹದಿಂದ ಪತಿಯೊಡನೆ ಕೈಲಾಸವನ್ನು ಸಶರೀರವಾಗಿ ಪಡೆಯುವಳು. ಧನ್ಯಾದೇವಿಯು ಸೀರಧ್ವಜ ಮತ್ತು ಸೀತೆಯೊಡನೆ ವೈಕುಂಠಕ್ಕೆ ತೆರಳುವರು. ಕಲಾವತಿಯು ಪತಿಯಾದ ವೃಷಭಾನನೊಡನೆ ಹಾಗೂ ಮಗಳು ರಾಧೆಯೊಡನೆ ಮುಕ್ತಳಾಗಿ ಗೋಲೋಕವನ್ನು ಸೇರುವಳು. ಪಿತೃಕನ್ಯೆಯರಾದ ನೀವು ಸ್ವರ್ಗದಲ್ಲಿ ವಿಹರಿಸುವವರು. ದುಷ್ಕರ್ಮದಿಂದಾಗಿ ನಿಮ್ಮ ವಿಷ್ಣುದರ್ಶನ ಭಾಗ್ಯವೂ ನಷ್ಟವಾಯಿತು. ಆದರೆ ಶಿವನ ಆದರಕ್ಕೆ ಪಾತ್ರರಾದ ನೀವು ಧನ್ಯರಾಗಿದ್ದೀರ. ಆದ್ದರಿಂದ ಮೇನಾದೇವಿಗೆ ಜನಿಸುವ ಪಾರ್ವತಿಯು ಶಿವನ ಮಡದಿಯಾದರೆ, ಧನ್ಯಾದೇವಿಗೆ ಜನಿಸುವ ಸೀತೆಯು ರಾಮನ ಮಡದಿಯಾಗುವಳು. ಕಲಾವತೀದೇವಿಯ ಪುತ್ರಿಯಾದ ರಾಧೆಯು ಕೃಷ್ಣನಲ್ಲಿ ರಹಸ್ಯವಾದ ಅನುರಾಗವುಳ್ಳ ಪ್ರಿಯೆಯಾಗುವಳು’ ಎಂದ ಸನತ್ಕುಮಾರ ತನ್ನ ಸಹೋದರರೊಡನೆ ಅಂತರ್ಧಾನನಾದ. ಮೂವರು ಪಿತೃಕನ್ಯೆಯರೂ ಪಾಪವನ್ನು ಕಳೆದುಕೊಂಡ ಸಂತೋಷದಲ್ಲಿ ತಮ್ಮ ಮನೆಗೆ ತೆರಳಿದರು ಎಂಬಲ್ಲಿಗೆ ಪಾರ್ವತೀಖಂಡದ ಎರಡನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.