ADVERTISEMENT

ದಿನದ ಸೂಕ್ತಿ: ಹನಿ ಹನಿ ಗೂಡಿದರೆ ಹಳ್ಳ

ಎಸ್.ಸೂರ್ಯಪ್ರಕಾಶ ಪಂಡಿತ್
Published 19 ಅಕ್ಟೋಬರ್ 2020, 19:30 IST
Last Updated 19 ಅಕ್ಟೋಬರ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಲಬಿಂದುನಿಪಾತೇನ ಕ್ರಮಶಃ ಪೂರ್ಯತೇ ಘಟಃ ।

ಸ ಹೇತುಃ ಸರ್ವವಿದ್ಯಾನಾಂ ಧರ್ಮಸ್ಯ ಚ ಧನಸ್ಯ ಚ ।।

ಇದರ ತಾತ್ಪರ್ಯ ಹೀಗೆ:

ADVERTISEMENT

’ಮಡಕೆ ತುಂಬುವುದು ನೀರಿನ ಒಂದೊಂದು ಹನಿಯ ಬೀಳುವಿಕೆಯಿಂದ; ಎಲ್ಲ ವಿದ್ಯೆಗಳಿಗೂ ಧರ್ಮಕ್ಕೂ ಧನಕ್ಕೂ ಇದು ಅನ್ವಯವಾಗುತ್ತದೆ.’

ನೀರಿನ ಒಂದೊಂದೇ ಹನಿ ಮಡಕೆಯನ್ನು ತುಂಬುತ್ತದೆ – ಈ ದೃಶ್ಯವನ್ನು ಹಲವರು ಕಂಡಿಲ್ಲದಿರಬಹುದು. ಆದರೆ ಬಿಂದಿಗೆಯನ್ನು ನಲ್ಲಿಯ ನೀರು ಒಂದೊಂದೇ ಹನಿಯಾಗಿ ತುಂಬುವ ದೃಶ್ಯ ನಮ್ಮ ಹಲವು ಪ್ರದೇಶಗಳಲ್ಲಿ ಇಂದಿಗೂ ಸಾಮಾನ್ಯವಾಗಿದೆ.

ಸುಭಾಷಿತ ಇಲ್ಲಿ ಈ ಉದಾಹರಣೆಯನ್ನು ಹೇಳುತ್ತಿರುವುದು ಬೇರೊಂದು ವಿದ್ಯಮಾನವನ್ನು ನಮ್ಮ ಗಮನಕ್ಕೆ ತರುವುದಕ್ಕಾಗಿ.

ನಮ್ಮ ನಡುವೆ ಹಲವರು ಸಾಧಕರನ್ನು ನೋಡುತ್ತಲೇ ಇರುತ್ತೇವೆ. ಅವರ ಸಾಧಿಸಿರುವ ಸಾಧನೆ, ಅದರಿಂದ ಅವರಿಗೆ ಈಗ ಬಂದಿರುವ ಕೀರ್ತಿ – ಇಷ್ಟು ಮಾತ್ರವೇ ನಮ್ಮ ಕಾಣಿಗೆ ಕಾಣುತ್ತಿರುತ್ತದೆ. ಆದರೆ ಅದಕ್ಕಾಗಿ ಅವರು ಪಟ್ಟ ಶ್ರಮ ನಮಗೆ ಕಾಣುವುದಿಲ್ಲ. ಅವರು ಯಾರೂ ಈ ಹಂತಕ್ಕೆ ಒಂದೇ ದಿನದಲ್ಲಿ ಬಂದವರಲ್ಲ; ಅವರಿಗೆ ದೊರೆತಿರುವ ಸಿದ್ಧಿಯಾಗಲೀ ಪ್ರಸಿದ್ಧಿಯಾಗಲೀ ಒಮ್ಮೆಲೇ ಬಂದಿರುವಂಥದ್ದಲ್ಲ. ಅದು ಅವರು ಪ್ರತಿ ಕ್ಷಣವೂ ನಡೆಸಿರುವ ಪರಿಶ್ರಮದ ಫಲವಾಗಿರುತ್ತದೆ. ಹೇಗೆ ಬಿಂದಿಗೆಯಲ್ಲಿ ಒಂದೊಂದೇ ಹನಿ ನೀರು ಶೇಖರವಾಗಿ ತುಂಬಿಕೊಳ್ಳುತ್ತದೆಯೋ ಹಾಗೆಯೇ ಸಾಧನೆ ಎನ್ನುವುದು ಕೂಡ ನಾವು ಮಾಡುವ ಒಂದೊಂದು ಕ್ಷಣದ ಸಾಧನೆಯಿಂದ ಪೂರ್ಣತೆಯಿಂದ ಪಡೆಯುತ್ತದೆ. ಸುಭಾಷಿತ ಹೇಳುತ್ತಿರುವುದು ಇದನ್ನು.

ಹೀಗೆ ನಾವು ನಿರಂತರ ಸಾಧನೆಯಿಂದ ಯಾವ ಯಾವ ಕ್ಷೇತ್ರದಲ್ಲಿ ಸಿದ್ಧಿ ಲಭಿಸುತ್ತದೆ ಎಂದೂ ಸುಭಾಷಿತ ಹೇಳಿದೆ.

ವಿದ್ಯೆಯನ್ನು ನಾವು ಹೀಗೆಯೇ ಸಂಪಾದಿಸುವುದು. ಮೊದಲು ಅಕ್ಷರವನ್ನು ಕಲಿಯಬೇಕು; ಅಕ್ಷರಗಳಿಂದ ಪದಗಳನ್ನು ಕಲಿಯುತ್ತೇವೆ; ಪದಗಳಿಂದ ವಾಕ್ಯಗಳು; ವಾಕ್ಯಗಳನ್ನು ಕಲಿತ ಮೇಲೆ ಪುಸ್ತಕ. ಹೀಗೆ ಒಂದು ಗೊತ್ತಾದ ಕ್ರಮದಲ್ಲಿಯೇ ವಿದ್ಯೆಯನ್ನು ಪಡೆಯುತ್ತೇವೆ.

ಹೀಗೆಯೇ ಧರ್ಮ ಕೂಡ ನಾವು ನಿತ್ಯವೂ ಮಾಡುವ ಒಂದೊಂದು ಚಟುವಟಿಕೆಯಿಂದಲೇ ಸಿದ್ಧವಾಗುವಂಥದ್ದು. ಹಣ ಕೂಡ ನಮ್ಮಲ್ಲಿ ಹೀಗೆಯೆ ಹನಿ ಹಿನಿಯಾಗಿಯೇ – ಎಂದರೆ ಒಂದೊಂದು ರೂಪಾಯಿಯಾಗಿಯೇ ಸೇರಬೇಕಾಗುತ್ತದೆ. ನೂರು ಒಂದೊಂದು ರೂಪಾಯಿಗಳು ಸೇರಿಯೇ ಒಂದು ನೂರು ರೂಪಾಯಿ ಆಗುತ್ತದೆಯಷ್ಟೆ.

ಸುಭಾಷಿತದ ತಾತ್ಪರ್ಯ ಏನು ಎಂದರೆ ನಮ್ಮ ಸಾಧನೆ ನಿರಂತರವಾಗಿ ಇದ್ದರೆ ಮಾತ್ರ ನಾವು ಏನನ್ನಾದರೂ ಸಾಧಿಸಲು ಸಾಧ್ಯ. ನೂರು ಕಿಲೋಮೀಟರ್‌ನಷ್ಟು ನಡೆಯುವ ಸಾಮರ್ಥ್ಯ ನಮಗೆ ಇರಬಹುದು; ಆದರೆ ಇದು ಫಲಪ್ರದವಾಗಲು ನಾವು ಮೊದಲ ಹೆಜ್ಜೆಯಿಂದಲೇ ಆರಂಭಿಸಬೇಕು; ಮಾತ್ರವಲ್ಲ, ಒದೊಂದೇ ಹೆಜ್ಜೆಯನ್ನೇ ಕ್ರಮಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.